ADVERTISEMENT

Chandrayaan-3: ಇಸ್ರೊ ಪ್ರಯತ್ನಕ್ಕೆ ನೆರವಾಗುತ್ತಿರುವ ನಾಸಾ, ಐರೋಪ್ಯ ಏಜೆನ್ಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2023, 6:43 IST
Last Updated 22 ಆಗಸ್ಟ್ 2023, 6:43 IST
ಚಿತ್ರ: ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿ
   ಚಿತ್ರ: ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆಯಲ್ಲಿ ಲ್ಯಾಂಡರ್‌ ವಿಕ್ರಮ್ ಅನ್ನು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಅಮೆರಿಕದ ನಾಸಾ ಮತ್ತು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ನೆರವಾಗುತ್ತಿವೆ. 

ಈ ಮಾಹಿತಿಯನ್ನು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ತನ್ನ ಅಂತರ್ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಲ್ಯಾಂಡರ್‌ನಲ್ಲಿ ನಾಸಾ ನೀಡಿರುವ ರೆಟ್ರೊರಿಫ್ಲೆಕ್ಟರ್‌ ಲೇಸರ್‌ ಅಳವಡಿಸಲಾಗಿದೆ. ಇದರಿಂದ ಚಂದ್ರನ ಮೇಲ್ಮೈ ತಾಪಮಾನ ಹಾಗೂ ಭೂಕಂಪನದ ಮಾಹಿತಿಯು ಬೇಸ್‌ ಸ್ಟೇಷನ್‌ಗೆ ಕಳುಹಿಸುತ್ತಿದೆ. ಇದರಿಂದ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ನೆರವಾಗುವಂತೆ ಮಾಡಲು ಹೆಚ್ಚು ಅನುಕೂಲವಾಗಲಿದೆ’ ಎಂದೆನ್ನಲಾಗಿದೆ.

ರೋವರ್‌ನಲ್ಲಿ ಅಳವಡಿಸಿರುವ ವೈಜ್ಞಾನಿಕ ಉಪಕರಣಗಳಿಂದ ಚಂದ್ರನ ಮೇಲ್ಮೈ ವಸ್ತುಗಳ ರಚನೆಯ ಕುರಿತು ಮಾಹಿತಿ ಸಿಗಲಿದೆ. ಯಾವುದೇ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಸಂವಹನವೇ ಅತಿ ಮುಖ್ಯವಾದ ಅಂಶ. ಭೂಮಿ ಮೇಲಿರುವ ನಿಯಂತ್ರಣ ಕೇಂದ್ರದೊಂದಿಗೆ ನೌಕೆಯು ನಿರಂತರ ಸಂಪರ್ಕ ಹೊಂದಿದ್ದಲ್ಲಿ, ಅನಿರೀಕ್ಷಿತ ಅಪಾಯಗಳಿಂದ ತಪ್ಪಿಸುವ ಸಾಧ್ಯತೆ ಹೆಚ್ಚು. ಗ್ರೌಂಡ್‌ ಸ್ಟೇಷನ್‌ ನೆರವಿಲ್ಲದೆ ನೌಕೆಯ ಯಾವುದೇ ಮಾಹಿತಿ ಪಡೆಯುವುದು ಅಸಾಧ್ಯ.

ADVERTISEMENT

32 ಮೀಟರ್‌ನ ಡೀಪ್‌ ಸ್ಪೇಸ್‌ ಟ್ರ್ಯಾಕಿಂಗ್‌ ಸ್ಟೇಷನ್‌ ಅನ್ನು ಇಸ್ರೊ ಭಾರತದಲ್ಲಿ ನಿರ್ವಹಿಸುತ್ತಿದೆ. ಇಲ್ಲಿ ನೌಕೆ ಇರುವ ಸ್ಥಳ, ಅದರ ಚಲನವಲನ, ಭೂಮಿಯಿಂದ ಕಳುಹಿಸುವ ನಿರ್ದೇಶನಗಳನ್ನು ಪಾಲಿಸುತ್ತಿದೆಯೇ, ಟೆಲಿಮೆಟ್ರಿ ಹಾಗೂ ವೈಜ್ಞಾನಿಕ ಮಾಹಿತಿಯನ್ನು ಅದು ಕಳುಹಿಸುತ್ತಿದೆಯೇ ಎಂಬಿತ್ಯಾದಿಯನ್ನು ಈ ಕೇಂದ್ರದಲ್ಲಿ ನಿರ್ವಹಿಸಲಾಗುತ್ತಿದೆ.

