ADVERTISEMENT

ಮಂಗಳನಲ್ಲಿ ಜೀವ ಜಗತ್ತಿನ ಕುರುಹು ಹುಡುಕಲು ಹೊರಟ ನಾಸಾದ ರೋವರ್

ಏಜೆನ್ಸೀಸ್
Published 30 ಜುಲೈ 2020, 14:27 IST
Last Updated 30 ಜುಲೈ 2020, 14:27 IST
ಉಡಾವಣೆಯಾದ ಅಟ್ಲಾಸ್‌ 5 ರಾಕೆಟ್‌
ಉಡಾವಣೆಯಾದ ಅಟ್ಲಾಸ್‌ 5 ರಾಕೆಟ್‌    

ಫ್ಲೋರಿಡಾ: ಮಂಗಳ ಗ್ರಹದಲ್ಲಿ ಜೀವ ಜಗತ್ತಿನ ಇರುವಿಕೆಯ ಹುಡುಕಾಟದಲ್ಲಿ ಮುಂಚೂಣಿಯಲ್ಲಿರುವ ನಾಸಾ ಈಗ ಮತ್ತೊಂದು ಮಹಾತ್ವಾಕಾಂಕ್ಷೆಯ ಪ್ರಯತ್ನ ನಡೆಸಿದೆ. ಫ್ಲೋರಿಡಾದ 'ಕೇಪ್‌ ಕ್ಯಾನವರೆಲ್‌ ಸ್ಟೇಷನ್‌'ನಿಂದ ಗುರುವಾರ 'ಪರ್ಸೆವೆರೆನ್ಸ್‌' (Perseverance) ರೋವರ್‌ ಹೊತ್ತ ರಾಕೆಟ್‌ ಉಡಾವಣೆಯಾಗಿದೆ.

ಅಟ್ಲಾಸ್‌ 5 ರಾಕೆಟ್‌ ಮೂಲಕ 2.4 ಬಿಲಿಯನ್‌ ಡಾಲರ್‌ (ಸುಮಾರು ₹17,977 ಕೋಟಿ) ಮೊತ್ತದ ಮಿಷನ್‌ನ ಮೊದಲ ಹಂತ ಯಶಸ್ವಿಯಾಗಿದೆ. ಪರ್ಸೆವೆರೆನ್ಸ್ ಹೆಸರಿನ ರೊಬಾಟಿಕ್‌ ರೋವರ್‌ ಮಂಗಳನ ಅಂಗಳದಲ್ಲಿ ಇಳಿದು ಶೋಧ ಕಾರ್ಯ ನಡೆಸಲಿದೆ.

ಒಂದು ಕಾರಿನ ಗಾತ್ರದ ಆರು ಗಾಲಿಗಳಿರುವ ರೋವರ್‌ ಮಂಗಳನ ಕುಳಿಯಲ್ಲಿ ಇಳಿದು, ಅಲ್ಲಿ ಇದ್ದಿರಬಹುದಾದ ಸೂಕ್ಷ್ಮಾಣು ಜೀವಿಗಳ ಕುರುಹುಗಳ ಹುಡುಕಾಟ ನಡೆಸಲಿದೆ. ಅಲ್ಲಿನ ವಾತಾವರಣದ ಮಾಹಿತಿ, ನೆಲದ ಮಣ್ಣು ಮತ್ತು ಕಲ್ಲಿನ ಚೂರುಗಳನ್ನು ಸಂಗ್ರಹಿಸಿ ಸಂಶೋಧನೆಗೆ ಸಹಕಾರಿಯಾಗಲಿದೆ. ರೋವರ್‌ ಫೆಬ್ರುವರಿಯಲ್ಲಿ ಮಂಗಳನ ಅಂಗಳ ತಲುಪುವುದಾಗಿ ನಿರೀಕ್ಷಿಸಲಾಗಿದ್ದು, ರೋವರ್ ತನ್ನ ಜೊತೆಗೆ ಒಂದು ಪುಟ್ಟ ಹೆಲಿಕಾಪ್ಟರ್‌ನ್ನು ಕಾರ್ಯಾಚರಣೆಗೆ ಇಳಿಸಲಿದೆ.

ADVERTISEMENT

ಬೆಳಿಗ್ಗೆ 7:50ಕ್ಕೆ ಕೇಪ್‌ ಕ್ಯಾನವರೆಲ್‌ ಏರ್‌ ಫೋರ್ಸ್ ಸ್ಟೇಷನ್‌ನಿಂದ ರಾಕೆಟ್‌ ಉಡಾವಣೆ ನಡೆಸಲಾಯಿತು. ಇದು ಮಂಗಳ ಗ್ರಹದತ್ತ ನಾಸಾದ ಒಂಬತ್ತನೇ ಪಯಣವಾಗಿದೆ. ರಾಕೆಟ್‌ ಉಡಾವಣೆ ಸಮಯದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಭೂಮಿ ಕಂಪಿಸಿತ್ತು. ಜೆಟ್‌ ಪ್ರೊಪಲ್ಷನ್‌ ಲ್ಯಾಬೊರೇಟರಿಯಲ್ಲಿಯೂ ಅದರ ಅನುಭವವಾಗಿತ್ತು.

