ADVERTISEMENT

ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ಉಪ್ಪು

ಕ್ಷಮಾ ವಿ.ಭಾನುಪ್ರಕಾಶ್
Published 20 ಸೆಪ್ಟೆಂಬರ್ 2023, 0:30 IST
Last Updated 20 ಸೆಪ್ಟೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬುದು ಎಲ್ಲರಿಗೂ ಗೊತ್ತೇ ಇರುವ ಗಾದೆ. ಇಲ್ಲಿ ಉಪ್ಪೇ ಆಪ್ತಬಂಧುವಾದ ಕಥೆಯುಂಟು ಗೊತ್ತಾ? ಇದು ನಡೆದದ್ದು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ. ಅಲ್ಲಿ ಪ್ಲಾಸ್ಟಿಕ್‌ ಮರುಬಳಕೆ ಮಾಡುವ ಬಗ್ಗೆ ಪ್ರಯೋಗಗಳು ನಡೆಯುತ್ತಿದ್ದವು. ರಸಾಯನವಿಜ್ಞಾನ, ಭೌತವಿಜ್ಞಾನದ ಅನೇಕ ತರ್ಕಗಳನ್ನು, ಪ್ರಕ್ರಿಯೆಗಳನ್ನು ಬಳಸಿ ಪರೀಕ್ಷೆ ನಡೆಸಲಾಗುತ್ತಿತ್ತು.

ಪ್ಲಾಸ್ಟಿಕ್‌ನ ಮರುಬಳಕೆ ಎಂಬುದು ಒಳ್ಳೆಯ ಉದ್ದೇಶದ ಹಿಂದಿನ ಧನವ್ಯಯವಷ್ಟೇ ಎಂಬಂತಾಗಿದೆ ಈಗ. ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ಕೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ಯಾವುದೇ ಸರ್ಕಾರ ಬಂದರೂ, ಇದನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಗದಂತಹ ಪರಿಸ್ಥಿತಿ. ಇನ್ನು ಮರುಬಳಕೆ ಮಾಡಬಲ್ಲಂತಹ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಕೂಡ ಅನೇಕ ಬಾರಿ ತಿಪ್ಪೆರಾಶಿಯ ಭಾಗವಾಗಿಯೇ, ಭೂಮಿಯ ಒಡಲಾಳದಲ್ಲಿ ಕ್ಯಾನ್ಸರ್‌ನಂತೆ ಉಳಿದುಬಿಡುತ್ತದೆ ಅಥವಾ ಸುಟ್ಟು ಅಪಾಯಕಾರಿ ವಿಷಾನಿಲವಾಗಿ ಹೊರಬಂದು, ಮಾಲಿನ್ಯಕ್ಕೆ ತನ್ನ ಕೊಡುಗೆಯನ್ನು ನೀಡುತ್ತದೆ. ಇದನ್ನು ತಡೆಯಲೆಂದೇ, ಅದೆಷ್ಟೇ ಪ್ಲಾಸ್ಟಿಕ್ ಮರುಬಳಕೆ ಘಟಕಗಳನ್ನು ಸ್ಥಾಪಿಸಿದರೂ, ಅವುಗಳಿಂದ ಉದ್ದೇಶ ಸಫಲವಾಗುವುದು ಅಷ್ಟಕ್ಕಷ್ಟೇ. ಇದಕ್ಕೆ ಎರಡು ಕಾರಣಗಳು: ಮೊದಲನೆಯದಾಗಿ, ಮರುಬಳಕೆ ಮಾಡಲಾದ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ವಸ್ತುಗಳನ್ನು ಹಣ ಕೊಟ್ಟು ಕೊಳ್ಳುವ ಜನ ಕಡಿಮೆಯೇ; ಎರಡನೆಯದಾಗಿ, ಮರುಬಳಕೆ ಮಾಡಲು ಕೋಟ್ಯಂತರ ರೂಪಾಯಿಗಳು ಖರ್ಚಾಗುತ್ತವೆ.

