ADVERTISEMENT

ತಂತ್ರಜ್ಞಾನ | ಔಷಧವ ಚಿಮ್ಮಿಸುವ ಗುಳಿಗೆ

ಕೊಳ್ಳೇಗಾಲ ಶರ್ಮ
Published 27 ನವೆಂಬರ್ 2024, 0:30 IST
Last Updated 27 ನವೆಂಬರ್ 2024, 0:30 IST
   

ಗುಳಿಗೆ, ಇಂಜೆಕ್ಷನ್ನುಗಳಲ್ಲಿ ಹೊಸತೇನಿದೆ ಎನ್ನುವವರಿಗೆ ಈ ಸುದ್ದಿ. ಅಮೆರಿಕದ ಮಸ್ಯಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಜಿನಿಯರ್‌ ಜಿ ಟ್ರೇವರ್ಸೊ ಮತ್ತು ನೋವೊನಾರ್ಡಿಸ್ಕ್‌ ಕಂಪೆನಿಯ ವಿಜ್ಞಾನಿ ಎಸ್‌. ಟಿ. ಬಕ್ಲಿಯವರ ತಂಡ ಔಷಧವನ್ನು ಚಿಮ್ಮಿಸುವ ಗುಳಿಗೆಯನ್ನು ಸಿದ್ಧಪಡಿಸಿದೆ. ಇದಕ್ಕೆ ಪ್ರೇರಣೆ ಆಕ್ಟೋಪಸಿನ ವರ್ಗಕ್ಕೆ ಸೇರಿದ ‘ಸ್ಕ್ವಿಡ್‌’ ಎನ್ನುವ ಸಮುದ್ರಜೀವಿಯಂತೆ.

ಕರುಳು, ಜಠರದೊಳಗಿನ ಭಾಗಗಳಿಗೆ ನೇರವಾಗಿ ಔಷಧವನ್ನು ಒದಗಿಸಲು ಈ ‘ಚಿಮ್ಮುವ ಗುಳಿಗೆ’ ನೆರವಾಗಲಿದೆ. ವಿವಿಧ ರೋಗಗಳ ಚಿಕಿತ್ಸೆಗೆಂದು ಬಳಸುವ ಔಷಧಗಳನ್ನು ಒಂದೋ ಗುಳಿಗೆಯ ರೂಪದಲ್ಲಿ, ಇಲ್ಲವೇ ಇಂಜೆಕ್ಷನ್ನಿನ ರೂಪದಲ್ಲಿ ನೀಡುತ್ತಾರಷ್ಟೆ. ಗುಳಿಗೆಗಳು ಕರಗಿ, ಔಷಧವು ರಕ್ತದೊಳಗೆ ಸೇರಿ, ತನ್ಮೂಲಕ ವಿವಿಧ ಅಂಗಗಳಿಗೆ ಸರಬರಾಜಾಗುತ್ತದೆ. ಕೆಲವೊಮ್ಮೆ ಅಗತ್ಯವಾದ ಅಂಗಗಳಿಗೆ ಸಾಕಷ್ಟು ರಕ್ತಪೂರೈಕೆ ಇಲ್ಲದ್ದರಿಂದ ಅಲ್ಲಿಗೆ ತಲುಪದೆಯೂ ಹೋಗಬಹುದು. ಇಂಜೆಕ್ಷನ್ನುಗಳು ಕೂಡ ಹೀಗೆಯೇ ಸ್ನಾಯುಗಳು ಇಲ್ಲವೇ ರಕ್ತಕ್ಕೆ ಔಷಧವನ್ನು ಸೇರಿಸುತ್ತವೆ. ಗುಳಿಗೆಗಳಿಗಿಂತಲೂ ವೇಗವಾಗಿ ರಕ್ತದಲ್ಲಿ ಔಷಧದ ಪ್ರಮಾಣವನ್ನು ಹೆಚ್ಚಿಸಲು ಈ ಮಾರ್ಗ ಅನುಕೂಲ.

ಆದರೆ, ಕರುಳು, ಜಠರಗಳಿಗೆ ಔಷಧಗಳನ್ನು ಪೂರೈಸುವುದರಲ್ಲಿ ಒಂದು ಸಮಸ್ಯೆ ಇದೆ. ನುಂಗಿದ ಗುಳಿಗೆ ಕರುಳನ್ನು ಸೇರುತ್ತದಾದರೂ, ಕರುಳಿನಲ್ಲಿ ತೊಂದರೆ ಇರುವ ಕಡೆಗಷ್ಟೆ ಅದು ಔಷಧವನ್ನು ತಲುಪಿಸುತ್ತದೆನ್ನುವ ಖಾತ್ರಿ ಇಲ್ಲ. ಜಠರದಲ್ಲಿನ ಭಾಗಗಳಿಗೆ ಔಷಧ ಒದಗಿಸಲೂ ಇದೇ ಸಮಸ್ಯೆ ಇದೆ. ಹೀಗಾಗಿ ಅವಶ್ಯಕ್ಕಿಂತಲೂ ಹೆಚ್ಚಿನ ಔಷಧವನ್ನು ನುಂಗಬೇಕು. ಅದು ತೊಂದರೆ ಇರುವ ಜಾಗಕ್ಕೆ ಸೇರುತ್ತದೆಂದು ಆಶಿಸಬೇಕಾಗುತ್ತದೆ.

