ADVERTISEMENT

ಭುಜದ ರಿಪೇರಿಗೆ ‘ಹಲ್ಲು’

ಅಮೃತೇಶ್ವರಿ ಬಿ.
Published 3 ಜುಲೈ 2024, 0:24 IST
Last Updated 3 ಜುಲೈ 2024, 0:24 IST
   

ಹೆಬ್ಬಾವುಗಳು ಎಂದಾಕ್ಷಣ ನಮಗೆಲ್ಲಾ ನೆನಪಾಗುವುದು ಅವು ತನ್ನ ಬೇಟೆ ಪ್ರಾಣಿಯನ್ನು ಭದ್ರವಾಗಿ ಉಸಿರುಗಟ್ಟಿಸುವಂತೆ ಹಿಡಿದು ನಂತರ ಪೂರ್ತಿಯಾಗಿ ನುಂಗಿಬಿಡುವುದು! ಆದರೆ ಅವು ಮೊದಲಿಗೆ ಬೇಟೆಯನ್ನು ತಮ್ಮ ಚೂಪಾದ, ಹಿಮ್ಮುಖವಾಗಿ ಬಾಗಿದ ಹಲ್ಲುಗಳಿಂದ ಬಂಧಿಸಿಕೊಂಡು, ಇತರೆ ಪ್ರಾಣಿಗಳಂತೆ ಹಿಂಸಿಸದೆ, ಅವು ಬಹುತೇಕ ಉಸಿರುಗಟ್ಟಿ ಪ್ರಜ್ಞೆ ತಪ್ಪಿದಾಗ ಗುಳುಂ ಮಾಡಿಬಿಡುತ್ತವೆ. ಹೆಬ್ಬಾವುಗಳ ಹಲ್ಲಿನ ರಚನೆ ಅಷ್ಟು ವಿಶೇಷ, ಸೂಕ್ಷ್ಮ ಮತ್ತು ಬಲಶಾಲಿ. ಇದನ್ನು ತಿಳಿದಿದ್ದ ವೈದ್ಯಕೀಯ ವಿಜ್ಞಾನಿಗಳು ಈ ಹಲ್ಲುಗಳು ಮೃದುವಾದ ಅಂಗಾಂಶಗಳನ್ನು ಕತ್ತರಿಸದಂತೆ ಹಿಡಿದಿಟ್ಟುಕೊಳ್ಳಲು ಸೂಕ್ತವಾಗಿದೆಯೆಂದು ಯೋಚಿಸಿದರು. ಅವರ ಆ ಯೋಚನೆಯೇ ಆ ಹಲ್ಲುಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳುವಂತೆ ಮಾಡಿತು. ಇದನ್ನೇ ‘ಬಯೋಮಿಮಿಕಿಂಗ್’ ಅಥವಾ ‘ಜೈವಿಕ ಅನುಕರಣೆ’ ಎನ್ನುತ್ತೇವೆ. ಹೌದು. ಕೊಲಂಬಿಯಾದ ಇಂಜಿನಿಯರಿಂಗ್ ಮತ್ತು ವೆಜೆಲೊಸ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್‌ನ ಸಂಶೋಧಕರು ಹೆಬ್ಬಾವಿನ ಹಲ್ಲಿನ ರಚನೆಯಂತಹ ವೈದ್ಯಕೀಯ ಸಾಧನವೊಂದನ್ನು ರೂಪಿಸಿದ್ದಾರೆ. ಇದನ್ನು ಮೊನ್ನೆ ‘ಸೈನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ.