ADVERTISEMENT

ಇಲ್ಲಿ ನಾವು ಮನೆಯಲ್ಲಿರುವ ಪ್ಲಾಸ್ಟಿಕ್ ಬಾಟಲಿಯನ್ನು ಪೇಂಟ್‌ನಿಂದ ಅಲಂಕಾರ ಮಾಡಿ ಹೂದಾನಿಯಾಗಿಸುವ ಮರುಬಳಕೆಯ ಬಗ್ಗೆ ಚರ್ಚಿಸುತ್ತಿಲ್ಲ; ಸಾವಿರಾರು ಟನ್‌ಗಟ್ಟಲೇ ಸಂಗ್ರಹವಾದ ಪ್ಲಾಸ್ಟಿಕ್‌ತ್ಯಾಜ್ಯವನ್ನು ಬೃಹತ್ ಕುಲುಮೆಗಳಲ್ಲಿ, ವಿಶೇಷ ರಾಸಾಯನಿಕಗಳ ಸಹಾಯದಿಂದ ಸರಳೀಕರಿಸುವ ಮರುಬಳಕೆಯ ಬಗ್ಗೆ ಮಾತಾಡುತ್ತಿದ್ದೇವೆ. ‘ಪೈರೋಲೈಸಿಸ್’ ಎಂಬ ಈ ಪ್ರಕ್ರಿಯೆಯಲ್ಲಿ, ಗ್ರೀಕ್‌ಮೂಲದ ಈ ಹೆಸರಿಗೆ ತಕ್ಕ ಹಾಗೆ ‘ಪೈರೋ’ ಅಂದರೆ ‘ಶಾಖ’ವನ್ನು ಬಳಸಿ ‘ಲೈಸಿಸ್’ ಅಂದರೆ ಮುರಿಯುವುದು, ವಿಘಟಿಸಿ ಸರಳೀಕರಿಸುವುದು ಸಾಧ್ಯವಾಗುತ್ತದೆ. ಆಮ್ಲಜನಕರಹಿತ ವಾತಾವರಣವಾದ ಈ ಬೃಹತ್ ಕುಲುಮೆಗಳಲ್ಲಿ ಬಗೆಬಗೆಯ ಪ್ಲಾಸ್ಟಿಕ್‌ನಂತಹ ಪಾಲಿಮರ್‌ಗಳನ್ನು ಕರಗಿಸಲು, ಸರಳ ಉತ್ಪನ್ನಗಳನ್ನು ಪಡೆಯಲು, ಬೇಕಾಗುವ ತಾಪಮಾನ 350 ಡಿಗ್ರಿ ಸೆಲ್ಸಿಯಸ್‌ನಿಂದ 1000 ಡಿಗ್ರಿ ಸೆಲ್ಸಿಯಸ್‌ನವರೆಗೆ; ಅದಕ್ಕೆ ಸಿಕ್ಕಾಪಟ್ಟೆ ಇಂಧನ ಬೇಕಾಗುತ್ತದಲ್ಲ? ಹಾಗಾಗಿ, ಕೆಲವು ‘ಕ್ಯಾಟಲಿಸ್ಟ್‌’, ಎಂದರೆ ವೇಗವರ್ಧಕಗಳನ್ನು ಬಳಸಿ, ಈ ರಾಸಾಯನಿಕ ಪ್ರಕ್ರಿಯೆಗೆ ಬೇಕಾದಂತಹ ನಿಗಧಿತ ತಾಪಮಾನವನ್ನು ತಗ್ಗಿಸಬಹುದು. ಆದರೆ ಇಲ್ಲಿ ಬಳಸಲಾಗುವ ವೇಗವರ್ಧಕಗಳ ಬೆಲೆಯೆಷ್ಟೆಂದು ಕೇಳಿದರೆ ಹೌಹಾರಲೇಬೇಕು! ಇಲ್ಲಿ ಬಳಕೆಯಾಗುವುದು ಚಿನ್ನಕ್ಕಿಂತಲೂ ದುಬಾರಿಯಾದ ಪ್ಲಾಟಿನಂನಂತಹ ಲೋಹಗಳು, ವಿವಿಧ ಲೋಹಗಳ ಮತ್ತು ಸಂಯುಕ್ತ ಪದಾರ್ಥಗಳ ಮಿಶ್ರಣಗಳು - ಹೀಗೆ.

