ಆಕ್ಟೋಪಸ್ ಗೊತ್ತಲ್ಲ? ಅಷ್ಟಪಾದಿ. ಎಂಟು ಬಾಹುಗಳಿರುವ ಸಮುದ್ರಜೀವಿ. ಅಂಗೈಯಗಲದಿಂದ ದೊಡ್ಡ ತೊಟ್ಟಿಯನ್ನು ತುಂಬುವಷ್ಟು ದೊಡ್ಡ ಆಕ್ಟೋಪಸ್‌ಗಳಿವೆ. ಇವೆಲ್ಲವುಗಳ ವಿಶೇಷ ಎಂದರೆ ಅವುಗಳ ಬಾಹುಗಳು. ಬಾಹುಗಳ ಒಳಮೈಯಲ್ಲಿ ಇರುವ ಪುಟ್ಟ ಪುಟ್ಟ ಸಕರುಗಳೆನ್ನುವ ಹೀರುಕಗಳು ಬೇಟೆಯ ದೇಹಕ್ಕೆ ಭದ್ರವಾಗಿ ಅಂಟಿಕೊಳ್ಳುತ್ತವೆ. ಅನಂತರ ಆ ಜೀವಿಗಳ ಮೈ ಸೀಳಿ, ಒಳಗಿರುವ ರಸವನ್ನೆಲ್ಲ ಹೀರಿಕೊಳ್ಳುತ್ತವೆ.
ಎಷ್ಟು ಭದ್ರವಾಗಿ ಅಂಟಿಕೊಳ್ಳುತ್ತವೆ ಎಂದರೆ, ಸಾಮಾನ್ಯವಾಗಿ ಎಳೆದು ಬಿಡಿಸಲಾಗದಷ್ಟು ಭದ್ರವಾಗಿ ಮುಚ್ಚಿಕೊಂಡಿರುವ ಕಪ್ಪೆಚಿಪ್ಪಿನ ಪಕಳೆಗಳನ್ನು ಸಲೀಸಾಗಿ ಬಿಡಿಸಬಲ್ಲುವು. ಇಂತಹ ಸಕರುಗಳನ್ನು ನಮ್ಮ ಬಾಯಿಯಲ್ಲಿ ಇಟ್ಟರೆ ಹೇಗೆ? ಆಗ ಅವು ನಾವು ಸುಲಭವಾಗಿ ಅರಗಿಸಿಕೊಳ್ಳಲಾಗದ ಔಷಧಗಳನ್ನು ದೇಹಕ್ಕೆ ಕೂಡಿಸುತ್ತವಂತೆ. ಆಕ್ಟೋಪಸ್‌ನ ಹೀರುಕಗಳನ್ನೇ ಹೋಲುವ ಪಾಲಿಮರ್ ಗುಳಿಗೆಗಳನ್ನು ಬಾಯಿಯೊಳಗಿಟ್ಟು ಇನ್ಸುಲಿನ್‌ನಂತಹ ಔಷಧಗಳನ್ನು ನೋಯಿಸದೆಯೇ ದೇಹಕ್ಕೆ ನೀಡುವ ಉಪಾಯದ ಬಗ್ಗೆ ಸೈನ್ಸ್ ಟ್ರಾನ್ಸ್‌ಲೇಶನಲ್ ಮೆಡಿಸಿನ್ ಪತ್ರಿಕೆ ಮೊನ್ನೆ ವರದಿ ಮಾಡಿದೆ.
ಸ್ವಿಟ್ಜರ್ಲೆಂಡಿನ ಇನ್ಸ್‌ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಸಂಸ್ಥೆಯ ವಿಜ್ಞಾನಿ ಜೀನ್-ಕ್ರಿಸ್ಟೊಫೀ ಲೆರೂ ಮತ್ತು ಚೀನಾದ ಗುವಡಾಂಗ್ ಪ್ರಾದೇಶಿಕ ಉನ್ನತ ವಸ್ತು ಸಂಶೋಧನಾಲಯದ ವಿಜ್ಞಾನಿ ಶೀ ಲುವೋ ಮತ್ತು ಸಂಗಡಿಗರು ಹೀಗೊಂದು ಔಷಧವನ್ನು ನೀಡುವ ವಿಶಿಷ್ಟ ಸಾಧನವನ್ನು ಸೃಷ್ಟಿಸಿದ್ದಾರೆ.
