ನವದೆಹಲಿ: 850 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ನಶಿಸುತ್ತಿರುವ ನಕ್ಷತ್ರವೊಂದರ ಅಂತ್ಯದ ವಿದ್ಯಮಾನ ಗುರುತಿಸುವಿಕೆಯಲ್ಲಿ ಲಡಾಖ್‌ನಲ್ಲಿರುವ ಹಿಮಾಲಯನ್ ಟೆಲಿಸ್ಕೋಪ್ ಮತ್ತು ಭಾರತದ ಖಗೋಳ ತಜ್ಞರ ತಂಡವು ಮಹತ್ವದ ಪಾತ್ರ ವಹಿಸಿರುವುದು ತಿಳಿದುಬಂದಿದೆ.
ಹೌದು, ನಕ್ಷತ್ರದಲ್ಲಿ ರೂಪುಗೊಂಡಿರುವ ಅಪರೂಪದ ಕಪ್ಪು ಕುಳಿ ಬಗ್ಗೆ ಭಾರತದ ಖಗೋಳ ತಜ್ಞರು ಜಗತ್ತಿನ ಗಮನ ಸೆಳೆದಿದ್ದಾರೆ.
ಅಪರೂಪದ ಖಗೋಳ ವಿದ್ಯಮಾನವೊಂದಲ್ಲಿ ಇತ್ತೀಚೆಗೆ ಅತ್ಯಂತ ಶಕ್ತಿಯುತ ಕಿರಣಗಳ(ಸೂರ್ಯನ ಕಿರಣಗಳಿಗಿಂತ 1,000 ಟ್ರಿಲಿಯನ್ ಹೆಚ್ಚು ಪ್ರಕಾಶಮಾನ) ಹೊರಹೊಮ್ಮುವಿಕೆ ಕಂಡುಬಂದಿತ್ತು. 4 ಖಂಡಗಳು ಮತ್ತು ಬಾಹ್ಯಾಕಾಶದ ಟೆಲಿಸ್ಕೋಪ್‌ನಲ್ಲಿ ಇದನ್ನು ಗಮನಿಸಲಾಗಿತ್ತು. ಆ ಪ್ರಜ್ವಲಿಸುವ ಬೆಳಕು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದ್ದು ಭಾರತದ ಟೆಲಿಸ್ಕೋಪ್.
ಫೆಬ್ರುವರಿ ಎರಡನೇ ವಾರದಲ್ಲಿ ಕ್ಯಾಲಿಫೋರ್ನಿಯಾ ಮೂಲದ ಜ್ವಿಕಿ ಟ್ರಾನ್ಸಿಯಂಟ್ ಕೇಂದ್ರವು ಆಗಸದಲ್ಲಿ ಪ್ರಕಾಶಮಾನದ ಬೆಳಕು ಹೊರಹೊಮ್ಮುತ್ತಿರುವ ಹೊಸ ವಿದ್ಯಮಾನವನ್ನು ಮೊದಲಿಗೆ ಪತ್ತೆ ಮಾಡಿತ್ತು. ಅದಕ್ಕೆ ‘ಎಟಿ2022ಸಿಎಂಸಿ‘ ಎಂದು ಹೆಸರಿಸಲಾಗಿತ್ತು. ಬಹುವೇಗವಾಗಿ ಪ್ರಜ್ವಲಿಸಿ, ಅಷ್ಟೆ ವೇಗವಾಗಿ ಅದು ಕಣ್ಮರೆಯಾಗುತ್ತಿತ್ತು.
‘ಪ್ರಜ್ವಲಿಸುವ ಬೆಳಕಿನ ಬಗ್ಗೆ ಮಾಹಿತಿ ಬಂದ ಕೂಡಲೇ ನಾವು ನಿತ್ಯ ಭಾರತದ ಟೆಲಿಸ್ಕೋಪ್‌ನಿಂದ ಪರಿವೀಕ್ಷಣೆಗೆ ಮುಂದಾದೆವು’ಎಂದು ಐಐಟಿ ಬಾಂಬೆಯ ಪಿಎಚ್‌ಡಿ ವಿದ್ಯಾರ್ಥಿ ಹರೀಶ್ ಕುಮಾರ್ ಹೇಳಿದ್ದಾರೆ.
ಈ ಸಂದರ್ಭ ನಶಿಸುತ್ತಿರುವ ನಕ್ಷತ್ರದ ಕೊನೆಯ ಕ್ಷಣಗಳು ಖಗೋಳ ಶಾಸ್ತ್ರಜ್ಞರ ಕಣ್ಣಿಗೆ ಗೋಚರಿಸಿವೆ. ಅದರಲ್ಲಿ ಬೃಹತ್ ಪ್ರಮಾಣದ ಕಪ್ಪು ಕುಳಿ ಏರ್ಪಟ್ಟಿದ್ದು, ಅದರಿಂದ ಬೆಳಕು ಹೊರಸೂಸುತ್ತಿರುವುದು ಪತ್ತೆಯಾಗಿದೆ. ನಕ್ಷತ್ರ ನಶಿಸುವಾಗ ಯಾವ ಪರಿಸ್ಥಿತಿ ಇರುತ್ತದೆ ಎಂಬುದು ಅವರ ಗಮನಕ್ಕೆ ಬಂದಿದೆ.
ಇಲ್ಲಿಯವರೆಗಿನ ಅಧ್ಯಯನಗಳ ಪ್ರಕಾರ, ಜಗತ್ತು 13.8 ಬಿಲಿಯನ್ ವರ್ಷಗಳ ಹಿಂದೆ ಆದ ಬಿಗ್ ಬ್ಯಾಂಗ್‌ನಿಂದ ಸೃಷ್ಟಿಯಾಗಿದೆ. ನಶಿಸುತ್ತಿರುವ ನಕ್ಷತ್ರದ ವಿವರಗಳನ್ನು ಅಂದಾಜು ಮಾಡುವುದು ಕಷ್ಟ. ಆದರೆ, ಇದು ಬಹುಶಃ ಸಾಮಾನ್ಯ ನಕ್ಷತ್ರವಾಗಿದ್ದು, ಸೂರ್ಯನ ದ್ರವ್ಯರಾಶಿಯನ್ನು ಹೋಲುತ್ತದೆ. ಅಲ್ಲದೆ, ಇದು ವಿಚಿತ್ರ ಎನ್ನಬಹುದಾದ ವಿದ್ಯಮಾನವನ್ನು ಸೃಷ್ಟಿಸಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳುತ್ತಾರೆ.
‘ನಾವು ಕೊಟ್ಟ ಮಾಹಿತಿ ಆಧರಿಸಿ ಜಗತ್ತಿನ ಖಗೋಳಶಾಸ್ತ್ರಜ್ಞರು ಮುಂದಿನ ಅವಲೋಕನಗಳನ್ನು ಕೈಗೊಳ್ಳಲು ಸಾಧ್ಯವಾಯಿತು’ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಮಾಜಿ ನಿರ್ದೇಶಕಿ ಜಿ ಸಿ ಅನುಪಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.