ADVERTISEMENT

ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ನೇಸರ ಕಾಡನಕುಪ್ಪೆ
Published 2 ಏಪ್ರಿಲ್ 2024, 23:30 IST
Last Updated 2 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರೇಡಾರ್‌ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ. ಈ ವಿಮಾನಗಳಿಗಾಗಿಯೇ ವಿಶೇಷವಾದ ಲೋಹದ ಬಳಕೆ, ವಿಶೇಷ ಬಣ್ಣದ ಲೇಪನ ಇತ್ಯಾದಿ ಮಾಡಬೇಕಾಗುತ್ತದೆ. ಇವೆಲ್ಲವೂ ಅತಿ ದುಬಾರಿ. ಬಣ್ಣ ಬದಲಿಸುವ ಗೋಸುಂಬೆ, ನಡೆದಾಡುವ ಕಡ್ಡಿಯ ರೀತಿಯೇ ಇರುವ ಮಿಡತೆ ಇತ್ಯಾದಿ ಕೀಟಗಳು ನಮಗೆ ತಿಳಿದೇ ಇವೆ. ಇದೇ ರೀತಿ ‘ಲೀಫ್‌ಹಾಪರ್’ ಎಂಬ ಮಿಡತೆ ಜಾತಿಯ ಕೀಟವು ಕಣ್ಣಿಗೆ ಕಾಣದಂತೆ ಅದೃಶ್ಯವಾಗುವ ಗುಣವನ್ನು ಹೊಂದಿದೆ ಎಂಬ ವಿಚಾರವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಅಷ್ಟೇ ಅಲ್ಲ, ‘ಲೀಫ್‌ಹಾಪರ್‌’ ಜಾತಿಯ ಈ ಮಿಡತೆಯು ತನ್ನನ್ನು ತಾನು ಅದೃಶ್ಯಗೊಳಿಸಿಕೊಳ್ಳಲು ಅನುಸರಿಸುವ ವಿಧಾನವನ್ನು ನಕಲು ಮಾಡಿ ಅದನ್ನು ವಿಮಾನಗಳಲ್ಲಿ ಬಳಕೆ ಮಾಡಬಹುದಾದ ಸಾಧ್ಯತೆಯನ್ನೂ ವಿಜ್ಞಾನಿಗಳು ಶೋಧಿಸಿದ್ದಾರೆ. ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿ ಲಿನ್ ವ್ಯಾಂಗ್‌ ಹಾಗೂ ಅವರ ತಂಡವು ಈ ಸಂಶೋಧನೆಯನ್ನು ನಡೆಸಿದೆ.

ADVERTISEMENT

ಲೀಫ್‌ಹಾಪರ್‌ ಜಾತಿಯ ಮಿಡತೆಯು ತನ್ನ ಮೈಯ ಮೇಲೆ ವಿಶೇಷವಾದ ಬೆವರನ್ನು ಹೊರ ಸೂಸುತ್ತದೆ. ಈ ಬೆವರನ್ನು ‘ಬ್ರೋಕೋಸೋಮ್ಸ್‌’ ಎಂದು ಕರೆಯಲಾಗುತ್ತದೆ. ಈ ಬ್ರೋಕೋಸೋಮ್ಸ್‌ ಅನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದರೆ ಅದು ಜೇನಿನ ಗೂಡಿನಂತಹ ರಚನೆಯನ್ನು ಹೊಂದಿರುವ ಉದ್ದನೆಯ ಕಡ್ಡಿಗಳಂತೆ ಅಥವಾ ಫುಟ್‌ಬಾಲ್‌ ಆಕೃತಿಯನ್ನು ಹೊಂದಿರುವಂತೆ ಗೋಚರಿಸುತ್ತದೆ. ಈ ಬ್ರೋಕೋಸೋಮ್ಸ್‌ ಅನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳು, ಇವು ಸಾಮಾನ್ಯ ಬೆಳಕು ಹಾಗೂ ನೇರಳಾತೀತ ಬಣ್ಣಗಳನ್ನು ಹೀರಿಕೊಳ್ಳುವ ವಿಶೇಷ ಗುಣವನ್ನು ಹೊಂದಿವೆ ಎಂದು ಕಂಡುಹಿಡಿದಿದ್ದಾರೆ.