ನಮ್ಮ ಭುಜಗಳ ತುದಿಯಲ್ಲಿ ಬುರುಡೆಯಂತಿರುವ ಭಾಗವನ್ನು ‘ರೊಟೇಟರ್ ಕಫ್’ ಎನ್ನುತ್ತೇವೆ. ನಮಗೆ ಕೈಗಳನ್ನು ಆಡಿಸಲು, ಮೇಲೆ ಎತ್ತಲು, ತಿರುಗಿಸಲು ನೆರವಾಗುವ ಈ ಭಾಗದಲ್ಲಿ ಸ್ನಾಯು ಮತ್ತು ನರಗಳು ಕೂಡಿಕೊಂಡು ಮೂಳೆಗೆ ಹೊಂದಿಕೊಂಡಿರುತ್ತವೆ. ವಯಸ್ಸಾಗುತ್ತಿದ್ದಂತೆ ಅಥವಾ ಭುಜಗಳನ್ನು ಹೆಚ್ಚು ಬಳಸುವ ಮರಗೆಲಸ ಮಾಡುವವರು, ಮನೆಗಳಿಗೆ ಬಣ್ಣ ಹಚ್ಚುವವರು, ಟೆನ್ನಿಸ್, ಬೇಸ್ ಬಾಲ್ ಆಡುವವರ ಹಾಗೆ ಹೆಚ್ಚಾಗಿ ತೋಳುಗಳನ್ನು ಬಳಸುತ್ತಿದ್ದಂತೆ ಕ್ರಮೇಣ ಅಲ್ಲಿ ನೋವು ಕಾಣಿಸುಕೊಳ್ಳುವುದು ಸಹಜ. ಅರ್ಥಾತ್, ರೊಟೇಟರ್ ಕಫ್‌ನಲ್ಲಿರುವ ಸ್ನಾಯು ಹಾಗೂ ನರಗಳು ದುರ್ಬಲವಾಗಿ ಹರಿದು ಹೋಗುತ್ತದೆ. ಲಿಗಮೆಂಟ್ ಟೇರ್ ಕೇಳಿರಬೇಕಲ್ಲಾ? ಹಾಗೆ ‘ರೊಟೇಟರ್ ಕಫ್ ಟೇರ್’.

ರೊಟೇಟರ್ ಕಫ್ ಸ್ನಾಯುವಿನ ಈ ತೊಂದರೆಯನ್ನು ಶಸ್ತ್ರಚಿಕಿತ್ಸೆ ಮಾಡಿ ಹರಿದು ಹೋಗಿರುವ ನರ-ಸ್ನಾಯುವನ್ನು ಮೂಳೆಗೆ ಜೋಡಿಸಿ ದುರಸ್ತಿ ಮಾಡಲಾಗುತ್ತದೆ. ಕೆಲವು ದಿನಗಳ ನಂತರ ಅದು ಪುನಶ್ಚೇತನಗೊಂಡು ಪುನರ್ನಿಮಾಣ ಆಗುತ್ತದೆ. ಆದರೆ ಇಲ್ಲಿ ಒಂದು ಸಮಸ್ಯೆ ಇತ್ತು. ರೊಟೇಟರ್ ಕಫ್ ಟೇರ್ ತೊಂದರೆಯನ್ನು ಗುಣಪಡಿಸುವಲ್ಲಿ ಎಷ್ಟೋ ಆಧುನಿಕ ತಂತ್ರಗಳು ಅಭಿವೃದ್ದಿಯಾಗಿದ್ದರೂ, ಅಂಗಾಂಶ ಅಥವಾ ಸ್ನಾಯುಗಳನ್ನು ಹೊಲಿಯುವುದು ಇಂದಿನವರೆಗೂ ಒಂದು ಮೂಲಭೂತ ಹಂತವೇ ಸರಿ. ಶಸ್ತ್ರಚಿಕಿತ್ಸೆ ಮಾಡಿ ಅವನ್ನು ಕೂಡಿಸಿದ ನಂತರ ಕೆಲವು ತಿಂಗಳುಗಳಲ್ಲಿಯೇ ಸ್ನಾಯು ಮತ್ತೆ ಹರಿಯುವ ಸಾಧ್ಯತೆ ಹೆಚ್ಚು.

ADVERTISEMENT

ಈ ಸ್ನಾಯುವನ್ನು ಹರಿಯದಂತೆ ಸುರಕ್ಷಿತವಾಗಿ ಮೂಳೆಗೆ ಶಾಶ್ವತವಾಗಿ ಜೋಡಿಸಲು ಸಾಧನವೊಂದನ್ನು ರೂಪಿಸಬೇಕಿತ್ತು. ಹೀಗೆ ಯೋಚಿಸುತ್ತಿದ್ದಾಗ ತೊಮೊಪೊಲಸ್ ಮತ್ತು ಸಂಗಡಿಗರಿಗೆ ನೆನಪಾದದ್ದು, ಹೆಬ್ಬಾವಿನ ಹಲ್ಲಿನ ರಚನೆ. ಹಾಗಾಗಿ ಅಂತಹುದೇ ಸಾಧನವೊಂದನ್ನು ತೊಮೊಪೊಲಸ್ ಮತ್ತು ಸಂಗಡಿಗರು ವಿನ್ಯಾಸ ಮಾಡಿದ್ದಾರೆ. ಇದು ಸ್ನಾಯು ಮತ್ತು ನರವನ್ನು ಹರಿಯದೆ, ಅದರೊಳಗೆ ತೂರಿಕೊಳ್ಳದೆ, ಮೃದುವಾಗಿ, ಸುರಕ್ಷಿತವಾಗಿ ಮೂಳೆಗೆ ಹೊಂದಿಸಿಡುತ್ತದೆ. ಹೆಬ್ಬಾವು ಹಲ್ಲಿನಲ್ಲಿ ತನ್ನ ಬೇಟೆಯನ್ನು ಹಿಡಿದಿಡುವ ಹಾಗೆ. ಅಲ್ಲದೇ ಈ ಸಾಧನವು ದುರಸ್ತಿಯ ವೇಗವನ್ನೂ ದುಪ್ಪಟ್ಟು ಮಾಡುತ್ತದಂತೆ. ಹಾಗೂ ರೊಟೇಟರ್ ಕಫ್ ಸ್ನಾಯು ಮತ್ತೆ ಹರಿಯುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ, ಸಂಶೋಧಕ ತೊಮೊಪೊಲಸ್.

