ADVERTISEMENT

ಕ್ಷೀರ ಪಥದ ಅತ್ಯದ್ಭುತ ಚಿತ್ರ ಬಿಡುಗಡೆ ಮಾಡಿದ ನಾಸಾ

​ಪ್ರಜಾವಾಣಿ ವಾರ್ತೆ
Published 30 ಮೇ 2021, 6:04 IST
Last Updated 30 ಮೇ 2021, 6:04 IST
ಕ್ಷೀರ ಪಥ
ಕ್ಷೀರ ಪಥ   

ಕ್ಷೀರ ಪಥದ ತಾರಾ ಮಂಡಲದ ಅತ್ಯದ್ಭುತ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಚಂದ್ರ ಎಕ್ಸ್‌-ರೇ ಅಬ್ಸರ್ವೇಟರಿ ಉಪಗ್ರಹ ಕ್ಲಿಕ್ಕಿಸಿರುವ ತಾರಾ ಮಂಡಲದ ಚಿತ್ರದಲ್ಲಿ ಕ್ಷೀರ ಪಥದ ಮಧ್ಯಭಾಗದಲ್ಲಿ ಲಕ್ಷಾಂತರ ನಕ್ಷತ್ರಗಳು ಮತ್ತು ಲೆಕ್ಕಕ್ಕೆ ಸಿಗದಷ್ಟು ಕಪ್ಪುಕುಳಿಗಳು ಕಂಡುಬಂದಿವೆ.

ದಕ್ಷಿಣ ಆಫ್ರಿಕಾದ ರೇಡಿಯೋ ಟೆಲಿಸ್ಕೋಪ್‌ ನಾಸಾದ ತಾರಾ ಮಂಡಲದ ಚಿತ್ರ ಕ್ಲಿಕ್ಕಿಸಲು ತನ್ನ ಕೊಡುಗೆಯನ್ನು ನೀಡಿದೆ.

ಕಳೆದ ಎರಡು ದಶಕಗಳಿಂದ ಕ್ಷೀರ ಪಥದ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಚಂದ್ರ ಎಕ್ಸ್‌-ರೇ ಅಬ್ಸರ್ವೇಟರಿ 1999ರಲ್ಲಿ ಉಡಾವಣೆಗೊಂಡಿತ್ತು. ಭೂಮಿಯ ಸುತ್ತ ಸುತ್ತುತ್ತಿರುವ ಚಂದ್ರ ಇದುವರೆಗೆ ಕ್ಷೀರ ಪಥದ ಮೇಲೆ ಇಂತಹ 370 ಅವಲೋಕನ ನಡೆಸಿದೆ.

ADVERTISEMENT

ಆ್ಯಮರ್ಸ್ಟ್ಸ್‌ನ ಮಸಾಚುಸೆಟ್ಸ್‌ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಡೇನಿಯಲ್‌ ವ್ಯಾಂಗ್‌ ಕಳೆದ 1 ವರ್ಷದಿಂದ ಕೊರೊನಾ ವೈರಸ್‌ನಿಂದ ಉದ್ಭವಿಸಿರುವ ಸಂಕಷ್ಟದ ಸಮಯದ ನಡುವೆ ಮನೆಯಿಂದಲೇ ಕ್ಷೀರ ಪಥದ ಅಧ್ಯಯನ ತೊಡಗಿಸಿಕೊಂಡಿದ್ದಾರೆ.

ನಾವು ಚಿತ್ರದಲ್ಲಿ ನೋಡುತ್ತಿರುವುದು ನಮ್ಮ ಗ್ಯಾಲಕ್ಸಿಯ ಮಧ್ಯೆ ಗಾಢವಾಗಿರುವ ಅಥವಾ ಶಕ್ತಿಶಾಲಿಯಾಗಿರುವ ತಾರಾಮಂಡಲದ ವ್ಯವಸ್ಥೆ. ಅದರಲ್ಲಿ ಸಾಕಷ್ಟು ಸಂಖ್ಯೆಯ ಸೂಪರ್‌ನೋವಾದ ಅಲ್ಪಾವಶೇಷಗಳು, ಕಪ್ಪುಕುಳಿಗಳು, ನ್ಯೂಟ್ರಾನ್‌ ನಕ್ಷತ್ರಗಳು ಇವೆ. ಪ್ರತಿಯೊಂದು ಎಕ್ಸ್‌-ರೇ ಚುಕ್ಕಿಯೂ ಶಕ್ತಿಯ ಮೂಲದ ಗುರುತು. ಮಧ್ಯೆ ಭಾಗದಲ್ಲೇ ಇಂತಹ ಹೆಚ್ಚಿನ ಶಕ್ತಿಯ ಮೂಲಗಳು ಸೇರಿಕೊಂಡಿವೆ. ಇದು ಭೂಮಿಯಿಂದ 26,000 ಬೆಳಕಿನವರ್ಷದಷ್ಟು ದೂರದಲ್ಲಿದೆ ಎಂದು ಡೇನಿಯಲ್‌ ವ್ಯಾಂಗ್‌ ವಿವರಿಸಿದ್ದಾರೆ.

ಬಹಳಷ್ಟು ವರ್ಷಗಳ ಹಿಂದೆ ಕ್ಷೀರ ಪಥವು ಬರಿಗಣ್ಣಿಗೆ ಕಾಣಿಸುತ್ತಿತ್ತು. ವಿದ್ಯುತ್‌ ಬಳಕೆ ಹೆಚ್ಚಾದಂತೆ ಬೆಳಕಿನ ಮಾಲಿನ್ಯದಿಂದ ಕತ್ತಲು ಕರುಗುತ್ತಿರುವ ಪರಿಣಾಮ ಬರಿಗಣ್ಣಿನಿಂದ ಕ್ಷೀರ ಪಥವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.