ಮಂಗಳನ ಮೇಲೆ ಇರುವ ಮೂಲೆ ಮೂಲೆಗಳನ್ನೂ ಬೆದಕಿ ಪರೀಕ್ಷಿಸುವ ಸಾಮರ್ಥ್ಯವಿರುವ ರೋಬೋಟ್ ಸಿದ್ಧವಾಗುತ್ತಿದೆಯಂತೆ.
ಅಮೆರಿಕೆಯ ಸ್ಟಾನ್‌ಫರ್ಡ್ ವಿಶ್ವವಿದ್ಯಾನಿಲಯದ ಜೈವಿಕ ಅಣಕು ತಂತ್ರಜ್ಞಾನ ಅಭಿವೃದ್ಧಿ ವಿಭಾಗದ ಮಾರ್ಕ್ ಕುಟ್ಕೋಸ್ಕಿ ಮತ್ತು ಸಂಗಡಿಗರು ಹೀಗೊಂದು ಪುಟ್ಟ ರೋಬೋಟ್ ಸಿದ್ಧಪಡಿಸಿ, ಅಮೆರಿಕದ ಮರುಭೂಮಿಗಳಲ್ಲಿ ಪರೀಕ್ಷಿಸಿದ್ದು ವರದಿಯಾಗಿದೆ.
ದಿನಕ್ಕೊಂದು ರೋಬೋಟ್‌ಗಳ ಕಥೆ ಪ್ರಕಟವಾಗುತ್ತಿರುವಾಗ ಇದರಲ್ಲಿ ಹೊಸತೇನು? ಅದರಲ್ಲಿಯೂ ಮಂಗಳನ ಮೇಲೆ ಈಗಾಗಲೇ ರೋಬೋಟ್ ಯಂತ್ರಗಳು ಹೋಗಿದ್ದಾಗಿದೆಯಲ್ಲ? ಇನ್ನೇನು ವಿಶೇಷ? ಇದೆ, ವಿಶೇಷವಿದೆ. ‘ರೀಚ್‌ಬಾಟ್’ ಎನ್ನುವ ಈ ರೋಬೋಟ್ ಇದುವರೆವಿಗೂ ಮಂಗಳ ಅಥವಾ ಬೇರೆ ಯಾವುದೇ ಗ್ರಹದ ಮೇಲೆ ಇಳಿದ ಶೋಧನೌಕೆಗಳಿಗಿಂತಲೂ ಭಿನ್ನವಾಗಿದೆ. ಅಷ್ಟೇ ಅಲ್ಲ, ಅತಿ ದುರ್ಗಮ ಎನ್ನುವ ಮೂಲೆಯಿಂದಲೂ ಮಣ್ಣಿನ ಮಾದರಿಯನ್ನು ಹೆಕ್ಕಿ ತರುವಂಥ ವಿನ್ಯಾಸವನ್ನು ಹೊಂದಿದೆ.