ಇಂತಹ ವೇಗವರ್ಧಕಗಳು ಮತ್ತು ಅಪಾರ ಇಂಧನದ ಮೇಲೆ ಖರ್ಚು ಮಾಡಿ, ದೊರೆಯುವ ಸರಳೀಕರಿಸಿದ ಉಪ ಉತ್ಪನ್ನಗಳ ಬೆಲೆ ಕಡಿಮೆಯೇ. ಹಾಗಾಗಿ, ರಾಸಾಯನಿಕವಾಗಿ ಪ್ಲಾಸ್ಟಿಕ್ ಮರುಬಳಕೆಯ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಲೇ ಇವೆ. ಅಂತಹದ್ದೇ ಪ್ರಯೋಗ ನಡೆಸುತ್ತಿದ್ದರು, ಮಿಶಿಗನ್ ವಿಶ್ವವಿದ್ಯಾಲಯದ ವಿಜ್ಞಾನಿ ರಬ್ನವಾಝ್. ಇವರು ದುಬಾರಿ ವೇಗವರ್ಧಕಗಳ ಬದಲು, ಕಡಿಮೆ ಹಣ ಖರ್ಚುಮಾಡಿ ಬಳಸಬಲ್ಲ ವೇಗವರ್ಧಕಗಳ ಹುಡುಕಾಟದಲ್ಲಿದ್ದಾಗ, ಇವರಿಗೆ ಹೊಳೆದದ್ದು ಎಲ್ಲರೂ ದಿನನಿತ್ಯವೂ ಆಹಾರದಲ್ಲಿ ಸೇವಿಸುವ ಉಪ್ಪಿನ ಬಗ್ಗೆ. ನೀರಿಗೆ ಹಾಕಿದಾಗ ಕರಗುವ, ಬೆಂಕಿಗೆ ಹಾಕಿದಾಗ ಸಿಡಿಯುವ ಉಪ್ಪಿನ ಬಗ್ಗೆ ರಾಸಾಯನಿಕವಾಗಿ ಸಾಕಷ್ಟು ಈಗಾಗಲೇ ಗೊತ್ತಿರುವುದರಿಂದ, ಹಾಗೂ ಅದರ ಸುಲಭಲಭ್ಯತೆಯ ಕಾರಣದಿಂದ ತಕ್ಷಣವೇ ಬಳಸಿ ನೋಡಲಾಯ್ತು; ಆಗಲೇ ಉಪ್ಪು ಎಂತಹ ಆಪ್ತಬಂಧು ಎಂಬುದು ಮನದಟ್ಟಾಗುವಂತಹ ಫಲಿತಾಂಶ ಬಂದದ್ದು. ಪ್ಲಾಸ್ಟಿಕ್‌ ಅನ್ನು ತ್ವರಿತವಾಗಿ ಸರಳೀಕರಿಸುವ ಪ್ರಕ್ರಿಯೆಯನ್ನು ಕಡಿಮೆ ತಾಪಮಾನದಲ್ಲಿ ಸಾಧ್ಯವಾಗಿಸಿದ ಉಪ್ಪು, ಈ ಪ್ರಕ್ರಿಯೆಯ ಖರ್ಚನ್ನು ಮುಕ್ಕಾಲು ಪಾಲು ಕಡಿಮೆ ಮಾಡಿತ್ತು. ಬಂಡವಾಳದ ಉಳಿತಾಯ, ಈ ಪ್ರಕ್ರಿಯೆಗೆ ಬೇಕಾದ ಶಾಖದಲ್ಲಿ ಇಳಿಕೆ. ಇವಷ್ಟೇ ಅಲ್ಲದೇ, ಇಲ್ಲಿ ಮತ್ತೊಂದು ಅನುಕೂಲ ಕಂಡುಬಂದಿತ್ತು. ಸಾಮಾನ್ಯವಾಗಿ ಪ್ಲಾಸ್ಟಿಕ್‌ ಅನ್ನು ಹೀಗೆ ‘ಪೈರೋಲೈಸಿಸ್ಗೆ’ ಒಳಪಡಿಸಿದಾಗ ದೊರೆಯುವ ಉತ್ಪನ್ನಗಳು ಮೇಣದಂತಹ ಘನಪದಾರ್ಥ ಮತ್ತು ಇಂಧನಗಳಾಗಿ ಬಳಸಬಲ್ಲ ಕೆಲವು ದ್ರವಗಳು ಮತ್ತು ಅನಿಲಗಳು. ಇಲ್ಲಿ ಮೇಣದಂತಹ ಘನಪದಾರ್ಥದ ಉಪಯುಕ್ತತೆ ಹೆಚ್ಚೇನೂ ಇಲ್ಲ. ಅನಿಲ ಮತ್ತು ದ್ರವಗಳು ಬಳಕೆಯಾಗಬಹುದಷ್ಟೇ. ಆದರೆ, ಉಪ್ಪನ್ನು ಬಳಸಿ ಪ್ಲಾಸ್ಟಿಕ್‌ಅನ್ನು ಮರುಬಳಕೆ ಮಾಡುವ ಮುಖಾಂತರ ಹೊರಬಂದ ಉತ್ಪನ್ನಗಳಲ್ಲಿ ಬಹುಪಾಲು, ಇಂಧನವಾಗಿ ಬಳಕೆಯಾಗಬಲ್ಲ ದ್ರವಗಳು ಹಾಗೂ ಅನಿಲಗಳೇ ಇವೆ ಎನ್ನುತ್ತಾರೆ, ರಬ್ನವಾಝ್. ಹೀಗೆ ತಯಾರಾದ ದ್ರವರೂಪೀ ಇಂಧನಗಳ ರಾಸಾಯನಿಕ ರಚನೆ ಕೂಡ ಸರಳವಾಗಿದ್ದು, ಡೀಸೆಲ್‌ನಂತೆ ಬಳಸಬಹುದಾಗಿದೆ ಎನ್ನುತ್ತಾರೆ, ಸಂಶೋಧಕರು.

