ADVERTISEMENT

Science And Technology | ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಣೆ!

ಸೂರ್ಯನಾರಾಯಣ ವಿ.
Published 15 ಅಕ್ಟೋಬರ್ 2024, 22:30 IST
Last Updated 15 ಅಕ್ಟೋಬರ್ 2024, 22:30 IST
<div class="paragraphs"><p>ಡಿಮೊರ್ಫೊಸ್‌ ಕ್ಷುದ್ರಗ್ರಹ<br>(ನಾಸಾ ಚಿತ್ರ)</p></div>

ಡಿಮೊರ್ಫೊಸ್‌ ಕ್ಷುದ್ರಗ್ರಹ
(ನಾಸಾ ಚಿತ್ರ)

   

ಅಮೆರಿಕದ ಫ್ಲಾರಿಡಾದ ಕೇಪ್‌ ಕೆನರಾವಲ್‌ನಲ್ಲಿರುವ ನಾಸಾದ ಬಾಹ್ಯಾಕಾಶ ಕೇಂದ್ರದಿಂದ ಯುರೋಪಿನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ನಿರ್ಮಿಸಿರುವ ‘ಹೀರಾ’ (HERA) ಎಂಬ ಗಗನನೌಕೆಯನ್ನು ಹೊತ್ತೊಯ್ದ ಸ್ಪೇಸ್‌– ಎಕ್ಸ್‌ ರಾಕೆಟ್‌ ಅಕ್ಟೋಬರ್‌ 7 ಸೋಮವಾರ ನಭಕ್ಕೆ ಚಿಮ್ಮಿ ಯಶಸ್ವಿಯಾಗಿ ಕಕ್ಷೆ ತಲುಪಿತು.  

ಇದರಲ್ಲೇನು ವಿಶೇಷ ಎಂದು ನೀವು ಪ್ರಶ್ನಿಸಬಹುದು. ಖಂಡಿತವಾಗಿಯೂ ವಿಶೇಷ ಇದೆ. ಇದು ಸಾಮಾನ್ಯವಾದ ಬಾಹ್ಯಾಕಾಶ ಯೋಜನೆಯಲ್ಲ. ಇಡೀ ಭೂಮಿಯನ್ನು ಆಕಾಶಕಾಯಗಳಿಂದ ಅದರಲ್ಲೂ ಮುಖ್ಯವಾಗಿ ಕ್ಷುದ್ರಗ್ರಹಗಳು/ ಧೂಮಕೇತುಗಳ ಅಪ್ಪಳಿಸುವಿಕೆಯಿಂದ ರಕ್ಷಿಸುವುದರ ಮೂಲಕ ಮನುಕುಲವನ್ನು ಉಳಿಸುವ ಮಹತ್ವಾಕಾಂಕ್ಚಿಯ ಯೋಜನೆ.

ADVERTISEMENT

6.5 ಕೋಟಿ ವರ್ಷಗಳಿಗೂ ಮೊದಲು ಭೂಮಿಯಲ್ಲಿ ಡೈನೋಸರ್‌ಗಳು ನೆಲಸಿದ್ದವು ಎಂಬ ಸಂಗತಿ ಎಲ್ಲರಿಗೂ ತಿಳಿದಿರುವಂತಹದ್ದು. ಗಾತ್ರದಲ್ಲಿ ಬೃಹತ್ತಾಗಿದ್ದ ಡೈನೋಸರ್‌ಗಳು ಹಾಗೂ ಆ ಕುಲಕ್ಕೆ ಸೇರಿದ ಇತರ ಪ್ರಾಣಿಗಳು ಸಂಪೂರ್ಣವಾಗಿ ಅಳಿದಿದ್ದವು. ಇದಕ್ಕೆ ಕಾರಣ, ಕ್ಷುದ್ರಗ್ರಹ ಅಥವಾ ಧೂಮಕೇತು ಭೂಮಿಗೆ ಅಪ್ಪಳಿಸಿದ್ದು ಎಂದು ಹೇಳಲಾಗುತ್ತಿದೆ. 

