ಬೆಂಗಳೂರು: ಮಹತ್ವಾಕಾಂಕ್ಷಿಯ ಚಂದ್ರಯಾನ–3 ಯೋಜನೆಯ ಲ್ಯಾಂಡರ್ ಹಾಗೂ ರೋವರ್ ಹೊತ್ತ ನೌಕೆಯನ್ನು ಜುಲೈ 14ರಂದು ನಿರ್ದಿಷ್ಟ ಕಕ್ಷೆಗೆ ಸೇರಿಸಿದ್ದ ಎಲ್‌ವಿಎಂ ಮಾರ್ಕ್4 ಉಡ್ಡಯನ ವಾಹನದ ಕ್ರಯೋಜೆನಿಕ್ ಮೇಲ್ಭಾಗವು ನಿಯಂತ್ರಣಕ್ಕೆ ಸಿಗದೆ ಮರಳಿ ಭೂವಲಯವನ್ನು ಪ್ರವೇಶಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
‘ಉಡ್ಡಯನ ವಾಹನದ ಬಿಡಿಭಾಗವಾದ ಇದು ಬುಧವಾರ ಮಧ್ಯಾಹ್ನ 2:42ಕ್ಕೆ ಭೂವಲಯ ಪ್ರವೇಶಿಸಿದೆ. ಉತ್ತರ ಪೆಸಿಫಿಕ್ ಸಾಗರದತ್ತ ಇದು ಸಾಗುತ್ತಿದೆ. ಭಾರತ ಭೂಪ್ರದೇಶದಲ್ಲಿ ಇದು ಬೀಳುವುದಿಲ್ಲ’ ಎಂದು ಹೇಳಿದೆ.
‘ಉಡ್ಡಯನಗೊಂಡ 124 ದಿನಗಳ ಬಳಿಕ ರಾಕೆಟ್‌ನ ಬಿಡಿಭಾಗ ಭೂವಲಯ ಪ್ರವೇಶಿಸಿದೆ. ಮಾರ್ಕ್ 4 ರಾಕೆಟ್‌ನ ಮೇಲ್ಭಾಗದಲ್ಲಿರುವ ಕ್ರಯೋಜೆನಿಕ್ ಭಾಗವು 25 ವರ್ಷಗಳಷ್ಟು ಕಾಲ ಬಾಳಿಕೆ ಬರುವಂತೆ ಸಿದ್ಧಪಡಿಸಲಾಗಿತ್ತು. ಜತೆಗೆ ಬಾಹ್ಯಾಕಾಶ ತ್ಯಾಜ್ಯ ನಿರ್ವಹಣೆಯ ಅಂತರಿಕ ಸಂಸ್ಥೆಗಳ ಸಮನ್ವಯ ಸಮಿತಿ (ಐಎಡಿಸಿ)ಯ ಶಿಫಾರಸಿನಂತೆ ಭೂಮಿಗೆ ಅತ್ಯಂತ ಕೆಳಗಿನ ಕಕ್ಷೆಯಲ್ಲಿ ಸುರಕ್ಷಿತವಾಗಿರುವಂತೆ ಇದನ್ನು ಸಿದ್ಧಪಡಿಸಲಾಗಿತ್ತು’ ಎಂದು ಇಸ್ರೊ ತಿಳಿಸಿದೆ.
‘ಚಂದ್ರಯಾನ–3 ಯೋಜನೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ನಂತರ ಉಳಿದ ಇಂಧನ ಹಾಗೂ ಇತರ ಶಕ್ತಿಮೂಲವನ್ನು ಖಾಲಿಗೊಳಿಸಿ, ರಾಕೆಟ್‌ನ ಮೇಲ್ಭಾಗವನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು. ಇದರಿಂದ ಸ್ಫೋಟದ ಸಂಭವವನ್ನು ತಗ್ಗಿಸುವ ಪ್ರಯತ್ನ ನಡೆಸಿ ಅಪಾಯ ಮಟ್ಟವನ್ನು ತಪ್ಪಿಸುವ ಕೆಲಸ ಪ್ರಯತ್ನ ಮಾಡಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ವಿಶ್ವಸಂಸ್ಥೆ ಮತ್ತು ಐಎಡಿಸಿ ಮಾರ್ಗಸೂಚಿಯಂತೆಯೇ ನಡೆಸಲಾಗಿದೆ’ ಎಂದು ಇಸ್ರೊ ಸ್ಪಷ್ಟಪಡಿಸಿದೆ.
‘ಉಡ್ಡಯನದ ನಂತರ ರಾಕೆಟ್‌ನ ಬಿಡಿಭಾಗಗಳನ್ನು ಅತ್ಯಂತ ಸುರಕ್ಷಿತವಾಗಿ ನಿಷ್ಕ್ರಿಯೆಗೊಳಿಸುವ ಹಾಗೂ ಬಾಹ್ಯಾಕಾಶವನ್ನು ಸುಸ್ಥಿರ ಹಾಗೂ ದೀರ್ಘಕಾಲದರೆಗೆ ಕಾಪಾಡುವ ಪ್ರಯತ್ನಕ್ಕೆ ಭಾರತದ ಬೆಂಬಲ ಸದಾ ಇರಲಿದೆ’ ಎಂದು ಇಸ್ರೊ ಪುನರುಚ್ಛರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.