ADVERTISEMENT

ದುಂಬಿಗಳಿಗೆ ಒಂದು ಹೊಸ ವಿಷ!

ಕೊಳ್ಳೇಗಾಲ ಶರ್ಮ
Published 30 ಜುಲೈ 2024, 22:40 IST
Last Updated 30 ಜುಲೈ 2024, 22:40 IST
<div class="paragraphs"><p>ಎಐ ಚಿತ್ರ: ಕಣಕಾಲಮಠ</p></div>

ಎಐ ಚಿತ್ರ: ಕಣಕಾಲಮಠ

   

‘ಆರ್ಗ್ಯಾನಿಕ್‌’ ಎನ್ನುವ ಪದ ಈಗ ಕನ್ನಡದ್ದೇ ಎನ್ನುವಷ್ಟು ಪರಿಚಿತವಾಗಿಬಿಟ್ಟಿದೆ. ಇದಕ್ಕೆ ಕಾರಣ ಕೀಟನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳಿಂದಾದ ಹಾನಿ. ಇವುಗಳಿಲ್ಲದೆಯೇ ಬೆಳೆದ ಕೃಷಿ ಬೆಳೆಗಳಿಗೆ ‘ಆರ್ಗ್ಯಾನಿಕ್‌’ ಲೇಬಲ್ಲು ಕೊಡಲಾಗುತ್ತಿದೆ. ಇದೀಗ ಅಮೆರಿಕೆಯಿಂದ ಹೊಸದೊಂದ ಸುದ್ದಿ ಬಂದಿದೆ. ಈಗ ಇರುವ ವಿಷ ಕೀಟನಾಶಕಗಳ ಬದಲಿಗೆ ಐಆರ್‌ಎನ್‌ಎ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಹೊಸ ಜೈವಿಕ ಕೀಟನಾಶಕವನ್ನು ಬಳಸಲು ಅಲ್ಲಿ ಸಿದ್ಧತೆಗಳು ನಡೆದಿವೆ ಎಂದು ಸೈನ್ಸ್‌ ಪತ್ರಿಕೆ ವರದಿ ಮಾಡಿದೆ.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಎರಡನೆಯ ಮಹಾಯುದ್ಧದ ಕಾಲದಲ್ಲಿ ಸೊಳ್ಳೆಗಳ ಕಾಟ ತಡೆಯಲೆಂದು ರೂಪಿಸಿದ ಡಿಡಿಟಿಯಿಂದ ಆರಂಭಿಸಿ ವಿಯೆಟ್ಯಾಂಯುದ್ಧದ ವೇಳೆ ಕಾಡಿನಲ್ಲಿ ಅವಿತುಕೊಂಡು ಅಮೆರಿಕದ ಸೇನೆಯನ್ನು ಕಂಗೆಡಿಸುತ್ತಿದ್ದ ವಿಯೆಟ್ನಾಂನ ಗೆರಿಲ್ಲಾ ಸೈನಿಕರು ಬಚ್ಚಿಟ್ಟುಕೊಳ್ಳದಿರಲಿ ಎಂದು ರೂಪಿಸಿದ ಗಿಡ-ಮರಗಳ ಎಲೆಗಳನ್ನು ಬರಿದು ಮಾಡುವ ಕಳೆನಾಶಕಗಳವರೆಗೆ ಹಲವು ಬಗೆಯ ವಿಷರಾಸಾಯನಿಕಗಳನ್ನು ಕೃಷಿಯಲ್ಲಿ ಬಳಸಲಾಗಿದೆ. ಇವುಗಳ ವಿಷಪರಿಣಾಮ ಇತರೆ ಜೀವಿಗಳನ್ನೂ ಕಾಡುವುದನ್ನು ಕಂಡು, ಬದಲಿಗೆ ನಿಸರ್ಗದಲ್ಲಿಯೇ ಇರುವ ವೈರಿಗಳನ್ನು ಬಳಸಿಕೊಳ್ಳುವ ಉಪಾಯಗಳನ್ನೂ ಕೀಟನಿಯಂತ್ರಣಕ್ಕೆ ಬಳಸಲಾಗಿತ್ತು. ನಮ್ಮಲ್ಲಿಯೂ ತೊಂಬತ್ತರ ದಶಕದಲ್ಲಿ ಸೂರ್ಯಕಾಂತಿ ಬೆಳೆಗೆ ಕಾಟ ಕೊಡುತ್ತಿದ್ದ ಕೊರೆ ಹುಳುವನ್ನು ನಿಯಂತ್ರಿಸಲು ಮೆಕ್ಸಿಕೋದಿಂದ ದುಂಬಿಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಅನಂತರ ಜೈವಿಕ ಎನ್ನುವ ಕುಲಾಂತರಿ ತಂತ್ರಜ್ಞಾನವೂ ಬಂತು. ಗಿಡವೇ ಕೊರೆಹುಳುಗಳಿಗೆ ವಿಷವಾಗುವಂತೆ ಅದನ್ನು ಬದಲಿಸಲಾಗಿತ್ತು.

