ADVERTISEMENT

ಲಡಾಖ್‌ನಲ್ಲಿ ಬಾನಿಗೆ ಕಣ್ಣಿಟ್ಟ ದೇಶಿ ದೂರದರ್ಶಕ MACE

ಇ.ಎಸ್.ಸುಧೀಂದ್ರ ಪ್ರಸಾದ್
Published 23 ಅಕ್ಟೋಬರ್ 2024, 1:03 IST
Last Updated 23 ಅಕ್ಟೋಬರ್ 2024, 1:03 IST
ದೂರದರ್ಶಕ
ದೂರದರ್ಶಕ   
ಗಾಮಾಕಿರಣಗಳ ಮೇಲೆ ನಿಗಾ ಇಡಲು ಲಡಾಖ್‌ನಲ್ಲಿ ಸಂಪೂರ್ಣ ಸ್ವದೇಶಿ ದೂರದರ್ಶಕವನ್ನು ಸ್ಥಾಪಿಸಲಾಗಿದೆ. ವಾಯು ಮಾಲಿನ್ಯ, ಗಾಳಿ ಮಾಲಿನ್ಯವಿಲ್ಲದ ಈ ಪರಿಸರದಲ್ಲಿ ಬಾನಿನೆಡೆಗೆ ದೃಷ್ಟಿ ನೆಡಲು ಇನ್ನೂ ಅವಕಾಶಗಳಿವೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಚಂದ್ರಯಾನ–3ರ ಮೂಲಕ ಇಡೀ ಜಗತ್ತನ್ನೇ ತನ್ನತ್ತ ನೋಡುವಂತೆ ಮಾಡಿದ ಭಾರತ, ಈ ಬಾರಿಯೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ. ಈ ಬಾರಿ ಚಂದ್ರನಲ್ಲ, ಬದಲಿಗೆ ನಕ್ಷತ್ರ, ಬಾಹ್ಯಾಕಾಶದ ಕಿರಣಗಳ ಮೇಲೆ ಕಣ್ಣು ನೆಟ್ಟಿದೆ. ಯಾವುದೇ ಮಾಧ್ಯಮಗಳಲ್ಲಿ ಬೆಳಕಿಗಿಂತ ವೇಗವಾಗಿ ಚಲಿಸುವ ಕಣಗಳ ಮೂಲಕ ಹೊರಸೂಸುವ ವಿದ್ಯುತ್ಕಾಂತೀಯ ವಿಕರಣವಾದ ಚೆರೆಂಕೋವ್‌ ಇರುವ ಪ್ರಮುಖ ವಾತಾವರಣದ ಚೆರೆಂಕೋವ್‌ ಪ್ರಯೋಗದ ದೂರದರ್ಶಕವನ್ನು (MACE) ಸಮುದ್ರ ಮಟ್ಟದಿಂದ 4,300 ಮೀಟರ್ ಎತ್ತರದ ಲಡಾಕ್‌ನ ಹಾನ್ಲೆನಲ್ಲಿ ಸ್ಥಾಪಿಸಲಾಗಿದೆ.

ಆದರೆ, ಇದು ಸುದ್ದಿಯಲ್ಲಿರುವುದು ಈ ದೂರದರ್ಶಕವು ಜಗತ್ತಿನ ಅತ್ಯುನ್ನತ ಇಮೇಜಿಂಗ್‌ ಗಾಮಾ–ರೇ ದೂರದರ್ಶಕ ಎಂಬ ಸಂಗತಿಯಿಂದಾಗಿದೆ. ಇಲ್ಲಿರುವ ಮತ್ತೊಂದು ಹೆಮ್ಮೆ ಪಡುವ ಸಂಗತಿ ಎಂದರೆ, ಈ ಬೃಹತ್‌ ದೂರದರ್ಶಕವನ್ನು ಭಾರತದಲ್ಲೇ ನಿರ್ಮಿಸಲಾಗಿದ್ದು, ಭಾಭಾ ಪರಮಾಣು ಸಂಶೋಧಕಾ ಕೇಂದ್ರವು ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್ ಆಫ್ ಇಂಡಿಯಾದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ, ಭಾರತದ ಅತ್ಯಂತ ಎತ್ತರದ ಪ್ರದೇಶದಲ್ಲಿ ಸ್ಥಾಪಿಸಿದೆ.

