ಬೆಂಗಳೂರು: ಶ್ರೀಹರಿಕೋಟಾದಿಂದ ಇದೇ ಮೊದಲ ಬಾರಿಗೆ ಇಸ್ರೊ ಬ್ರೆಜಿಲ್‌ನ ಉಪಗ್ರಹವನ್ನು ಭಾನುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. 2021ರಲ್ಲಿ ಇಸ್ರೊ ನಡೆಸಿರುವ ಮೊದಲ ಬಾಹ್ಯಾಕಾಶ ಉಡಾವಣೆ ಇದಾಗಿದೆ.
ಹವಾಮಾನಕ್ಕೆ ಅನುಗುಣವಾಗಿ ನಿಗದಿ ಪಡಿಸಲಾಗಿದ್ದ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 10:24ಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ–ಸಿ51 ರಾಕೆಟ್ ಬ್ರೆಜಿಲ್‌ನ ಅಮೆಜಾನಿಯಾ–1 ಉಪಗ್ರಹವನ್ನು ಹೊತ್ತೊಯ್ದಿದೆ. ರಾಕೆಟ್ ಉಡಾವಣೆಯಾಗಿ 5 ನಿಮಿಷಗಳಲ್ಲಿ ಮೂರನೇ ಹಂತವನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ಸಾಗಿತು.
ಇದು ಇಸ್ರೊ ಪಿಎಸ್‌ಎಲ್‌ವಿ ರಾಕೆಟ್‌ನ 53ನೇ ಮಿಷನ್ ಆಗಿದ್ದು, ಪಿಎಸ್‌ಎಲ್‌ವಿ–ಸಿ51 ರಾಕೆಟ್ ಅಮೆಜಾನಿಯಾ–1 ಉಪಗ್ರಹದ ಜೊತೆಗೆ ಇತರೆ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾದ (ಎಸ್‌ಕೆಐ) ಸತೀಶ್ ಧವನ್ ಸ್ಯಾಟ್ (ಎಸ್‌ಡಿ ಸ್ಯಾಟ್), ಭಾರತದ ಶೈಕ್ಷಣಿಕ ಸಂಸ್ಥೆಗಳಿಂದ ಮೂರು ಯೂನಿಟಿಸ್ಯಾಟ್‌ಗಳು (UNITYsats) ಹಾಗೂ ಇಸ್ರೊದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್) 14 ಉಪಗ್ರಹಗಳನ್ನು ಒಳಗೊಂಡಿತ್ತು.
'ಎಸ್‌ಡಿ ಸ್ಯಾಟ್ ಜೊತೆಗೆ 25,000 ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ' ಎಂದು ಎಸ್‌ಕೆಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾಹ್ಯಾಕಾಶ ನೌಕೆಯ ಮೇಲಿನ ಪ್ಯಾನೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಸೃಜಿಸಲಾಗಿದೆ ಹಾಗೂ ಎಸ್‌ಡಿ ಕಾರ್ಡ್‌ನಲ್ಲಿ ಭಗವತ್ ಗೀತೆಯನ್ನು ಕಳುಹಿಸಲಾಗಿದೆ.
'ಬ್ರೆಜಿಲಿಯನ್ ನಿರ್ಮಿತ ಮೊದಲ ಉಪಗ್ರಹವನ್ನು ಉಡಾವಣೆ ಮಾಡುತ್ತಿರುವುದು ನಮಗೆ ಹೆಮ್ಮೆಯೆ ವಿಷಯವಾಗಿದೆ' ಎಂದು ಎನ್‌ಎಸ್‌ಐಎಲ್‌ನ ಮುಖ್ಯಸ್ಥ ಜಿ.ನಾರಾಯಣನ್ ಹೇಳಿದ್ದಾರೆ. ಬ್ರೆಜಿಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್‌ನ ಭೂವಲಯ ವೀಕ್ಷಣೆಗಾಗಿ ಬಳಕೆಯಾಗಲಿರುವ ದೂರ ಸಂವೇದಿ ಉಪಗ್ರಹ ಅಮೆಜಾನಿಯಾ–1. ಈ ಉಪಗ್ರಹವು 637 ಕೆ.ಜಿ. ತೂಕವಿದೆ. ಅಮೆಜಾನ್ ಪ್ರದೇಶದಲ್ಲಿ ಕಾಡು ನಾಶದ ಬಗ್ಗೆ ನಿಗಾವಹಿಸಲು ಹಾಗೂ ಕೃಷಿಗೆ ಸಂಬಂಧಿಸಿದಂತೆ ಪರಿಶೀಲನೆಗಳಿಗೆ ಅಮೆಜಾನಿಯಾ–1 ಉಪಗ್ರಹ ನೆರವಾಗಲಿದೆ.
ಇದು ಎನ್‌ಎಸ್‌ಐಎಲ್‌ನ ಮೊದಲ ವಾಣಿಜ್ಯ ಉದ್ದೇಶಿತ ಯೋಜನೆಯಾಗಿದೆ. ಇಸ್ರೊ ವೆಬ್‌ಸೈಟ್, ಯುಟ್ಯೂಬ್ ಚಾನೆಲ್, ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಗಳ ಮೂಲಕ ಉಪಗ್ರಹ ಉಡಾವಣೆ ನೇರ ಪ್ರಸಾರ ಮಾಡಲಾಯಿತು.
* ಬ್ರೆಜಿಲ್‌ನ ಅಮೆಜಾನಿಯಾ–1 ಉಪಗ್ರಹವನ್ನು ಇಸ್ರೊದ ಪಿಎಸ್‌ಎಲ್‌ವಿ ರಾಕೆಟ್ ನಿಗದಿತ ಕಕ್ಷೆಗೆ ಸೇರಿಸಿದೆ. ಯೋಜನೆಯಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು.
– ಡಾ.ಕೆ.ಶಿವನ್, ಇಸ್ರೊ ಅಧ್ಯಕ್ಷ
* ಹತ್ತು ವರ್ಷಗಳ ಕಾಲ ಈ ಉಪಗ್ರಹಕ್ಕಾಗಿ ನಮ್ಮ ವಿಜ್ಞಾನಿಗಳ ತಂಡ ಶ್ರಮಿಸಿದೆ. ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಭಾರತ ಮತ್ತು ಬ್ರೆಜಿಲ್‌ನ ಸಹಭಾಗಿತ್ವ ಮುಂದುವರಿಯಲಿದೆ.
– ಮಾರ್ಕೊಸ್ ಸೇಸರ್, ವಿಜ್ಞಾನ–ತಂತ್ರಜ್ಞಾನ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.