ದೂರದ ಗ್ರಹಗಳಿಗೆ ಶೋಧ ನೌಕೆಗಳನ್ನು ಕಳಿಸಿ, ಅಲ್ಲಿನ ಮಣ್ಣು, ಕಲ್ಲುಗಳನ್ನು ಪರೀಕ್ಷಿಸಬಹುದೆಂದು ಈಗಾಗಲೇ ಹಲವು ಯೋಜನೆಗಳು ಸಿದ್ಧಪಡಿಸಿವೆ. ಭಾರತದ ಚಂದ್ರಯಾನ–3 ಇದೇ ರೀತಿ ‘ವಿಕ್ರಮ್’ ಎನ್ನುವ ಶೋಧನೌಕೆಯನ್ನು ಚಂದ್ರನ ಮೇಲೆ ಇಳಿಸಿತ್ತು. ಅದರಿಂದ ಒಂದು ಪುಟ್ಟ ರೋವರು ಚಂದ್ರನ ನೆಲದ ಮೇಲಿಳಿದು ಅಲ್ಲಿನ ಮಣ್ಣನ್ನು ಪರೀಕ್ಞಿಸಿ, ನೆಲದ ಅಡಿಯಲ್ಲಿ ಹತ್ತು ಸೆಂಟಿಮೀಟರಿನ ಆಳದಲ್ಲಿ ಸಲ್ಫರ್ ಇದೆ ಎಂದು ತಿಳಿಸಿತ್ತು. ಚಂದ್ರನ ಮೇಲೆ ಮಾನವರು ಇಳಿದು ಅಲ್ಲಿಂದ ಮಣ್ಣನ್ನು ಹೊತ್ತು ತಂದು ಐವತ್ತು ವರ್ಷಗಳಾಗಿವೆ. ಈ ಮಧ್ಯೆ ಅಮೆರಿಕ ಮಂಗಳನ ಮೇಲೆ ‘ಕ್ಯೂರಿಯಾಸಿಟಿ’ ಎನ್ನುವ ರೋವರನ್ನೂ ಇಳಿಸಿತ್ತು.
ಕಳೆದ ವರ್ಷವಷ್ಟೆ ಮತ್ತೊಂದು ರೋಬೋಟ್ ನಡೆಸಿದ ಸಾಧನೆ ಸುದ್ದಿಯಾಗಿತ್ತು. ‘ಬೆನ್ನು’ ಎನ್ನುವ ಕ್ಷುದ್ರಗ್ರಹದಿಂದ ಶೋಧನೌಕೆಯೊಂದು ಮಣ್ಣನ್ನು ಹೊತ್ತು ಭೂಮಿಗೆ ತಂದಿತ್ತು. ಈ ಎಲ್ಲ ಪ್ರಯತ್ನಗಳೂ ಸಾಮಾನ್ಯರ ಊಹೆಗೆ ಮೀರಿದ ಪ್ರಯತ್ನಗಳಾದರೂ, ತಂತ್ರಜ್ಞಾನದ ಮಟ್ಟಿಗೆ ಇನ್ನೂ ಸವಾಲುಗಳಿದ್ದುವು. ಈ ತಂತ್ರಜ್ಞಾನಗಳು ಹೆಕ್ಕಿದ ಮಣ್ಣಿನ ಖನಿಜ ಸ್ವರೂಪವನ್ನು ತಿಳಿಸಬಹುದು. ಆದರೆ ಮಣ್ಣು ಬಿಸಿಲು ಬೀಳುವ ತೆರೆದ ಬಯಲಿನದ್ದಾದ್ದರಿಂದ ಅಲ್ಲಿ ಜೀವದ ಕುರುಹುಗಳು ಸಿಗುವ ಸಾಧ್ಯತೆಗಳು ಕಡಿಮೆ. ಏಕೆಂದರೆ ಮಂಗಳಗ್ರಹ ಭೂಮಿಯಂತಲ್ಲ.
ಮಂಗಳನ ಮೇಲೆ ಇರುವ ಗುಹೆಗಳು, ಬಿರುಕುಗಳು, ಕಂದರಗಳಲ್ಲಿ ನೀರಿನ ಪಸೆ ಇರಬಹುದು. ಅಲ್ಲಿ ಜೀವ ಬೆಳೆಯುತ್ತಿರಬಹುದು ಎನ್ನುವ ಊಹೆಗಳಿವೆ. ಇದು ನಿಜವೋ ಅಲ್ಲವೋ ತಿಳಿಯಬೇಕೆಂದರೆ ಅಂತಹ ಬಿರುಕು, ಗುಹೆ, ಕಂದರಗಳಿಂದಲೂ ಮಣ್ಣನ್ನು ಹೆಕ್ಕಬೇಕಾಗಬಹುದು. ಇದೇ ಸಮಸ್ಯೆ ಹಾಗೂ ಸವಾಲು. ಚಕ್ರದ ಮೇಲೆ ಉರುಳುವ ರೋಲರುಗಳು ಹೇಗೆಹೇಗೋ ಬಿದ್ದರೆ ಚಲಿಸದೇ ನಿಂತುಬಿಡಬಹುದು. ಚಂದ್ರಯಾನ–2 ಹೀಗೆಯೇ ವಿಫಲವಾಗಿತ್ತು.
