ADVERTISEMENT

ಇನ್ನೀಗ ಸೈಬರ್‌ ಯುದ್ಧ

ಯೋಗೀಂದ್ರ ಮರವಂತೆ
Published 23 ಮಾರ್ಚ್ 2019, 19:46 IST
Last Updated 23 ಮಾರ್ಚ್ 2019, 19:46 IST
   

ಯುದ್ಧ ಬೇಕೋ ಬೇಡವೋ ಎನ್ನುವ ಬಗ್ಗೆ ಯಾವ ಕಾಲದಲ್ಲಿ ಚರ್ಚೆ ನಡೆದಿಲ್ಲ ಹೇಳಿ. ಕೆಲವರಿಗೆ ಯುದ್ಧ ಮಾಡುವ ಮೊದಲು ಮತ್ತೆ ಕೆಲವೆಡೆ ಯುದ್ಧದ ನಂತರದ ಕಾಯಂ ಜಿಜ್ಞಾಸೆ ಅದು. ಯುದ್ಧವೊಂದಕ್ಕೆ ಎಂತಹ ಸಕಾರಣವೇ ಇದ್ದರೂ ಬಂಧುಮಿತ್ರರನ್ನು, ನೆರೆಹೊರೆಯವರನ್ನು ಎದುರಿಸಬೇಕಾದಾಗ, ಅಮಾಯಕ ಸೈನಿಕರನ್ನು ಬಲಿ ನೀಡಬೇಕಾದಾಗ, ರಾಜ್ಯ– ರಾಷ್ಟ್ರಗಳ ಸಂಪತ್ತು– ಸೌಕರ್ಯಗಳ ಧ್ವಂಸವಾಗಬೇಕಾದಾಗ ಯುದ್ಧ ಬೇಕೇ ಬೇಡವೇ ಎನ್ನುವ ಗೊಂದಲ ಯುದ್ಧಾರ್ಥಿಗಳಲ್ಲಿ ಬಂದುಹೋಗಿದ್ದನ್ನು ಪುರಾಣ, ಇತಿಹಾಸಗಳಲ್ಲಿಯೂ ಗಮನಿಸಿದ್ದೇವೆ. ಯುದ್ಧ ಬೇಕೋ ಬೇಡವೋ ಎಂಬ ಜಿಜ್ಞಾಸೆ ಈಗಲೂ ಜೀವಂತ ಇದ್ದರೂ ಬಹುಶಃ ಕಾಲಚಕ್ರದ ಜೊತೆಗೆ ಯುದ್ಧ ಸಂಬಂಧೀ ಹೊಸ ಪ್ರಶ್ನೆಗಳು ಕೂಡಿಕೊಂಡಿವೆ. ಬೇಕೋ ಬೇಡವೋ ಎಂಬ ಚರ್ಚೆಯ ಜೊತೆಗೆ ಯುದ್ಧದಲ್ಲಿ ಯಾರನ್ನು ಕೊಲ್ಲಬಹುದು ಯಾರನ್ನು ಕೊಲ್ಲಬಾರದು ಎನ್ನುವುದು ಕೂಡ ಒಂದು ಪ್ರಶ್ನೆಯೇ. ತೀರಾ ಹಳೆಯ ಕತೆ ಬಿಡುವಾ. ಒಂದು ಶತಮಾನಕ್ಕಿಂತ ಹಿಂದಿನ ಯುದ್ಧಗಳಲ್ಲಿ ಸಾಯುವವರೆಲ್ಲ ಪ್ರತ್ಯಕ್ಷ ರಣಕಣದಲ್ಲಿ ಹೊಡೆದಾಡುವವರೇ ಆಗಿದ್ದರು. ಬಿಲ್ಲು, ಬಾಣ, ಕತ್ತಿ, ಈಟಿಗಳನ್ನು ಹಿಡಿದವರು, ಮತ್ತೆ ಅಂತಹವರನ್ನು ಹೊತ್ತ ಕುದುರೆ, ಆನೆ, ರಥಗಳು ಸೇರಿ ಅಳಿವು- ಉಳಿವಿನ ಪ್ರಶ್ನೆಯನ್ನು ಎದುರಿಸುತ್ತಿದ್ದರು. ಮುಂದೆ ಬಂದೂಕು, ಪಿಸ್ತೂಲು, ತೋಪುಗಳ ಕಾಲದಲ್ಲೂ ಹೀಗೆ ಜೀವನ್ಮರಣ ಎನ್ನುವುದು ರಣಕ್ಷೇತ್ರ ಎಂಬ ಭೌಗೋಳಿಕ ಚೌಕಟ್ಟಿನೊಳಗೆ ಹೊರಡುವ ಯೋಧರಿಗೆ ಮಾತ್ರ ಸೀಮಿತವಾದ ಪ್ರಶ್ನೆಯಾಗಿತ್ತು.

