ADVERTISEMENT

ಐದು ಗ್ರಹಗಳ ಸಂಯೋಗ: ಇಂದಿನಿಂದ ಸೋಮವಾರದವರೆಗೆ ವೀಕ್ಷಿಸಿ ಖಗೋಳ ವಿಸ್ಮಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2022, 15:46 IST
Last Updated 24 ಜೂನ್ 2022, 15:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು:ಆಗಸವು ಇಂದಿನಿಂದ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ. ಶುಕ್ರವಾರದಿಂದ ಐದು ಗ್ರಹಗಳ ಅಪರೂಪದ ಸಂಯೋಗ ಏರ್ಪಡಲಿದೆ.

ಬುಧ, ಶುಕ್ರ, ಮಂಗಳ, ಗುರು, ಮತ್ತು ಶನಿ ಗ್ರಹಗಳು ಒಂದೆಡೆ ಸಮರೇಖೆಯಲ್ಲಿ ಸೇರಿಕೊಳ್ಳುತ್ತಿವೆ. ಹೀಗಾಗಿ, ಭೂಮಿಯಿಂದ ಆಕಾಶದಲ್ಲಿ ಐದು ಗ್ರಹಗಳನ್ನು ಏಕಕಾಲದಲ್ಲಿ ಒಟ್ಟಿಗೆ ನೋಡುವ ಒಂದು ಅನನ್ಯ ಅವಕಾಶ ಸಿಗಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಅಪರೂಪದ ಖಗೋಳ ವಿಸ್ಮಯವು ಮತ್ತೆ 2040ಕ್ಕೆ ಸಂಭವಿಸಲಿದೆ. 2004ರಲ್ಲಿ ಇದೇ ರೀತಿ ಗ್ರಹಗಳ ಸಂಯೋಜನೆ ಸಂಭವಿಸಿತ್ತು.

ADVERTISEMENT

ಈ ಗ್ರಹಗಳು ಸೂರ್ಯನನ್ನು ಒಂದೇ ಸಮತಲದಲ್ಲಿ ಸುತ್ತುವುದರಿಂದ, ಅವೆಲ್ಲವೂ ಭೂಮಿಯ ಮೇಲಿನ ಆಕಾಶದಲ್ಲಿ ಒಂದರ ನಂತರ ಒಂದರಂತೆ ಸಾಲಾಗಿ ಕಾಣುತ್ತವೆ. ಆದರೂ ಅವೆಲ್ಲವೂ ತಮ್ಮದೇ ಆದ ವಿಶಿಷ್ಟ ಕಕ್ಷೆಗಳಲ್ಲಿ ತಿರುಗುತ್ತಾ ಶತಕೋಟಿ ಕಿಲೋಮೀಟರ್‌ಗಳಷ್ಟು ದೂರದಲ್ಲಿರುತ್ತವೆ. ಇಂದು ಪ್ರಾರಂಭವಾಗುವ ಗ್ರಹಗಳ ಸಂಯೋಗವು ಸೋಮವಾರದವರೆಗೆ ಮುಂದುವರಿಯುತ್ತದೆ. ಸೂರ್ಯೋದಯಕ್ಕೆ ಮೊದಲು ಮತ್ತು ನಂತರದ ನಸುಕಿನ ಸಮಯದಲ್ಲಿ ಇದು ಉತ್ತಮವಾಗಿ ಗೋಚರಿಸುತ್ತದೆ.

ಐದು ಗ್ರಹಗಳನ್ನು ಎಲ್ಲಿ ನೋಡಬಹುದು?

ನೀವು ಉತ್ತರ ಗೋಳಾರ್ಧದಲ್ಲಿ ವಾಸಿಸುವವರಾಗಿದ್ದರೆ, ಸೂರ್ಯೋದಯಕ್ಕೆ 45 ಮತ್ತು 90 ನಿಮಿಷಗಳ ಮೊದಲು ಅಪರೂಪದ ಗ್ರಹಗಳ ಸಂಯೋಗವು ಉತ್ತಮವಾಗಿ ಗೋಚರಿಸುತ್ತದೆ. ಎತ್ತರದ ಪ್ರದೇಶದಲ್ಲಿ ಪೂರ್ವದ ಕಡೆಗೆ ನೋಡಿ. ಈ ಘಟನೆಯನ್ನು ಬರಿಗಣ್ಣಿನಿಂದ ನೋಡಲು ಸೂರ್ಯೋದಯಕ್ಕೆ ಮುಂಚೆಯೇ ಏಳಬೇಕು, ಸೂರ್ಯ ಉದಯಿಸಿದ ಕ್ಷಣ ಮಾತ್ರದಲ್ಲಿ ಗ್ರಹಗಳ ಗೋಚರತೆ ಅಸ್ಪಷ್ಟಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.