ADVERTISEMENT

ಮತ್ತೆ ಮತ್ತೆ ಬಳಸಬಹುದಾದ ರಾಕೆಟ್‌ಗಳು

ಪ್ರಜಾವಾಣಿ ವಿಶೇಷ
Published 25 ಏಪ್ರಿಲ್ 2023, 18:30 IST
Last Updated 25 ಏಪ್ರಿಲ್ 2023, 18:30 IST
ಇಸ್ರೋ ಇತ್ತೀಚೆಗೆ ಚಿತ್ರದುರ್ಗದಲ್ಲಿ ಪರೀಕ್ಷಿಸಿದ್ದ ಮರುಬಳಕೆಯ ರಾಕೆಟ್‌
ಇಸ್ರೋ ಇತ್ತೀಚೆಗೆ ಚಿತ್ರದುರ್ಗದಲ್ಲಿ ಪರೀಕ್ಷಿಸಿದ್ದ ಮರುಬಳಕೆಯ ರಾಕೆಟ್‌    ಪಿಟಿಐ

ಬಿ. ಆರ್‌. ಗುರುಪ್ರಸಾದ್‌

ಮಾನವನ ಶತ ಶತಮಾನದ ಕನಸಾದ ಅಂತರಿಕ್ಷಯಾನವನ್ನು ಸಾಧ್ಯಮಾಡಿದ ತಾಂತ್ರಿಕ ಸಾಧನವೇ ರಾಕೆಟ್. ಕೃತಕ ಭೂ ಉಪಗ್ರಹಗಳನ್ನು, ರೋಬಾಟ್ ಅಂತರಿಕ್ಷನೌಕೆಗಳನ್ನು ಹಾಗೂ ಮಾನವರಿರುವ ಅಂತರಿಕ್ಷನೌಕೆಗಳನ್ನು ಭೂಕಕ್ಷೆಗೆ ಅಥವಾ ಇತರ ಆಕಾಶಕಾಯಗಳತ್ತ ಈ ಮೊದಲು ಉಡಾಯಿಸಿರುವುದು ಹಾಗೂ ಇಂದಿಗೂ ಉಡಾಯಿಸುತ್ತಿರುವುದು ರಾಕೆಟ್ ವಾಹನಗಳೇ.

ಆದರೆ ಇತ್ತೀಚಿನ ವರ್ಷಗಳವರೆಗೂ ಉಪಗ್ರಹಗಳನ್ನು ಹಾಗೂ ಅಂತರಿಕ್ಷನೌಕೆಗಳನ್ನು ಉಡಾಯಿಸುವ ರಾಕೆಟ್ಟುಗಳು ಸಂಕೀರ್ಣವಾದ ಸಾಧನಗಳಾಗಿರುವುದರೊಂದಿಗೇ ಅವುಗಳನ್ನು ಒಮ್ಮೆ ಮಾತ್ರ ಯಾನಕ್ಕೆ ಬಳಸಬಹುದಾಗಿತ್ತು. ಯಾನದ ನಡುವೆ ತಮ್ಮ ಕೆಲಸ ಮುಗಿದ ರಾಕೆಟ್ ಹಂತಗಳು ವಾಹನದ ಇತರ ಭಾಗಗಳಿಂದ ಕಳಚಿಬಿದ್ದು ಭೂಮಿಯನ್ನು ತಲುಪುವುದಕ್ಕೆ ಮೊದಲೇ ಬಹುಮಟ್ಟಿಗೆ ಉರಿದು ಬೂದಿಯಾಗುತ್ತಿದ್ದವು. ತಾನು ಹೊತ್ತ ಉಪಗ್ರಹ ಇಲ್ಲವೇ ಅಂತರಿಕ್ಷನೌಕೆಯನ್ನು ಕಕ್ಷೆಗೆ ಕೊಂಡೊಯ್ದ ನಂತರ ಉಡಾವಣಾ (ರಾಕೆಟ್) ವಾಹನದ ಕೊನೆಯ ಹಂತದ ಕೆಲಸವೂ ಮುಗಿದು ಅದೂ ಸಹ ನಂತರ ಮತ್ತೆ ಪ್ರಯೋಜನಕ್ಕೆ ಬರುತ್ತಿರಲಿಲ್ಲ. ಇದಕ್ಕೆ ಬದಲಾಗಿ ಅದು ‘ಅಂತರಿಕ್ಷ ಕಸ’ವಾಗಿ ಭೂಮಿಯನ್ನು ಸುತ್ತುತ್ತಿತ್ತಷ್ಟೆ. ಈ ಕಾರಣದಿಂದಾಗಿ ರಾಕೆಟ್‌ಗಳ ನಿರ್ಮಾಣ ಅತ್ಯಂತ ದುಬಾರಿಯಾಗಿದ್ದು ವಿವಿಧ ಬಗೆಯ ಅಂತರಿಕ್ಷ ಕಾರ್ಯಕ್ರಮಗಳನ್ನು ಬಹುಮಟ್ಟಿಗೆ ಸರ್ಕಾರಗಳು ಮಾತ್ರ ನಡೆಸುತ್ತಿದ್ದವು.

