ADVERTISEMENT

ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲುವುದು ಏಕೆ?

ಸೂರ್ಯನಾರಾಯಣ ವಿ.
Published 23 ಅಕ್ಟೋಬರ್ 2024, 0:53 IST
Last Updated 23 ಅಕ್ಟೋಬರ್ 2024, 0:53 IST
   

ಘಟನೆ 1: ಅಕ್ಟೋಬರ್‌ 14ರಂದು ಏರ್‌ ಇಂಡಿಯಾದ ಬೋಯಿಂಗ್‌ 777 ವಿಮಾನ ಮುಂಬೈನಿಂದ ಅಮೆರಿಕದ  ನ್ಯೂಯಾರ್ಕ್‌ಗೆ ಹೊರಟಿತ್ತು. 16 ಗಂಟೆಗಳ ಸುದೀರ್ಘ ಪ್ರಯಾಣಕ್ಕಾಗಿ ಬೇಕಾದಷ್ಟು (130 ಟನ್‌) ಇಂಧನವನ್ನು ತುಂಬಿಕೊಂಡು ಪ್ರಯಾಣ ಆರಂಭಿಸಿತ್ತು. ಟೇಕ್‌ಆಫ್‌ ಆದ ಸ್ವಲ್ಪ ಹೊತ್ತಿನಲ್ಲಿ ವಿಮಾನದಲ್ಲಿ ಬಾಂಬ್‌ ಇದೆ ಎಂಬ ಕರೆ ಬರುತ್ತದೆ. ವಿಮಾನದಲ್ಲಿದ್ದ 200 ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ವಿಮಾನವನ್ನು ತುರ್ತಾಗಿ ಇಳಿಸುವುದು ಅನಿವಾರ್ಯವಾಗುತ್ತದೆ. ‍ಪ್ರಯಾಣದ ಮಾರ್ಗವನ್ನು ದೆಹಲಿಯತ್ತ ತಿರುಗಿಸಿದ ವಿಮಾನ, ಅಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವುದಕ್ಕೂ ಮುನ್ನ ಆಗಸದಲ್ಲಿಯೇ 100 ಟನ್‌ಗಳಷ್ಟು ಇಂಧನವನ್ನು ಹೊರಚೆಲ್ಲಿತು. 

ಘಟನೆ 2: ಅಕ್ಟೋಬರ್‌ 11ರಂದು ತಮಿಳುನಾಡಿನ ತಿರುಚಿನಾಪಳ್ಳಿಯಿಂದ ಶಾರ್ಜಾಕ್ಕೆ ಹೊರಟಿದ್ದ 141 ಪ್ರಯಾಣಿಕರಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಟೇಕ್‌ಆಫ್‌ ಆಗುತ್ತಿದ್ದಂತೆಯೇ ವಿಮಾನದ ಲ್ಯಾಂಡಿಂಗ್‌ ಗೇರ್‌ನ (ಭೂಸ್ಪರ್ಶ ಮಾಡುವಾಗ ಚಕ್ರಗಳು ಹೊರಬರುವ ವ್ಯವಸ್ಥೆ) ಹೈಡ್ರೋಲಿಕ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿಯೇ ತುರ್ತು ಭೂಸ್ಪರ್ಶ ಮಾಡುವುದಕ್ಕೂ ಮೊದಲು, ವಿಮಾನದಲ್ಲಿದ್ದ ಇಂಧನವನ್ನು ಖಾಲಿ ಮಾಡುವುದಕ್ಕಾಗಿ ವಿಮಾನ ಎರಡೂವರೆ ಗಂಟೆಗೂ ಹೆಚ್ಚು ಕಾಲ ಆಗಸದಲ್ಲಿ ಹಾರಾಡಿತು. 

ಎರಡೂ ಘಟನೆಗಳಲ್ಲಿ ವಿಮಾನದ ಇಂಧನ ವ್ಯರ್ಥವಾಯಿತಲ್ಲಾ? ಇಂಧನ ದುಬಾರಿಯಾಗಿರುವ ಈ ಕಾಲದಲ್ಲಿ ಪೈಲಟ್‌ಗಳು ಮನಸ್ಸು ಮಾಡಿದ್ದರೆ ಟನ್‌ಗಟ್ಟಲೆ ಇಂಧನ ಉಳಿಸಬಹುದಿತ್ತಲ್ಲಾ ಎಂಬ ಯೋಚನೆ ಬರುವುದು ಸಹಜ. ಆದರೆ, ಇಂಧನ ಚೆಲ್ಲಿರುವುದು ಮತ್ತು ವಿಮಾನ ಸುಮ್ಮನೆ ಹಾರಾಡುತ್ತಾ ಇಂಧನ ವ್ಯಯಿಸಿರುವುದರ ಹಿಂದೆ ವಿಜ್ಞಾನ ಇದೆ. ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯ ಸುರಕ್ಷತೆಯ ಕಾಳಜಿಯೂ ಇದೆ.