ADVERTISEMENT

ಹಾಗಿದ್ದೂ ಕೀಟನಾಶಕ ಹಾಗೂ ಕಳೆನಾಶಕಗಳ ಬಳಕೆ ಕಡಿಮೆಯಾಗಿಲ್ಲ. ಕೀಟಗಳ ಕೋಟಲೆಯೂ ಕಡಿಮೆಯಾಗಿಲ್ಲ. ಫಲವಾಗಿ ಕೀಟಗಳನ್ನು ನಿಯಂತ್ರಿಸಲು ಹೊಸ, ಹೊಸ ತಂತ್ರ ಇಲ್ಲವೇ ಔಷಧಗಳನ್ನು ಶೋಧಿಸುವ ಕೆಲಸ ಸಾಗಿಯೇ ಇದೆ. ಇದೀಗ ಜೈವಿಕ ತಂತ್ರಜ್ಞಾನದ್ದೇ ಇನ್ನೊಂದು ರೂಪವಾದ ಐಆರ್‌ಎನ್‌ಎ ತಂತ್ರವನ್ನು ಕೀಟನಿಯಂತ್ರಣಕ್ಕೆ ಬಳಸಲು ಅಮೆರಿಕೆಯ ಗ್ರೀನ್‌ಲೈಟ್ಸ್‌ ಬಯೋಸೈನ್ಸಸ್‌ ಕಂಪೆನಿಯು ಇದೇ ಜನವರಿಯಲ್ಲಿ ‘ಕಾಲಾಂತಾ’ ಎನ್ನುವ ಕಳೆನಾಶಕವನ್ನು ಬಳಸಲು ಪರವಾನಿಗಿ ಪಡೆಯಿತು. ನಾಲ್ಕು ವರ್ಷಗಳವರೆಗೆ ಪರೀಕ್ಷೆಗೊಳಪಟ್ಟಿದ್ದ ಈ ಕೀಟನಾಶಕವನ್ನು ಉತ್ಪಾದಿಸುವ ಘಟಕ ಕಾರ್ಯಾರಂಭಿಸಿದೆ.

ಕಾಲಾಂತಾವನ್ನು ಸಾಧಾರಣ ಕೀಟನಾಶಕದ ರೀತಿಯಲ್ಲಿಯೇ ಗಿಡಗಳ ಮೇಲೆ ಸಿಂಪಡಿಸಿದರೆ ಸಾಕು, ಅದು ಗಿಡದಲ್ಲಿ ನೆಲೆಸಿರುವ ಕೀಟಗಳನ್ನು ಕೆಲವೇ ದಿನಗಳಲ್ಲಿ ಕೊಲ್ಲುತ್ತದೆ ಎಂದು ಈ ಪರೀಕ್ಷೆಗಳು ತಿಳಿಸಿವೆ. ಕಾಲಾಂತಾವನ್ನು ಸದ್ಯಕ್ಕೆ ಅಮೆರಿಕದಲ್ಲಿ ಆಲೂಗೆಡ್ಡೆ ಬೆಳೆಯನ್ನು ಕಾಡಿ, ನಷ್ಟವನ್ನುಂಟುಮಾಡುವ ‘ಕೊಲೆರಡೊ’ ದುಂಬಿಗಳ ನಿಯಂತ್ರಣಕ್ಕೆಂದು ರೂಪಿಸಲಾಗಿದೆ. ಪರೀಕ್ಷೆಗಳಲ್ಲಿ ಇವುಗಳನ್ನು ಸಿಂಪಡಿಸಿದ ಗಿಡಗಳ ಮೇಲೆ ನೆಲೆಸಿದ್ದ ದುಂಬಿಗಳಷ್ಟೆ ನಷ್ಟವಾಗಿ, ದುಂಬಿಗಳ ಲಾರ್ವಗಳನ್ನು ತಿನ್ನುವ ಹಾಗೂ ಚಿಟ್ಟೆಗಳಿಗೆ ಯಾವ ಹಾನಿಯೂ ಆಗುವುದಿಲ್ಲವೆಂದು ಸ್ಪಷ್ಟವಾಗಿದೆ ಎನ್ನುತ್ತದೆ, ಗ್ರೀನ್‌ಲೈಟ್‌ ಬಯೋಸೈನ್ಸಸ್‌ ಕಂಪೆನಿ.