ADVERTISEMENT

ಇತ್ತೀಚೆಗೆ ಈ ಸಮಸ್ಯೆಗೆ ಎಂಡೋಸ್ಕೋಪನ್ನು ಬಳಸಿ ಔಷಧವನ್ನು ಚುಚ್ಚುವ ಉಪಾಯಗಳನ್ನು ಯೋಜಿಸಲಾಗಿತ್ತು. ಕೊಳವೆಯಂತಹ ಸಾಧನದ ತುದಿಯಲ್ಲಿ ಔಷಧವಿರುವ ಸಿರಿಂಜನ್ನೋ, ಅಥವಾ ಔಷಧ ತುಂಬಿದ ಮುಳ್ಳುಗಳಿರುವ ಚಾಪೆಯಂತಹ ಸಾಧನವನ್ನೋ ಇರಿಸಿ, ಗಂಟಲಿನ ಮೂಲಕ ಅನ್ನನಾಳದೊಳಗೆ ತೂರಿಸಬಹುದು. ಅಲ್ಲಿ ನಿರ್ದಿಷ್ಟ ಸ್ಥಾನವನ್ನು ತಲುಪಿದಾಗ, ಸಿರಿಂಜನ್ನು ಒತ್ತಿಯೋ, ಮುಳ್ಳುಚಾಪೆಯನ್ನು ಅಂಟಿಸಿಯೋ ಔಷಧವನ್ನು ಒದಗಿಸಬಹುದು ಎನ್ನುವುದು ಯೋಜನೆ. ಈ ಉಪಾಯದಲ್ಲಿಯೂ ಅತಿ ಸೂಕ್ಷ್ಮವಾದ ದೇಹದ ಒಳಭಾಗಗಳಿಗೆ ಸೂಜಿಯನ್ನು ಚುಚ್ಚಲೇ ಬೇಕು; ಗಾಯವನ್ನು ಮಾಡಲೇಬೇಕು. ಗಾಯವನ್ನು ಮಾಡದೆಯೇ ಔ಼ಷಧವನ್ನು ಒದಗಿಸುವ ಉಪಾಯವೇ ಈ ಚಿಮ್ಮುವ ಗುಳಿಗೆ.

‘ಮೈಕ್ರೊ ಇಂಜೆಕ್ಷನ್‌ ಡಿವೈಸ್‌’ ಎನ್ನುವ ಈ ಸಾಧನದ ಎರಡು ಬಗೆಗಳನ್ನು ಟ್ರೇವರ್ಸೊ-ಬಕ್ಲಿ ತಂಡ ರೂಪಿಸಿದೆ. ಮೊದಲನೆಯದು ಸಿರಿಂಜಿನಂತೆ. ಆದರೆ ಸಿರಿಂಜಿನಲ್ಲಿರುವ ಸೂಜಿಯ ಬದಲಿಗೆ ಅದರ ಮೂತಿಯಲ್ಲಿ ಹಾಗೂ ಎರಡೂ ಬದಿಗಳಲ್ಲಿ ರಂಧ್ರವಿರುತ್ತದೆ. ಎಂಡೋಸ್ಕೋಪಿನ ನೆರವಿನಿಂದ ಅನ್ನನಾಳದೊಳಗೆ ನಿರ್ದಿಷ್ಟ ಜಾಗವನ್ನು ತಲುಪಿದಾಗ ಸಿರಿಂಜನ್ನು ಒತ್ತಿ ಔಷಧವನ್ನು ರಂಧ್ರಗಳ ಮೂಲಕ ಚಿಮ್ಮಿಸಬಹುದು. ಮತ್ತೊಂದು ಸಾಧನ ಗುಳಿಗೆಯ ರೀತಿಯದ್ದು. ಒಂದು ಸೆಂಟಿಮೀಟರಿನ ಗೋಲಿಯಂತೆ ಇರುವ ಇದರೊಳಗೆ ಔಷಧದ ಜೊತೆಗೆ ಕಾರ್ಬನ್‌ ಡಯಾಕ್ಸೈಡನ್ನು ಅತಿ ಒತ್ತಡದಲ್ಲಿ ತುಂಬಿಟ್ಟಿರುತ್ತಾರೆ. ಅದರಲ್ಲಿಯೂ ಮೂತಿಯಲ್ಲಿ ಹಾಗೂ ಬದಿಯಲ್ಲಿ ರಂಧ್ರಗಳಿರುತ್ತವೆ. ಈ ರಂಧ್ರಗಳನ್ನು ಸಕ್ಕರೆಯ ಬೆಣೆಯಿಂದ ಮುಚ್ಚಿರುತ್ತಾರೆ. ಅನ್ನನಾಳ ಅಥವಾ ಜಠರವನ್ನು ತಲುಪಿದಾಗ ಈ ಸಕ್ಕರೆಯ ಬೆಣೆ ಕರಗಿ ರಂಧ್ರ ತೆರೆದುಕೊಳ್ಳುತ್ತದೆ. ಒಳಗಿರುವ ಕಾರ್ಬನ್‌ ಡಯಾಕ್ಸೈಡಿನ ಒತ್ತಡದಿಂದಾಗಿ ಔಷಧ ಚಿಲುಮೆಯಾಗಿ ಚಿಮ್ಮುತ್ತದೆ.