ಇದನ್ನು ಹೊರತುಪಡಿಸಿ ತನ್ನ ನೌಕೆಯ ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇಡಲು ಜಗತ್ತಿನ ಹಲವೆಡೆ ಬೃಹತ್ ಆ್ಯಂಟೆನಾಗಳನ್ನು ಹಾಕುವುದು ಅಸಾಧ್ಯ. ಅದು ದುಬಾರಿ ಕೂಡಾ. ಇಂಥ ಸಂದರ್ಭದಲ್ಲಿ ಜಗತ್ತಿನ ವಿವಿಧ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮತ್ತು ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ವಾಣಿಜ್ಯ ಕಂಪನಿಗಳ ನೆರವನ್ನು ಇಸ್ರೊ ಪಡೆಯುತ್ತಿದೆ. ಇದು ವೆಚ್ಚ ತಗ್ಗಿಸುವುದು ಮಾತ್ರವಲ್ಲ, ಜಾಗತಿಕ ಮಟ್ಟದ ಬಾಂಧವ್ಯವನ್ನೂ ವೃದ್ಧಿಸಲಿದೆ ಎಂದು ಏಜನ್ಸಿಯು ಹೇಳಿದೆ.

ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಈಸ್‌ಟ್ರ್ಯಾಕ್‌ ಎಂಬ ಜಾಗತಿಕ ಮಟ್ಟದ ಬಾಹ್ಯಾಕಾಶ ಕೇಂದ್ರದ ಸಂಪರ್ಕ ಜಾಲದ ಮೂಲಕ ಚಂದ್ರಯಾನ–3ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜರ್ಮನಿಯ ಡ್ರಾಮ್‌ಸ್ಟಾಡ್‌ನಲ್ಲಿರುವ ಇಎಸ್‌ಒಸಿ ನಿಯಂತ್ರಣ ಕೇಂದ್ರದಿಂದ ಈ ಕಾರ್ಯ ನಡೆಸಲಾಗುತ್ತಿದೆ.

ಫ್ರೆಂಚ್ ಗಯಾನಾದಲ್ಲಿರುವ ಕೇಂದ್ರದಲ್ಲಿ 15 ಮೀಟರ್ ಆ್ಯಂಟೆನಾ ಇದ್ದು, ಚಂದ್ರಯನಾ–3ರ ಆರಂಭದಿಂದ ಇಂದಿನವರೆಗೂ ಅದರ ಸುಸ್ಥಿತಿಯ ಮಾಹಿತಿ ಇಲ್ಲಿ ಸಂಗ್ರಹಿಸಲಾಗುತ್ತಿದೆ. ಆ ಮಾಹಿತಿಯನ್ನು ಇಸ್ರೊಗೆ ರವಾನಿಸಲಾತ್ತಿದೆ. ಭೂಮಿಯಿಂದ ಕಳುಹಿಸುವ ಸಂದೇಶಗಳಿಗೆ ನೌಕೆಯು ಸ್ಪಂದಿಸುವ ಮಾಹಿತಿಯು ಗೂನ್‌ಹಿಲ್‌ನಲ್ಲಿರುವ ಮತ್ತೊಂದು 32 ಮೀಟರ್‌ ಆ್ಯಂಟೆನಾದಿಂದ ಪಡೆಯಲಾಗುತ್ತಿದೆ. ಇದು ನೌಕೆಯ ಪ್ರೊಪಲ್ಶನ್ ಮತ್ತು ಲ್ಯಾಂಡರ್‌ಗೆ ಅಗತ್ಯ ನೆರವು ನೀಡುತ್ತಿದೆ. ಚಂದ್ರಯಾನದ ಸಂಪೂರ್ಣ ಯೋಜನೆಯವರೆಗೂ ಲ್ಯಾಂಡರ್‌ಗೆ ಇಲ್ಲಿಂದಲೇ ಅಗತ್ಯ ನೆರವು ನೀಡಲಾಗುತ್ತದೆ. 