ಕಾಲಾಂತಾ ಕೆಲಸ ಮಾಡುವುದು ಹೀಗೆ. ಇದನ್ನು ಸೇವಿಸಿದ ದುಂಬಿಯ ಜೀವಕೋಶಗಳಲ್ಲಿನ ಕೆಲವು ಕ್ರಿಯೆಗಳು ಸ್ಥಗಿತಗೊಳ್ಳುತ್ತವೆ. ಕೊಲರಡೊ ದುಂಬಿಯಲ್ಲಿ ಇರುವ ‘ಪಿಎಸ್‌ಎಂಬಿ5’ ಎನ್ನುವ ಪ್ರೊಟೀನನ್ನು ಕಾಲಾಂತಾ ಐಆರ್‌ಎನ್‌ಎ ಬಾಧಿಸುತ್ತದೆ. ಸಾಮಾನ್ಯವಾಗಿ ಕೋಶದಲ್ಲಿ ಬಳಕೆಯಾಗಿ ಉಳಿದ ತ್ಯಾಜ್ಯ ಪ್ರೊಟೀನುಗಳನ್ನು ಈ ಪ್ರೊಟೀನು ದೇಹದಿಂದ ಹೊರಚೆಲ್ಲುತ್ತವೆ. ಕಾಲಾಂತಾದಿಂದಾಗಿ ಪಿಎಸ್‌ಎಂಬಿ5 ಎನ್ನುವ ಪ್ರೊಟೀನು ತಯಾರಿಕೆಯೇ ಸ್ಥಗಿತವಾಗುತ್ತದೆ. ಕೆಲಸಕ್ಕೆ ಬಾರದ ಪ್ರೊಟೀನುಗಳನ್ನು ಹೀಗೆ ಸಂಗ್ರಹಿಸಿಟ್ಟಿಕೊಂಡ ಕೋಶಗಳು ಉಳಿಯುವುದಿಲ್ಲ. ಹೀಗಾಗಿ ಲಾರ್ವಗಳೂ ಉಳಿಯುವುದಿಲ್ಲ. ಕೇವಲ ಆರೇ ದಿನಗಳಲ್ಲಿ ಕಾಲಾಂತಾ ಸಿಂಪಡಿಸಿಕೊಂಡ ಲಾರ್ವಗಳಲ್ಲಿ ಶೇ. ತೊಂಬತ್ತರಷ್ಟು ಸತ್ತವು ಎಂದು ಪ್ರಯೋಗಗಳು ತಿಳಿಸಿವೆ.