ಕಾಲದಲ್ಲಿ ಮುಂದೆ ಬಂದು ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ನಡೆದ ಯುದ್ಧಗಳನ್ನು ಗಮನಿಸಿದರೆ ಅಲ್ಲಿ ಸತ್ತವರು ಹೆಚ್ಚಿನವರು ಯೋಧರೇ ಆದರೂ ಸ್ವಲ್ಪ ಮಟ್ಟಿಗೆ ಅಂದರೆ ಶೇ 10-15ರಷ್ಟು ಜನರು ಯುದ್ಧ ಬೇಕೋ ಬೇಡವೋ ಎನ್ನುವ ಯಾವ ತೀರ್ಮಾನವನ್ನೂ ಮಾಡದ ನಾಗರಿಕರೂ ಆಗಿರುತ್ತಿದ್ದರು. ಇನ್ನು 1945ರಲ್ಲಿ ಮುಕ್ತಾಯವಾದ ಎರಡನೆಯ ಮಹಾಯುದ್ಧದಲ್ಲಿ ಮಡಿದವರಲ್ಲಿ ಶೇಕಡ 50ರಷ್ಟು ಜನ ಮಾತ್ರ ನಿಜವಾಗಿ ಯುದ್ಧ ಮಾಡಲೆಂದೇ ಹೋದ ಯೋಧಗಣ, ಬಾಕಿ ಶೇಕಡ 50ರಷ್ಟು ಜನ ಸಾಮಾನ್ಯ ನಾಗರಿಕರು. ಇಪ್ಪತ್ತನೆಯ ಶತಮಾನದ ಕೊನೆಗೆ ಮತ್ತು ಅಲ್ಲಿಂದೀಚೆಗೆ ನಡೆದ ಯುದ್ಧಗಳಲ್ಲಿ ಸತ್ತವರಲ್ಲಿ ಶೇ 75ರಷ್ಟು ಜನ ಸಾಮಾನ್ಯ ನಾಗರಿಕರು. ಕಾಲದೊಟ್ಟಿಗೆ ಬದಲಾದ, ಬೆಳೆದ ಸಮಕಾಲೀನ ಯುದ್ಧಕಲೆ, ರಣತಂತ್ರ, ಶಸ್ತ್ರಾಸ್ತ್ರಗಳು ಯುದ್ಧವೊಂದರಲ್ಲಿ ಹೆಚ್ಚು ಬಲಿ ತೆಗೆದುಕೊಳ್ಳುವುದು ಸಾಮಾನ್ಯ ನಾಗರಿಕರನ್ನು ಎನ್ನುವುದು ಗಮನ ನೀಡದಿದ್ದರೆ ಗಮನಕ್ಕೆ ಬಾರದ ವಿಷಯ.

