ಒಂದೆಡೆ ಸಾಮಾಜಿಕ ಮಾಧ್ಯಮದ ಸಮೂಹ ಸನ್ನಿಗೆ ಒಳಗಾದವರಂತೆ ಎಲ್ಲರೂ ಹಠಾತ್ ಚಾರಣಿಗರಾಗಿ, ಪರಿಶುದ್ಧ ಪಶ್ಚಿಮ ಘಟ್ಟಗಳಲ್ಲೂ ಪ್ಲಾಸ್ಟಿಕ್ ವಸ್ತುಗಳನ್ನು ಎಸೆದು ಬರುವ ಸಾವಿರಾರು ಜನ; ಮತ್ತೊಂದೆಡೆ ಮನೆಯಲ್ಲೂ ದಿನನಿತ್ಯದ ಬಳಕೆಗೂ ಬಳಸಿ-ಬಿಸಾಡುವ ವಸ್ತುಗಳನ್ನು ಇಟ್ಟುಕೊಂಡು, ಕಸದ ಸಮಸ್ಯೆಗೆ ಹೊಸ ಭಾಷ್ಯ ಬರೆಯುವ ಮಂದಿ; ಇನ್ನು ಕೆಲವರು, ‘ಐ ಲವ್ ನೇಚರ್’ ಎಂದು ಎ.ಸಿ. ರೂಮ್‌ನಲ್ಲಿ ಕುಳಿತು ಹೇಳುತ್ತಾ, ಬಾಕ್ಸ್‌ಗಟ್ಟಲೇ ಟಿಶ್ಯೂ ಪೇಪರ್ ಬಳಸಿ ಬಿಸಾಡುವ ಜನ; ಇನ್ನೊಂದೆಡೆ, ‘ಇನ್ನು ವಿದ್ಯುತ್ ವಾಹನಗಳು ಬಂದಾಯ್ತು, ಜಗತ್ತಿನ ಎಲ್ಲ ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯ ನಾಳೆಯಿಂದಲೇ ಮಾಯ’ ಎಂಬ ಪೆದ್ದು ಆಶಾವಾದಿಗಳು. ಹೀಗಿರುವಾಗ, ಅರಣ್ಯರೋದನವಾದರೂ ಸರಿಯೇ, ತಮ್ಮ ವೈಜ್ಞಾನಿಕ ಸತ್ಯಾಂಶಗಳನ್ನು ಸಾರುತ್ತಾ, ವಿಜ್ಞಾನದಿಂದ ಜಗತ್ತಿಗೆ ಉತ್ತಮ ದಿನಗಳನ್ನು ನೀಡುವ ಪ್ರಯತ್ನದಲ್ಲಿರುವವರು - ತಮ್ಮ ಪಾಡಿಗೆ ತಾವು ಕಾರ್ಯನಿರತರಾಗಿರುವ ವಿಜ್ಞಾನಿಗಳು ಮಾತ್ರ!
ನಮ್ಮ ಸುತ್ತಲಿನ ಆಗುಹೋಗುಗಳನ್ನು ಗಮನಿಸುತ್ತಿದ್ದರೆ, ಅನೇಕ ಹೊಸ ವಿಷಯಗಳ ಕಲಿಕೆ ಸಾಧ್ಯ; ಅದನ್ನು ವೈಜ್ಞಾನಿಕ ಸಿದ್ಧಾಂತಗಳ ಕನ್ನಡಕದೊಳಗಿಂದ ನೋಡಿದಾಗ, ಹೊಸ ಹೊಳಹು ಲಭ್ಯವಾಗುತ್ತದೆ. ಇದು ಅನೇಕ ವಿಜ್ಞಾನಿಗಳ ಅನುಭವದ ಮಾತು ಕೂಡ. ಬಸ್‌ಸ್ಟಾಪ್‌ನಲ್ಲಿ ಕಡ್ಲೆಕಾಯಿ ಹುರಿಯುವವನು, ‘ಬಾಂಡ್ಲೆಯಲ್ಲಿ ಮರಳನ್ನು ಯಾಕೆ ಬಳಸುತ್ತಾನೆ’ ಎಂದು ನಿಮಗೆ ಗೊತ್ತು ತಾನೆ? ಮನೆಯಲ್ಲಿ ಮೈಕ್ರೋವೇವ್ ಓವನ್ ಇಲ್ಲದವರೂ ಕುಕ್ಕರ್‌ನಲ್ಲಿ ಕೇಕ್ ಮಾಡುವಾಗ, ತಳಕ್ಕೊಂದು ಪದರ ಮರಳನ್ನು ಏಕೆ ಬಳಸುತ್ತಾರೆ ಗೊತ್ತೇ? ಮರಳು ಬೇಗ ಬಿಸಿಯಾಗುವುದಿಲ್ಲ. ಆದರೆ ಬಿಸಿಯಾದ ನಂತರ ಅನೇಕ ಗಂಟೆಗಳ ಕಾಲ ಶಾಖವನ್ನು ಹಿಡಿದಿಟ್ಟುಕೊಂಡು, ಬಿಸಿಯಾಗೇ ಇರುತ್ತದೆ ಎಂಬುದು ಇವರಿಗೆಲ್ಲ ಗೊತ್ತು. ಅದನ್ನೇ ವೈಜ್ಞಾನಿಕ ತಳಹದಿಯಲ್ಲಿ ಗಮನಿಸಿದಾಗ, ‘ಮರಳು’ ಎಂಬುದು ‘ಸೂಪರ್ ವಾಹಕ’ವಲ್ಲದ ವಸ್ತು.