ಈ ಬೆವರನ್ನು ತಮ್ಮ ಪ್ರಯೋಗಾಲಯದಲ್ಲಿ ಅಧ್ಯಯನ ಮಾಡಿರುವ ವಿಜ್ಞಾನಿಗಳು ಬೆವರಿನ ರಚನೆ, ಅದಲ್ಲಿರುವ ರಾಸಾಯನಿಕ ಸಂಯೋಜನೆ ಇತ್ಯಾದಿ ಅಂಶಗಳನ್ನು ದಾಖಲಿಸಿದ್ದಾರೆ. ಬಳಿಕ ರಾಸಾಯನಿಕವಾಗಿ ಬೆವರನ್ನು ನಕಲು ಮಾಡಿ ಕೃತಕವಾದ ಬೆವರನ್ನು ಸೃಷ್ಟಿಸಿದ್ದಾರೆ. ಈ ದ್ರಾವಣವನ್ನು ಬಳಿಕ ಸಾಂಪ್ರಾದಾಯಿಕವಾಗಿ ಬಳಸುವ ಬಣ್ಣಗಳಿಗೆ ಬೆರಸಿ ವಾಹನಗಳಿಗೆ ಸಿಂಪಡಿಸಿ ಗಮನಿಸಿದ್ದಾರೆ. ಅಚ್ಚರಿ ಎಂಬಂತೆ, ರೇಡಾರ್‌ ಹೊರಸೂಸುವ ಮೈಕ್ರೋವೇವ್‌ ಅಲೆಗಳು ಈ ದ್ರಾವಣಲೇಪಿತ ವಾಹನಗಳ ಮೇಲ್ಮೈಯನ್ನು ತೂರಿಕೊಂಡುಹೋಗಿದೆ. ಅಂದರೆ, ರೇಡಾರ್ ಕಣ್ಣಿಗೆ ವಾಹನವು ಕಂಡಿಲ್ಲ. ಬಳಿಕ ಈ ದ್ರಾವಣಮಿಶ್ರಿತ ಬಣ್ಣವನ್ನು ಸಣ್ಣ ಗಾತ್ರದ ವಿಮಾನಗಳಿಗೂ ಲೇಪಿಸಿ ಪ್ರಯೋಗಿಸಿದ್ದು ಪ್ರಯೋಗ ಯಶಸ್ವಿಯಾಗಿದೆ.

‘ಈ ದ್ರಾವಣವನ್ನು ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪ್ರಮಾಣದಲ್ಲಿ ತಯಾರಿಸಬಹುದಾಗಿದ್ದು, ತಯಾರಿಯ ಬೆಲೆ ಅತಿ ಕಡಿಮೆ ಎನ್ನುವುದು ಹೆಗ್ಗಳಿಕೆಯಾಗಿದೆ’ ಎಂದು ವಿಜ್ಞಾನಿ ಲಿನ್‌ ವ್ಯಾಂಗ್‌ ಹೇಳಿದ್ದಾರೆ. ಹಾಲಿ ಬಳಕೆಯಲ್ಲಿ ‘ಸ್ಟೆಲ್ತ್‌’ ತಂತ್ರಜ್ಞಾನದಲ್ಲಿ ಅತಿ ದುಬಾರಿ ವೆಚ್ಚದ ಲೋಹಗಳು, ಬಣ್ಣಗಳನ್ನು ಲೇಪಿಸಬೇಕಾಗುತ್ತದೆ. ಅಲ್ಲದೇ, ವಿಮಾನದ ದೇಹದ ರಚನೆಯು ವಿಶೇಷವಾದ ಆಕೃತಿಯನ್ನು ಹೊಂದಿರುವಂತೆಯೇ ರಚಿಸಬೇಕಾಗುತ್ತದೆ. ಈ ಕಾರಣಗಳಿಂದಾಗಿ ಸ್ಟೆಲ್ತ್‌ ಗುಣವನ್ನು ಹೊಂದಿರುವ ವಿಮಾನಗಳನ್ನು ಮುಂದುವರೆದಿರುವ ರಾಷ್ಟ್ರಗಳಲ್ಲಿ ಉತ್ಪಾದಿಸುವುದೇ ಕಷ್ಟಕರವಾಗಿದೆ. ಹೀಗಿರುವಾದ ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಈ ಬಗೆಯ ವಿಮಾನಗಳನ್ನು ತಯಾರಿಸುವುದು ಅಥವಾ ಕೊಳ್ಳುವುದು ತೀರಾ ಕಷ್ಟಕರ.

