ADVERTISEMENT

ರಾಷ್ಟ್ರೀಯ ವಿಜ್ಞಾನ ದಿನ: ಸಿ.ವಿ.ರಾಮನ್‌ ನೆನಪು 

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 7:06 IST
Last Updated 28 ಫೆಬ್ರುವರಿ 2021, 7:06 IST
ಡಾ.ಸಿ.ವಿ.ರಾಮನ್
ಡಾ.ಸಿ.ವಿ.ರಾಮನ್    
""

ಪ್ರತಿ ವರ್ಷ ಫೆಬ್ರುವರಿ 28 ರಂದು ದೇಶದಾದ್ಯಂತ 'ರಾಷ್ಟ್ರೀಯ ವಿಜ್ಞಾನ ದಿನಾಚರಣೆ' ಆಚರಿಸಲಾಗುತ್ತಿದೆ. 1928ರ ಫೆಬ್ರುವರಿ 28ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ.ಸಿ.ವಿ.ರಾಮನ್ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದರು. ಮುಂದೆ ಆ ಸಂಶೋಧನೆ 'ರಾಮನ್‌ ಪರಿಣಾಮ' (ರಾಮನ್‌ ಎಫೆಕ್ಟ್‌) ಎಂದೇ ಜಗತ್ಪ್ರಸಿದ್ಧಿಯಾಯಿತು.

ಫೆಬ್ರುವರಿ 28ರಂದು 'ರಾಷ್ಟ್ರೀಯ ವಿಜ್ಞಾನ ದಿನ' ಎಂದು ನಿಗದಿ ಪಡಿಸುವಂತೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು 1986ರಲ್ಲಿ ಸರ್ಕಾರಕ್ಕೆ ಮನವಿ ಮಾಡಿತ್ತು. 1987ರಿಂದ ದೇಶದಾದ್ಯಂತ ಶಾಲೆ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ನಡೆಯುತ್ತಿದೆ.

ರಾಮನ್ ಪರಿಣಾಮ ಹಲವು ಆವಿಷ್ಕಾರಗಳಿಗೆ ಎಡೆಮಾಡಿತು. 1928 ಮಾರ್ಚ್ 16ರಂದು ದಕ್ಷಿಣ ಭಾರತದ ವೈಜ್ಞಾನಿಕ ಸಂಘದಲ್ಲಿ ಇದನ್ನು ಪ್ರಾಯೋಗಿಕವಾಗಿ ವಿಜ್ಞಾನಿಗಳ ಮುಂದೆ ಸಾಬೀತುಪಡಿಸಿದರು. ಸಂಶೋಧನೆಯನ್ನು ಜಗತ್ತಿನ ಹಲವು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಚುರಪಡಿಸಿದರು. ಈ ಸಂಶೋಧನೆಯನ್ನು ಐನ್‌ಸ್ಟೀನ್ ಮತ್ತು ಸೊಮರ್‌ಫೆಲ್ಡ್ ಸೇರಿದಂತೆ ಜಗತ್ತಿನಾದ್ಯಂತ ವಿಜ್ಞಾನಿಗಳು ಸ್ವಾಗತಿಸಿದರು.

ADVERTISEMENT

ಹಲವು ವರ್ಷಗಳ ಸತತ ಅಧ್ಯಯನ ಮತ್ತು ಪ್ರಯೋಗಗಳ ಫಲ ರಾಮನ್ ಪರಿಣಾಮ. ಈ ಸಂಶೋಧನೆಗಾಗಿ 1930ರಲ್ಲಿ ನೊಬೆಲ್‌ ಪಾರಿತೋಷಕ ಸಂದಿತು. 1987ರ ಹೊತ್ತಿಗೆ, ಈ ಸಂಶೋಧನೆ ಆಧರಿಸಿ ಸುಮಾರು 5000 ಪ್ರಬಂಧಗಳು ಪ್ರಕಟವಾದವು.