ವೈದ್ಯಕೀಯದಲ್ಲಿ ಕೆಲವೊಮ್ಮೆ ರೋಗಕ್ಕಿಂತಲೂ ಮದ್ದೇ ನೋವನ್ನು ತರುವುದುಂಟು. ಮದ್ದಿನಿಂದಾಗಿಯೇ ಆಗುವ ಸಂಕಟಗಳು ಒಂದು ಕಡೆ. ಇನ್ನೊಂದು ಕಡೆ, ಕೆಲವು ಔಷಧಗಳನ್ನು ದೇಹದೊಳಗೆ ಹೊಗಿಸುವುದೇ ಕಷ್ಟ. ಉದಾಹರಣೆಗೆ, ಮಧುಮೇಹಿಗಳಿಗೆ ನೀಡುವ ಇನ್ಸುಲಿನನ್ನು ಗುಳಿಗೆಯಾಗಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಬಾಯಿಯಲ್ಲಿರುವ ಜೊಲ್ಲು, ಜಠರದಲ್ಲಿರುವ ಆಮ್ಲಗಳು ಅದನ್ನು ನಿಶ್ಶಕ್ತವಾಗಿಸಿಬಿಡುತ್ತವೆ. ಜೊತೆಗೆ ಇನ್ಸುಲಿನಿನಂತಹ ಪ್ರೋಟೀನುಗಳು ಸ್ವಲ್ಪ ದೊಡ್ಡ ಗಾತ್ರದ ಅಣುಗಳು. ಇವು ನೀರು, ಸಕ್ಕರೆಯಂತಹ ರಾಸಾಯನಿಕಗಳಂತೆ ರಕ್ತನಾಳಗಳೊಳಗೆ ನುಗ್ಗುವುದು ಕಷ್ಟ. ಹೀಗಾಗಿ ಅವನ್ನು ನೇರವಾಗಿ ರಕ್ತನಾಳದೊಳಗೇ ಚುಚ್ಚುಮದ್ದಿನ ಮೂಲಕ ಚುಚ್ಚಬೇಕಾಗುತ್ತದೆ.
ಇನ್ಸುಲಿನ್‌ನಂತಹ ದೊಡ್ಡ ಅಣುಗಳನ್ನು ಪೂರೈಸುವುದಕ್ಕಾಗಿ ಬಾಯೊಳಗೆ ಅಂಟಿಸಿಕೊಳ್ಳುವ ಗುಳಿಗೆಗಳಿವೆ. ಹಾಗೆಯೇ, ಚರ್ಮದ ಮೇಲೆ ಅಂಟಿಸುವ ಪ್ಯಾಚು ಅಥವಾ ತೇಪೆಗಳಿವೆ. ಇವು ಚರ್ಮದ ಒಳಗಿರುವ ಸೂಕ್ಷ್ಮ ರಕ್ತನಾಳಗಳೊಳಗೆ ಔಷಧಗಳನ್ನು ಕೂಡಿಸಬಲ್ಲವು. ಆದರೆ ಅಲ್ಲೂ ಒಂದು ಸಮಸ್ಯೆ ಇದೆ. ತೇಪೆ ಅಥವಾ ಗುಳಿಗೆಯಲ್ಲಿರುವ ಔಷಧದಲ್ಲಿ ಬಹಳಷ್ಟು ಹಾಗೆಯೇ ಉಳಿದು ಬಿಡುತ್ತದೆ. ದೇಹದೊಳಗೆ ಹೊಗುವುದೇ ಇಲ್ಲ. ಔಷಧ ಇನ್ನಷ್ಟು ದುಬಾರಿಯಾಗುತ್ತದೆ. ಬಾಯೊಳಗಿರುವ ಲೋಳೆಪದರವನ್ನು ತೆಳ್ಳಗಾಗಿಸಿಬಿಟ್ಟರೆ ಸಮಸ್ಯೆ ಸ್ವಲ್ಪ ಕಡಿಮೆ ಆಗಬಹುದು. ಏಕೆಂದರೆ ಈ ಲೋಳೆಯ ಪದರವನ್ನು ದಾಟಿ ಪ್ರೋಟೀನ್ ಅಥವಾ ಪೆಪ್ಟೈಡು ಔಷಧಗಳು ರಕ್ತನಾಳಗಳನ್ನು ಮುಟ್ಟಲಾರವು.
