ವಾಷಿಂಗ್ಟನ್: ಮಾನವನ ಮಿದುಳಿನಿಂದ ಕಂಪ್ಯೂಟರ್‌ಗೆ ನೇರ ಸಂವಹನ ಮಾಡಲು ಎಲಾನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಅಭಿವೃದ್ಧಿ ಪಡಿಸಿರುವ ಮೈಕ್ರೋಚಿಪ್ ಅನ್ನು ಮಾನವನ ಮೇಲೆ ಪ್ರಯೋಗ ಮಾಡಲು ಅಮೆರಿಕದ ಆಹಾರ ಹಾಗೂ ಔಷಧ ಆಡಳಿತ (ಎಫ್‌ಡಿಎ) ಅನುಮತಿ ನೀಡಿದೆ.
ಪ್ರಯೋಗ ಮಾಡಲು ಕೂಡಲೇ ಜನರನ್ನು ನೇಮಿಸಿಕೊಳ್ಳುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೇ ಅಧ್ಯಯನ ಉದ್ದೇಶವನ್ನೂ ಕಂಪನಿ ಬಹಿರಂಗಪಡಿಸಿಲ್ಲ.
‘ಮುಂದೊಂದು ದಿನ ನಮ್ಮ ತಂತ್ರಜ್ಞಾನವು ಅನೇಕ ಜನರಿಗೆ ಸಹಾಯ ಮಾಡಲು ಅನುವು ಮಾಡಿಕೊಟ್ಟ ಮೊದಲ ಹೆಜ್ಜೆ ಇದಾಗಿದೆ‘ ಎಂದು ಅನುಮತಿ ಲಭಿಸಿರುವ ನ್ಯೂರಾಲಿಂಕ್ ಹೇಳಿದೆ.
ಈ ಹಿಂದೆ ಸುರಕ್ಷತಾ ಮಾನದಂಡದಿಂದಾಗಿ ಮಾನವನ ಮೇಲೆ ಚಿಪ್ ಪ್ರಯೋಗ ಮಾಡಲು ಎಫ್‌ಡಿಎ ಅನುಮತಿ ನಿರಾಕರಿಸಿತ್ತು.
ಮಾನವನ ಮಿದುಳಿನಿಂದ ನೇರವಾಗಿ ಕಂಪ್ಯೂಟರ್ ಹಾಗೂ ಮೊಬೈಲ್‌ಗೆ ಸಂವಹನ ಮಾಡಲು ಅಭಿವೃದ್ಧಿಪಡಿಸಲಾಗಿರುವ ಮೈಕ್ರೋಚಿಪ್ ಇದು. ಅಂಧರು ಅಥವಾ ಪಾರ್ಶ್ವವಾಯು ಪೀಡಿತರು ತಾವು ಯೋಚಿಸಿದಂತೆ ಕಂಪ‍್ಯೂಟರ್ ಹಾಗೂ ಮೊಬೈಲ್ ಬಳಕೆ ಮಾಡಲು ಇದರಿಂದ ಸಾಧ್ಯವಾಗಲಿದೆ.
ಈಗಾಗಲೇ ಇದನ್ನು ಮಂಗಗಳ ಮೇಲೆ ಪ್ರಯೋಗ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.