ಹಾಗಿದ್ದರೆ ಇನ್ನೇನು? ಇವನ್ನು ಸಿಂಪಡಿಸಬಹುದೇ? ಇದುವರೆಗಿನ ಪ್ರಯೋಗಗಳು ಈ ಕೀಟನಾಶಕಗಳು ಕೊಲೆರಡೊ ದುಂಬಿಯನ್ನಷ್ಟೆ ಕೊಲ್ಲುವುದಕ್ಕೆ ಸಮರ್ಥವೆಂದೂ, ಇತರೆ ಜೀವಿಗಳಿಗೆ ಹಾಗೂ ಸಸ್ಯಗಳಿಗೆ ತೊಂದರೆಯನ್ನು ಉಂಟುಮಾಡುವುದಿಲ್ಲ ಎಂದೂ ತಿಳಿಸಿವೆ. ಆದರೆ ಮುಂದೆ ಈ ದುಂಬಿ ಆರ್‌ಎನ್‌ಎಐ ಔಷಧಕ್ಕೂ ಒಗ್ಗಿಕೊಂಡು ಬಿಡಬಹುದೋ? ಜರ್ಮನಿಯಲ್ಲಿ ಕೆಲವು ದಶಕಗಳ ಹಿಂದೆ ಅಮೆರಿಕದಿಂದ ವಲಸೆ ಬಂದ ಇದೇ ಕೊಲೆರಡೊ ದುಂಬಿ ದಾಂಧಲೆ ನಡೆಸಿತ್ತು. ಆಗ ಅದನ್ನು ನಿರ್ನಾಮ ಮಾಡಲು ಯಥೇಚ್ಛವಾಗಿ ಕೀಟನಾಶಕಗಳನ್ನು ಬಳಸಲಾಗಿತ್ತು. ಆದರೆ ಈ ದುಂಬಿ ಈಗಲೂ ಜರ್ಮನಿಯಲ್ಲಿ ಉಳಿದಿದೆ. ಯಾವುದೇ ಕೀಟನಾಶಕಕ್ಕೂ ಜಗ್ಗದೆ ಬೆಳೆಗಳನ್ನು ಕಬಳಿಸುತ್ತಿದೆ. ಅದೇ ಗತಿ ಆರ್‌ಎನ್‌ಎಐ ಔಷಧಕ್ಕೂ ಬರಬಹುದೋ? ಗೊತ್ತಿಲ್ಲ.

ಆರ್‌ಎನ್‌ಎಐ ತಂತ್ರಜ್ಞಾನ ಕೇವಲ ನಿರ್ದಿಷ್ಟ ಕೀಟವನ್ನಷ್ಟೆ ತಾಕಬಲ್ಲುದು ಎಂಬುದು ವಿಜ್ಞಾನಿಗಳ ನಂಬಿಕೆ. ‘ಸೈನ್ಸ್‌’ ಪತ್ರಿಕೆ ಇದಕ್ಕೆ ಪರಿಪೂರ್ಣ ಕೀಟನಾಶಕ ಎಂಬ ಬಿರುದನ್ನೂ ಕೊಟ್ಟುಬಿಟ್ಟಿದೆ.  ಕಾರಣ. ಕಾಲಾಂತಾ ಕೀಟದಲ್ಲಿರುವ ನಿರ್ದಿಷ್ಟ ಪ್ರೊಟೀನು ತಯಾರಿಕೆಯನ್ನಷ್ಟೆ ನಿಲ್ಲಿಸುವುದರಿಂದ ಬೇರೆ ಕೀಟಗಳಿಗೆ, ಜೀವಿಗಳಿಗೆ ತೊಂದರೆ ಇಲ್ಲ. ಹೀಗಾಗಿ ಈ ತಂತ್ರಜ್ಞಾನವನ್ನೇ ಸೊಳ್ಳೆ, ಕಾಂಡಕೊರಕ ದುಂಬಿಗಳು ಹಾಗೂ ಕಿತ್ತಳೆ, ನಿಂಬೆ ಗಿಡಗಳನ್ನು ತಾಕುವ ಸಿಲ್ಲಿಡ್‌ ಕೀಟಗಳನ್ನು ನಿಯಂತ್ರಿಸಲು ಬಳಸಬಹುದು ಎನ್ನುವ ಆಸೆ ಬಹಳಷ್ಟು ವಿಜ್ಞಾನಿಗಳಿಗೆ ಇದೆ.