ಜಗತ್ತಿನ ಮೊದಲ ಯುದ್ಧ ಎಂದು ನಡೆಯಿತೋ ಗೊತ್ತಿಲ್ಲ.ಆದರೆ ಇಂದು ನಡೆಯುವ ಯುದ್ಧಗಳಲ್ಲಿ ಪರ ವಿರೋಧ ಪಡೆಗಳ ಹಿಂದೆ ಇರುವ ದೇಶ, ಅಲ್ಲಿನ ನಾಗರಿಕರು, ಅಲ್ಲಿನ ವ್ಯವಸ್ಥೆ, ಮೂಲ ಸೌಕರ್ಯಗಳು ಎಲ್ಲವೂ ದಾಳಿಯ ಗುರಿಗಳೇ. ಯುದ್ಧವೊಂದರಲ್ಲಿ ದೇಶವನ್ನು ಕಾಯುವುದು, ಗೆಲ್ಲಿಸುವುದು ಎಂದರೆ ಆ ದೇಶದ ಸಂಪೂರ್ಣ ಅಸ್ತಿತ್ವವನ್ನು, ಅಸ್ಮಿತೆಯನ್ನು ಕಾಯುವುದು, ದೈನಂದಿನ ಬದುಕಿಗೆ ಭಂಗ ಬರದಂತೆ ಕಾಪಿಡುವುದು. ಹಾಗಾಗಿಯೇ ಇಂದಿನ ಯುದ್ಧಗಳು ಎರಡು ವಿರೋಧಿ ಬಣಗಳ ಸೈನಿಕರ ನಡುವಿನ ಯುದ್ಧ ಮಾತ್ರವಲ್ಲ, ಅಂತಹ ಶಸ್ತ್ರಯುದ್ಧವೊಂದರಲ್ಲಿ ನೇರಾನೇರ ಪಾಲ್ಗೊಳ್ಳದ ಜನಸಾಮಾನ್ಯರ ಬದುಕೂ ಅಲ್ಲಿ ಗುರಿಯೇ. ಯುದ್ಧಗಳ ಬೇಕು ಬೇಡಗಳ, ಯಾರನ್ನು ಕೊಲ್ಲಬಹುದು ಕೊಲ್ಲಬಾರದು ಎನ್ನುವ ಜಿಜ್ಞಾಸೆಗಳ ಜೊತೆಗೆ ವಿರೋಧಿ ದೇಶಕ್ಕೆ ಅತಿ ಹೆಚ್ಚು ಹಾನಿ ತಲುಪಿಸುವ ಹೊಸ ವಿಧಾನಗಳು ಯಾವುವು ಎನ್ನುವುದೂ ಇದೀಗ ಯುದ್ಧವೊಂದರ ಸನ್ನಿವೇಶದಲ್ಲಿ ಹೊಚ್ಚ ಹೊಸ ಯೋಚನೆ, ಪ್ರಶ್ನೆ.

