ಅದರ ಪೂರ್ಣ ಹೆಸರು ‘ದಿ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್’! ಹೆಸರೇ ಸೂಚಿಸುವಂತೆ ಅದು ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಂಡಿರುವ ಒಂದು ಮಹಾನ್ ತಿಪ್ಪೆ ಸಾಮ್ರಾಜ್ಯ. ಹಾಗಿದ್ದೂ ಆ ಮಹಾ ಸಾಗರದ ಕಲ್ಪನಾತೀತ ವಿಸ್ತಾರದಿಂದಾಗಿ ಅದು ಕೇವಲ ಕಸದ ಒಂದು ತೇಪೆ (ಗಾರ್ಬೇಜ್ ಪ್ಯಾಚ್) ಯಂತೆ ಕಾಣುತ್ತದೆ ಅಷ್ಟೆ.
ಶಾಂತಸಾಗರದ ಉತ್ತರ ಭಾಗದಲ್ಲಿ ಹವಾಯ್ ದ್ವೀಪಸ್ತೋಮವನ್ನು ಪರಿವರಿಸಿದಂತೆ ಒಂದು ‘ಸಾಗರ ಸುಳಿ’ (ಓಷನ್ ಗೈರ್) ಅಸ್ತಿತ್ವದಲ್ಲಿದೆ (ಚಿತ್ರ-3 ರಲ್ಲಿ ಬಾಣಗಳು ಸೂಚಿಸುತ್ತಿರುವ ಪ್ರದೇಶ). ದಕ್ಷಿಣ ಪೆಸಿಫಿಕ್‌ನಿಂದ ಉತ್ತರದ ಕಡೆಗೆ ಹರಿದು ಬರುವ ಉಷ್ಣೋದಕ ಪ್ರವಾಹ ಮತ್ತು ಉತ್ತರದ ಆರ್ಕ್ಟಿಕ್‌ನಿಂದ ದಕ್ಷಿಣದ ಕಡೆಗೆ ಬರುವ ಶೀತೋದಕ ಪ್ರವಾಹಗಳು ಇಲ್ಲಿ ಸಂಗಮಿಸುತ್ತವೆ. ಜೊತೆಗೆ ಈ ಪ್ರದೇಶದ ಮಾರುತಗಳು ಹಾಗೂ ಭೂ ಸ್ವಭ್ರಮಣದ ಪರಿಣಾಮಗಳೂ ಸೇರಿ ಈ ಮಹಾನ್ ಸಾಗರ ಸುಳಿ ಮೈದಳೆದಿದೆ.
‘ದಿ ನಾರ್ತ್ ಪೆಸಿಫಿಕ್ ಗೈರ್’ ಎಂಬ ಈ ಸಾಗರ ಪ್ರದೇಶದ ವಿಸ್ತಾರ ಎರಡು ಕೋಟಿ ಚದರ ಕಿಲೋ ಮೀಟರ್‌ನಷ್ಟಿದೆ. ಸಹಜವಾಗಿಯೇ ಉತ್ತರ ಪೆಸಿಫಿಕ್ ಸಾಗರಕ್ಕೆ ಬೀಳುವ ಸರ್ವ ವಿಧ ಮಾನವ ಮೂಲ ತೇಲುಕಸಗಳೂ ಕೂಡ ಈ ಸುಳಿ ಪ್ರದೇಶಕ್ಕೆ ಸೆಳೆಯಲ್ಪಟ್ಟು, ಇಲ್ಲಿಗೆ ತಲುಪಿ ಶೇಖರಗೊಳ್ಳುತ್ತಿವೆ. ಕೊಳೆವ ಕಸವೆಲ್ಲ ಅನತಿಕಾಲದಲ್ಲೇ ಕಣ್ಮರೆಯಾಗುತ್ತವೆ. ಹಾಗಾಗದೆ ಉಳಿವ ವಿಧ ವಿಧ ಪ್ಲಾಸ್ಟಿಕ್ ಕಸದ ರಾಶಿಗಳು ಮಾತ್ರ (ಚಿತ್ರ-1, 2) ಅಲ್ಲೇ ಉಳಿದು, ದಿನೇ ದಿನೇ ಅಧಿಕಗೊಳ್ಳುತ್ತ, ಕಡಲಿನ ಮೇಲ್ಮೈನಿಂದ ಕೆಲ ಮೀಟರ್ ಆಳದವರೆಗೆ ಸಾಂದ್ರಗೊಂಡು ತೇಲುತ್ತ ಈ ಭಯಂಕರ, ಅಪಾಯಕರ ‘ಗಾರ್ಬೇಜ್ ಪ್ಯಾಚ್’ ಅನ್ನು ರೂಪಿಸಿವೆ.
ಪೆಸಿಫಿಕ್ ಮಹಾ ಸಾಗರದಲ್ಲಿನ ಈ ಪ್ಲಾಸ್ಟಿಕ್ ಕಸ ಸಾಮ್ರಾಜ್ಯದಲ್ಲಿ ಅಪಾರ ಸಂಖ್ಯೆಯ ಸೂಕ್ಷ್ಮ ಪ್ಲಾಸ್ಟಿಕ್ (ಮೈಕ್ರೋ ಪ್ಲಾಸ್ಟಿಕ್) ಕಣಗಳಿವೆ; ಅವು ಈ ಇಡೀ ಪ್ರದೇಶದ ನೀರನ್ನು ಹಾಲಿನಂತೆ ಬೆಳ್ಳಗಾಗಿಸಿವೆ. ಜೊತೆಗೆ ಪ್ಲಾಸ್ಟಿಕ್ ಹಾಳೆಗಳು, ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಕೈ ಚೀಲಗಳು, ಮೀನು ಹಿಡಿವ ಬಲೆಗಳು, ಚಪ್ಪಲಿ-, ಶೂಗಳು.. ಕಡೆಗೆ ಮುರಿದ ಕಂಪ್ಯೂಟರ್ ಮಾನಿಟರ್‌ಗಳವರೆಗೆ ತ್ಯಾಜ್ಯ ವಸ್ತುಗಳು ದಟ್ಟೈಸಿವೆ. ಒಂದು ಸರ್ವೇಕ್ಷಣೆಯ ಪ್ರಕಾರ ಈಗಾಗಲೇ ‘ದಿ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್’ನಲ್ಲಿ ಕನಿಷ್ಠ 36 ಲಕ್ಷ ಕೋಟಿ ಪ್ಲಾಸ್ಟಿಕ್ ಕಸದ ಚೂರುಗಳಿವೆ; ಅವುಗಳ ಒಟ್ಟು ತೂಕ ಒಂದು ಲಕ್ಷ ಟನ್ ಮೀರುವಷ್ಟಿದೆ!
ಸ್ಪಷ್ಟವಾಗಿಯೇ ಈ ಪ್ಲಾಸ್ಟಿಕ್ ಕಸದ ಮಹಾನ್ ಸಂಗ್ರಹ ಅಲ್ಲಿನ ಸರ್ವ ವಿಧ ಜೀವಿಗಳಿಗೆ- ಎಂದರೆ ಸೂಕ್ಷ್ಮ ಪ್ಲಾಂಕ್ಟನ್‌ಗಳಿಂದ ತಿಮಿಂಗಿಲಗಳವರೆಗೆ ಮಾರಕವಾಗಿದೆ. ಆ ಪ್ರದೇಶದ ಕನಿಷ್ಠ 700 ಪ್ರಭೇದಗಳ ಸಾಗರ ಪ್ರಾಣಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ವಿಪರ್ಯಾಸ ಏನೆಂದರೆ ಇದೆಲ್ಲ ತಿಳಿದಿದ್ದೂ ಯಾವ ರಾಷ್ಟ್ರಕ್ಕೂ ಸೇರಿಲ್ಲದ ಈ ಪ್ರದೇಶವನ್ನು ಸ್ವಚ್ಛಗೊಳಿಸುವ ಅಥವಾ ಪ್ಲಾಸ್ಟಿಕ್ ಕಸದ ಸೇರ್ಪಡೆಯನ್ನು ನಿಯಂತ್ರಿಸುವ ಆಸಕ್ತಿ ಮತ್ತು ಜವಾಬ್ದಾರಿ ಯಾರಿಗೂ ಇಲ್ಲವಾಗಿದೆ!
ಕೃಪೆ: ಸುಧಾ, ವಾರಪತ್ರಿಕೆ, ಏಪ್ರಿಲ್ 25ರ ಸಂಚಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.