ಏಷ್ಯಾದಲ್ಲೇ ಮೊದಲ ನೊಬೆಲ್ ಭೌತವಿಜ್ಞಾನ ಪ್ರಶಸ್ತಿ ಪುರಸ್ಕೃತವಿಜ್ಞಾನಿ ಭಾರತದ ಚಂದ್ರಶೇಖರ ವೆಂಕಟರಾಮನ್‌ (ಸಿ.ವಿ.ರಾಮನ್‌). 1888ರ ನವೆಂಬರ್‌ 7ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ರಾಮನ್‌ ಜನನ. ತಂದೆ ಚಂದ್ರಶೇಖರ್‌ ಅಯ್ಯರ್‌ ಅವರು ಶಾಲೆ ಹಾಗೂ ಕಾಲೇಜಿನಲ್ಲಿ ಗಣಿತ, ಭೌತವಿಜ್ಞಾನ ಕಲಿಸುತ್ತಿದ್ದರು. ರಾಮನ್‌ ಅವರಿಗೆ ತಂದೆಯೇ ಮೊದಲ ಗುರು. ತಂದೆ ಬೋಧಿಸುತ್ತಿದ್ದ ಕಾಲೇಜಿನಲ್ಲಿಯೇ ಶಿಕ್ಷಣ ನಡೆಸಿ, 14ನೇ ವಯಸ್ಸಿನಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪದವಿ ಆರಂಭಿಸಿದರು. ಭೌತವಿಜ್ಞಾನದ ಎಂ.ಎ. ಪದವಿ ಸಹ ಅಲ್ಲಿಯೇ ಮುಂದುವರಿಸಿದರು.

ಎಲ್ಲ ಪರೀಕ್ಷೆಗಳಲ್ಲೂ ಅಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡ ರಾಮನ್‌ ಅವರ ಆಸಕ್ತಿ ಸಂಗೀತ, ಇತಿಹಾಸ, ವಿಜ್ಞಾನ, ಇಂಗ್ಲಿಷ್‌, ವೇದಾಂತ,..ಹೀಗೆ ವಿಸ್ತರಿಸಿಕೊಳ್ಳುತ್ತಲೇ ಇತ್ತು. ಅಖಿಲ ಭಾರತ ಸ್ಪರ್ಧಾ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಗಳಿಸಿಕೊಂಡ ಅವರು 1907ರಲ್ಲಿ ಕೋಲ್ಕತ್ತ(ಆಗಿನ ಕಲ್ಕತ್ತ)ದಲ್ಲಿ ಅಸಿಸ್ಟೆಂಟ್‌ ಅಕೌಂಟ್‌ ಜನರಲ್‌ ಆಗಿ ನೇಮಕಗೊಂಡರು. 1917ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಿಂದ ಪ್ರಾಧ್ಯಾಪಕರಾಗಲು ಆಹ್ವಾನ ಬಂದಿತು. ರಾಮನ್‌ ಸರ್ಕಾರ ನೀಡಿದ್ದ ಅಧಿಕಾರ ಮತ್ತು ಸವಲತ್ತುಗಳನ್ನು ಬದಿಗಿಟ್ಟು ವಿಜ್ಞಾನದ ಕಡೆಗೆ ಮುಖಮಾಡಿದರು.

1933ರಲ್ಲಿ ಕಲ್ಕತ್ತ ಬಿಟ್ಟು ಬೆಂಗಳೂರಿನ 'ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌(ಐಐಎಸ್‌ಸಿ)' ಸೇರಿದರು. 1948ರ ವರೆಗೂ ಐಐಎಸ್‌ಸಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದರು. ಆನಂತರವೇ ಸ್ವಂತ ಪ್ರಯೋಗಾಲಯ ರಾಮನ್‌ ಇನ್‌ಸ್ಟಿಟ್ಯೂಟ್‌ನ್ನು ಕಟ್ಟಿ ಬೆಳೆಸಿದರು. 1970ರ ನವೆಂಬರ್‌ 20ರವರೆಗೂ ಅಲ್ಲಿಯೇ ಸಂಶೋಧನೆಗಳಲ್ಲಿ ನಿರತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.