ಧಾರವಾಡ: ಕರಗದ ಪ್ಲಾಸ್ಟಿಕ್ ತಿಂದು, ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ವಸ್ತುವನ್ನಾಗಿ ಪರಿವರ್ತಿಸುವ ಹುಳುವನ್ನು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪತ್ತೆ ಮಾಡಿದ್ದಾರೆ.
ಶೀತಲ್ ಕೆಸ್ತಿ ಎಂಬ ವಿದ್ಯಾರ್ಥಿ ತನ್ನ ಮಾರ್ಗದರ್ಶಕರಾದ ಡಾ.ಸಿ.ಟಿ.ಶಿವಶರಣ ಅವರ ನೆರವಿನಿಂದ ಈ ಹುಳುವನ್ನು ಪತ್ತೆ ಮಾಡಿದ್ದಾರೆ. ಸಾಮಾನ್ಯವಾಗಿ ಬೇಳೆ, ಅಕ್ಕಿಯಲ್ಲಿ ಕಂಡುಬರುವ ‘ರೈಸ್ ಮೌತ್ ಲಾರ್ವಾ’ ಹೆಸರಿನ ಚಿಟ್ಟೆಯಾಗುವ ಹುಳು, ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಅಪರೂಪದ ಸಂಗತಿ ಇವರ ಪ್ರಯೋಗಾಲಯದಲ್ಲಿ ದೃಢಪಟ್ಟಿದೆ.
‘ಕೋರ್‌ಸೈರಾ ಸೆಫಲೊನಿಕಾ' ಎಂಬ ವೈಜ್ಞಾನಿಕ ಹೆಸರಿನ ಈ ಹುಳುವಿನ ಪತ್ತೆಯು ಸ್ಪೇನ್ ವಿಜ್ಞಾನಿಗಳು ಪತ್ತೆ ಮಾಡಿದ್ದ ಪ್ಲಾಸ್ಟಿಕ್ ತಿನ್ನುವ ಮತ್ತೊಂದು ಸೂಕ್ಷ್ಮಜೀವಿ ‘ಗೆಲ್ಲೇರಿಯಾ ಮೆಲೋನೆಲ್ಲಾ’ ಕುರಿತ ಅಧ್ಯಯನದಿಂದ ಆವಿಷ್ಕಾರಗೊಂಡಿದೆ. ಜೇನುಗೂಡಿನ ತುಂಡು ಇಟ್ಟಿದ್ದ ಪ್ಲಾಸ್ಟಿಕ್ ಚೀಲವನ್ನು ಕಡಿದು, ತಿಂದಿದ್ದ ಹುಳುಗಳ ಗುಣವನ್ನು ಸೂಕ್ಷ್ಮವಾಗಿ ಅವಲೋ
ಕಿಸಿದ ವಿಜ್ಞಾನಿಗಳಿಗೆ ಪ್ಲಾಸ್ಟಿಕ್ ತಿನ್ನುವ ವಿಶಿಷ್ಟಗುಣವೊಂದು ಪತ್ತೆಯಾಗಿತ್ತು.
ಅದೇ ಜಾಡಿನಲ್ಲಿ ಅಧ್ಯಯನ ನಡೆಸಿರುವ ಶೀತಲ್ ಕೆಸ್ತಿ ಅವರು, ಅಂತಹುದೇ ಗುಣಲಕ್ಷಣಗಳಿರುವ ಮತ್ತೊಂದು ಜೀವಿಯನ್ನು ಪತ್ತೆ ಮಾಡಿದ್ದು, ಈ ಕುರಿತು ಅಂತರರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶೀತಲ್, ‘ಗೋಧಿ, ಜೋಳ ಇಟ್ಟಿದ್ದ ಚೀಲದಲ್ಲಿ ಕಂಡುಬರುವ ಬಾಲಹುಳುವಿನ ವರ್ತನೆ ಗಮನಿಸಿ ಸಂಶೋಧನೆ ಆರಂಭಿಸಿದೆವು. ಹಿಂದೆ ಚೀನಾದ ವಿಜ್ಞಾನಿಗಳು ‘ಯೆಲ್ಲೋ ಮೀಲ್ ವರ್ಮ್’ ಹೆಸರಿನ, ಪ್ಲಾಸ್ಟಿಕ್ ತಿನ್ನುವ ಹುಳು ಪತ್ತೆ ಮಾಡಿದ್ದರು. ಜತೆಗೆ ಸ್ಪೇನ್ ವಿಜ್ಞಾನಿಗಳ ಸಂಶೋಧನೆಯನ್ನೂ ಗಮನಿಸಿ, ಈ ಬಾಲದ ಹುಳುವಿನ ಕುರಿತು ಅಧ್ಯಯನ ನಡೆಸಲಾಯಿತು’ ಎಂದು ವಿವರಿಸಿದರು.
‘ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್‌ಗಳನ್ನು ಈ ಹುಳುಗಳು ತಿಂದಿರುವುದು ಪ್ರಯೋಗಾಲಯದಲ್ಲಿ ಪತ್ತೆಯಾಯಿತು. ಅದರ ಮಲವನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ ನಿಸರ್ಗದಲ್ಲಿ ಕರಗಬಲ್ಲ ಅಂಶಗಳು ಪತ್ತೆಯಾದವು. ಜತೆಗೆ ಪ್ಲಾಸ್ಟಿಕ್ ತಿಂದು ಅರಗಿಸಿಕೊಳ್ಳುವ ಕಿಣ್ವಗಳುಅವುಗಳ ಜೀರ್ಣಾಂಗದಲ್ಲಿರುವುದನ್ನೂ ಗುರುತಿಸಿ, ವರದಿ ಮಾಡಲಾಯಿತು’ ಎಂದರು.
‘ಸಂಶೋಧನೆಗಾಗಿ ಬೆಂಗಳೂರಿನಲ್ಲಿರುವ ಕೃಷಿ ಕೀಟ ಸಂಶೋಧನಾ ರಾಷ್ಟ್ರೀಯ ಸಂಸ್ಥೆಯಿಂದ ಬಾಲದ ಹುಳುಗಳನ್ನು ತರಲಾಯಿತು. ಅವುಗಳನ್ನು ಇರಿಸಿದ್ದ ಪೆಟ್ಟಿಗೆಯಲ್ಲಿ ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ತುಂಡುಗಳನ್ನು ಹಾಕಿದ್ದೆವು. ಅಧ್ಯಯನ ಅವಧಿಯಲ್ಲಿ ಶೇ 23ರಷ್ಟು ತುಂಡುಗಳನ್ನು ಅವು ತಿಂದಿದ್ದವು. ನಂತರ ಇವುಗಳ ಮಲ ಪರೀಕ್ಷಿಸಿದಾಗ, ಮಣ್ಣಿನಲ್ಲಿ ಕರಗಬಲ್ಲ ‘ಪಾಲಿ ಎಥಲೀನ್ ಗ್ಲೈಕಾಲ್’ ಎಂಬ ಅಂಶಪತ್ತೆಯಾಯಿತು. ಈ ಬಗ್ಗೆ ಇನ್ನಷ್ಟು ಅಧ್ಯಯನ ಅಗತ್ಯ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.