ಶ್ರೀಹರಿಕೋಟ: ಚೊಚ್ಚಲ ಉಪಗ್ರಹ ಉಡಾವಣೆ ನೌಕೆ ‘ಎಸ್‌ಎಸ್‌ಎಲ್‌ವಿ–ಡಿ1’ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳು ವೃತ್ತಾಕಾರ ಕಕ್ಷೆಯ ಬದಲಿಗೆ ದೀರ್ಘ ವೃತ್ತದ ಕಕ್ಷೆಗೆ ಸೇರಿವೆ. ಹೀಗಾಗಿ ಅವುಗಳು ಬಳಕೆಗೆ ಲಭ್ಯವಾಗವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ಇಂದಿನ ಉಪಗ್ರಹ ಉಡಾವಣೆಗೆ ಸಂಬಂಧಿಸಿ ಸಮಿತಿಯೊಂದು ವಿಶ್ಲೇಷಣೆ ನಡೆಸಲಿದ್ದು, ಶಿಫಾರಸುಗಳನ್ನು ಮಾಡಲಿದೆ. ಅದರ ಆಧಾರದಲ್ಲಿ ‘ಎಸ್‌ಎಸ್‌ಎಲ್‌ವಿ–ಡಿ2’ನೊಂದಿಗೆ ಮತ್ತೆ ಮರಳಲಿದ್ದೇವೆ ಎಂದು ಇಸ್ರೊ ಹೇಳಿದೆ.
‘ಎಸ್‌ಎಸ್‌ಎಲ್‌ವಿ–ಡಿ1’ ರಾಕೆಟ್ ಉಪಗ್ರಹಗಳನ್ನು 356 ಕಿಲೋ ಮೀಟರ್‌ನ ವೃತ್ತಾಕಾರ ಕಕ್ಷೆಯ ಬದಲಿಗೆ 356 ಕಿಲೋಮೀಟರ್ x 76 ಕಿಲೋಮೀಟರ್‌ನ ದೀರ್ಘ ವೃತ್ತದ ಕಕ್ಷೆಗೆ ಸೇರಿಸಿದೆ. ಹೀಗಾಗಿ ಅವು ಬಳಕೆಗೆ ಸಿಗಲಾರವು. ಇದಕ್ಕೆ ಏನು ಸಮಸ್ಯೆಯಾಗಿದೆ ಎಂಬುದನ್ನು ಗುರುತಿಸಲಾಗಿದೆ. ಸಂವೇದಕ (ಸೆನ್ಸರ್) ವೈಫಲ್ಯ ಗುರಿತಿಸುವಲ್ಲಿ ವಿಫಲವಾಗಿರುವುದು ಪ್ರಮಾದಕ್ಕೆ ಕಾರಣವಾಯಿತು’ ಎಂದು ಇಸ್ರೊ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಉಪಗ್ರಹ ಉಡಾವಣೆಗೆ ಸಂಬಂಧಿಸಿದ ವಿಸ್ತೃತ ಮಾಹಿತಿಯನ್ನು ಸಂಸ್ಥೆಯ ಅಧ್ಯಕ್ಷ ಎಸ್. ಸೋಮನಾಥ್ ಅವರು ಶೀಘ್ರದಲ್ಲೇ ಪ್ರಕಟಣೆ ಮೂಲಕ ತಿಳಿಸಲಿದ್ದಾರೆ ಎಂದು ಇಸ್ರೊ ಹೇಳಿದೆ.
‘ಎಸ್‌ಎಸ್‌ಎಲ್‌ವಿ–ಡಿ1’ ರಾಕೆಟ್ ಮೂಲಕ ಭೂ ವೀಕ್ಷಣೆ ಉಪಗ್ರಹ ಮತ್ತು ವಿದ್ಯಾರ್ಥಿಗಳ ಆಜಾದಿ ಉಪಗ್ರಹ (AzaadiSAT) ಅನ್ನು ಭಾನುವಾರ ಬೆಳಿಗ್ಗೆ ಉಡಾವಣೆ ಮಾಡಲಾಗಿತ್ತು. ಉಡಾವಣೆಯ ಅಂತಿಮ ಘಟ್ಟದಲ್ಲಿ ತಾಂತ್ರಿಕ ಕಾರಣಗಳಿಂದ ದತ್ತಾಂಶ ನಷ್ಟವಾಗಿದೆ ಎಂದು ಇಸ್ರೊ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.