ಫ್ರೆಂಚ್ ಗಯಾನಾ ಹಾಗೂ ಗೂನ್‌ಹಿಲ್‌ ಕೇಂದ್ರಗಳಿಗೆ ಬರುವ ಮಾಹಿತಿಯನ್ನು ವಿಶ್ಲೇಷಿಸಲು ಇಸ್ರೊಗೆ ಇಎಸ್‌ಒಸಿ ಕಳುಹಿಸುತ್ತಿದೆ. ಆ ಮೂಲಕ ಯುರೋಪ್‌ ಏಜೆನ್ಸಿ ಮತ್ತು ನಾಸಾ ಎರಡೂ ಇಸ್ರೊದೊಂದಿಗೆ ಕೈಜೋಡಿಸಿದ್ದು, ನೌಕೆಯು ಭೂಮಿಯ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತಿವೆ.

ಸೂರ್ಯನ ಅರಿಯುವ ಆದಿತ್ಯ–ಎಲ್‌1 ಯೋಜನೆಗೂ ನೆರವು

ಇದೇ ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಇಸ್ರೊ ಕೈಗೊಳ್ಳುತ್ತಿರುವ ಸೂರ್ಯನ ಅಧ್ಯಯನದ ಆದಿತ್ಯ–ಎಲ್1 ಯೋಜನೆಗೂ ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿ ನೆರವಾಗುತ್ತಿದೆ. ಚಂದ್ರಯಾನದಲ್ಲಿ ಬಳಕೆಯಾದಂತೆ ಕೋರೂ ಹಾಗೂ ಗೂನ್‌ಹಿಲ್ ಕೇಂದ್ರದಿಂದಲೇ ಈ ಯೋಜನೆಯ ಮಾಹಿತಿಯನ್ನು ಸಂಗ್ರಹಿಸಿ ಇಸ್ರೊಗೆ ಕಳುಹಿಸಲಾಗುವುದು. ಆದರೆ ಈ ಯೋಜನೆಯಲ್ಲಿ 35 ಮಿಟರ್‌ನ ಬೃಹತ್ ಆ್ಯಂಟೆನಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇವುಗಳು ಆಸ್ಟ್ರೇಲಿಯಾದ ನ್ಯೂ ನಾರ್ಸಿಯಾ, ಅರ್ಜೆಂಟೀನಾದ ಮಲಾರ್ಕ್, ಸ್ಪೇನ್‌ನ ಸೆಬ್ರೆರೊಸ್‌ ಕೇಂದ್ರದಿಂದ ಪಡೆಯಲಾಗುತ್ತಿದೆ ಎಂದು ಏಜೆನ್ಸಿ ಹೇಳಿದೆ.

ಯುರೋಪ್‌ನ ಏಜೆನ್ಸಿಯ ಫ್ಲೈಟ್‌ ಡೈನಾಮಿಕ್ಸ್‌ ಪರಿಣಿತರು ಆದಿತ್ಯ ಎಲ್‌1 ಯೋಜನೆಗೆ ಅಗತ್ಯ ನೆರವು ನೀಡಲಿದ್ದಾರೆ. ಆರ್ಬಿಟ್‌ ಡಿಟರ್ಮಿನೇಷನ್‌ ತಂತ್ರಾಂಶವನ್ನು ಇಸ್ರೊ ಈ ಯೋಜನೆಯಲ್ಲಿ ಬಳಸುತ್ತಿದೆ. ಇದರಿಂದ ಬಾಹ್ಯಾಕಾಶ ನೌಕೆಯ ನಿಖರ ಸ್ಥಳದ ಮಾಹಿತಿ ಪಡೆಯಲು ಸಾಧ್ಯ. 

ಭವಿಷ್ಯದಲ್ಲಿ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಕಾರ್ಯಕ್ರಮದಲ್ಲೂ ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿಯು ಅಗತ್ಯ ಸಹಕಾರ ನೀಡುವ ಕುರಿತು ಮಾತುಕತೆ ನಡೆದಿದೆ ಎಂದು ಏಜೆನ್ಸಿ ತನ್ನ ತಾಣದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.