ನಾಟಿಂಗ್‌ಹ್ಯಾಮ್, ಬ್ರಿಟನ್: ಸೌರವ್ಯೂಹದ ಸದಸ್ಯ ಶುಕ್ರಗ್ರಹಕ್ಕೆ ವ್ಯೋಮನೌಕೆ ಕಳಿಸಿ, ಅಧ್ಯಯನ ಕೈಗೊಳ್ಳುವ ಎರಡು ಯೋಜನೆಗಳನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಘೋಷಿಸಿದೆ.
ಈ ಮಹತ್ವಾಕಾಂಕ್ಷೆ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಕ್ರಮವಾಗಿ 2028 ಹಾಗೂ 2030ರಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ನಾಸಾ ಹೇಳಿರುವುದು ಅಂತರಿಕ್ಷ ವಿಜ್ಞಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಶುಕ್ರ ಗ್ರಹ ಪ್ರತಿಕೂಲ ವಾತಾವರಣ ಹೊಂದಿದೆ. ಇಲ್ಲಿನ ವಾತಾವರಣದಲ್ಲಿ ಗಂಧಕಾಮ್ಲ ಇದೆ. ಶೇ 96ರಷ್ಟು ಪ್ರಮಾಣ ಇಂಗಾಲದ ಡೈಆಕ್ಸೈಡ್ ಇರುವ ಕಾರಣ ಮೇಲ್ಮೈ ತಾಪಮಾನ 470 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಉಷ್ಣತೆಯಲ್ಲಿ ಸೀಸ ಸಹ ಕರಗುತ್ತದೆ. ಹೀಗಾಗಿ ಈ ಗ್ರಹದ ಅನ್ವೇಷಣೆ ವಿಜ್ಞಾನಿಗಳ ಪಾಲಿಗೆ ಈಗಲೂ ಸವಾಲಾಗಿಯೇ ಉಳಿದಿದೆ.
1970ರಲ್ಲಿ ಆಗಿನ ಸೋವಿಯತ್ ಒಕ್ಕೂಟ ‘ವೆನೆರಾ–7’ ಎಂಬ ಗಗನನೌಕೆಯನ್ನು ಶುಕ್ರ ಗ್ರಹಕ್ಕೆ ಕಳಿಸಿತ್ತು. ಆ ಗ್ರಹದ ಮೇಲೆ ಇಳಿಯುವ ಮುನ್ನವೇ, ಅಲ್ಲಿನ ಉಷ್ಣತೆಗೆ ಪ್ಯಾರಾಚೂಟ್ ಕರಗಿದ ಕಾರಣ, ಆ ವ್ಯೋಮಯಾನ ವಿಫಲವಾಗಿತ್ತು. ಆದರೆ, ನಾಶವಾಗುವ ಮುನ್ನ, ‘ವೆನೆರಾ’ ಗಗನನೌಕೆಯು ಭೂಮಿಗೆ 20 ನಿಮಿಷಗಳ ಡೇಟಾವನ್ನು ರವಾನಿಸಿತ್ತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.