ADVERTISEMENT

ಏಲಿಯನ್‌ಗಳು ಅಸ್ತಿತ್ವದಲ್ಲಿವೆಯೇ? ನಾಸಾ ವಿಜ್ಞಾನಿಗಳು ಹೇಳುವುದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2021, 7:40 IST
Last Updated 12 ಸೆಪ್ಟೆಂಬರ್ 2021, 7:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೂಮಿಯನ್ನು ಹೊರತು ಪಡಿಸಿ ಬೇರೆ ಗ್ರಹಗಳಲ್ಲಿ ಜೀವಿಗಳು ಇವೆಯೇ? ಎಂಬ ಪ್ರಶ್ನೆಗೆ ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ವಿಶ್ವದ ಯಾವುದೋ ಭಾಗಗಳಲ್ಲಿ ಏಲಿಯನ್‌ ಬಂದು ಹೋದ ಬಗ್ಗೆ ಊಹಾಪೋಹಗಳು ಸದ್ದು ಮಾಡುತ್ತವೆ. ಏಲಿಯನ್‌ಗಳ ಅಸ್ತಿತ್ವದ ಬಗೆಗಿನ ಪ್ರಶ್ನೆಗೆ ನಾಸಾ ವಿಜ್ಞಾನಿಗಳು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ನಾಸಾ, ವಿಜ್ಞಾನಿಗಳು ಏಲಿಯನ್‌ಗಳ ಹುಡುಕಾಟ ಮುಂದುವರಿಸಿದ್ದಾರೆ ಎಂದು ತಿಳಿಸಿದೆ. ನೆಲದಾಚೆಗಿನ ಜಗತ್ತಿನಲ್ಲಿ ಇದುವರೆಗೆ ಏಲಿಯನ್‌ಗಳು ಪತ್ತೆಯಾಗಿಲ್ಲ. ಹಾಗೆಂದ ಮಾತ್ರಕ್ಕೆ ಏಲಿಯನ್‌ಗಳು ಅಸ್ತಿತ್ವದಲ್ಲಿ ಇಲ್ಲ ಎನ್ನಲು ಸಾಧ್ಯವಿಲ್ಲ ಎಂದು ನಾಸಾ ಇನ್‌ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಬರೆದಿದೆ.

ಖಗೋಳಶಾಸ್ತಜ್ಞೆ ಡಾ. ಲಿಂಡ್ಸೆ ಹೇಸ್‌ ಅವರು ಭೂಮಿಯಾಚೆಗಿನ ಜೀವಿಗಳ ಇರುವಿಕೆ ಬಗ್ಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

ADVERTISEMENT

ಇದು ನಿಜಕ್ಕೂ ಆಸಕ್ತಿಕರ ಪ್ರಶ್ನೆಯಾಗಿದೆ. ವಿಜ್ಞಾನಿಗಳು ಏಲಿಯನ್‌ ಅಸ್ತಿತ್ವದ ಬಗ್ಗೆ ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ನಿಜಕ್ಕೂ ಹಲವು ವರ್ಷಗಳಿಂದ ಈ ಸಂಶೋಧನೆ ನಡೆದಿದೆ. ಇಂದಿಗೂ ಅನ್ಯಗ್ರಹಗಳಲ್ಲಿ ಜೀವಿಗಳ ಇರುವಿಕೆಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಭೂಮಿಯಿಂದ ಆಚೆಗಿನ ಪ್ರಪಂಚದಲ್ಲಿ ಜೀವಿಗಳ ಅಸ್ತಿತ್ವದ ಬಗೆಗಿನ ಸಂಶೋಧನೆಯನ್ನು ನಾಸಾ ಮುಂದುವರಿಸಲಿದೆ. ಮಂಗಳ ಗ್ರಹಕ್ಕೆ 5 ರೋವರ್ಸ್‌ ಮತ್ತು 4 ಲ್ಯಾಂಡರ್ಸ್‌ ಅನ್ನು ಅಮೆರಿಕದ ಸ್ಪೇಸ್‌ ಏಜೆನ್ಸಿ ಕಳುಹಿಸಿದೆ. ಅವುಗಳ ಆರ್ಬಿಟರ್‌ಗೆ ಅತ್ಯಂತ ಹೆಚ್ಚು ರೆಸೊಲ್ಯೂಷನ್‌ ಇರುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಂಗಳ ಗ್ರಹದ ಮೇಲ್ಮೈ ಅನ್ನು ಸೂಕ್ಷ್ಮವಾಗಿ ವೀಕ್ಷಿಸಲಾಗುತ್ತಿದೆ. ಹೆಚ್ಚು ಅನ್ವೇಷಣೆ ನಡೆಸಿದಷ್ಟು ವಿವಿಧ ವಾತಾವರಣದಲ್ಲಿ ಜೀವಿಗಳ ಅಸ್ತಿತ್ವದ ಬಗ್ಗೆ ಹೆಚ್ಚು ಕಲಿಕೆ ಸಾಧ್ಯ. ಹಾಗಾಗಿ ಈಗಲೇ ಏಲಿಯನ್‌ಗಳ ಅಸ್ತಿತ್ವದ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಲಿಂಡ್ಸೆ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.