ADVERTISEMENT
ಮರುಬಳಕೆಯ ರಾಕೆಟ್‌ ಪರೀಕ್ಷೆಯ ಹಂತಗಳು

1957ರಲ್ಲಿ ಅಂತರಿಕ್ಷಯುಗ ಆರಂಭವಾದ ಸುಮಾರು ಎರಡು ದಶಕಗಳ ಕಾಲ ಬಹುಮಟ್ಟಿಗೆ ಯಾರೂ ಮರುಪಯೋಗಕ್ಕೆ ಬರುವ ರಾಕೆಟ್ ಗಳ ಬಗ್ಗೆ ಹೆಚ್ಚು ಪ್ರಾಮುಖ್ಯವನ್ನು ನೀಡಲಿಲ್ಲ. ಏಕೆಂದರೆ ಆ ತಂತ್ರಜ್ಞಾನ ಅಷ್ಟು ಸಂಕೀರ್ಣವಾದುದು. ಜೊತೆಗೇ ಅಂತರಿಕ್ಷಕ್ಕೆ ತೆರಳುವುದು ಮತ್ತು ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಿ ಬರುವುದು ಮಾತ್ರ ಅಂದಿನ ಗುರಿಯಾಗಿದ್ದು ಅದರ ಬಗ್ಗೆ ಮಾತ್ರ ವಿಜ್ಞಾನಿ ಹಾಗೂ ಇಂಜಿನಿಯರ್ ಗಳು ಹೆಚ್ಚಿನ ಗಮನ ಹರಿಸಿದ್ದರು.

ಈ ಪರಿಸ್ಥಿತಿಯಲ್ಲಿ ಅಮೆರಿಕಾ 1980ರ ದಶಕದ ಆದಿಯಲ್ಲಿ ತನ್ನ ‘ಅಂತರಿಕ್ಷ ಶಟಲ್’ ಎಂಬ ರಾಕೆಟ್ ವಾಹನವನ್ನು ಯಾನಕ್ಕೆ ಸಿದ್ಧಗೊಳಿಸಿತು. ಆ ಶಟಲ್ ಮರುಪಯೋಗಿಯಾಗಿದ್ದು ಅಂತರಿಕ್ಷಕ್ಕೆ ತೆರಳಲು ಅಗತ್ಯವಾಗುವ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ ಎಂದು ಬಿಂಬಿಸಲಾಯಿತು. ಮೂರು ದಶಕಗಳ ಅದರ ಅಸ್ಥಿತ್ವದ ಆವಧಿಯಲ್ಲಿ ಶಟಲ್ ಅಂತರಿಕ್ಷಯಾನಕ್ಕೆ ಸಂಬಂಧಿಸಿದಂತೆ ಗಮನಾರ್ಹವಾದ ಬೆಳವಣಿಗೆಯನ್ನು ತಂದರೂ ಅಂತರಿಕ್ಷಯಾನಕ್ಕೆ ತಗಲುವ ವೆಚ್ಚವನ್ನು ತಗ್ಗಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ಬದಲಾಗಿ ಆ ವಾಹನವನ್ನು ಯಾನಕ್ಕೆ ಸಿದ್ಧಗೊಳಿಸಿ ಉಡಾಯಿಸಿ ನಿರ್ವಹಿಸುವುದೇ ತಾಂತ್ರಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಅಮೆರಿಕಾಕ್ಕೆ ಬಹಳ ಕಷ್ಟಕರವಾಗಿ ಪರಿಣಮಿಸಿತು.


