ಬೆಂಗಳೂರು: ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಟಾಪರ್ ಆದ ವಿದ್ಯಾರ್ಥಿಗಳಲ್ಲಿ ವೈದ್ಯರಾಗಬೇಕು ಎಂಬ ಆಕಾಂಕ್ಷೆ ಸಾಮಾನ್ಯ. ಆದರೆ, ಇವರಲ್ಲಿ ಒಂದಷ್ಟು ಜನ ವೈದ್ಯರಾಗಬಹುದು, ಇನ್ನೊಂದಷ್ಟು ಜನ ಸೀಟು ಸಿಗದೇ ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಎಂ.ಬಿ.ಬಿ.ಎಸ್‌ಗೆ ಸೀಟ್ ಸಿಗದೇ ಇದ್ದರೆ ಜೀವನವೇ ವ್ಯರ್ಥ ಎಂಬ ಭಾವನೆ ಹಲವು ವಿದ್ಯಾರ್ಥಿಗಳಲ್ಲಿದೆ. ಅದು ತಪ್ಪು. ವೈದ್ಯಕೀಯಕ್ಕೆ ಪೂರಕವಾದ ಮತ್ತು ಲಕ್ಷಗಟ್ಟಲೆ ಜೀವಗಳನ್ನು ಬದುಕಿಸಬಹುದಾದ ಔಷಧ ಕಂಡು ಹಿಡಿಯುವುದು, ವಂಶವಾಹಿ ಆಧರಿಸಿದ ಚಿಕಿತ್ಸಾ ವಿಧಾನ ಮತ್ತು ಅದಕ್ಕೆ ಪೂರಕ ತಂತ್ರಜ್ಞಾನ ಕಂಡು ಹಿಡಿಯುವ ಕ್ಷೇತ್ರ ವೈದ್ಯಕೀಯಕ್ಕೂ ಒಂದು ಕೈ ಮಿಗಿಲು ಎನ್ನಬಹುದು.
ಈ ಕಾರಣಕ್ಕೆ ಜೀವ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಕ್ಷೇತ್ರ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದಿದೆ. ಮಾನವ ಕುಲವನ್ನು ಕಾಡುತ್ತಿರುವ ಮಾರಣಾಂತಿಕ ಕಾಯಿಲೆಗಳಿಗೆ ಕಾರಣಗಳು, ಅದಕ್ಕೆ ಚಿಕಿತ್ಸೆ ಮತ್ತು ಔಷಧಗಳನ್ನು ಕಂಡುಹಿಡಿಯುವ ತಪಸ್ಸಿನಲ್ಲಿ ಜಗತ್ತಿನೆಲ್ಲೆಡೆ ಜೀವ ವಿಜ್ಞಾನಿಗಳು ನಿರತರು.
ಬೆಂಗಳೂರಿನಲ್ಲಿ ಇದಕ್ಕೆ ಪೂರಕವಾದ ಎರಡು ಸಂಸ್ಥೆಗಳಿವೆ. ಅವುಗಳೆಂದರೆ, ‘ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್’ ಮತ್ತು ‘ಇನ್‌ಸ್ಟಿಟ್ಯೂಟ್ ಆಫ್ ಬಯೊಇನ್ಫರ್ಮೆಟಿಕ್ಸ್ ಅಂಡ್ ಅಪ್ಲೈಡ್ ಬಯೊ ಟೆಕ್ನಾಲಜಿ’. ಇವುಗಳಿಗೆ ಕರ್ನಾಟಕ ಸರ್ಕಾರದ ಸಹಯೋಗವಿದೆ.
ಮಾನವನನ್ನು ಕಾಡುತ್ತಿರುವ ಸಾಕಷ್ಟು ಕಾಯಿಲೆಗಳಿಗೆ ವಂಶವಾಹಿಯೇ ಮುಖ್ಯ ಕಾರಣ ಎಂಬುದನ್ನು ತಜ್ಞರು ಒಪ್ಪಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಭಾರೀ ಪ್ರಮಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳು ಸ್ಥಾಪನೆಗೊಂಡಿವೆ. ಡಿಎನ್‌ಎ, ವಂಶವಾಹಿ ತಿದ್ದುಪಡಿ ಮೂಲಕ ಸಾಕಷ್ಟು ವಂಶವಾಹಿ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಮಗುವನ್ನು ಪಡೆಯುವುದಕ್ಕೆ ಮೊದಲೇ ದಂಪತಿಯಿಂದ ವಂಶವಾಹಿ ಕಾಯಿಲೆಗಳು ವರ್ಗಾವಣೆ ಆಗುತ್ತವೆಯೇ ಎಂಬುದನ್ನು ಪತ್ತೆ ಮಾಡಿ ಮುನ್ನೆಚ್ಚರಿಕೆ ವಹಿಸಬಹುದು.