ಈ ಸಾಧನವನ್ನು ರಚಿಸುವಾಗ ‘3D ಪ್ರಿಂಟಿಂಗ್’, ‘ಸಿಮ್ಯುಲೇಶನ್’ ಹಾಗೂ ‘ಎಕ್ಸ್ ವಿವೊ’ ಪ್ರಯೋಗಗಳನ್ನು ಬಳಸಿಕೊಂಡು ಹೆಬ್ಬಾವಿನ ಹಲ್ಲಿನ ರಚನೆಯಿರುವ ವಿವಿಧ ಬಗೆಯ ಸಾಧನಗಳನ್ನು ರೂಪಿಸಿದ್ಧಾರೆ. ಅದು ಹೇಗೆ ಸ್ನಾಯುವನ್ನು ಹಿಡಿದಿಡುತ್ತದೆ ಎಂದು ಪರೀಕ್ಷಿಸಿದ್ದಾರೆ. ಇಂತಹ ಅನೇಕ ಸಾಧನಗಳನ್ನು ರಚಿಸಿ, ಪರೀಕ್ಷಿಸಿ, ಕೊನೆಗೆ ರೊಟೇಟರ್ ಕಫ್‌ಗೆ ಸೂಕ್ತವೆನಿಸುವ ಆಕಾರದ, ಸ್ನಾಯುವನ್ನು ಸುರಕ್ಷಿತವಾಗಿ ಹಿಡಿದಿಡುವ, ಬಾಗಿದ ಆದರೆ ಸ್ನಾಯು ಅಥವಾ ನರವನ್ನು ಕತ್ತರಿಸದ ಸಾಧನವನ್ನು ವಿನ್ಯಾಸ ಮಾಡಿದ್ದಾರೆ. ಇದು ಸುಮಾರು ನಾವು ಬಳಸುವ ಸ್ಟೇಪಲ್‌ನ ಅರ್ಧದಷ್ಟು ಉದ್ದವಿರುತ್ತದೆಯಂತೆ. ರೊಟೇಟರ್ ಕಫ್‌ನ ಬಾಗುವಿಕೆಯ ಆಧಾರದ ಮೇಲೆ ರೋಗಿಗೆ ಸರಿಹೊಂದುವಂತೆ 3D ಪ್ರಿಂಟಿಂಗ್ ಮೂಲಕ ಇದನ್ನು ‘ಕಸ್ಟಮೈಸ್’ ಮಾಡಿಕೊಳ್ಳಬಹುದಂತೆ. ಇದನ್ನು ‘ಬಯೋ–ಕಂಪ್ಯಾಟಿಬಲ್ ರೆಸಿನ್’, ಎಂದರೆ, ಜೈವಿಕವಾಗಿ ಹೊಂದಿಕೊಳ್ಳುವ ರಾಳದಿಂದ ತಯಾರಿಸಲಾಗುತ್ತದೆ. ಹಾಗಾಗಿ ಯಾವುದೋ ಸಾಧನವನ್ನು ದೇಹದೊಳಗೆ ಹೊತ್ತುಕೊಂಡಿರುವ ಅನುಭವವಾಗುವುದಿಲ್ಲ. ಜೊತೆಗೆ ಶಸ್ತ್ರಚಿಕಿತ್ಸಕರು ಅನುರಿಸುತ್ತಿದ್ದ ಯಾವುದೇ ರೀತಿಯ ಚಿಕಿತ್ಸಾ ವಿಧಾನವನ್ನು ತ್ಯಜಿಸುವ ಅಥವಾ ವ್ಯತ್ಯಾಸ ಮಾಡಿಕೊಳ್ಳುವ ಅಗತ್ಯವಿಲ್ಲದೆ, ಶಸ್ತ್ರಚಿಕಿತ್ಸೆ ಮಾಡಿದ ನಂತರ ಕೊನೆಯಲ್ಲಿ ಈ ಸಾಧನವನ್ನು ಜೋಡಿಸಬೇಕಷ್ಟೇ. ಮುಂದೆ ತನ್ನಷ್ಟಕ್ಕೆ ದುರಸ್ತಿಯ ಕೆಲಸ ಸುಲಭವಾಗುತ್ತದೆ; ಶಕ್ತಿ ದುಪ್ಪಟ್ಟಾಗುತ್ತದೆ. ರೊಟೇಟರ್ ಕಫ್ ಎಂದಿನಂತೆ ಮರಳಿ ಕಾರ್ಯನಿರತವಾಗುತ್ತದೆ ಎನ್ನುತ್ತಾರೆ, ತಂಡದ ಮತ್ತೊಬ್ಬ ಸಂಶೋಧಕರಾದ ಕುರ್ಟಲಿಯಝ್.