ಹೀಗಾಗಿ ಅಂತರಿಕ್ಷ ಶಟಲ್‌ನ ಕಾರ್ಯಕ್ರಮವನ್ನು 2011ರಲ್ಲಿ ಅಮೆರಿಕಾ ಅಂತ್ಯಗೊಳಿಸಿತು.
ಆದರೆ 21ನೇ ಶತಮಾನದ ಎರಡನೇ ದಶಕದಿಂದ ಪರಿಸ್ಥಿತಿ ಬದಲಾಗಲಾರಂಭಿಸಿತು. ಅಮೆರಿಕಾದ ಖಾಸಗಿ ಸಂಸ್ಥೆ ‘ಸ್ಪೇಸ್ ಎಕ್ಸ್’ ಭಾಗಶಃ ಮರುಪಯೋಗಕ್ಕೆ ಬರುವ ‘ಫಾಲ್ಕನ್ 9’ ಮತ್ತು ‘ಫಾಲ್ಕನ್ ಹೆವಿ’ ಉಡಾವಣಾ ವಾಹನಗಳನ್ನು ಯಶಸ್ವಿಯಾಗಿ ನಿರ್ಮಿಸಿ ಉಪಗ್ರಹಗಳ ಉಡಾವಣೆಗೆ ಅದನ್ನು ಕ್ರಮಬದ್ಧವಾಗಿ ಬಳಸಿಕೊಳ್ಳಲಾರಂಭಿಸಿತು. ಆ ಸಂಸ್ಥೆಯ ಹಾಗೂ ‘ಟಸ್ಲಾ’ ಸಂಸ್ಥೆಯ (ನಂತರ ‘ಟ್ವಿಟರ್’ ಸಂಸ್ಥೆಯ) ಒಡೆಯರಾದ ಇಲಾನ್ ಮಸ್ಕ್‌ರ ಛಲಬಿಡದ ತ್ರಿವಿಕ್ರಮನಂತಹ ನಡೆಯಿಂದ ಉಪಗ್ರಹ ಹಾಗೂ ಮಾನವರನ್ನು ಹೊತ್ತ ಅಂತರಿಕ್ಷ ನೌಕೆಗಳ ಉಡಾವಣಾ ವೆಚ್ಚ ಸಾಕಷ್ಟು ತಗ್ಗಿತು. ತಮ್ಮ ಕೆಲಸ ಮುಗಿದ ನಂತರ ‘ಫಾಲ್ಕನ್ 9’ ರಾಕೆಟ್‌ನ ಇತರ ಭಾಗಗಳಿಂದ ಬೇರ್ಪಡುವ ಅದರ ಮೊದಲ ಹಂತ ನಿಧಾನವಾಗಿ ಭೂಮಿಗೆ ಬಂದಿಳಿಯುವ ದೃಶ್ಯ ಅದ್ಭುತವಾಗಿರುತ್ತದೆ.

ಭಾರತದ ಪ್ರಯತ್ನ


‘ಇಸ್ರೋ’ ತಾನೂ  ‘ಮರುಪಯೋಗಿ ಉಡಾವಣಾ ವಾಹನ’ (’ರೀ ಯೂಸಬಲ್ ಲಾಂಚ್ ವೆಹಿಕಲ್’)ವನ್ನು ನಿರ್ಮಿಸುವ ಯೋಜನೆಯನ್ನು ಸುಮಾರು ಒಂದೂವರೆ ದಶಕದ ಹಿಂದೆಯೇ ಹಾಕಿಕೊಂಡಿತು. ಈ ನಿಟ್ಟಿನಲ್ಲಿ ಆ ವಾಹನದ ವಿನ್ಯಾಸ ಸಮರ್ಪಕವಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಹಾಗೂ ಅಭಿವೃದ್ದಿಪಡಿಸುತ್ತಿರುವ ತಂತ್ರಜ್ಞಾನಗಳನ್ನು ಪರೀಕ್ಷಿಸಲು,  ಅದಕ್ಕಿಂತ ಚಿಕ್ಕದಾದ ಅಂತಹ ಒಂದು ‘ತಂತ್ರಜ್ಞಾನ ಪ್ರದರ್ಶಕ(ವಾಹನ)’ವನ್ನು ನಿರ್ಮಿಸಿತು. ಇದನ್ನು ಇಂಗ್ಲೀಷಿನಲ್ಲಿ ‘ಆರ್ ಎಲ್ ವಿ-ಟಿ ಡಿ’ ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ.

