ಕೃಷಿಯಲ್ಲಿ ಮಣ್ಣಿನ ಬಳಕೆ ಮತ್ತು ಮಹತ್ವ ಬಹಳ ಹಿರಿದು. ಫಲವತ್ತಾದ ಮಣ್ಣು ಸಿಗುವುದು ಕೃಷಿಗೆ ಬೇಕಿರುವ ಪ್ರಾಥಮಿಕ ಅಗತ್ಯ. ಬಳಿಕ ಅಗತ್ಯ ನೀರು, ಗೊಬ್ಬರ, ತಳಿ, ಆರೈಕೆ ಮುಂತಾದವು ಯಶಸ್ವಿ ಕೃಷಿಗೆ ಕಾರಣವಾಗುತ್ತವೆ. ಆದರೆ, ವಿಜ್ಞಾನಿಗಳು ಈ ಪ್ರಾಥಮಿಕ ಅಗತ್ಯಗಳಿಗೆ ಸೆಡ್ಡು ಹೊಡೆಯುವಂತೆ ‘ಬುದ್ಧಿವಂತ ಮಣ್ಣ’ನ್ನು ಶೋಧಿಸಿದ್ದಾರೆ. ಈ ಮಣ್ಣು ತನಗೆ ತಾನೇ ಯೋಚಿಸುತ್ತ, ಫಲವತ್ತಾದ ಉತ್ಪನ್ನವನ್ನು ನೀಡುವತ್ತ ಕಾರ್ಯನಿರ್ವಹಿಸುತ್ತದೆ!
ಹೌದು, ಇದು ಬುದ್ಧಿವಂತ ಮಣ್ಣು. ಈ ಮಣ್ಣು ಬುದ್ಧಿವಂತ ಮಾತ್ರವೇ ಅಲ್ಲ, ಹಣದ ಮಿತವ್ಯಯಿಯೂ ಆಗಿದೆ. ಹೇಗೆಂದರೆ, ಸಸಿಗಳ ಪೋಷಣೆಗೆ ಬೇಕಿರುವ ಗಾಳಿಯಲ್ಲಿ ವಿಫುಲವಾಗಿ ಸಿಗುವ ನೀರನ್ನು ಹೀರಿಕೊಂಡು ಅದನ್ನು ಸಸಿಗೆ ತಲುಪಿಸುವ ಕೆಲಸವನ್ನೂ ಈ ಮಣ್ಣು ಮಾಡುತ್ತದೆ. ಜೊತೆಗೆ, ಗೊಬ್ಬರನ್ನು ಇಂತಿಷ್ಟೇ ಪ್ರಮಾಣದಲ್ಲಿ ಸಸಿಗೆ ಒದಗಿಸಿ ಸಸಿಯ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ಆಗುವಂತೆ ನೋಡಿಕೊಳ್ಳುವ ಜಾಣ್ಮೆಯೂ ಈ ಮಣ್ಣಿಗೆ ಇದೆ.
ವಿಶ್ವಪ್ರಸಿದ್ಧ ‘ಎಸಿಎಸ್ ಮಟೀರಿಯಲ್ಸ್ ಲೆಟರ್ಸ್’ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಈ ಸಂಶೋಧನೆ ಪ್ರಕಟವಾಗಿದೆ. ಅಮೆರಿಕದ ಟೆಕ್ಸಾಸ್ ‘ಮಟೀರಿಯಲ್ಸ್ ಇನ್‌ಸ್ಟಿಟ್ಯೂಟ್ ಮತ್ತು ಕಾಕ್ರೆಸ್ ಸ್ಕೂಲ್ ಆಫ್ ಎಂಜಿನಿಯರಿಂಗ್’ನ ವಾಕರ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳಾದ ಪ್ರೊ. ಯೂ, ಜುಂಗ್‌ಜೂನ್ ಪಾರ್ಕ್, ವೀಕ್ಸಿನ್ ಗಾನ್ ಹಾಗೂ ಶೂಕ್ಸಿನ್ ಲೀ ಜಂಟಿಯಾಗಿ ಈ ಬುದ್ಧಿವಂತ ಮಣ್ಣನ್ನು ಆವಿಷ್ಕರಿಸಿದ್ದಾರೆ.
ಪ್ರಪಂಚದಲ್ಲಿ ಕೃಷಿಗೆ ಶೇ. 70ರಷ್ಟು ಶುದ್ಧನೀರನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ, ಶೇ. 95ರಷ್ಟು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೃಷಿ ಉತ್ಪನ್ನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಮುಖ್ಯ ಕಾರಣ. ಇದರ ಪರಿಣಾಮವಾಗಿ ಶುದ್ಧನೀರಿನ ಬೇಡಿಕೆ ಹೆಚ್ಚುತ್ತಿದ್ದು, ಪೂರೈಕೆ ಕಷ್ಟವಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ಪರ್ಯಾಯ ತಂತ್ರಜ್ಞಾನವೊಂದನ್ನು ಕಂಡುಕೊಳ್ಳುವುದು. ಸ್ವಾಭಾವಿಕವಾಗಿಯೇ ಮಣ್ಣಿಗೆ ಗಾಳಿಯಲ್ಲಿನ ನೀರನ್ನು ಹೀರಿಕೊಳ್ಳುವ ಗುಣ ಇರುತ್ತದೆ. ಈ ಗುಣವನ್ನೇ ಸುಧಾರಿಸಿ ಕೃಷಿಗೆ ಬೇಕಿರುವ ಶೇ. 90ರಷ್ಟು ನೀರನ್ನು ಗಾಳಿಯಿಂದಲೇ ಹೀರಿಕೊಳ್ಳುವಂತೆ ಈ ಸಂಶೋಧನೆ ನಡೆದಿದೆ.
