ವಾಷಿಂಗ್ಟನ್: ತೀರಾ ಅಪಾಯಕಾರಿ ಎಂದೇ ಪರಿಗಣಿಸಲಾಗಿರುವ ಬಾಹ್ಯಾಕಾಶ ನಡಿಗೆ (ಸ್ಪೇಸ್‌ವಾಕ್) ಅನ್ನು ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಮುಂದಿನ ವಾರ ಪ್ರಾಯೋಗಿಕವಾಗಿ ನಡೆಸಲಿದೆ.
ಇದಕ್ಕಾಗಿ ತೆಳುವಾದ ಸ್ಪೇಸ್ ಸೂಟ್ ಹಾಗೂ ಏರ್‌ಲಾಕ್ ಇಲ್ಲದ ಕ್ಯಾಬಿನ್ ಬಳಸಲಾಗುತ್ತಿದೆ. ಸ್ಪೇಸ್‌ಎಕ್ಸ್ ನಡೆಸುತ್ತಿರುವ ಈ ಪ್ರಯೋಗವು ಅತ್ಯಂತ ಅಪಾಯಕಾರಿ ಯೋಜನೆ ಎಂದೇ ಹೇಳಲಾಗುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಡ್ರ್ಯಾಗನ್ ನೌಕೆ ಮೂಲಕ ಮಂಗಳವಾರ ಉಡ್ಡಯನ ನಡೆಯಲಿದೆ. 20 ನಿಮಿಷಗಳಲ್ಲಿ 700 ಕಿ.ಮೀ. ತಲುಪಲಿದ್ದಾರೆ. ಎಂದು ವರದಿಯಾಗಿದೆ. ಈವರೆಗೂ ಭೂಮಿಯಿಂದ 400 ಕಿ.ಮೀ. ದೂರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸರ್ಕಾರಿ ಗಗನಯಾತ್ರಿಗಳು ಮಾತ್ರ ಇಂಥ ನಡಿಗೆ ಕೈಗೊಂಡಿದ್ದಾರೆ.
ಸ್ಪೇಸ್‌ಎಕ್ಸ್‌ನ ಈ ಐದು ದಿನಗಳ ಯೋಜನೆಯಲ್ಲಿ ಗಗನಯಾನಿಗಳು ಅಂಡಾಕಾರದ ಕಕ್ಷೆಯಲ್ಲಿ ಈಜಲಿದ್ದು, ಭೂಮಿಗೆ ಅತ್ಯಂತ ಸಮೀಪ 190 ಕಿ.ಮೀ. ಹಾಗೂ ಅತಿ ದೂರವೆಂದರೆ 1,400 ಕಿ.ಮೀ.ವರೆಗೂ ತಲುಪಲಿದ್ದಾರೆ. 1972ರಲ್ಲಿ ಅಮೆರಿಕ ಕೈಗೊಂಡ ಅಪೊಲೊ ಯೋಜನೆಯಲ್ಲಿ ಚಂದ್ರನ ಅಂಗಳಕ್ಕಿಳಿದ ನಂತರ ಕೈಗೊಳ್ಳುತ್ತಿರುವ ಅತಿ ದೂರದ ಬಾಹ್ಯಾಕಾಶ ಕಾರ್ಯಕ್ರಮ ಇದಾಗಿದೆ ಎಂದು ಸ್ಪೇಸ್‌ಎಕ್ಸ್ ಹೇಳಿಕೊಂಡಿದೆ.
ಸ್ಪೇಸ್‌ಎಕ್ಸ್ ಕೈಗೊಂಡಿರುವ ಈ ಕಾರ್ಯಕ್ರಮದಲ್ಲಿ ಶತಕೋಟಿ ಸಂಪತ್ತಿನ ಒಡೆಯರಾದ ಜೇರ್ಡ್ ಐಸಾಕ್‌ಮ್ಯಾನ್ ಅವರು ಸ್ಲಿಮ್‌ಲೈನ್ ಬಾಹ್ಯಾಕಾಶ ಧಿರಿಸು ತೊಟ್ಟು ಡ್ರ್ಯಾಗನ್ ನೌಕೆ ಏರಲಿದ್ದಾರೆ. ಈ ನೌಕೆಯು ಬಾಹ್ಯಾಕಾಶದ ನಿರ್ವಾತ ಪ್ರದೇಶದಲ್ಲಿ ತನ್ನ ಹಿಂಬದಿಯ ಬಾಗಿಲು ತೆರೆದು ಗಗನಯಾನಿಯನ್ನು ಹೊರಕ್ಕೆ ಬಿಡಲಿದೆ. ನೌಕೆಯೊಳಗೆ ನಿರ್ವಾತ ಸೃಷ್ಟಿಸುವ ಏರ್‌ಲಾಕ್ ಅನ್ನು ತೆರೆಯುವ ಅತ್ಯಂತ ವಿಚಿತ್ರ ಹಾಗೂ ವಿನೂತನ ಪ್ರಯತ್ನ ಇದಾಗಿದೆ ಎಂದೇ ಹೇಳಲಾಗುತ್ತಿದೆ.
ಐಸಾಕ್‌ಮ್ಯಾನ್ ಅವರು ಶಿಫ್ಟ್4 ಎಂಬ ಎಲೆಕ್ಟ್ರಾನಿಕ್ ಪಾವತಿ ಕಂಪನಿಯ ಸಂಸ್ಥಾಪಕರಾಗಿದ್ದಾರೆ. ಇವರು ಈ ಯಾನಕ್ಕಾಗಿ ಸುಮಾರು 100 ದಶಲಕ್ಷ ಡಾಲರ್ (₹839 ಕೋಟಿ) ಖರ್ಚು ಮಾಡುತ್ತಿದ್ದಾರೆ. ಇವರೊಂದಿಗೆ ಯೋಜನೆಯ ಪೈಲೆಟ್ ಸ್ಕಾಟ್ ಪೊಟೀಟ್ ಈ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಪೊಟೀಟ್ ಅವರು ಅಮೆರಿಕದ ಏರ್‌ಫೋರ್ಸ್‌ನ ಮಾಜಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಉಳಿದಂತೆ ಸ್ಪೇಸ್‌ಎಕ್ಸ್ ಸರಾ ಗಿಲ್ಸ್ ಹಾಗೂ ಅನ್ನಾ ಮೆನನ್ ಬಾಹ್ಯಾಕಾಶ ಪ್ರಯಾಣ ಕೈಗೊಳ್ಳುತ್ತಿದ್ದಾರೆ.
ಈ ಐದು ದಿನಗಳ ಪ್ರಯಾಣದ ಮೂರನೇ ದಿನದಿಂದ ಗಗನಯಾನಿಗಳು ತಮ್ಮ ನಡಿಗೆ ಆರಂಭಿಸಲಿದ್ದಾರೆ. ನಿರಂತರವಾಗಿ 45 ಗಂಟೆಗಳ ಕಾಲ ನಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.