ಕುಳಿಯಲ್ಲಿ ಇಳಿಯಲಿರುವ ರೋವರ್

3.5 ಬಿಲಿಯನ್‌ (350 ಕೋಟಿ) ವರ್ಷಗಳ ಹಿಂದೆ ಕೆರೆ ಆಗಿದ್ದಿರಬಹುದಾದ ಸ್ಥಳದಲ್ಲಿ 'ಪರ್ಸೆವೆರೆನ್ಸ್‌' ರೋವರ್‌ ಇಳಿದು ಸೂಕ್ಷ್ಮಾಣು ಜೀವಿಗಳ ಕುರುಹುಗಳಿಗಾಗಿ ಹುಡುಕಾಡಲಿದೆ. 'ಜೆಝೆರೊ' ಹೆಸರಿನಿಂದ ಗುರುತಿಸಲಾಗಿರುವ 820 ಅಡಿ ಆಳದ ಕುಳಿಯೊಳಗೆ ರೋವರ್ ಇಳಿಯಲಿದೆ.

1.8 ಕೆ.ಜಿ ತೂಕವಿರುವ 'ಇಂಜೆನ್ಯೂಟಿ' (Ingenuity) ಹೆಸರಿನ ಪುಟ್ಟ ಹೆಲಿಕಾಪ್ಟರ್ ಹಾರಾಟ ಪರೀಕ್ಷೆ ನಡೆಸಲಿದೆ. ಮಂಗಳ ಗ್ರಹದ ವಾತಾವರಣದಲ್ಲಿ ಗಾಳಿಯ ಸಾಂಧ್ರತೆ ಭೂಮಿಗಿಂತ 99ರಷ್ಟು ಕಡಿಮೆ ಇದೆ. ಇದುವೇ ಹೆಲಿಕಾಪ್ಟರ್ ಹಾರಾಟಕ್ಕೆ ಸವಾಲಿನದಾಗಿದ್ದು, ಅತ್ಯಂತ ವೇಗವಾಗಿ ಸುತ್ತುವ ದೊಡ್ಡ ರೆಕ್ಕೆಗಳನ್ನು ಹೆಲಿಕಾಪ್ಟರ್‌ಗೆ ಅಳವಡಿಸಲಾಗಿದೆ.

ನೂರಾರು ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹ ಪ್ರಸ್ತುತ ಕಾಣುವುದಕ್ಕಿಂತಲೂ ಭಿನ್ನ ವಾತಾವರಣವನ್ನು ಹೊಂದಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಲ್ಲಿನ ವಾತಾವರಣದಲ್ಲಿ ಸಾಕಷ್ಟು ನೀರಿನ ಅಂಶಗಳ ಇರುವಿಕೆ ಇದ್ದಿತ್ತು ಹಾಗೂ ಜೀವ ಸಂಕುಲಕ್ಕೆ ಅದು ಸೂಕ್ತ ಸ್ಥಳವಾಗಿತ್ತು ಎಂದು ವಿಶ್ಲೇಷಿಸಿದ್ದಾರೆ.

ಇದೇ ತಿಂಗಳು ಭೂಮಿಯಿಂದ ಮಂಗಳ ಗ್ರಹದತ್ತ ಸಾಗಿರುವ ಮೂರನೇ ಮಿಷನ್‌ ಇದಾಗಿದೆ. ಇತ್ತೀಚೆಗಷ್ಟೇ ಯನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಚೀನಾ ಮಂಗಳ ಗ್ರಹವನ್ನು ಸುತ್ತುತ್ತ ಸಂಶೋಧನೆ ನಡೆಸುವ ಶೋಧ ನೌಕೆಗಳನ್ನು ಕಳುಹಿಸಿವೆ.

ನಾಸಾ 1997ರಲ್ಲಿ ಮಂಗಳನ ಅಂಗಳಕ್ಕೆ 'ಸೊಜರ್ನರ್' ಹೆಸರಿನ ರೋವರ್‌ ಕಳುಹಿಸಿತು. ಅನಂತರ 'ಸ್ಪಿರಿಟ್‌' ಮತ್ತು 'ಆಪರ್ಚುನಿಟಿ' ರೋವರ್‌ಗಳ ಮೂಲಕ ಮಂಗಳನ ನೆಲೆದಲ್ಲಿ ಹಲವು ಶೋಧ ಕಾರ್ಯಗಳನ್ನು ನಡೆಸಿವೆ. 2030ರ ವೇಳೆಗೆ ಗಗನಯಾತ್ರಿಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಲು ನಾಸಾ ಯೋಜನೆ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.