ಹೇಗೇ ಚಲಿಸಿದರೂ, ತಪ್ಪದೆ ಕೆಲಸವನ್ನು ನಿರ್ವಹಿಸಬಲ್ಲ ರೋಬೋಟ್ ಬಹುಶಃ ಈ ಸವಾಲನ್ನು ಎದುರಿಸಲು ನೆರವಾಗಬಹುದು ಎನ್ನುವುದು ತಂತ್ರಜ್ಞರ ತರ್ಕ. ಅದಕ್ಕಾಗಿ ಪ್ರಪಂಚದ ವಿವಿಧೆಡೆಗಳಲ್ಲಿ ಪ್ರಯತ್ನಗಳು ನಡೆದಿವೆ. ಉರುಳುವ ರೋಬೋಟ್‌ಗಳು, ನೀರಿನಲ್ಲಿ ಮುಳುಗುವಂಥವು, ಜೇಡದ ರೀತಿ ಆರು ಕಾಲಿನ ಮೇಲೆ ನಡೆಯುವಂಥವು, ನಾಯಿಯಂತೆ ನಾಗಾಲಿಗಳನ್ನು ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದಾರೆ. ಕುಟ್ಕೋಸ್ಕಿಯವರ ತಂಡದ ಪ್ರಯತ್ನ ಈ ನಿಟ್ಟಿನಲ್ಲಿ ಇನ್ನೊಂದು.
ಕುಟ್ಕೋಸ್ಕಿಯವರ ತಂಡದ ರೀಚ್‌ಬಾಟ್ ವಿಶಿಷ್ಟವಾಗಿದೆ. ಇದು ಕಂದರದ ಗೋಡೆಗಳಿಗೆ ಆತುಕೊಂಡು ಇಳಿಯಬಲ್ಲುದು. ಗೋಡೆಗೆ ಆತುಕೊಂಡೇ, ಎದುರಿನಲ್ಲಿರುವ ಇನ್ನೊಂದು ಗೋಡೆಯನ್ನು ಹೆರೆದು ಮಣ್ಣನ್ನು ಹೆಕ್ಕಬಲ್ಲುದು. ಹೀಗೆ ಕೈಗೆಟುಕದ ಜಾಗಗಳನ್ನು ಮುಟ್ಟುವ ಸಾಮರ್ಥ್ಯ ಇರುವುದರಿಂದಲೇ ಇದನ್ನು ‘ರೀಚ್ ರೋಬೋಟ್’ ಎಂದು ಕರೆದಿದ್ದಾರೆ. ರೀಚ್ ರೋಬೋಟ್‌ನ ಮಾದರಿಯೊಂದನ್ನು ಇತ್ತೀಚೆಗೆ ಮಂಗಳನ ನೆಲದಂತೆಯೇ ಇರುವ ಅಮೆರಿಕೆಯ ಮೊಜಾವ್ ಮರುಭೂಮಿಯಲ್ಲಿ ಪರೀಕ್ಷಿಸಿದ್ದಾರೆ. ಇದರ ವರದಿಯನ್ನು ‘ಸೈನ್ಸ್ ರೋಬೋಟಿಕ್ಸ್’ ಪತ್ರಿಕೆ ವರದಿ ಮಾಡಿದೆ.
