ವಾಷಿಂಗ್ಟನ್: ಸೌರ ಮಂಡಲ ಮತ್ತು ಅದರಾಚೆಗಿನ ಚಿತ್ರಗಳನ್ನು ಉಪಗ್ರಹಕ್ಕೆ ಅಳವಡಿಸಿದ ಕ್ಯಾಮೆರಾ ಮೂಲಕ ಆಗಾಗ ತೆಗೆಯುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಅವುಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಲೇ ಇರುತ್ತದೆ. ಇದೀಗ ಸೂರ್ಯನಿಗೆ ಸಮೀಪವಿರುವ ಹಾಗೂ ಸೌರ ಮಂಡಲದಲ್ಲಿ ಅತಿ ಚಿಕ್ಕದಾದ ಬುಧ ಗ್ರಹದ ಮೇಲೆ ನಾಸಾದ ಕಣ್ಣು ಬಿದ್ದಿದೆ.
ಹೊಳೆವ ಬುಧ ಗ್ರಹದ ಚಿತ್ರವನ್ನು ನಾಸಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಸೂರ್ಯನಿಂದ 5.8 ಕೋಟಿ ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಹದ್ದು ವಿಪರೀತ ಎನ್ನುವಷ್ಟರ ಮಟ್ಟಿಗಿನ ತಾಪಮಾನ. ಹಾಗೆಯೇ ಅತ್ಯಂತ ಚುರುಕಿನ ಗ್ರಹವೂ ಹೌದು. ತನ್ನ ಕಕ್ಷೆಯಲ್ಲಿ ಪ್ರತಿ ಸೆಕೆಂಡ್‌ಗೆ 47 ಕಿ.ಮೀ. ದೂರವನ್ನು ಇದು ಕ್ರಮಿಸುತ್ತದೆ. ಹೀಗಾಗಿ ಬುಧ ಗ್ರಹದಲ್ಲಿ ಒಂದು ವರ್ಷ ಎಂದರೆ ಭೂಮಿಯ 88 ದಿನಗಳು ಮಾತ್ರ.
ಇಂಥ ಬುಧ ಗ್ರಹದ ನೀಲಿ, ಕಂದು ಹೀಗೆ ಹಲವು ಬಗೆಯ ಬಣ್ಣಗಳಿಂದ ಹೊಳೆವ ಚಿತ್ರವನ್ನು ನಾಸಾ ಉಪಗ್ರಹ ಸೆರೆ ಹಿಡಿದಿದೆ. ಬುಧ ಗ್ರಹದಲ್ಲಿನ ರಾಸಾಯನಿಕ, ಖನಿಜ ಹಾಗೂ ಅಲ್ಲಿನ ಕಲ್ಲುಗಳ ಭೌದ್ಧಿಕ ವ್ಯತ್ಯಾಸಗಳಿಂದ ಈ ಗ್ರಹ ಹೊಳೆಯುತ್ತಿದೆ ಎಂದು ಹೇಳಿದೆ.
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಿಗಿಂತ ತುಸುವೇ ದೊಡ್ಡದಿರುವ ಬುಧ ಗ್ರಹದ ಸುತ್ತಲು ತೆಳುವಾದ ಹೊರಗೋಳವಿದೆ. ಇದರಲ್ಲಿ ಆಮ್ಲಜನಕ, ಸೋಡಿಯಂ, ಜಲಜನಕ, ಹೀಲಿಯಂ ಮತ್ತು ಪೊಟಾಷಿಯಂ ಇದೆ. ಸೂರ್ಯನ ಅತ್ಯಂತ ಸಮೀಪವಿರುವ ಈ ಗ್ರಹದಲ್ಲಿ ಹಗಲಿನಲ್ಲಿ 430 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ, ರಾತ್ರಿ ಹೊತ್ತಿನಲ್ಲಿ ಮೈನಸ್ 180 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಭೂಮಿಗೆ ಹೋಲಿಸಿದರೆ ಇದರ ಕಾಂತೀಯ ವಲಯ ಅತ್ಯಂತ ಕಡಿಮೆ ಎಂದು ನಾಸಾ ಈ ಚಿತ್ರದೊಂದಿಗೆ ಬರೆದುಕೊಂಡಿದೆ.
ನಾಸಾ ಹಂಚಿಕೊಂಡಿರುವ ಈ ಚಿತ್ರಕ್ಕೆ 11.55 ಲಕ್ಷ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುಧ ಗ್ರಹ ವಜ್ರದಂತೆ ಹೊಳೆಯುತ್ತಿದೆ ಎಂದು ಇನ್ನೂ ಕೆಲವರು ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.