‘ಅಡ್ವಾನ್ಸ್ಡ್‌ ಸಸ್ಟೇನೆಬಲ್ ಸಿಸ್ಟಮ್ಸ್‌’ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು, ವಿಜ್ಞಾನಲೋಕದಲ್ಲಿ ಸಂಚಲನ ಮೂಡಿಸಿರುವುದು ಈ ಕಾರಣಗಳಿಂದಾಗಿಯೇ. ಅದರಲ್ಲೂ ‘ಪಾಲಿಆಲ್ಫಿನ್’ ಎಂಬ ವಿಘಟಿಸಲು ಕಷ್ಟವೆನಿಸುವ ಪ್ಲಾಸ್ಟಿಕ್‌ ಅನ್ನೂ ಸುಲಭವಾಗಿ ಸರಳೀಕರಿಸಿದೆ ಈ ಸರಳ ಉಪ್ಪು. ಉಪಯುಕ್ತವಲ್ಲದ ಮೇಣದಂತಹ ಉತ್ಪನ್ನದ ಪ್ರಮಾಣವನ್ನೂ ತಗ್ಗಿಸಿರುವ ಉಪ್ಪು, ಮತ್ತಷ್ಟು ಭರವಸೆ ಮೂಡಿಸಿದೆ.

ಯಾವುದೇ ವೇಗವರ್ಧಕವಾಗಲಿ, ಅದು ಇತರ ರಾಸಾಯನಿಕಗಳಂತೆ ಪ್ರಕ್ರಿಯೆಯಲ್ಲಿ ಬಳಕೆಯಾಗುವುದಿಲ್ಲ. ಆ ರಾಸಾಯನಿಕಗಳು ರಾಸಾಯನಿಕ ಪ್ರಕ್ರಿಯೆಗೆ ಒಳಪಡುವಾಗ, ವೇಗವರ್ಧಕವು ತಟಸ್ಥವಾಗಿದ್ದು, ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುವುದಷ್ಟೇ ಇದರ ಕೆಲಸ. ರಾಸಾಯನಿಕ ಕ್ರಿಯೆ ಸಂಪೂರ್ಣವಾದ ಮೇಲೆ, ಬಳಸಿದ ವೇಗವರ್ಧಕವನ್ನು ಪುನಃ ಬೇರ್ಪಡಿಸಿ, ಮುಂದಿನ ಸಲ ಬಳಸಲು ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ, ಹೀಗೆ ಬೇರ್ಪಡಿಸಲು ಕೂಡ ಅನೇಕ ಪ್ರಕ್ರಿಯೆಗಳನ್ನು ಬಳಸಬೇಕಾಗುತ್ತದೆ ಮತ್ತು ಕೆಲವು ಅಷ್ಟು ಸರಳವೂ ಇರವು. ಆದರೆ, ಇಲ್ಲಿ ಬಳಸಲಾದ ವೇಗವರ್ಧಕವು ಸರಳವಾದ ಉಪ್ಪಲ್ಲವೇ? ಹಾಗಾಗಿ, ಕೇವಲ ನೀರನ್ನು ಬಳಸಿ, ನೀರಿನಲ್ಲಿ ಕರಗಿಸಿ, ತೈಲೋತ್ಪನ್ನಗಳಿಂದ ಬೇರ್ಪಡಿಸಿದರೆ ಸಾಕು. ಉಪ್ಪುನೀರನ್ನು ಕುದಿಸಿ, ಮರಳಿ ಉಪ್ಪನ್ನು ಪಡೆಯಲು ಮನುಷ್ಯನಿಗೇನೂ ಹೊಸದಾಗಿ ಹೇಳಿಕೊಡಬೇಕಿಲ್ಲವಲ್ಲ! ಹಾಗಾಗಿ, ವಾಣಿಜ್ಯಿಕವಾಗಿ, ರಾಸಾಯನಿಕವಾಗಿ, ಪರಿಸರೀಯವಾಗಿ - ಹೀಗೆ ಅನೇಕ ಆಯಾಮಗಳಿಂದಲೂ ಉಪ್ಪಿನ ಬಳಕೆಯು, ಸಮರ್ಥ ಹಾಗೂ ಸಮರ್ಪಕ ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿ, ಪ್ಲಾಸ್ಟಿಕ್‌-ತ್ಯಾಜ್ಯದ ಸಮಸ್ಯೆಗೆ ಹೊಸದೊಂದು ಭರವಸೆದಾಯಕ ಉತ್ತರವನ್ನು ಕಂಡುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.