ADVERTISEMENT

ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲುವುದು ಏಕೆ? ಉತ್ತರ ತುಂಬಾ ಸರಳ. ವಿಮಾನದ ತೂಕ ಇಳಿಸುವುದಕ್ಕಾಗಿ! ಕೆಲವು ವಿಮಾನಗಳ ವಿನ್ಯಾಸ ಹೇಗಿರುತ್ತದೆ ಎಂದರೆ, ಅವುಗಳು ಟೇಕ್‌ ಆಫ್‌ ಆಗುವಾಗ ಹೆಚ್ಚು ತೂಕ ಇದ್ದರೂ ತೊಂದರೆ ಇಲ್ಲ. ಆದರೆ, ಇಳಿಯುವಾಗ ಕಡಿಮೆ ತೂಕ ಇರಬೇಕು. ಟೇಕ್‌ ಆಫ್‌ ಆಗುವಾಗ ಇದ್ದ ವಿಮಾನದ ಭಾರಕ್ಕೆ ಹೋಲಿಸಿದರೆ, ಲ್ಯಾಂಡಿಂಗ್‌ ಆಗುವಾಗ ಅದರ ಭಾರ 90,909 ಕೆಜಿಯಷ್ಟು ಕಡಿಮೆ ಇರಬೇಕು. ವಿಮಾನ ಹಗುರ ಇದ್ದಷ್ಟೂ ವಿಮಾನದ ಇಳಿಯುವಿಕೆ ಸುರಕ್ಷಿತವಾಗಿರುತ್ತದೆ ಎಂಬುದು ಇದರ ಹಿಂದಿರುವ ವೈಜ್ಞಾನಿಕ ತರ್ಕ. ಹೆಚ್ಚು ತೂಕ ಇದ್ದರೆ ನೆಲ ಸ್ಪರ್ಶಿಸುವಾಗ ವಿಮಾನದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ವಿಮಾನಕ್ಕೆ ಹಾನಿಯೂ ಆಗಬಹುದು, ಪ್ರಯಾಣಿಕರ ಸುರಕ್ಷತೆಗೂ ಧಕ್ಕೆಯಾಗಬಹುದು.  

ಒಂದನೇ ಘಟನೆಯಲ್ಲಿ ಪ್ರಸ್ತಾಪಿಸಿರುವ ಏರ್‌ ಇಂಡಿಯಾ ವಿಮಾನ 16 ಗಂಟೆಗಳ ದೀರ್ಘ ಪ್ರಯಾಣಕ್ಕಾಗಿ 130 ಟನ್‌ಗಳಷ್ಟು ಇಂಧನವನ್ನು ಹೊಂದಿತ್ತು. ವಿಮಾನದ ತೂಕ, ಪ್ರಯಾಣಿಕರು, ಸರಕುಗಳು ಮತ್ತು ಇಂಧನ ಸೇರಿದಂತೆ ವಿಮಾನದ ಒಟ್ಟು ತೂಕ ಟೇಕ್‌ ಆಫ್‌ ಹೊತ್ತಿನಲ್ಲಿ 350 ಟನ್‌ಗಳಿಷ್ಟಿತ್ತು (3.50 ಲಕ್ಷ ಕೆಜಿ). ನ್ಯೂಯಾರ್ಕ್‌ ತಲುಪುವ ಹೊತ್ತಿಗೆ ಇಂಧನ ಖರ್ಚಾಗಿ, ವಿಮಾನದ ತೂಕ ಸುರಕ್ಷಿತವಾಗಿ ಇಳಿಯಲು ಬೇಕಾದ ಹಂತಕ್ಕೆ ಬರುತ್ತದೆ ಎಂಬುದು ಲೆಕ್ಕಾಚಾರ. ಮೊನ್ನೆ ಟೇಕ್‌ ಆಫ್‌ ಆದ ತಕ್ಷಣವೇ ಹುಸಿ ಬಾಂಬ್‌ ಬೆದರಿಕೆ ಕರೆ ಬಂದಿದ್ದರಿಂದ ತುರ್ತಾಗಿ ವಿಮಾನವನ್ನು ಇಳಿಸಬೇಕಾಗಿತ್ತು. ಇದಕ್ಕೆ ಅದರ ಒಟ್ಟಾರೆ ತೂಕ 90,999 ಕೆಜಿಯಷ್ಟು ತೂಕ ಕಡಿಮೆ ಇರಬೇಕಿತ್ತು. ಅದಕ್ಕಾಗಿ ಆಗಸದಲ್ಲಿಯೇ 100 ಟನ್‌ಗಳಷ್ಟು (ಒಂದು ಲಕ್ಷ ಕೆಜಿ) ಇಂಧನವನ್ನು ಹೊರ ಚೆಲ್ಲುವ ನಿರ್ಧಾರವನ್ನು ಪೈಲಟ್‌ ಕೈಗೊಂಡರು. 