ರೀಚ್ ರೋಬೋಟ್ ಕೂಡ ನಾಲ್ಕು ಕಾಲಿನ ರೋಬೋಟ್. ಆದರೆ ಈ ಕಾಲುಗಳು ಎಲ್ಲವೂ ಒಂದೇ ಉದ್ದವಲ್ಲ. ಬೇಕಿದ್ದಾಗ ಹೆಚ್ಚು, ಇಲ್ಲವೇ ಕಡಿಮೆಯಾಗುವಂತೆ ಇವೆ. ಇವುಗಳಲ್ಲಿ ಮೂರು ಕಾಲುಗಳು ನಡೆಯುವುದಕ್ಕೂ, ಒಂದು ಕಾಲು ಮುಂಚಾಚಿ ಮಣ್ಣು ಹೆಕ್ಕುವುದಕ್ಕೂ ಇವೆ. ಆದರೆ ಇನ್ನೊಂದು ವಿಶೇಷವಿದೆ.
ಮೂರು ಕಾಲಿನಲ್ಲಿ ನೆಲದ ಮೇಲೆ ನಡೆಯುವಾಗ ಸ್ಥಿರವಾಗಿ ನಿಲ್ಲಬಹುದು,. ಆದರೆ ಗೋಡೆಗೆ ಆತುಕೊಂಡಾಗ ಇದು ಕಷ್ಟ. ಜೊತೆಗೆ ನಡೆಯುವುದೂ ಕಷ್ಟ. ಇಡೀ ಭಾರವನ್ನು ಗೋಡೆಗೆ ಆತುಕೊಂಡಿರುವ ಕೈಗಳು ಹಿಡಿದುಕೊಳ್ಳಬೇಕು. ಅನಂತರವಷ್ಟೆ ಮೂರನೆಯ ಕಾಲು ಮುಂದೆ ಸಾಗಬೇಕು. ಆ ಮೂರನೆಯ ಕಾಲನ್ನು ಎತ್ತಿದಾಗ ಎರಡೂ ಕಾಲುಗಳಲ್ಲಿಯೇ ಭಾರವನ್ನು ಹೊರುವುದು ನಾಗಾಲಿಗಳಿಗೆ ಸುಲಭವಲ್ಲ. ನಾಯಿಗಳು ಎರಡೇ ಕಾಲಿನಲ್ಲಿ ಹೆಚ್ಚು ಹೊತ್ತು ನಿಲ್ಲಲಾರವೆನ್ನುವುದನ್ನು ಗಮನಿಸಿದ್ದೇವಲ್ಲ. ಈ ಸಾಮರ್ಥ್ಯವನ್ನು ರೀಚ್ ರೋಬೋಟಿಗೆ ಕೊಟ್ಟಿರುವುದೇ ಈ ಎಂಜಿನಿಯರ್‌ಗಳ ಸಾಧನೆ.
ಕಾಲುಗಳ ತುದಿಯಲ್ಲಿ ಪಂಜಗಳಂತೆ ಸೂಜಿಗಳನ್ನಿಟ್ಟು, ಮುಂಚಾಚುವ ಕೈಯ ತುದಿಯಲ್ಲಿ ಹೊಲಿಗೆ ಸೂಜಿಗಳನ್ನು ಬೆರಳುಗಳಂತೆ ಕೂಡಿಸಿದ ಈ ರೀಚ್ ರೋಬೋಟ್, ದಿಣ್ಣೆ, ದಿಬ್ಬಗಳ ಮೇಲೆ ನಿಂತು ಆಚೆಗಿರುವ ಗೋಡೆಯಿಂದ ಮಣ್ಣನ್ನು ಹೆಕ್ಕಿದೆ. ನೆಲದೊಳಗಿನ ಬಿರುಕಿನೊಳಗೆ ಇಳಿದು ಮೇಲೆ ಹತ್ತಿದೆ. ಅದಕ್ಕಾಗಿ ಬೇಕಾದ ಲೆಕ್ಕಾಚಾರಗಳನ್ನು ಸ್ವತಃ ಅದೇ ಮಾಡಿಕೊಳ್ಳುವಂತೆ ವಿನ್ಯಾಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.