ADVERTISEMENT

ದೇಶವೊಂದನ್ನು ಬಗ್ಗಿಸಲಿಕ್ಕೆ ಯಾವ ಭೌತಿಕ ಆಯುಧಗಳೂ ಇಲ್ಲದೆ ನಡೆಯುವ ವ್ಯಾಪಾರ ಸಂಗ್ರಾಮಗಳು (Trade War) ನಮ್ಮ ಕಣ್ಣ ಮುಂದಿವೆ. ರಕ್ತದ ಹೊಳೆ ಹರಿದರೆ ಮಾತ್ರ ಯುದ್ಧವಲ್ಲವಲ್ಲ, ವಿರೋಧಿಗಳ ಬದುಕನ್ನು ದುರ್ಭರ ಮಾಡುವ ತಂತ್ರಗಳೂ ಯುದ್ಧವೇ ಆಗುತ್ತವೆ. ಆಮದು– ರಫ್ತುಗಳನ್ನು, ವ್ಯಾಪಾರೀ ಸುಂಕಗಳನ್ನು ವ್ಯತ್ಯಾಸ ಮಾಡಿ ಇನ್ನೊಂದು ದೇಶಕ್ಕೆ ಹಾನಿ ಮಾಡುವ ಪದ್ಧತಿಗೆ ಹಲವು ಉದಾಹರಣೆಗಳಿದ್ದರೂ ಇದೀಗ ಅಮೆರಿಕ– ಚೀನಾಗಳ ನಡುವಿನ ಅಂತಹ ವ್ಯಾಪಾರೀವೈರ ಎಲ್ಲರಿಗೂ ಪರಿಚಿತ. ಯಾವ ಬಾಂಬರ್ ವಿಮಾನ, ಸ್ಫೋಟಕ ವಸ್ತುಗಳನ್ನೂ ಬಳಸದೆ ಮಾಡುವ ತಣ್ಣಗಿನ ವ್ಯಾಪಾರ ಸಮರದ ಬಿಸಿ ಒಂದು ದೇಶದ ಆರ್ಥಿಕತೆಗೆ ತಟ್ಟುವುದು ಮತ್ತು ಅದರ ಪರಿಣಾಮ ದೇಶದ ವ್ಯಾಪಾರಿಗಳನ್ನು, ಗ್ರಾಹಕರನ್ನು ಮುಟ್ಟುವುದು ಸ್ವಲ್ಪ ನಿಧಾನವಾಗಿ. ಶಸ್ತ್ರಸಹಿತ ಕದನ ಅಥವಾ ಆಯುಧ ರಹಿತ ವ್ಯಾಪಾರ ಸಂಗ್ರಾಮಗಳು ರಣತಂತ್ರದ ಬತ್ತಳಿಕೆಯ ತುಸು ಹಳೆಯ ಬಾಣಗಳೇ. ಇವೆರಡೂ ಯುದ್ಧತಂತ್ರಗಳ ಸಾಮ್ಯತೆ ಎಂದರೆ ಹೀಗೊಂದು ಯುದ್ಧ ನಡೆಯುತ್ತಿದೆ ಎನ್ನುವುದು ಕಾಣುತ್ತಿರುತ್ತದೆ, ಯಾರು ನಡೆಸುವವರು ಎನ್ನುವುದೂ ನಿಚ್ಚಳವಾಗಿರುತ್ತದೆ. ಹಾಗಾಗಿ ಇಂತಹ ಯುದ್ಧತಂತ್ರಗಳಿಗೆ ಪ್ರತಿಸ್ಪಂದಿಸಲು ಮನಸ್ಸು, ಶಕ್ತಿ ಎರಡೂ ಇರುವವವರಿಗೆ ಪ್ರತಿರೋಧ- ಪ್ರತಿಕ್ರಿಯೆ ಒಡ್ಡಲು ಯಾವ ಅಡ್ಡಿಯೂ ಇಲ್ಲ.