ಈ ತಂತ್ರಗಳೇನೋ ಸರಳವೇ. ಆದರೆ ಹೀಗೆ ಚಿಮ್ಮಿದ ಔಷಧ ಎಷ್ಟು ಫಲಕಾರಿ? ಬೇಕಿದ್ದಷ್ಟು ಔಷಧ ಬೇಕಾದ ಜಾಗಕ್ಕೆ ತಲುಪುತ್ತದೆಯೇ? ಇದು ಪ್ರಶ್ನೆ. ಇದನ್ನೂ ಇವರು ಪರೀಕ್ಷಿಸಿದ್ದಾರೆ. ಪ್ರಾಣಿಗಳಿಂದ ಹೆಕ್ಕಿದ ಕರುಳು, ಜಠರ ಮೊದಲಾದ ಅಂಗಗಳೊಳಗೆ ಈ ಸಾಧನಗಳನ್ನಿಟ್ಟು, ಔಷಧ ಪ್ರಯೋಗ ಮಾಡಿದ್ದಾರೆ. ಅನಂತರ ಆ ಅಂಗಾಂಶದಲ್ಲಿ ಔಷಧ ಕೂಡಿಕೊಂಡಿದೆಯೇ ಎಂದು ಪರೀಕ್ಷಿಸಿದ್ದಾರೆ. ಮೂತಿಗೆ ಎದುರಾಗಿ ಇರುವ ಹಾಗೂ ಬದಿಯ ರಂಧ್ರದಿಂದ ಸುಮಾರು ಅರವತ್ತು ಡಿಗ್ರಿ ಕೋನದಲ್ಲಿರುವ ಭಾಗಗಳಿಗೂ ಔಷಧ ಕೂಡಿಕೊಂಡಿರುವುದನ್ನು ಗಮನಿಸಿದ್ದಾರೆ. ಸಾಧನ ಯಾವ ಭಾಗವನ್ನೂ ಮುಟ್ಟದಿದ್ದರೂ ಔಷಧ ಕರುಳಿನ ಮೇಲ್ಮೈನಲ್ಲಿಯಷ್ಟೆ ಅಲ್ಲ, ಒಳಪದರಗಳಲ್ಲಿಯೂ ಕೂಡಿಕೊಂಡಿತ್ತು ಎನ್ನುವುದು ವಿಶೇ಼ಷ.

ಅಷ್ಟೇ ಅಲ್ಲ. ಹಂದಿ, ನಾಯಿಗಳಲ್ಲಿ ಈ ಎರಡೂ ಸಾಧನಗಳನ್ನೂ ಬಳಸಿ, ಇನ್ಸುಲಿನ್‌, ಗ್ಲುಕಾಗಾನ್‌ನಂತಹ ‘ಪೆಪ್ಟೈಡು’ ಹಾಗೂ ‘ಆರ್‌-ಆರ್‌ಎನ್‌ಎ’ಯನ್ನು ಚುಚ್ಚಿದ್ದಾರೆ. ಪೆಪ್ಟೈಡುಗಳನ್ನು ಗುಳಿಗೆಗಳ ರೂಪದಲ್ಲಿ ನೀಡುವುದು ಅಪರೂಪ. ಅನಂತರ ಗಮನಿಸಿದಾಗ ಈ ಔಷಧಗಳು ಸಾಧಾರಣ ಇಂಜೆಕ್ಷನ್‌ ಕೊಟ್ಟಾಗ ದೇಹದಲ್ಲಿ ಕಾಣಿಸುವ ಪ್ರಮಾಣದಷ್ಟೇ ಇತ್ತು. ಸಾಧನದಲ್ಲಿರುವ ಒತ್ತಡವನ್ನು ಹೆಚ್ಚೂ ಕಡಿಮೆ ಮಾಡಿ ದೇಹ ಸೇರುವ ಔಷಧದ ಪ್ರಮಾಣವನ್ನು ಬದಲಿಸಬಹುದು.

ಇಂಜೆಕ್ಷನ್ನು ಕೊಡುವುದು ಅಸಾಧ್ಯವೆನ್ನಿಸುವ ಒಳಾಂಗಗಳಿಗೆ ಹೀಗೆ ಔಷಧವನ್ನು ಚಿಮ್ಮಿಸುವ ಮೂಲಕ ಚಿಕಿತ್ಸೆ ಮಾಡುವುದು ಸಾಧ್ಯ ಎಂದು ಟ್ರೇವರ್ಸೋ-ಬಕ್ಲಿ ತಂಡದ ಸಂಶೋಧನೆಗಳು ನಿರೂಪಿಸಿವೆ. ‘ನೇಚರ್‌’ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಈ ಶೋಧದ ವಿವರಗಳು ಪ್ರಕಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.