ಗಾಮಾ ಕಿರಣ ಎನ್ನುವುದು ಇಡೀ ವಿಶ್ವದಲ್ಲಿರುವ ಅತ್ಯಂತ ಶಕ್ತಿಯುತವಾದ ವಸ್ತು. ಅದನ್ನು ಸೆರೆ ಹಿಡಿಯುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲೂ ಹಾನ್ಲೆಯ ಡಾರ್ಕ್‌ ಸ್ಕೈ ರಿಸರ್ವ್‌ನ ಶುಭ್ರ ಆಕಾಶದಲ್ಲಿ ಈ ದೂರದರ್ಶಕವು ಕನಿಷ್ಠ ಅಡಚಣೆಯೊಂದಿಗೆ ಆಗಸವನ್ನು ಬಿಟ್ಟ ಕಣ್ಣು ಬಿಟ್ಟಂತೆಯೇ ವೀಕ್ಷಿಸುತ್ತಿದೆ. ಬ್ರಹ್ಮಾಂಡದಲ್ಲಿನ ಸೂಪರ್‌ನೊವಾ, ಕಪ್ಪು ಕುಳಿ ಹಾಗೂ ಗಾಮಾ ರೇ ಸ್ಫೋಟವನ್ನು ವೀಕ್ಷಿಸುವ ಪ್ರಯತ್ನ ನಡೆಸಿದೆ.

ADVERTISEMENT

ಹೇಗಿದೆ ಈ ಬೃಹತ್ ದೂರದರ್ಶಕ..?

ಈ ದೂರದರ್ಶಕವು ತಂತ್ರಜ್ಞಾನ ಆಧಾರಿತವಾಗಿ ಮಾತ್ರವಲ್ಲ, ತನ್ನ ಗಾತ್ರದಿಂದಲೂ ಜಗತ್ತಿನ ಗಮನ ಸೆಳೆದಿದೆ. ಇದರ ಎತ್ತರ 43 ಮೀಟರ್‌ನಷ್ಟು. ತೂಕ 175 ಟನ್‌. ಅತಿನೇರಳೆಯಲ್ಲಿನ ಬೆಳಕನ್ನು ಗುರುತಿಸುವ ಸಾಮರ್ಥ್ಯವಿರುವ 1,008 ಫೋಟೊಮಲ್ಟಿಪ್ಲಯರ್ ಟ್ಯೂಬ್‌ಗಳನ್ನು 21 ಮೀಟರ್ ವ್ಯಾಸದ ಕನ್ನಡಿಗೆ ಅಳವಡಿಸಲಾಗಿದೆ. ಭೂಮಿಯ ವಾತಾವರಣಕ್ಕೆ ಅತ್ಯಧಿಕ ಶಕ್ತಿಯುಳ್ಳ ಗಾಮಾ ಕಿರಣಗಳು ಡಿಕ್ಕಿ ಹೊಡೆದಾಗ ಉಂಟಾಗುವ ಚೆರೆಂಕೋವ್‌ ವಿಕಿರಣವನ್ನು ಇದು ಕೆಲವೇ ಕ್ಷಣಗಳಲ್ಲಿ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಆ ಮೂಲಕ ಬ್ರಹ್ಮಾಂಡದಲ್ಲಿನ ಇಂಥ ಅತ್ಯಂತ ಅಪರೂಪದ ಸನ್ನಿವೇಶಗಳನ್ನು ಇದು ಸೆರೆಹಿಡಿದು, ಗ್ರಹಿಸಿ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.

356 ಚದರ ಮೀಟರ್‌ನಷ್ಟು ಬೃಹತ್ ಪ್ರತಿಫಲಕವನ್ನು ಇದು ಹೊಂದಿದೆ. ಇದಕ್ಕಾಗಿಯೇ 1,424 ವಜ್ರದಂತೆ ಕತ್ತರಿಸಿದ ಲೋಹದ ಗಾಜುಗಳನ್ನು ಅಳವಡಿಸಲಾಗಿದೆ. 712 ಆಕ್ಚುಯೇಟರ್‌ಗಳು, 68 ಕ್ಯಾಮೆರಾ ಮಾಡ್ಯೂಲ್‌ಗಳನ್ನು ಇದು ಹೊಂದಿದೆ. ಇಷ್ಟೆಲ್ಲಾ ಸಾಮರ್ಥ್ಯವಿರುವ ಈ ನೂತನ ದೂರದರ್ಶಕವು ಸುಮಾರು 200 ದಶಲಕ್ಷ ಜ್ಯೋತಿರ್ವರ್ಷ ದೂರದ ಗಾಮಾ ಕಿರಣಗಳನ್ನು ಪತ್ತೆ ಮಾಡಿದೆ.