ಈ  ತಂತ್ರಜ್ಞಾನ ಪ್ರದರ್ಶಕ ದ ಮೊದಲ ಪರೀಕ್ಷಾರ್ಥ ಉಡಾವಣೆ 2016ರ ಮೇ 23ರಂದು ಜರುಗಿತು. ಅದರ ಅಂಗವಾಗಿ ಆ ವಾಹನವನ್ನು ಘನ ನೋದನಕಾರಿಗಳನ್ನು (ಪ್ರೊಪೆಲೆಂಟ್ಸ್) ಉರಿಸುವ ಒಂದು ಪುಟ್ಟ ರಾಕೆಟ್ ನ ಮೇಲೆ ಅಳವಡಿಸಿ ಅದನ್ನು ಅಂತರಿಕ್ಷಕ್ಕೆ ಉಡಾಯಿಸಲಾಯಿತು.  ಅಂತರಿಕ್ಷದಲ್ಲಿ ಕೆಲಕಾಲ ವಿಹರಿಸಿದ ಆ ಪುಟ್ಟ ವಾಹನ ನಂತರ ತನ್ನ ಕಂಪ್ಯೂಟರ್ ಮೆದುಳಿನ ನೆರವಿನಿಂದ ಭೂವಾತಾವರಣವನ್ನು ಪುನಃ ಶರವೇಗದಲ್ಲಿ ಪ್ರವೇಶಿಸಿ, ಅದರೊಳಗಿನ ಯಾನವನ್ನು ಯಶಸ್ವಿಯಾಗಿ ಮುಗಿಸಿ ಬಂಗಾಳಾಕೊಲ್ಲಿಯ ಮೇಲೆ ಬಂದು ಜಲಸ್ಪರ್ಷಮಾಡಿತು. 

ಆ ಯಶಸ್ಸಿನ ಸುಮಾರು ಏಳು ವರ್ಷಗಳ ನಂತರ ಈ ಏಪ್ರಿಲ್ 2ರಂದು 1600 ಕಿಲೋಗ್ರಾಂ ತೂಕದ ಅಂತಹ ಮತ್ತೊಂದು ‘ತಂತ್ರಜ್ಞಾನ ಪ್ರದರ್ಶಕ ವಾಹನ’ವು ತನ್ನನ್ನು ಸುಮಾರು ನಾಲ್ಕೂವರೆ ಕಿಲೋಮೀಟರ್ ಎತ್ತರಕ್ಕೆ ಕೊಂಡೊಯ್ದ ಹೆಲಿಕಾಪ್ಟರ್‌ನಿಂದ ಬೇರ್ಪಟ್ಟು ಆ ನಂತರ ಶರವೇಗದಲ್ಲಿ ಹಾರುತ್ತಾ ಹತ್ತಿರದ ಚಳ್ಳಕೆರೆಯ ವಿಮಾನ ನೆಲೆಯಲ್ಲಿನ ಓಡುದಾರಿಯ ಮೇಲೆ ನಿಖರವಾಗಿ ಬಂದಿಳಿದಿದೆ.  ಸುಮಾರು 30 ನಿಮಿಷಗಳ ಆವಧಿಯ ಈ ಪರೀಕ್ಷೆಯೊಂದಿಗೆ ಆ ವಾಹನದ ಮತ್ತೊಂದು ಸಾಮರ್ಥ್ಯ ಸಾಬೀತಾಗಿದೆ. ಹೀಗೆ ಸ್ವದೇಶದಲ್ಲಿ ಅಭಿವೃದ್ಧಿಪಡಿಸಲ್ಪಟ್ಟ ಅಗತ್ಯವಾದ ಅನೇಕ ತಂತ್ರಜ್ಞಾನಗಳನ್ನು ಪುಟ್ಟ ‘ತಂತ್ರಜ್ಞಾನ ಪ್ರದರ್ಶಕ ವಾಹನ’ಗಳ ನೆರವಿನೊಡನೆ ಪರೀಕ್ಷಿಸಿದ ನಂತರ ಅದಕ್ಕಿಂತ ದೊಡ್ಡದಾದ ‘ಮರುಪಯೋಗಿ ಉಡಾವಣಾ ವಾಹನ’ದ ನಿರ್ಮಾಣ ಪ್ರಾರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.