ADVERTISEMENT

ಮಂಗಳನಲ್ಲಿ ಕಲ್ಲು ಸಂಗ್ರಹಿಸಿದ ನಾಸಾದ ರೋವರ್‌; 2030ಕ್ಕೆ ಭೂಮಿಗೆ ತರಲು ಯೋಜನೆ

ಏಜೆನ್ಸೀಸ್
Published 7 ಸೆಪ್ಟೆಂಬರ್ 2021, 3:40 IST
Last Updated 7 ಸೆಪ್ಟೆಂಬರ್ 2021, 3:40 IST
ಮಂಗಳನ ಅಂಗಳದಲ್ಲಿ ನಾಸಾನ ಪರ್ಸಿವಿರೆನ್ಸ್‌ ರೋವರ್‌–ಸಂಗ್ರಹ ಚಿತ್ರ
ಮಂಗಳನ ಅಂಗಳದಲ್ಲಿ ನಾಸಾನ ಪರ್ಸಿವಿರೆನ್ಸ್‌ ರೋವರ್‌–ಸಂಗ್ರಹ ಚಿತ್ರ   

ವಾಷಿಂಗ್ಟನ್‌: ಮಂಗಳ ಗ್ರಹದ ನೆಲದಲ್ಲಿ ಸಂಚರಿಸುತ್ತಿರುವ ನಾಸಾದ ಪರ್ಸಿವಿರೆನ್ಸ್‌ ರೋವರ್‌, ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಅಲ್ಲಿನ ಕಲ್ಲಿನ ಮಾದರಿ ಸಂಗ್ರಹಿಸಿರುವುದು ಖಚಿತ ಪಟ್ಟಿದೆ. ಮುಂಬರುವ ಮಂಗಳಯಾನ ಯೋಜನೆಗಳಲ್ಲಿ ಆ ಕಲ್ಲಿನ ಮಾದರಿಯನ್ನು ಭೂಮಿಗೆ ಹೊತ್ತುತರಲು ಉದ್ದೇಶಿಸಲಾಗಿದೆ.

ಇದೇ ಮೊದಲ ಬಾರಿಗೆ ಅನ್ಯಗ್ರಹದಲ್ಲಿ ಬಂಡೆಯನ್ನು ಕೊರೆದು ಅದರ ಮಾದರಿಯನ್ನು ಸಂಗ್ರಹಿಸಿರುವ ಕಾರ್ಯಾಚರಣೆ ನಡೆಸಲಾಗಿದೆ. 'ನಾನು ಬಂಡೆಯನ್ನು ಕೊರೆದು ಮಾದರಿ ತೆಗೆದು, ಅದನ್ನು ಮುಚ್ಚಿಟ್ಟು ಸಂಗ್ರಹಿಸಿಟ್ಟಿರುವೆ' ಎಂದು ಪರ್ಸಿವಿರೆನ್ಸ್‌ ರೋವರ್‌ನ ಪರವಾಗಿ ನಾಸಾ ಟ್ವೀಟಿಸಿದೆ.

ಸೆಪ್ಟೆಂಬರ್‌ 1ರಂದೇ ರೋವರ್‌ ಕಲ್ಲಿನ ಮಾದರಿಯನ್ನು ಸಂಗ್ರಹಿಸಿದೆ. ಆದರೆ, ಮಂದ ಬೆಳಕಿನಲ್ಲಿ ತೆಗೆದಿರುವ ಚಿತ್ರಗಳು ಲಭ್ಯವಿದ್ದರಿಂದ ನಾಸಾ ಕಲ್ಲು ಸಂಗ್ರಹದ ಕುರಿತು ಖಚಿತ ಪಡಿಸಿರಲಿಲ್ಲ. ಈ ರೋವರ್‌ ಹೊಸ ಚಿತ್ರಗಳನ್ನು ಕಳುಹಿಸಿದ್ದು, ಕಲ್ಲಿನ ಮಾದರಿಯನ್ನುಒಳಗೊಂಡ ನಳಿಕೆಯನ್ನು ಪರ್ಸಿವಿರೆನ್ಸ್‌ ತನ್ನ ಪ್ರಯೋಗಾಲಯದ ಪೆಟ್ಟಿಗೆಯೊಳಗೆ ಸೇರಿಸಿದೆ. ಅಲ್ಲಿ ಕಲ್ಲಿನ ಚಿತ್ರಗಳನ್ನು ತೆಗೆಯುವುದು ಮತ್ತು ಅಳೆತೆ ಮಾಡಿ ಗಾಜಿನ ನಳಿಕೆಯಲ್ಲಿ ಮುಚ್ಚಿಡುತ್ತದೆ.

ADVERTISEMENT

'ಇದು ಅದ್ಭುತ ಸಾಧನೆಯಾಗಿದೆ ಹಾಗೂ ಪರ್ಸಿವಿರೆನ್ಸ್‌ ಮತ್ತು ನಮ್ಮ ತಂಡ ನಡೆಸಿರುವ ಶೋಧನೆಗಳನ್ನು ಕಾಣಲು ಹೆಚ್ಚು ಕಾಯಲು ಸಾಧ್ಯವಾಗುತ್ತಿಲ್ಲ' ಎಂದು ನಾಸಾದ ಆಡಳಿತಾಧಿಕಾರಿ ಬಿಲ್‌ ನೆಲ್ಸನ್‌ ಅಭಿಪ್ರಾಯ ಪಟ್ಟಿದ್ದಾರೆ.

ಏಳು ಅಡಿ ಉದ್ದದ ರೊಬೊಟಿಕ್‌ ಕೈಗಳ ಮೂಲಕ ಪರ್ಸಿವಿರೆನ್ಸ್‌ ಬಂಡೆಯನ್ನು ಕೊರೆದು ಮಾದರಿಯನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಮಂಗಳ ಗ್ರಹದ ಭೂಗರ್ಭ ಮತ್ತು ಹಿಂದಿನ ವಾತಾವರಣವನ್ನು ಮತ್ತಷ್ಟು ಚೆನ್ನಾಗಿ ಅರ್ಥೈಸುವ ಪ್ರಯತ್ನವನ್ನು ರೋವರ್‌ ನಡೆಸುತ್ತಿದೆ.

ರೋವರ್‌ 2.5 ಕಿ.ಮೀನಿಂದ 5 ಕಿ.ಮೀ. ವರೆಗೂ ಸಂಚಾರ ನಡೆಸಲಿದ್ದು, 43 ಮಾದರಿ ಸಂಗ್ರಹ ನಳಿಕೆಗಳ ಪೈಕಿ ಎಂಟರಲ್ಲಿ ಮಾದರಿಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ. ಅದು ಸಂಗ್ರಹಿಸಿಟ್ಟಿರುವ ಮಾದರಿಗಳನ್ನು 2030ರ ಆಸುಪಾಸಿನಲ್ಲಿ ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯ ಸಹಭಾಗಿತ್ವದ ಯೋಜನೆಯಲ್ಲಿ ಭೂಮಿಗೆ ತರಲು ನಾಸಾ ಯೋಜನೆ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.