ಒಂದು ಕಿ.ಮೀಕ್ಕಿಂತ ಹೆಚ್ಚು ಅಗಲದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಜಾಗತಿಕ ಮಟ್ಟದಲ್ಲಿ ಮಹಾ ವಿನಾಶ ಸಂಭವಿಸಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಪ್ರತಿ ಐದು ಲಕ್ಷ ವರ್ಷಗಳಿಗೊಮ್ಮೆ ಇಂತಹ ವಿದ್ಯಮಾನ ಘಟಿಸಬಹುದು ಎಂಬ ಲೆಕ್ಕಾಚಾರ ಖಗೋಳ ವಿಜ್ಞಾನ ಕ್ಷೇತ್ರದಲ್ಲಿದೆ. 

140 ಮೀಟರ್‌ ಅಂದರೆ 460 ಅಡಿ ಅಗಲದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೂ ಸಾಕು; ಪ್ರಮುಖ ನಗರ ಅಥವಾ ವಿಸ್ತಾರವಾದ ಪ್ರದೇಶ ಸರ್ವನಾಶ ಮಾಡಬಲ್ಲುದು. ಪ್ರತಿ 20 ಸಾವಿರ ವರ್ಷಗಳಿಗೊಮ್ಮೆ ಇಂತಹ ಘಟನೆ ಜರುಗಬಹುದು ಎಂಬುದು ವಿಜ್ಞಾನಿಗಳ ಊಹೆ. 

ಯಾವುದಾದರೂ ಕ್ಷುದ್ರಗ್ರಹ ಅಥವಾ ಧೂಮಕೇತು ಭೂಮಿಗೆ ಅಪ್ಪಳಿಸುವ ಸಂದರ್ಭ ಇದ್ದರೆ ಅದನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ಖಗೋಳ ವಿಜ್ಞಾನಿಗಳು ದಶಕಕ್ಕೂ ಹೆಚ್ಚು ಸಮಯದಿಂದ ಅಧ್ಯಯನ ನಡೆಸುತ್ತಿದ್ದಾರೆ. ಐದಾರು ವರ್ಷಗಳಿಂದ ಈ ಪ್ರಯತ್ನಕ್ಕೆ ಸ್ಪಷ್ಟ ರೂಪುರೇಷೆ ಸಿಕ್ಕಿದೆ. ಆಕಾಶಕಾಯಗಳಿಂದ ವಸುಂಧರೆಯನ್ನು ರಕ್ಷಿಸುವ ಪ್ರಯತ್ನಕ್ಕೆ ಮೊದಲ ಯಶಸ್ಸು ಕೂಡ ಸಿಕ್ಕಿದೆ. ‘ಹೀರಾ’ ಯೋಜನೆ ಈ ಪ್ರಯತ್ನದ ಮುಂದುವರಿದ ಭಾಗ.

ಏನದು ಮೊದಲ ಯಶಸ್ಸು?

ನಾಸಾವು, ಭೂಮಿಯಿಂದ 1.1 ಕೋಟಿ ಕಿ.ಮೀ ದೂರದಲ್ಲಿದ್ದ ಡಿಮೊರ್ಫೊಸ್‌ ಎಂಬ ಪುಟ್ಟದಾದ ಕ್ಷುದ್ರ ಗ್ರಹಕ್ಕೆ ಫ್ರಿಜ್‌ ಗಾತ್ರದ ನೌಕೆಯನ್ನು (ಇಂಪ್ಯಾಕ್ಟರ್‌) 2022ರ ಸೆ.26ರಂದು ಡಿಕ್ಕಿ ಹೊಡೆಸಿತ್ತು. ಇದು ಒಂದು ಪರೀಕ್ಷೆ. ಅದನ್ನು ‘ಡಾರ್ಟ್‌’ (ಡಬಲ್‌ ಆಸ್ಟಿರಾಯ್ಡ್‌ ರಿಡೈರೆಕ್ಷನ್‌ ಟೆಸ್ಟ್) ಎಂದು ಕರೆಯಲಾಗಿದೆ. ಮಾನವ ನಿರ್ಮಿತ ನೌಕೆಯನ್ನು ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿ, ಕ್ಷುದ್ರಗ್ರಹದ ಕಕ್ಷೆಯನ್ನು ಬದಲಾಯಿಸುವುದು ಈ ಪರೀಕ್ಷೆಯ ಉದ್ದೇಶ. ಇದು ಒಂದು ಹಂತಕ್ಕೆ ಯಶಸ್ವಿಯಾಗಿದೆ.  