ಲೋಳೆಪದರವನ್ನು ತೆಳ್ಳಗಾಗಿಸುವುದು ಹೇಗೆ?
ಈ ಸಮಸ್ಯೆಗೆ ಕ್ರಿಸ್ಟೊಫಿ ಲೆರೂ ತಂಡ ಇದಕ್ಕೆ ಪರಿಹಾರವನ್ನು ಆಕ್ಟೋಪಸ್‌ನ ಹೀರುಕಗಳಲ್ಲಿ ಕಂಡುಕೊಂಡಿದೆ. ಇವು ಪುಟ್ಟ ರಬ್ಬರಿನ ಚೊಂಬುಗಳಂತೆ. ಚೊಂಬಿನೊಳಗೆ ರಸವಿರುತ್ತದೆ. ಬೇಟೆಯ ದೇಹಕ್ಕೆ ಒತ್ತಿ ಹಿಡಿದಾಗ ಚೊಂಬಿನ ಬಾಯಿಯ ಅಂಚು ಇನ್ನಷ್ಟು ಅಗಲವಾಗುತ್ತದೆ. ಚೊಂಬು ಮತ್ತು ಬೇಟೆಯ ಚರ್ಮದ ನಡುವೆ ಇರುವ ಗಾಳಿ ಖಾಲಿಯಾಗಿ ನಿರ್ವಾತವಾಗುತ್ತದೆ. ಬಾಯಿ ಬೇಟೆಗೆ ಭದ್ರವಾಗಿ ಅಂಟಿಕೊಳ್ಳುತ್ತದೆ. ಇದೇ ರೀತಿಯ ಪುಟ್ಟ ಹೀರುಕಗಳನ್ನು ತಯಾರಿಸಿ, ಔಷಧವನ್ನು ತುಂಬಿಸಿ, ರೋಗಿಯ ಬಾಯಿಯೊಳಗೆ ಅಂಟಿಸಿದರೆ ಹೇಗೆ? ಬಾಯಿಯೊಳಗೆ ಅಂಟಿಕೊಂಡಾಗ ಅದು ಲೋಳೆಯಪದರವನ್ನು ಹಿಗ್ಗಿಸಿ, ಅಥವಾ ಕದಲಿಸಿ, ಚೊಂಬಿನೊಳಗೆ ಇರುವ ಔಷಧವನ್ನು ನೇರವಾಗಿ ಲೋಳೆಪದರದಾಚೆಗೆ ಇರುವ ರಕ್ತನಾಳಗಳಿಗೆ ನೇರವಾಗಿ ತಲುಪಿಸಬಹುದೋ ಎನ್ನುವುದು ಇವರ ಯೋಚನೆಯಾಗಿತ್ತು.