ಇದನ್ನು ಪರೀಕ್ಷಿಸಲು ಇವರು ಎರಡು ಮಾನವಶವದ ರೊಟೇಟರ್ ಕಫ್ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ಪರೀಕ್ಷೆಗೆ ಸೂಕ್ತವಾದ ತಯಾರಿಗಳನ್ನು ಪ್ರಯೋಗಾಲಯದಲ್ಲಿ ಮಾಡಿಕೊಂಡು ರೊಟೇಟರ್ ಕಫ್ ಸ್ನಾಯುವನ್ನು ಹರಿದು, ನಂತರ ಡಬಲ್ ರೋ ಸ್ಯೂಚರ್ ಟೆಕ್ನಿಕ್ ನಿಂದ ದುರಸ್ತಿ ಮಾಡಿದ್ದಾರೆ. ಎಂದರೆ ನರ-ಸ್ನಾಯುವನ್ನು ಹೊಲಿದು ಮೂಳೆಯೊಂದಿಗೆ ಕೂಡಿಸಿದ್ದಾರೆ. ನಂತರ ಅವರು ವಿನ್ಯಾಸ ಮಾಡಿರುವ ಸಾಧನವನ್ನು ಜೋಡಿಸಿ ಪರೀಕ್ಷೆ ಮಾಡಿದ್ದಾರೆ. ಸಾಧನವು ಸುರಕ್ಷಿತವಾಗಿ ಸ್ನಾಯು-ನರ-ಮೂಳೆಯನ್ನು ಜೋಡಿಸಿಟ್ಟಿತ್ತಂತೆ. ಬಹುದಿನಗಳವರೆಗೆ ಬಳಕೆ ಮಾಡಿದರೂ ಹರಿಯಲಿಲ್ಲವಂತೆ ಹಾಗಾಗಿ ಮತ್ತೆ ಮತ್ತೆ ಹರಿಯುವ ರೊಟೇಟರ್ ಕಫ್ ಟೇರ್ ಅನ್ನು ಗುಣಪಡಿಸಲು ಈ ಸಾಧನವು ಅತ್ಯುತ್ತಮ ಆಯ್ಕೆ ಎನ್ನುವುದು ಸಂಶೋಧಕರ ಅಭಿಪ್ರಾಯ.

ಹಾಗೇ, ಮುಂದಿನ ಸಂಶೋಧನೆಗಳಲ್ಲಿ ಈ ಸಾಧನವು ಅಂಗಾಂಶದೊಂದಿಗೇ ಬೆರೆತುಕೊಂಡು ಮೂಳೆಗಳನ್ನು ಬಲಪಡಿಸುವ ಸಾಧ್ಯತೆಗಳ ಬಗ್ಗೆ ಪರೀಕ್ಷೆ ನಡೆಸಲ್ಲಿದ್ದೇವೆ ಎನ್ನುತ್ತಾರೆ, ಸಂಶೋಧಕರು. ಈಗ ಅಭಿವೃದ್ದಿಪಡಿಸಿರುವ ಸಾಧನವು ದೇಹದೊಳಗೆ ಒಂದು ಸಾಧನವಾಗಿ ತನ್ನ ಕೆಲಸ ಮಾಡುತ್ತಲಿರುತ್ತದೆ. ಆದರೆ ಅದು ದೇಹದೊಂದಿಗೇ, ದೇಹದ ಭಾಗವಾಗಿ ಬೆರೆತುಹೋಗಿ, ಶಕ್ತಿಯನ್ನು ನೀಡಿ ಕೆಲಸ ಮಾಡುವಂತಾದರೆ ಇನ್ನೂ ಒಳಿತಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.