‘ಇವೆಲ್ಲಕ್ಕೂ ನಮ್ಮ ಸಂಶೋಧನೆಯಿಂದ ಪರಿಹಾರ ಸಿಗಬಹುದು ಎಂಬ ಆಶಾಭಾವನೆ ನಮಗಿದೆ. ಪರಿಸರದಲ್ಲಿ ಲಭ್ಯವಿರುವ ರಾಸಾಯನಿಕಗಳನ್ನೇ ಬಳಸಿಕೊಂಡು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಅತಿ ಜಾಣ್ಮೆಯ ಹೆಜ್ಜೆ. ಲೀಫ್‌ಹಾಪರ್‌ ನಮ್ಮ ಪರಿಸರದಲ್ಲಿ ಅತಿ ಸಾಮಾನ್ಯವಾಗಿ ಕಂಡು ಬರುವ ಕೀಟ. ಕೆಲವು ಸಾಮಾನ್ಯ ಮಿಡತೆಗಳಲ್ಲೂ ಈ ಗುಣವನ್ನು ನಾವು ಕಂಡಿದ್ದೇವೆ. ನಾವು ಕಂಡು ಹಿಡಿದಿರುವ ಸೂತ್ರವನ್ನು ಬಳಸಿ ಅತಿ ಕಡಿಮೆ ವೆಚ್ಚದಲ್ಲಿ ಅದೃಶ್ಯ ಗುಣವುಳ್ಳ ಸಾಧನಗಳನ್ನು ತಯಾರಿಸಬಹುದು’ ಎಂದು ಲಿನ್ ಹೇಳಿದ್ದಾರೆ.

ಎಲ್ಲೆಲ್ಲಿ ಬಳಕೆ: ಅತಿ ಮುಖ್ಯವಾಗಿ ವಾಯುಪಡೆ ಹಾಗೂ ನೌಕಾಪಡೆಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ಸೈನ್ಯದ ಮೇಲೆ ಹೂಡುವ ಬಂಡವಾಳವು ಅತಿ ದೊಡ್ಡ ಮೊತ್ತವನ್ನು ಹೊಂದಿರುತ್ತದೆ. ಈ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸಂಶೋಧನೆಯು ಮಹತ್ತರವಾದ ಕೊಡುಗೆಯನ್ನು ನೀಡಲಿದೆ – ಎಂದು ಲಿನ್ ವಿಶ್ವಾಸ ವಕ್ತಪಡಿಸಿದ್ದಾರೆ.
ಅಲ್ಲದೇ, ಈ ಸಂಶೋಧನಸೂತ್ರವು ಪರಿಸರಪ್ರಿಯವೂ ಆಗಿರಲಿದೆ. ಯಾವುದೇ ಬಗೆಯ ಹಾನಿಕಾರಕ ರಾಸಾಯನಿಕಗಳ ಬಳಕೆ ಆಗದ ಕಾರಣ ತಯಾರಿಯ ಸಮಯ ಅಥವಾ ಬಳಕೆಯ ಸಮಯದಲ್ಲಿ ಪರಿಸರ ಮಾಲಿನ್ಯ ಆಗುವುದಿಲ್ಲ ಎಂದೂ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.