ಇದಕ್ಕಾಗಿ ಲೆರೋ ತಂಡ ಒಂದು ಸೆಂಟಿಮೀಟರು ಅಗಲದ ಬಾಯಿಯ ಅಂಚು ಹಾಗೂ ಅರ್ಧ ಸೆಂಟಿಮೀಟರು ಎತ್ತರದ ಪುಟ್ಟ ಹೀರುಕಗಳನ್ನು ತ್ರೀಡಿ ಮುದ್ರಣ ತಂತ್ರಜ್ಞಾನ ಬಳಸಿ ರಚಿಸಿತು. ಇದನ್ನು ಮುದ್ರಿಸುವುದಕ್ಕೆ ‘ಪಾಲಿಬೀಟಥಯೋಎಸ್ಟರ್’ ಎನ್ನುವ ಅಣುವಿನ ಪಾಲಿಮರನ್ನು ಬಳಸಿದರು. ಇದು ಬೆಳಕಿಗೆ ತೆರೆದುಕೊಂಡ ಕೂಡಲೇ ರಬ್ಬರಿನಂತಾಗುತ್ತದೆ. ಬೇಕಾದ ಆಕಾರಕ್ಕೆ ಮುದ್ರಿಸಿ, ಬೆಳಕಿಗೆ ಒಡ್ಡಿದರೆ ಹೀರುಕ ಸಿದ್ಧವಾದ ಹಾಗೆ. ಈ ಪುಟ್ಟ ಹೀರುಕಗಳೊಳಗೆ ‘ಡೆಸ್ಮೊಪ್ರೆಸ್ಸಿನ್’ ಎನ್ನುವ ದೊಡ್ಡ ಪ್ರೋಟೀನು ಔಷಧವನ್ನು ಇಟ್ಟು ಪರೀಕ್ಷೆಗಳನ್ನು ನಡೆಸಿದರು. ಹಂದಿಯ ಬಾಯೊಳಗಿನ ಚರ್ಮದ ತುಣುಕುಗಳ ಮೇಲೆ ಇವನ್ನು ಅಂಟಿಸಿದಾಗ, ಆ ತುಣುಕುಗಳ ಮೇಲ್ಮೈ ಮೂರು ಪಟ್ಟು ಹಿಗ್ಗಿತ್ತು. ಹಾಗೆಯೇ ಔಷಧವೂ ರಕ್ತನಾಳದೊಳಗೆ ಸೇರುವುದು ಕಂಡಿತ್ತು. ಆದರೆ ಆಕ್ಟೊಪಸ್‌ನ ಹೀರುಕಗಳಂತೆ ರಚನೆ ಇಲ್ಲದಂತವುಗಳನ್ನು ಅಂಟಿಸಿದಾಗ, ಈ ಬಗೆಯಲ್ಲಿ ಚರ್ಮ ಹಿಗ್ಗಲಿಲ್ಲ. ಔಷಧವೂ ರಕ್ತವನ್ನು ಸೇರಿರಲಿಲ್ಲ.
ಅನಂತರ ಇವನ್ನು ನಾಯಿಗಳ ಬಾಯೊಳಗೆ ಅಂಟಿಸಿ ಪರೀಕ್ಷಿಸಿದ್ದಾರೆ. ಡೆಸ್ಮೊಪ್ರೆಸಿನ್ ಗುಳಿಗೆಗಳನ್ನಷ್ಟೆ ನೀಡಿದ ನಾಯಿಗಳ ರಕ್ತದಲ್ಲಿ ನಾಲ್ಕು ಗಂಟೆಯ ಸಮಯದಲ್ಲಿ ಕಾಣುವಷ್ಟೆ ಔಷಧ ಎರಡೇ ಗಂಟೆಗಳಲ್ಲಿ ಈ ಹೀರುಕಗಳನ್ನು ಬಳಸಿದ ನಾಯಿಗಳಲ್ಲಿ ಕಂಡಿತು. ಅಂದರೆ ಔಷಧದ ಪರಿಣಾಮ ಬಲು ಶೀಘ್ರವಾಗುತ್ತದೆ ಎಂದಾಯಿತು. ಹಾಗೆಯೇ ಹೀರುಕಗಳೊಳಗೆ ಲೋಳೆಯನ್ನು ಕರಗಿಸುವ ಔಷಧವನ್ನೂ ಸೇರಿಸಿ ಡೆಸ್ಮೊಪ್ರೆಸ್ಸಿನ್ ಇಟ್ಟಾಗ ಇನ್ನೂ ಹೆಚ್ಚು ಪ್ರಮಾಣದ ಔಷಧ ರಕ್ತವನ್ನು ಸೇರಿತಂತೆ. ಮೂರು ಗಂಟೆಗಳ ನಂತರ ಹೀರುಕವನ್ನು ತೆಗೆದ ಮೇಲೆ ಅದರಲ್ಲಿ ಉಳಿದಿದ್ದ ಔಷಧದ ಪ್ರಮಾಣವೂ ಕಡಿಮೆಯಾಗಿತ್ತು. ಉರಿಯಾಗಲಿ, ಊತವಾಗಲಿ ಕಾಣಿಸಿರಲಿಲ್ಲ. ಮೂರ್ನಾಲ್ಕು ಗಂಟೆಯವರೆವಿಗೂ ಹೀರುಕ ಭದ್ರವಾಗಿ ಅಂಟಿಕೊಂಡು ಉಳಿದಿತ್ತು.