ಡಿಮೊರ್ಫೊಸ್‌ 525 ಅಡಿ ವ್ಯಾಸದ (160) ಮೀಟರ್‌ನ ಪುಟ್ಟ ಕ್ಷುದ್ರಗ್ರಹ. 2003ರಲ್ಲಿ ಇದನ್ನು ಪತ್ತೆ ಮಾಡಲಾಗಿತ್ತು. ಈ ಕ್ಷುದ್ರಗ್ರಹವು ಡಿಡೈಮಸ್‌ ಎಂಬ ಇನ್ನೊಂದು ಕ್ಷುದ್ರಗ್ರಹದ ನೈಸರ್ಗಿಕ ಉಪಗ್ರಹ (ಭೂಮಿಗೆ ಚಂದ್ರ ಇದ್ದಂತೆ). ಡಿಡೈಮಸ್‌ ಕೂಡ ಚಿಕ್ಕದೇ. 780 ಮೀಟರ್‌ ವ್ಯಾಸವನ್ನು ಹೊಂದಿರುವ ಇದನ್ನು1996ರಲ್ಲಿ ಗುರುತಿಸಲಾಗಿತ್ತು. ಡಿಮೊರ್ಫೊಸ್‌ ಕ್ಷುದ್ರಗ್ರಹವು ಡಿಡೈಮಸ್‌ ಸುತ್ತ ನಿರ್ದಿಷ್ಟ ಕಕ್ಷೆಯಲ್ಲಿ ಸುತ್ತುತ್ತಿದೆ. 

ನಾಸಾವು ನೌಕೆಯನ್ನು ಡಿಕ್ಕಿ ಹೊಡೆಸಿದ ಬಳಿಕ ಡಿಮೊರ್ಪೊಸ್‌ನ ಕಕ್ಷೆಯಲ್ಲಿ ಬದಲಾವಣೆಯಾಗಿದೆ.

2022ರ ಸೆ.26ರ ಮೊದಲು ಈ ಕ್ಷುದ್ರಗ್ರಹವು ಡಿಡೈಮಸ್‌ಗೆ ಒಂದು ಸುತ್ತು ಬರಲು 11 ಗಂಟೆ 55 ನಿಮಿಷ ತೆಗೆದುಕೊಳ್ಳುತ್ತಿತ್ತು. ಆದರೆ, ‘ಡಾರ್ಟ್‌’ ಪರೀಕ್ಷೆಯ ನಂತರ ಈ ಅವಧಿ 11 ಗಂಟೆ 23 ನಿಮಿಷಗಳಿಗೆ ಇಳಿದಿದೆ. ಅಂದರೆ, ಮೊದಲಿಗಿಂತ 32 ನಿಮಿಷಗಳಷ್ಟು ಕಡಿಮೆ ಸಮಯದಲ್ಲಿ ಒಂದು ಸುತ್ತು ಹಾಕುತ್ತದೆ. ಕ್ಷುದ್ರಗ್ರಹದ ಕಕ್ಷೆ ಬದಲಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ. 

ನಾಸಾ ವಿಜ್ಞಾನಿಗಳ ಯೋಚನೆ ಏನು ಎಂಬುದು ನಿಮಗೆ ಅರ್ಥವಾಗಿರಬಹುದು. ಒಂದು ವೇಳೆ ಯಾವುದಾದರೂ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಂದರ್ಭ ಬಂದರೆ, ಅಂತಹ ಕ್ಷುದ್ರಗ್ರಹವನ್ನು ಮೊದಲೇ ಗುರುತಿಸಿ ಅದರ ಕಕ್ಷೆಯನ್ನು ಬದಲಾಯಿಸುವುದು ಯೋಜನೆ. ಅದು ಕಾರ್ಯಸಾಧುವೇ ಎಂಬುದನ್ನು ಪರೀಕ್ಷಿಸಲು ನಡೆಸಿದ್ದೇ ‘ಡಾರ್ಟ್‌‘ ಪ್ರಯೋಗ. 

‘ಹೀರಾ’ ಏನು ಮಾಡುತ್ತದೆ?