ಆದರೆ ಈ ಆಸೆ ಎಲ್ಲರಲ್ಲಿಯೂ ಇಲ್ಲ. ಏಕೆಂದರೆ ಸಸ್ಯಗಳಿಗೆ ಬಹುತೇಕ ತೊಂದರೆ ಕೊಡುವ ಚಿಟ್ಟೆ, ಪತಂಗಗಳಿಗೆ ಇವು ಮಾರಕವೇ ಅಲ್ಲ. ಏಕೆಂದರೆ ಕಾಲಾಂತಾದಲ್ಲಿ ಬಳಸುವ ಆರ್‌ಎನ್‌ಎಐ, ಒಂದು ಪುಟ್ಟ ಆರ್‌ಎನ್‌ಎ ತುಣುಕಿನ ಜೊತೆಗೆ ತಳುಕಿಕೊಂಡ ಪುಟ್ಟ ಪ್ರೊಟೀನಿನ ಪೊಟ್ಟಣ. ಚಿಟ್ಟೆ, ಪತಂಗಗಳಲ್ಲಿರುವ ಒಂದು ಕಿಣ್ವ ಈ ಪೊಟ್ಟಣವನ್ನು ಸುಲಭವಾಗಿ ಒಡೆದು ಬಿಡುವುದರಿಂದ, ಈ ತಂತ್ರಜ್ಞಾನ ಅಲ್ಲಿ ಕೆಲಸ ಮಾಡುವುದಿಲ್ಲ. ದುಂಬಿಗಳೂ ಹೀಗೆಯೇ ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದೋ? ಗೊತ್ತಿಲ್ಲ.

ಆದರೂ ಈಗ ವಿಷ ಕೀಟನಾಶಕಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ಬಳಸಬಹುದಾದ ಪರ್ಯಾಯಗಳಲ್ಲಿ ಸುರಕ್ಷಿತವಾದದ್ದು ಎಂದರೆ ಆರ್‌ಎನ್‌ಎಐ ಎನ್ನುತ್ತಾರೆ, ವಿಜ್ಞಾನಿಗಳು. ಹೌದೇ? ಕಾಲವೇ ಹೇಳಬೇಕು. ಗ್ರೀನ್‌ಲೈಟ್‌ ಬಯೋಸೈನ್ಸ್‌ ಸದ್ಯಕ್ಕೆ ಎರಡು ಮೆಟ್ರಿಕ್‌ ಟನ್ನು ಈ ಕೀಟನಾಶಕವನ್ನು ತಯಾರಿಸಲು ಹೊರಟಿದೆ. ‘ಇ.ಕೋಲಿ’ ಎನ್ನುವ ಬ್ಯಾಕ್ಟೀರಿಯಾದೊಳಗೆ ‘ಪಿಎಸ್‌ಎಂಬಿ5’ ಪ್ರೊಟೀನಿನ ಮಾಹಿತಿ ಇರುವ ಜೀನ್‌ ಅನ್ನು ಕೂಡಿಸಿದೆ. ಬ್ಯಾಕ್ಟೀರಿಯಾ ತಯಾರಿಸುವ ಆರ್‌ಎನ್‌ಎಯನ್ನು ಪ್ರತ್ಯೇಕಿಸಿ, ಅದನ್ನು ಒಂದು ಪ್ರೊಟೀನಿನೊಟ್ಟಿಗೆ ಪೊಟ್ಟಣ ಕಟ್ಟಲಿದೆ. ಇವನ್ನು ವಿಶೇಷ ದ್ರಾವಣವೊಂದರಲ್ಲಿ ಕರಗಿಸಿ, ಸಿಂಪಡಿಸಲು ಸಿದ್ಧಪಡಿಸಲಿದೆ. ದ್ರಾವಣ ಎಂಥದ್ದು ಎನ್ನುವುದು ಸದ್ಯಕ್ಕೆ ಕಂಪೆನಿಯ ಗುಟ್ಟು. ವರ್ಷದ ಕೊನೆಗೆ ಇದರ ಹತ್ತು ಪಟ್ಟು ಕೀಟನಾಶಕಕ್ಕೆ ಬೇಡಿಕೆ ಬರಲಿದೆ ಎನ್ನುವ ವಿಶ್ವಾಸ ಕಂಪೆನಿಗೆ ಇದೆಯಂತೆ.

ಮುಂದಿನ ವರ್ಷ ಅಮೆರಿಕದ ರೈತರಿಗೆ ಕೊಲೆರಡೊ ದುಂಬಿಯಿಂದ ಮುಕ್ತಿ ದೊರೆಯಲಿದೆಯೇ? ಕಾದು ನೋಡೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.