ಕೆಲವು ಸಸ್ಯತಳಿಗಳು ಹೆಚ್ಚು ನೀರನ್ನು ಬಯಸುತ್ತವೆ. ಉದಾಹರಣೆಗೆ ಭತ್ತ, ಗೋಧಿ, ಕಬ್ಬು ಮುಂತಾದವು. ಇವುಗಳಿಗೆ ಗದ್ದೆಗಳನ್ನು ರಚಿಸಿ ವಿಫುಲವಾಗಿ ನೀರನ್ನು ಒದಗಿಸಬೇಕಾಗುತ್ತದೆ. ರಾಗಿ ಮಾದರಿಯ ಏಕದಳ ಧಾನ್ಯಗಳು, ಬೇಳೆ ಮಾದರಿಯ ದ್ವಿದಳ ಧಾನ್ಯಗಳಿಗೆ ಕಡಿಮೆ ನೀರು ಇದ್ದರೂ ಸಾಕಾದೀತು. ಆದರೆ, ದೊಡ್ಡ ಜನಸಂಖ್ಯೆಗೆ ಎದುರಾಗುವ ಹಸಿವಿನ ಸಮಸ್ಯೆಯನ್ನು ನೀಗಿಸಬೇಕಾದರೆ ಹೆಚ್ಚು ನೀರು ಬಯಸುವ ತಳಿಗಳಿಗೂ ಅಗತ್ಯ ನೀರನ್ನು ಕೊಡಲೇಬೇಕು. ಇದನ್ನು ಮುಖ್ಯವಾಗಿ ಮನಸಿನಲ್ಲಿ ಇರಿಸಿಕೊಂಡು ಈ ಸಂಶೋಧನೆಯನ್ನು ಮಾಡಲಾಗಿದೆ ಎಂದು ವಿಜ್ಞಾನಿ ಪ್ರೊ. ಯೂ ಹೇಳಿದ್ದಾರೆ.
ಇದಕ್ಕಾಗಿ ‘ಹೈಡ್ರೋಜೆಲ್’ ಎಂಬ ಕೃತಕ ಉತ್ಪನ್ನವೊಂದನ್ನು ಶೋಧಿಸಿದ್ದು, ಅದನ್ನು ಮಣ್ಣಿಗೆ ಬರೆಸಲಾಗಿದೆ. ಹೆಸರೇ ಹೇಳುವಂತೆ ಈ ವಸ್ತುವಿನಲ್ಲಿ ನೀರಿನ ಅಂಶ ಇರುತ್ತದೆ. ಅಂದರೆ, ವಾತಾವರಣದಲ್ಲಿನ ನೀರಿನ ಆವಿಯನ್ನು ಇದು ಹೀರಿಕೊಂಡು ತನ್ನಲ್ಲಿ ಶೇಖರಿಸಿಕೊಳ್ಳುತ್ತದೆ. ಜೊತೆಗೆ, ತಾನು ಇರುವ ಮಣ್ಣಿನಲ್ಲಿ ನಿಧಾನವಾಗಿ ತನ್ನಲ್ಲಿ ಶೇಖರವಾಗಿರುವ ನೀರನ್ನು ನಿಧಾನವಾಗಿ ಹೊರ ಸೂಸುತ್ತದೆ. ಇದರಿಂದ ಮಣ್ಣು ಒದ್ದೆಯಾಗಿರುತ್ತದೆ ಎಂದು ತಮ್ಮ ಸಂಶೋಧನೆಯ ಕಾರ್ಯವೈಖರಿಯನ್ನು ಪ್ರೊ. ಯೂ ವಿವರಿಸಿದ್ದಾರೆ.