ಹ್ಯೂಮನ್ ಜೆನೆಟಿಕ್ಸ್ ಕ್ಷೇತ್ರದಲ್ಲಿ ಈಗ ಸಾಕಷ್ಟು ಹೊಸ ಕವಲುಗಳು ಸೃಷ್ಟಿಯಾಗಿವೆ. ಅವುಗಳೆಂದರೆ, ಫಂಡಮೆಂಟಲ್ ಸೆಲ್, ಮಾಲೆಕ್ಯುಲರ್ ಬಯಾಲಜಿ, ಪಾಪ್ಯುಲೇಷನ್ ಬಯಾಲಜಿ, ಹ್ಯೂಮನ್‌ಜೆನೆಟಿಕ್ಸ್, ಜಿನೋಮಿಕ್ಸ್, ಕ್ಲಿನಿಕಲ್ ಜೆನೆಟಿಕ್ಸ್, ಜೆನೆಟಿಕಲ್ ಕೌನ್ಸೆಲಿಂಗ್, ಬಯೊ ಇನ್ಫರ್ಮೆಟಿಕ್ಸ್, ಸೀಕ್ವೆನ್ಸ್ ಅನಾಲಿಸಿಸ್, ಎನ್‌ಎಸ್‌ಜಿ ಡೇಟಾ ಅನಾಲಿಸಿಸ್, ಸಿಸ್ಟಂ ಬಯಾಲಜಿ, ಅಡ್ವಾನ್ಸಡ್ ಮೆಥಮೆಟಿಕ್ಸ್, ಕೆಮಿಕಲ್ ಇನ್ಫರ್ಮೆಟಿಕ್ಸ್, ಡ್ರಗ್ ಡಿಸ್ಕವರಿ, ಸ್ಟ್ರಕ್ಚರಲ್ ಬಯೊ ಇನ್ಫರ್ಮೆಟಿಕ್ಸ್ ಕೋರ್ಸ್‌ಗಳು ಸಂಶೋಧನೆ ಮತ್ತು ಉದ್ಯೋಗಾವಕಾಶಕ್ಕೆ ದಾರಿ ಮಾಡಿವೆ.
ಕೌತುಕ ಹುಟ್ಟಿಸುವ ಕ್ಷೇತ್ರಕ್ಕೆ ದಾರಿ ಯಾವುದು?
ಈ ಕ್ಷೇತ್ರ ಒಂದು ರೀತಿ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯದು ಎನ್ನಬಹುದು. ವಂಶವಾಹಿ, ಡಿಎನ್‌ಎಗಳ ಇತಿಹಾಸ ಕೆದಕುತ್ತಾ ಹೋದಂತೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಈ ಕೋರ್ಸ್‌ಗಳಿಗೆ ಪಿಯುಸಿ ಬಳಿಕ ಜೀವವಿಜ್ಞಾನ ಮತ್ತು ರಸಾಯನ ವಿಜ್ಞಾನ ಒಳಗೊಂಡ ಬಿಎಸ್ಸಿ ಪದವಿ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಗುಣಮಟ್ಟದ ಕಾಲೇಜುಗಳಲ್ಲಿ ಪದವಿಗೆ ಸೇರಿಕೊಳ್ಳಬಹುದು. ಎಂ.ಎಸ್ಸಿ ಮತ್ತು ಪಿಎಚ್.ಡಿಗೆ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ http://www.chg.res.in ಅಥವಾ ಇನ್ಸ್‌ಟಿಟ್ಯೂಟ್ ಆಫ್ ಬಯೊಇನ್ಫರ್ಮೆಟಿಕ್ಸ್ ಅಂಡ್ ಅಪ್ಲೈಡ್ ಬಯೊಟೆಕ್ನಾಲಜಿಗೆ (http://ibab.ac.in) ಸೇರಿಕೊಳ್ಳಬಹುದು. ಇವೆರಡೂ ಬೆಂಗಳೂರಿನಲ್ಲೇ ಇವೆ. ರಾಜ್ಯ ಸರ್ಕಾರದ ನೆರವೂ ಇದೆ. ಇವುಗಳ ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಟ್ ಆಫ್ ಅಂಕ ಶೇ 50. ಆನ್‌ಲೈನ್‌ನಲ್ಲಿ ವಿವರಗಳು ಲಭ್ಯ.
ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್: ಎಂ.ಎಸ್ಸಿ 2 ವರ್ಷಗಳ ಕೋರ್ಸ್‌ಗೆ ₹1.75 ಲಕ್ಷ
ಇನ್‌ಸ್ಟಿಟ್ಯೂಟ್ ಆಫ್ ಬಯೊಇನ್ಫರ್ಮೆಟಿಕ್ಸ್ ಅಂಡ್ ಅಪ್ಲೈಡ್ ಬಯೊಟೆಕ್ನಾಲಜಿ: ಎಂ.ಎಸ್ಸಿ 2 ವರ್ಷಗಳಿಗೆ ₹ 2.45 ಲಕ್ಷ
ಜೀನ್ ಎಡಿಟಿಂಗ್ ಮತ್ತು ಜೀವಿಯ ಮರು ವಿನ್ಯಾಸ
ಜೀನ್ ಎಡಿಟಿಂಗ್ ಜೀವ ವಿಜ್ಞಾನದ ಜಗತ್ತಿನಲ್ಲಿ ಅತ್ಯಂತ ರೋಚಕ ಕ್ಷೇತ್ರ. ಮಾನವನ ಆರೋಗ್ಯ, ಕಾಯಿಲೆ, ವಂಶವೃದ್ಧಿ, ಮುಪ್ಪು ಮುಂದೂಡುವಿಕೆ, ಕೃಷಿ, ಜಾನುವಾರು ಕ್ಷೇತ್ರಗಳಲ್ಲೂ ವಂಶವಾಹಿ ತಿದ್ದುಪಡಿ ಬಳಕೆ ಆಗಲಿದೆ. ‘ಬ್ರಹ್ಮ ಲಿಖಿತ’ವನ್ನು ಅಳಿಸಿ ಹೊಸ ಬರಹ ಬರೆಯುವ ಹಂತಕ್ಕೆ ಮಾನವ ಮುಟ್ಟಿದ್ದಾನೆ. ಈ ಅಸ್ತ್ರ ಸಿದ್ಧಿಸಿಕೊಳ್ಳ ಬಯಸುವವರಿಗೆ ಜೀವವಿಜ್ಞಾನ ಮತ್ತು ರಸಾಯನ ವಿಜ್ಞಾನ ಪ್ರಥಮ ಸೋಪಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.