ಎರಡನೇ ಘಟನೆಯಲ್ಲಿ ವಿಮಾನ ಎರಡೂವರೆ ಗಂಟೆಗೂ ಹೆಚ್ಚು ಹೊತ್ತು ಆಗಸದಲ್ಲಿ ಹಾರಾಡಿದ್ದು ಕೂಡ ತೂಕ ಕಡಿಮೆಮಾಡುವುದಕ್ಕಾಗಿಯೇ. ತಿರುಚಿನಾಪಳ್ಳಿಯ ರನ್‌ವೇ ಕೂಡ ಚಿಕ್ಕದು. ಲ್ಯಾಂಡಿಂಗ್‌ ಗೇರ್‌ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೇ ಇದ್ದುದರಿಂದ, ವಿಮಾನದ ಭಾರ ಹೆಚ್ಚಿದ್ದರೆ ತುರ್ತು ಭೂಸ್ಪರ್ಶದ ಸಂದರ್ಭದಲ್ಲಿ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ವಿಮಾನವನ್ನು ಆಗಸದಲ್ಲಿ ಸುತ್ತಾಡಿಸುತ್ತಾ ಇಂಧನ ಖಾಲಿ ಮಾಡುವ ತೀರ್ಮಾನವನ್ನು ಪೈಲಟ್ ತೆಗೆದುಕೊಂಡರು. ಅದೃಷ್ಟವಶಾತ್‌ ರಾತ್ರಿ 8.15ರ ಹೊತ್ತಿಗೆ ತುರ್ತು ಭೂಸ್ಪರ್ಶ ಮಾಡುವಾಗ ಲ್ಯಾಂಡಿಂಗ್‌ ಗೇರ್‌ ಸಮರ್ಪಕವಾಗಿ ಕೆಲಸ ಮಾಡಿದ್ದರಿಂದ ಎಲ್ಲ ಆತಂಕ ದೂರವಾಯಿತು.

ತುರ್ತು ಸಂದರ್ಭಕ್ಕಷ್ಟೇ ಸೀಮಿತ ‌

ತುರ್ತು ಸಂದರ್ಭಗಳಲ್ಲಿ ಮಾತ್ರ ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲಲಾಗುತ್ತದೆ ಅಥವಾ ಇಂಧನ ಖಾಲಿ ಮಾಡಲು ಆಗಸದಲ್ಲಿ ವಿಮಾನವನ್ನು ಹಾರಾಡಿಸಲಾಗುತ್ತದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ವಿಮಾನ ಹೆಚ್ಚು ತೂಕ ಇದ್ದರೂ  ಇಳಿಸಲಾಗುತ್ತದೆ.

ಆಗಸದಲ್ಲಿ ಇಂಧನ ಚೆಲ್ಲುವುದರಿಂದ ಭೂಮಿಗೆ ಯಾವುದೇ ಅಪಾಯ ಇಲ್ಲ. ಸಾಮಾನ್ಯವಾಗಿ 5,000 ಅಡಿಗೂ ಹೆಚ್ಚು ಎತ್ತರದಲ್ಲಿ ಇಂಧನವನ್ನು ಹೊರ ಚೆಲ್ಲಲಾಗುತ್ತದೆ. ಅದು ಭೂಮಿಗೆ ತಲುಪುವುದಕ್ಕೆ ಮೊದಲೇ ಆವಿಯಾಗಿ ಹೋಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.