ಇತ್ತೀಚಿನ ಹೊಸ ಯೋಚನೆಯ ನವನವೀನ ತಂತ್ರಗಳ ಯುದ್ಧದಲ್ಲಿ ರಕ್ತಪಾತವಿಲ್ಲದೇ ಹಾನಿ ಮುಟ್ಟಿಸುವ ವಿಧಾನ ಹೆಚ್ಚು ಲೋಕಪ್ರಿಯ ಆಗುತ್ತಿದೆ. ಯಾರು, ಎಲ್ಲಿಂದ, ಯಾವಾಗ, ಹೇಗೆ ಎನ್ನುವ ಜಾಡನ್ನು ಸುಲಭದಲ್ಲಿ ಬಿಟ್ಟುಕೊಡದ ರಹಸ್ಯವಾದ ಆಕ್ರಮಣಕಾರಿ ಯುದ್ಧ ಮಾದರಿಯದು. ಇದನ್ನು ‘ಸೈಬರ್ ಯುದ್ಧ’ ಎಂದೂ ಕರೆಯಬಹುದು. ದೇಶವೊಂದರ ಗಣಕಯಂತ್ರವಿಜ್ಞಾನ ನಿಷ್ಣಾತ ಗುಂಪು ಇನ್ನೊಂದು ದೇಶದ ಗಣಕಯಂತ್ರಾಧಾರಿತ ವ್ಯವಸ್ಥೆ ಅಥವಾ ಅಲ್ಲಿನ ಅಂತರ್ಜಾಲ ಅವಲಂಬಿ ಸೌಕರ್ಯಗಳ ಮೇಲೆ ಮಾಡುವ ಹಾನಿಕಾರಕ ಆಕ್ರಮಣಗಳಿಗೆ ಕಳೆದ ಒಂದು ದಶಕದಲ್ಲಿ ಅನೇಕ ಉದಾಹರಣೆಗಳಿವೆ. ಯಾವ ಭಯೋತ್ಪಾದಕರು ಯಾವ ಉಗ್ರಗಾಮಿ ನೆಲೆಯಲ್ಲಿ ಅಡಗಿದ್ದಾರೆ ಎನ್ನುವುದರ ಬಗ್ಗೆ ಖಚಿತ ಮಾಹಿತಿಗಳನ್ನು ಶೇಖರಿಸುವ ಅಮೆರಿಕ ಕೂಡ ಜಗತ್ತಿನ ಯಾವುದೇ ಭಯೋತ್ಪಾದಕ ಸಂಘಟನೆಯ ದಾಳಿಗಿಂತಲೂ ‘ಸೈಬರ್ ಕದನ’ ಹೆಚ್ಚು ಭಯಾನಕ ಮತ್ತು ದುಷ್ಪರಿಣಾಮ ಬೀರಬಲ್ಲುದು ಎಂದು 2013ರಲ್ಲಿಯೇ ಹೇಳಿತ್ತು. ಇಂತಹ ಯುದ್ಧದ ಸಾಧ್ಯತೆಯಿಂದಲೇ ಇಂದು ಎಲ್ಲ ದೇಶಗಳ ಅರ್ಮಿಯೊಳಗೊಂದು ಸೈಬರ್ ಆರ್ಮಿಯೂ ಇದೆ.

2010ರ ನವೆಂಬರ್‌ನಲ್ಲಿ ಭಾರತೀಯ ಸೈಬರ್ ಆರ್ಮಿಯು ಪಾಕಿಸ್ತಾನದ ಸೇನೆಗೆ ಹಾಗೂ ಅಲ್ಲಿನ ಸರ್ಕಾರದ ಮಂತ್ರಾಲಯಗಳಿಗೆ ಸಂಬಂಧಿಸಿದ ಅಂತರ್ಜಾಲ ತಾಣಗಳನ್ನು ಅಕ್ರಮ ಪ್ರವೇಶ (ಹ್ಯಾಕ್) ಮಾಡಿ ತನ್ನ ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿತ್ತು. ಈ ನಡೆಯನ್ನು ಆ ವರ್ಷ ಮುಂಬೈಯಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರದ ಕ್ರಮ ಎಂದೂ ಪರಿಗಣಿಸಲಾಗಿತ್ತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಭಾರತದ ಸೈಬರ್ ದಾಳಿಗೆ ಪ್ರತಿಕ್ರಿಯೆ ಎನ್ನುವಂತೆ ಪಾಕಿಸ್ತಾನದ ಸೈಬರ್ ಆರ್ಮಿಯು ನಮ್ಮ ಸಿಬಿಐ ಸಂಸ್ಥೆಯ ಅಂತರ್ಜಾಲ ತಾಣವನ್ನು ಅನಧಿಕೃತ ಪ್ರವೇಶ ಮಾಡಿ ಆ ತಾಣ ತುಸುಹೊತ್ತು ಕೆಲಸ ಮಾಡದಂತೆ ಮಾಡಿತ್ತು. 2009ರ ಏಪ್ರಿಲ್‌ನಲ್ಲಿ ರಷ್ಯಾ ಮತ್ತು ಚೀನಾದ ಗಣಕಯಂತ್ರ ಪರಿಣತರು ಅಮೆರಿಕದ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಹೊಕ್ಕು ಅಲ್ಲಿನ ಸಾಫ್ಟ್‌ವೇರ್‌ಗಳ ಉದ್ದೇಶಿತ ಕೆಲಸಗಳನ್ನು ಅಡ್ಡಿಪಡಿಸುವ ವೈರಸ್‌ ಬಿತ್ತಿದ್ದರು. ಅಮೆರಿಕದಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ನಿಲುಗಡೆ ಮಾಡುವುದು ಇಂತಹ ಸೈಬರ್ ದಾಳಿಯ ಉದ್ದೇಶವಾಗಿತ್ತು. ವೈರಸ್, ಮಾಲ್ವೇರ್, ರಾನ್ಸಮ್ವೇರ್, ಸ್ಪೈ ವೇರ್, ಬಗ್ ಹೀಗೆ ಅಂದಚಂದದ ಹೆಸರು ಹೊತ್ತ ಕುಟಿಲ ಕುಚೋದ್ಯದ ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳನ್ನೂ ಬಳಸಿಕೊಂಡು ನಡೆಯುವ ದಾಳಿಗಳು ಸಹ ನಡೆಯುತ್ತಲೇ ಇರುತ್ತವೆ. ಇವುಗಳಲ್ಲೇ ಒಂದು ಬಗೆ ಎಂದರೆ 2017ರಲ್ಲಿ ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಂತರ್ಜಾಲ ವ್ಯವಸ್ಥೆ, ಔಷಧ ಸರಬರಾಜು ಸಂಸ್ಥೆಗಳ ವ್ಯವಸ್ಥೆಯ ಮೇಲೆ ದಾಳಿ ಮಾಡಿ ತೊಂದರೆ ಉಂಟಾಗಿತ್ತು.

ಒಂದು ದೇಶದ ಮಿಲಿಟರಿ ಅಥವಾ ಅಲ್ಲಿನ ಗುಂಪೊಂದು ಇನ್ನೊಂದು ದೇಶದ ವ್ಯವಸ್ಥೆ ಮತ್ತು ಸೌಕರ್ಯಗಳ ಮೇಲೆ ನಡೆಸುವ ಇಂತಹ ಸೈಬರ್ ದಾಳಿಗಳ ಹಿಂದೆ ಅಮೂಲ್ಯ ವಿಚಾರಗಳನ್ನು ಕದಿಯುವ ಅಥವಾ ರಾಜಕೀಯ, ಆರ್ಥಿಕ ಅಸ್ಥಿರತೆ ಉಂಟುಮಾಡುವ ಅಥವಾ ಅಲ್ಲಿ ಒಟ್ಟಾರೆ ವಿಧ್ವಂಸಕ ಪರಿಣಾಮ ಉಂಟುಮಾಡುವ ಮಹತ್ ಉದ್ದೇಶ ಇರುತ್ತದೆ. ಯಾರು ಎಲ್ಲಿಂದ ದಾಳಿ ಮಾಡಿದರು ಎಂಬುದರ ಮೇಲೆ ನಿಗಾ ಇಡಲು ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಹೊಂದಾಣಿಕೆಯೊಟ್ಟಿಗೆ ಕೆಲಸ ಮಾಡುವ ರೇಡಾರ್‌ಗಳಂತಹ ನಿರಂತರ ಎಚ್ಚರದ ಸೂಕ್ಷ್ಮಗ್ರಾಹಿ ವ್ಯವಸ್ಥೆಗಳಿಗೆ ನಿಲುಕದ, ಯಾವ ಮಸೂರದ ಕಣ್ಣಿಗೂ, ವೈಜ್ಞಾನಿಕ ಬಲೆಗೂ, ಎಂತಹ ಗುಂಡು ಬಾಂಬಿನ ಆಘಾತಕ್ಕೂ ಸಿಗದ ಹೊಸ ಯುಗದ ರಣತಂತ್ರ ಈ ಸೈಬರ್ ದಾಳಿಗಳು. ಈಗಿನ ವಿಮಾನಗಳಲ್ಲಿ ಪೈಲಟ್‌ನ ಹೊರತಾಗಿಯೂ ಚಲಾಯಿಸಬಲ್ಲ ಆಟೋ ಪೈಲಟ್ ಎನ್ನುವ ಸಾಫ್ಟ್‌ವೇರ್ ಪ್ರೋಗ್ರಾಮ್ ಇದೆ, ಅಣು ಸ್ಥಾವರಗಳನ್ನು ಅಣೆಕಟ್ಟುಗಳನ್ನು ನಿರ್ವಹಿಸುವ ಗಣಕಯಂತ್ರ ವ್ಯವಸ್ಥೆಗಳಿವೆ. ಇವೆಲ್ಲವೂ ಅತ್ಯಂತ ಚಾಣಾಕ್ಷ ಸೈಬರ್ ದಾಳಿಗೆ ಭೇದ್ಯವಾಗಬಹುದು.

ಒಂದು ನಗರದ ಹಲವು ವ್ಯವಸ್ಥೆಗಳನ್ನು ವಿದ್ಯುನ್ಮಾನ ಸೆನ್ಸರ್‌ಗಳ ಮೂಲಕ ಗ್ರಹಿಸಿ ಅಲ್ಲಿನ ಟ್ರಾಫಿಕ್ ವ್ಯವಸ್ಥೆ, ನೀರು ಸರಬರಾಜು, ಬ್ಯಾಂಕಿಂಗ್, ವಿದ್ಯುತ್ ಸರಬರಾಜು ಇತ್ಯಾದಿಗಳನ್ನು ಜಾಣ್ಮೆಯಿಂದ ನಿಭಾಯಿಸುವ ‘ಸ್ಮಾರ್ಟ್ ಸಿಟಿ’ಗಳೂ ಇಂತಹ ಒಂದು ದಾಳಿಗೆ ತುತ್ತಾಗಬಹುದು. ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್‌ಗಳಂತಹ ಜಗತ್ತಿನ ಶಕ್ತಿಶಾಲಿ ದೇಶಗಳ ಮೇಲೆ ಸೈಬರ್ ದಾಳಿಗಳನ್ನು ನಿರಂತರವಾಗಿ ಮಾಡಿದ ಕುಖ್ಯಾತಿಯ ಚೀನಾವು ಬಲಿಷ್ಠ ಸೈಬರ್ ಸೈನ್ಯವನ್ನು ಹೊಂದಿದೆ. ಮತ್ತೆ ಅಂತಹ ದಾಳಿಗಳನ್ನು ನಿಷ್ಕ್ರಿಯಗೊಳಿಸಲು ಎಲ್ಲ ದೇಶಗಳೂ ತಮ್ಮದೇ ಸೈಬರ್ ರಕ್ಷಣಾ ಗೋಡೆ, ಅಂತರ್ಜಾಲ ಭದ್ರತಾ ವ್ಯವಸ್ಥೆಗಳನ್ನು ಹೊಂದುವುದು ದೇಶದ ಗಡಿಯಲ್ಲಿ ಅನುಗಾಲವೂ ಸೈನಿಕರ ಕಾವಲನ್ನು ನಿಲ್ಲಿಸುವಷ್ಟು ಅನಿವಾರ್ಯವಾಗಿದೆ.