ಇದಿಷ್ಟೇ ಈ ಮಣ್ಣಿನ ಗುಣವಲ್ಲ. ಈ ‘ಹೈಡ್ರೊಜೆಲ್’ಗಳಲ್ಲಿ ‘ನ್ಯಾನೋ ರೋಬಾಟ್’ಗಳನ್ನು ಇರಿಸಲಾಗಿರುತ್ತದೆ. ಇವು ಕೇವಲ ನೀರು ಮಾತ್ರವೇ ಅಲ್ಲದೇ, ಮಣ್ಣಿನಲ್ಲಿ ಬೆರೆಸುವ ರಾಸಾಯನಿಕಗಳನ್ನು ಎಷ್ಟು ಪ್ರಮಾಣದಲ್ಲಿ, ಎಷ್ಟು ಅವಧಿಯಲ್ಲಿ ಸಸಿಗಳಿಗೆ ತಲುಪಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ಜೊತೆಗೆ, ಸಸಿಯ ಬೆಳವಣಿಗೆಯ ಮೇಲೆ ನಿಗಾ ವಹಿಸಿ ಅಗತ್ಯವುಳ್ಳ ಪೋಷಕಾಂಶಗಳನ್ನು ತಲುಪಿಸುತ್ತವೆ. ಸಸಿಯ ಬೇರುಗಳೊಂದಿಗೆ ನೇರವಾಗಿ ಸಂಪರ್ಕ ಹೊಂದುವ ಈ ನ್ಯಾನೋ ರೋಬಾಟ್‌ಗಳು ಸಸಿಯ ಸಂಪೂರ್ಣ ಆರೋಗ್ಯವನ್ನು ಸದಾ ಕಾಲ ಪರೀಕ್ಷಿಸುತ್ತಿರುತ್ತವೆ.
ಹಾಗಾಗಿ, ರೈತರು ನೀಡುವ ರಾಸಾಯನಿಕ ಅಥವಾ ಸಾವಯವ ಕೀಟನಾಶಕಗಳನ್ನೂ ಇವು ಜಾಣ್ಮೆಯಿಂದ ಬಳಸುವ ಕೆಲಸವನ್ನು ಮಾಡುತ್ತವೆ. ರೈತನ ಕಣ್ತಪ್ಪು ಅಥವಾ ಕೈತಪ್ಪಿನಿಂದ ಅಗತ್ಯಕ್ಕಿಂತ ಹೆಚ್ಚು ಕೀಟನಾಶಕ ಅಥವಾ ಗೊಬ್ಬರ ಮಣ್ಣಿಗೆ ಸೇರಿದರೂ ಸಸಿಗೆ ಬೇಕಾಗುವಷ್ಟು ಮಾತ್ರ ತಲುಪಿಸುವ ಕೆಲಸವನ್ನು ಈ ಬುದ್ಧಿವಂತ ಮಣ್ಣು ತನ್ನಲ್ಲಿನ ನ್ಯಾನೋ ರೋಬಾಟ್‌ಗಳ ಸಹಾಯದಿಂದ ಮಾಡುತ್ತದೆ.
ಜೊತೆಗೆ, ‘ಹೈಡ್ರೋಜೆಲ್’ಗಳನ್ನು ಮಣ್ಣಿಗೆ ಬೆರೆಸುವ ಪ್ರಮಾಣವನ್ನು ಸಸಿಯ ತಳಿಯ ಆಧಾರದ ಮೇಲೆ ಬೆರೆಸಬಹುದಾಗಿದೆ. ಹೆಚ್ಚು ನೀರು ಬಯಸುವ ತಳಿಗಳಿಗೆ ಹೆಚ್ಚು ‘ಹೈಡ್ರೋಜೆಲ್’ ಬಳಸಬಹುದು. ಈ ‘ಹೈಡ್ರೋಜೆಲ್’ ಸಂಪೂರ್ಣ ಸಾವಯನ ಎನ್ನುವುದು ಒಳ್ಳೆಯ ವಿಚಾರವಾಗಿದೆ. ಈ ‘ಹೈಡ್ರೋಜೆಲ್’ ಮಣ್ಣಿನ ಜೊತೆಗೆ ಬೆರೆಯುವುದಿಲ್ಲ. ಹಾಗಾಗಿ, ಮಣ್ಣಿಗೆ ಬೆರೆಸುವ ಈ ವಸ್ತುವು ಅಡ್ಡಪರಿಣಾಮ ಬೀರುತ್ತದೆ ಎನ್ನುವ ಭಯವೂ ಇಲ್ಲ. ಅಲ್ಲದೇ, ಈ ‘ಹೈಡ್ರೋಜೆಲ್’ ಸಂಪೂರ್ಣವಾಗಿ ಕೊಳೆಯುವ ಗುಣವನ್ನು ಹೊಂದಿದೆ. ಅಂದರೆ, ತನ್ನ ಸಾಮರ್ಥ್ಯ ಕ್ಷೀಣಿಸಿದ ಮೇಲೆ ಅದು ಮಣ್ಣಿನಲ್ಲೇ ಕೊಳೆತುಹೋಗಿ, ಗೊಬ್ಬರವಾಗುತ್ತದೆ. ಆದ್ದರಿಂದ ಇದರ ಕೆಲಸ ಮುಗಿದಮೇಲೂ ಗೊಬ್ಬರವಾಗಿ ರೈತರಿಗೆ ನೆರವಾಗುತ್ತದೆ.
ರೈತರ ಹಲವು ಸಮಸ್ಯೆಗಳನ್ನು ಈ ಬುದ್ಧಿವಂತ ಮಣ್ಣು ನೀಗಿಸಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೇಕಾದ ನೀರನ್ನು ಉಚಿತವಾಗಿ ಪಡೆಯುವುದು, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು, ಫಸಲಿನ ಪ್ರಮಾಣವನ್ನು ಹೆಚ್ಚಿಸುವುದು ಪ್ರಮುಖ ಅನುಕೂಲಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.