ಸೋಮವಾರ ನಭಕ್ಕೆ ಚಿಮ್ಮಿದ ‘ಹೀರಾ’ ನೌಕೆಯು ಡಿಮೊರ್ಫೊಸ್‌ ಕ್ಷುದ್ರಗ್ರಹದ ಬಳಿ ತೆರಳಿ, ಅಲ್ಲಿ ಅಧ್ಯಯನ ನಡೆಸಲಿದೆ. ಇದೊಂದು ರೀತಿ, ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರು ನಡೆಸುವ ತನಿಖೆಯಂತೆ. ಕ್ಷುದ್ರ ಗ್ರಹಕ್ಕೆ ಅಪ್ಪಳಿಸಿದ ನೌಕೆ ಮಾಡಿರುವ ಪರಿಣಾಮವೇನು? ಅಪ್ಪಳಿಸಿದ ರಭಸಕ್ಕೆ ಕುಳಿ ನಿರ್ಮಾಣವಾಗಿದೆಯೇ ಅಥವಾ ಕ್ಷುದ್ರಗ್ರಹದ ಸ್ವರೂಪವನ್ನು ಬದಲಾಯಿಸಿದೆಯೇ ಎಂಬ ಮಾಹಿತಿಗಳನ್ನು ‘ಹೀರಾ’ ಭೂಮಿಗೆ ಮಾಹಿತಿ ರವಾನಿಸಲಿದೆ. ಈ ನೌಕೆಯೊಂದಿಗೆ ಎರಡು ಮಿನಿ ಉಪಗ್ರಹಗಳು ಕೂಡ ಇವೆ. 

ನೌಕೆಯು 2026ರ ಅಂತ್ಯದ ವೇಳೆಗೆ ಡಿಮೊರ್ಫೊಸ್‌ ಬಳಿ ತಲುಪಲಿದೆ. ಆ ಸಂದರ್ಭದಲ್ಲಿ ಅದು ಭೂಮಿಯಿಂದ 1.95 ಕೋಟಿ ಕಿ.ಮೀಗಳಷ್ಟು ದೂರದಲ್ಲಿರಲಿದೆ.  ಜರ್ಮನಿಯ ವಿಜ್ಞಾನಿಗಳು ನೌಕೆಯ ಪ್ರಯಾಣದ ಮೇಲ್ವಿಚಾರಣೆ ನಡೆಸಲಿದ್ದಾರೆ. ನೌಕೆಯು ಆರು ತಿಂಗಳ ಕಾಲ ಕ್ಷುದ್ರಗ್ರಹದ ಆಗಸದಲ್ಲಿದ್ದುಕೊಂಡು, ಅದರ, ಗಾತ್ರ, ಸ್ವರೂಪ, ಕಕ್ಷೆ ಸೇರಿದಂತೆ ಚಲನವಲನಗಳ ಮೇಲೆ ನಿಗಾ ಇಡಲಿದೆ. ಬಳಿಕ ನೌಕೆಯಲ್ಲಿರುವ ಪುಟ್ಟ ಉಪಗ್ರಹಗಳು ಕ್ಷುದ್ರಗ್ರಹದ ಇನ್ನಷ್ಟು ಸಮೀಪಕ್ಕೆ ತೆರಳಿ ಮಾಹಿತಿ ಕಲೆಹಾಕಲಿವೆ. ಸಮೀಕ್ಷಾ ಕಾರ್ಯ ಮುಗಿದ ಬಳಿಕ ಕ್ಷುದ್ರಗ್ರಹದಲ್ಲಿ ಇಳಿಯಲೂ ಯತ್ನಿಸಲಿವೆ.  

ಅಂದ ಹಾಗೆ, ಭೂಮಿಗೆ ಹತ್ತಿರದಲ್ಲಿ 36 ಸಾವಿರದಷ್ಟು ಕ್ಷುದ್ರಗ್ರಹಗಳು/ಧೂಮಕೇತುಗಳು ಇವೆ. ನಾಸಾದ ಪ್ರಕಾರ, ಇವುಗಳಲ್ಲಿ 2,400 ರಷ್ಟು ಆಕಾಶಕಾಯಗಳು ಭೂಮಿಗೆ ಆಪತ್ತು ಉಂಟು ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.