ಹಾಗಿದ್ದರೆ ಇದನ್ನು ಮನುಷ್ಯರಲ್ಲಿಯೂ ಬಳಸಬಹುದೇ?
ಹಾಗಿದ್ದರೆ ಇದನ್ನು ಮನುಷ್ಯರಲ್ಲಿಯೂ ಬಳಸಬಹುದೇ? ಎಂದೂ ಇವರು ಪರೀಕ್ಷಿಸಿದ್ದಾರೆ. ನಲವತ್ತು ಮಂದಿಗೆ ಕೇವಲ ನೀರು ತುಂಬಿದ ಹೀರುಕ-ಗುಳಿಗೆಗಳನ್ನು ಬಾಯೊಳಗೆ ಅಂಟಿಸಿದ್ದಾರೆ. ಹಾಗೆಯೇ ಅನಂತರ ಕೆಲವರಿಗೆ ಸೂಜಿ ಅಥವಾ ಚ್ಯೂಯಿಂಗ್ ಗಮ್ಮಿನಂತಹ ಅಂಟುಗುಳಿಗೆಗಳನ್ನು ಅಂಟಿಸಿ ಪರೀಕ್ಷಿಸಿದ್ದಾರೆ. ಇವುಗಳಲ್ಲಿ ಹೀರುಕಗಳೇ ಬಹಳ ಹಿತವಾಗಿದ್ದುವಂತೆ. ಅಂದರೆ ಬಳಕೆಯಿಂದ ತೊಂದರೆ ಇಲ್ಲ ಅಂದಷ್ಟೆ. ಬಾಯಂಗುಳದಲ್ಲಿಯೂ ಉರಿಯೂತಗಳು ಕಡಿಮೆ ಇದ್ದುವು ಎಂದು ಲೆರೂ ವರದಿ ಮಾಡಿದ್ದಾರೆ.
ಕವಳ ಹಾಕುವವರಿಗೆ, ಚ್ಯೂಯಿಂಗ್ ಗಮ್ ಅಗಿಯುವವರಿಗೆ ಇಂತಹ ಹೀರುಕಗಳನ್ನು ಒತ್ತರಿಸಿ ಇಟ್ಟುಕೊಳ್ಳುವುದು ಬಹುಶಃ ಕಷ್ಟವಾಗಲಿಕ್ಕಿಲ್ಲ. ಏನಿದ್ದರೂ ಅದರಿಂದ ನೀಡುವ ಔಷಧ ನಿರೀಕ್ಷಿಸಿದ ಫಲಿತಾಂಶಗಳನ್ನು ನೀಡುತ್ತದೆ ಎನ್ನುವುದು ಖಾತ್ರಿಯಾಗಬೇಕಷ್ಟೆ. ಆಮೇಲೆ ಇನ್ಸುಲಿನ್‌ಗೂ ಬಹುಶಃ ಹೀಗೆ ಬಾಯೊಳಗೆ ಇಟ್ಟುಕೊಳ್ಳುವ ಮಾತ್ರೆಯೇ ಸಾಮಾನ್ಯವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.