‘ನೀವು ಯಾವತ್ತಾದರೂ ಮಿದುಳನ್ನು ಮುಟ್ಟಿದ್ದೀರಾ’ ಎಂದು ಯಾರಿಗಾದರೂ ಪ್ರಶ್ನಿಸಿದರೆ, ಪ್ರಶ್ನೆ ಕೇಳಿದವನ ತಲೆಯಲ್ಲಿ ಮಿದುಳಿಲ್ಲ ಎಂದೇ ಉತ್ತರಿಸಬಹುದು ಅಥವಾ ಅವನ ಮಿದುಳಿನಲ್ಲೇ ಹಾಗೆಂದುಕೊಳ್ಳಬಹುದು.
ಆದರೆ, ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಆವರಣದಲ್ಲಿರುವ ‘ಮಾನವ ಮಿದುಳು ಸಂಗ್ರಹಾಲಯ’ದಲ್ಲಿ ಮನುಷ್ಯನ ಮಿದುಳುಗಳನ್ನು ಸಂಗ್ರಹಿಸಲಾಗಿದೆ.ಭೇಟಿ ನೀಡುವವರಿಗೆ ಮಿದುಳನ್ನು ಕೈಯಲ್ಲಿ ಹಿಡಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಮನುಷ್ಯ ಬೆಳವಣಿಗೆಯ ವಿವಿಧ ಹಂತಗಳ 400ಕ್ಕೂ ಅಧಿಕ ಮನುಷ್ಯ ಮಿದುಳುಗಳನ್ನು ಈ ಸಂಗ್ರಹಾಲಯದಲ್ಲಿ ಕಾಣಬಹುದು.
ನರವಿಜ್ಞಾನದ ಕುರಿತು ಜನ ಸಾಮಾನ್ಯರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ‘ಹ್ಯೂಮನ್ ಬ್ರೈನ್ ಮ್ಯೂಸಿಯಮ್’ ಕಾರ್ಯನಿರ್ವಹಿಸುತ್ತಿದೆ. ಮಿದುಳಿನ ಸೋಂಕು, ಕಪ್ಪು ಶಿಲೀಂಧ್ರ, ಪಾರ್ಕಿನ್ಸನ್ ಹಾಗೂ ಆಲ್ಜೈಮರ್ ಸೋಂಕಿತ ಮಿದುಳುಗಳು ಇಲ್ಲಿವೆ. ಸಂಗ್ರಹಾಲಯವು ಮಿದುಳಿನ ರೋಗಗಳ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
ಮನುಷ್ಯನ ಜೊತೆಗೆ ನಾಯಿ, ಬೆಕ್ಕು, ಆಕಳು, ಮೊಲ, ಗಿಳಿ, ಬಾತುಕೋಳಿ, ಹುಂಜ ಸೇರಿ ಪ್ರಾಣಿ ಮತ್ತು ಪಕ್ಷಿಗಳ ಮಿದುಳುಗಳನ್ನು ಹಾಗೂ ಮೀನು, ಹಾವಿನ ಮಿದುಳುಗಳನ್ನು ಕೂಡ ಸಂಗ್ರಹಿಸಿಡಲಾಗಿದೆ. ಇಲ್ಲಿ ಮಿದುಳಷ್ಟೇ ಅಲ್ಲದೇ ಹೃದಯ, ಕರುಳು, ಶ್ವಾಸಕೋಶ, ಧ್ವನಿ ಪೆಟ್ಟಿಗೆಯನ್ನೂ ಸಂಗ್ರಹಿಸಿ ಇಡಲಾಗಿದೆ. ಅವುಗಳ ಜೀವಕೋಶಗಳ ಒಳಪದರವನ್ನು ಮೈಕ್ರೋಸ್ಕೋಪ್‌ನಲ್ಲಿ ನೋಡಬಹುದಾಗಿದೆ. ಕಳೆದ 50 ವರ್ಷಗಳಿಂದ ಮಿದುಳು ಸಂಗ್ರಹಿಸುವ ಕೆಲಸವನ್ನು ಕೂಡ ಈ ಸಂಗ್ರಹಾಲಯ ಮಾಡುತ್ತಿದೆ.
ಸಂಗ್ರಹಾಲಯದ ಹೊರಗಡೆಯ ಗೋಡೆಯಲ್ಲಿ ಅಂಗಾಂಗ ದಾನದ ಮಹತ್ವ,ಮಿದುಳಿನ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಕುರಿತು ಭಿತ್ತಿಫಲಕಗಳಲ್ಲಿ ಮಾಹಿತಿ ನೀಡಲಾಗಿದೆ. ವಾರದಲ್ಲಿ ಎರಡು ದಿನ ಮಾತ್ರ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬುಧವಾರ ಮಧ್ಯಾಹ್ನ 2.30–4.30 ಹಾಗೂ ಶನಿವಾರ ಬೆಳಿಗ್ಗೆ 10.30–12.30 ಮತ್ತು ಮಧ್ಯಾಹ್ನ 2.30–4.30 ಸಮಯದಲ್ಲಿ ಮಾತ್ರ ಮಾಹಿತಿ ನೀಡಲಾಗುತ್ತದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಪೂರ್ವ ಅನುಮತಿ ಪಡೆದು ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.