ಕಡಿಮೆ ಬಂಡವಾಳ, ಸಿದ್ಧ ಯುದ್ಧ ನೀತಿನಿಯಮಗಳನ್ನು ಮೀರಿದ, ಗುರುತಿಸಲು ಕಠಿಣವಾದ ಅನಾಮಿಕತೆಗಳ ಆಧಾರದಲ್ಲಿ ಸೈಬರ್ ಯುದ್ಧ ಮಾದರಿ ಹೆಚ್ಚು ಪ್ರಸ್ತುತವೂ ಸಶಕ್ತವೂ ಆಗುತ್ತಿದೆ; ಸಾಂಪ್ರದಾಯಿಕ ಯುದ್ಧಗಳಲ್ಲಿ ಮತ್ತು ವಿಧ್ವಂಸಕ ದಾಳಿಗಳಲ್ಲಿ ಪರಿಣಾಮಕಾರಿ ರಣತಂತ್ರವಾಗಿ ಬಳಕೆಯಾಗುತ್ತಿದೆ.

ಹಾಗಾಗಿಯೇ ಎಲ್ಲ ದೇಶಗಳ ಸೇನಾದಳಗಳಲ್ಲಿಯೂ ಸೈಬರ್ ತಂಡದ ಉಪಸ್ಥಿತಿ ಇದೀಗ ಅನಿವಾರ್ಯವಾಗುತ್ತಿದೆ. ಪರಿಣತ ಐಟಿ ತಂತ್ರಜ್ಞರ ಜೊತೆಗೆ ಗಣಕತಂತ್ರ ವ್ಯವಸ್ಥೆಯ ಅನಧಿಕೃತ ಪ್ರವೇಶಗಳಲ್ಲಿಯೇ ನಿಪುಣರು ಸೇರಿಕೊಂಡ ತಂಡಗಳು ಮಿಲಿಟರಿಗಳ ಭಾಗವಾಗುತ್ತಿವೆ. ನಾಡಿನ ಸೀಮೆಗಳನ್ನು ದೇಶಗಳ ಗಡಿಗಳನ್ನು ದೂರದಲ್ಲೆಲ್ಲೋ ಕುಳಿತು ಸುಲಭವಾಗಿ ಭೇದಿಸಿ ಒಳನುಗ್ಗಬಲ್ಲ ಸೈಬರ್ ಆಕ್ರಮಣಗಳು ಯುದ್ಧಭೂಮಿಗೆ ಹೊಸ ವಿಸ್ತಾರ, ನವೀನ ಸಾಧ್ಯತೆ, ಸವಾಲುಗಳನ್ನು ಸೃಷ್ಟಿಸಿವೆ. ಗಣಕಯಂತ್ರ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಗಳು ಸಮಕಾಲೀನ ಬದುಕಿನ ಪ್ರತಿ ಅಂಗಕ್ಕೂ ವೇಗ, ಉನ್ನತಿ, ಮಾರ್ಪಾಡುಗಳನ್ನು ನೀಡಿರುವಾಗ ಅದೇ ಜ್ಞಾನದ ಕವಲು ಮಿಲಿಟರಿ ವಲಯಗಳಲ್ಲೂ ದೈತ್ಯ ವ್ಯಕ್ತಿತ್ವವನ್ನು ಪಡೆಯುತ್ತಿದೆ. ಯುದ್ಧ ಸಂಬಂಧೀ ಸಾಂಪ್ರದಾಯಿಕ ಪ್ರಶ್ನೆಗಳನ್ನೂ ವಿಧಾನಗಳನ್ನೂ ಬದಲಿಸುತ್ತಾ 'ಸೈಬರ್ ಯುದ್ಧ' ಒಂದು ದೇಶದ ಸುವ್ಯವಸ್ಥೆಗಳನ್ನೂ ದೈನಿಕದ ಬದುಕನ್ನೂ ತಣ್ಣಗೆ ಧ್ವಂಸ ಮಾಡಬಲ್ಲ ಅಸಾಧಾರಣ ಶಕ್ತಿಯಾಗಿ ಗೋಚರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.