ಗಾಮಾ ಕಿರಣಗಳು ಭೂಮಿ ಪ್ರವೇಶಿಸುವುದನ್ನು ಇಲ್ಲಿನ ವಾತಾವರಣ ತಡೆಯುತ್ತದೆ. ಆದರೆ, ಈ ಸಂಧಿಸುವ ಕ್ರಿಯೆಯು ಅತಿ ಶಕ್ತಿಯುತವಾದ ಕಣಗಳನ್ನು ಸೃಷ್ಟಿಸುತ್ತದೆ. ಇವು ಅತಿ ವೇಗದಲ್ಲಿ ಸಾಗುವ ಸಾಮರ್ಥ್ಯವಿದ್ದು, ಚೆರೆಂಕೋವ್‌ ವಿಕಿರಣವನ್ನು ಹೊರಸೂಸುತ್ತದೆ. ಒಂದರ್ಥದಲ್ಲಿ ಇದನ್ನು ಸೋನಿಕ್ ಬಾಂಬ್‌ ಎಂದೂ ಕರೆಯಲಾಗುತ್ತದೆ. ಈ ಘಟನೆಯನ್ನು ದೂರದರ್ಶಕದಲ್ಲಿರುವ ಕ್ಯಾಮೆರಾ ಹಾಗೂ ಪ್ರತಿಫಲಕಗಳು ಸೆರೆ ಹಿಡಿದು, ಅದರ ಮೂಲವನ್ನು ಶೋಧಿಸುತ್ತವೆ.

ಕಾಸ್ಮಿಕ್ ರೇ ಸಂಶೋಧನೆಯಲ್ಲಿ ತೊಡಗಿರುವ ಜಗತ್ತಿನ ಇತರ ರಾಷ್ಟ್ರಗಳ ವಿಜ್ಞಾನಿಗಳಿಗೂ ಭಾರತದ ಈ ವಿಶೇಷ ದೂರದರ್ಶಕ ನೆರವಾಗಬಲ್ಲದು. ಗಾಮಾ ಕಿರಣ ಹಾಗೂ ಗುರುತ್ವಾಕರ್ಷಣ ತರಂಗಾಂತರಗಳನ್ನು ಆಧರಿಸಿ ಖಗೋಳ ಅಧ್ಯಯನ ನಡೆಸುವವರೊಂದಿಗೆ ಈ ನೂತನ ದೂರದರ್ಶಕದ ಮಾಹಿತಿಯನ್ನು ಒಪ್ಪಂದದ ಆಧಾರದಲ್ಲಿ ಹಂಚಿಕೊಳ್ಳುವ ಸೂಚನೆಯನ್ನು ಪರಮಾಣು ಇಂಧನ ಇಲಾಖೆಯ ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಂತಿ ನೀಡಿದ್ದಾರೆ.

ಅಷ್ಟಕ್ಕೂ ಈ ಬೃಹತ್ ದೂರದರ್ಶಕವನ್ನು ವೈಜ್ಞಾನಿಕ ಲೆಕ್ಕಾಚಾರದ ಆಧಾರದಲ್ಲೇ ಹಾನ್ಲೆಯಲ್ಲಿ ಅಳವಡಿಸಲಾಗಿದೆ. ಗಾಮಾ ಕಿರಣಗಳನ್ನು ಸೆರೆಹಿಡಿಯಲು ಭೂಮಿ ಮೇಲೆ ಅತಿ ಕಡಿಮೆ ಬೆಳಕಿನ ಮಾಲಿನ್ಯ ಅಗತ್ಯ. ಕಡಿಮೆ ಆಧ್ರತೆ, ಕತ್ತಲ ಆಕಾಶ, ಮಾಲಿನ್ಯ ಮುಕ್ತ ಆಗಸ ಈ ಎಲ್ಲಾ ಕಾರಣಗಳಿಂದಾಗಿ ಎಂಎಸಿಇ ಅನ್ನು ಲಡಾಕ್‌ನ ಈ ಪ್ರದೇಶದಲ್ಲಿ ಅಳವಡಿಸಲಾಗಿದೆ. ಇಲ್ಲಿ ಇನ್ನಷ್ಟು ದೂರದರ್ಶಕ ಅಳವಡಿಸಲು ಅವಕಾಶ ಇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.