‘ಸೂಪರ್ ವಾಹಕ’ಗಳೆಂದರೆ ಶಕ್ತಿಯನ್ನು – ಅದು ವಿದ್ಯುತ್ ಆಗಲೀ, ಶಾಖವಾಗಲೀ – ತಮ್ಮೊಳಗೆ ಯಾವುದೇ ಅಡೆತಡೆಯಿಲ್ಲದಂತೆ ಹರಿಬಿಡುತ್ತವೆ. ಆದರೆ, ಮರಳು ಅದಕ್ಕೆ ತದ್ವಿರುದ್ಧ. ಬೇಗ ಶಾಖವನ್ನು ತನ್ನೊಳಗೆ ಸುಲಭವಾಗಿ ಹರಿಬಿಡುವುದಿಲ್ಲ. ತಡೆಯೊಡ್ಡುತ್ತದೆ. ಆದರೆ, ಆ ತಡೆಯೊಡ್ಡುವ ಪ್ರಕ್ರಿಯೆಯು ಮತ್ತಷ್ಟು ಶಾಖವನ್ನು ಉತ್ಪಾದಿಸುತ್ತಾ, ಮರಳನ್ನು ಬಿಸಿಮಾಡುತ್ತಾ ಸಾಗುತ್ತದೆ. ಹೀಗೆ ಬಿಸಿಯಾಗುತ್ತಾ ಸಾಗುವ ಮರಳು, ಈ ಶಾಖವನ್ನು ತನ್ನೊಡಲಲ್ಲಿ ಕಾಪಿಟ್ಟುಕೊಂಡು, ಶಾಖದ ಸಂಪನ್ಮೂಲವೇ ಆಗಿಬಿಡುತ್ತದೆ. ಇದನ್ನೇ ಬಳಸಿಕೊಂಡು ಬ್ಯಾಟರಿಯೊಂದನ್ನು ತಯಾರಿಸಿದ್ದಾರೆ ಫಿನ್‌ಲ್ಯಾಂಡ್ ದೇಶದ ಇಂಜಿನಿಯರ್‌ಗಳು. ‘ಪೋಲಾರ್ ನೈಟ್ ಎನರ್ಜಿ’ ಎಂಬ ನವೀಕರಿಸಬಹುದಾದ ಇಂಧನವನ್ನು ತಯಾರಿಸುವ ಸಂಸ್ಥೆಯ ಭಾಗವಾದ, ವಿಲ್ಲೆ ಕಿವಿಯೋಜ ಹಾಗೂ ಅವರ ತಂಡದ ತಂತ್ರಜ್ಞಾನಿಗಳು, ಈ ಮರಳಿನ ಬ್ಯಾಟರಿಯನ್ನು ಕಳೆದ ವರ್ಷ ತಯಾರಿಸಿದ್ದಾರೆ. ಇವರು 4ಕ್ಕೆ 7 ಮೀಟರ್ ವಿಸ್ತೀರ್ಣದ ಬೃಹತ್ ಸ್ಟೀಲ್ ಪಾತ್ರೆಯಲ್ಲಿ, ಬರೋಬ್ಬರಿ 100 ಟನ್ ಮರಳನ್ನು ತುಂಬಿಸಿ, ಅದರ ಮೇಲೆ 600 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೊಂದಿರುವ ಬಿಸಿಮಾಡಲಾದ ಗಾಳಿಯನ್ನು ಹರಿಸುತ್ತಾರೆ. ಬಿಸಿಗಾಳಿಯಲ್ಲಿನ ತಾಪವು ನಿಧಾನವಾಗಿ ಮರಳಿಗೆ ವರ್ಗಾವಣೆಯಾಗುತ್ತದೆ. ಮರಳಿನ ಒಳಪದರದ ತಾಪಮಾನವು 600 ಡಿಗ್ರಿ ಸೆಲ್ಸಿಯಸ್‌ನಷ್ಟು ಆಯಿತೆಂದಾಗ, ಬ್ಯಾಟರಿ ಚಾರ್ಜ್ ಆಗಿದೆ ಎಂದರ್ಥ. ಆಗ, ಬಿಸಿಗಾಳಿಯ ತಾಪಮಾನ 200 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿರುತ್ತದೆ. ಹೀಗೆ ಬಿಸಿಯಾದ ಮರಳಿನಿಂದ ಹೊರಬರುವ ಶಾಖವನ್ನು ಬಳಸಿ ನೀರನ್ನು ಕುದಿಸಿ, ಅದರಿಂದ ಹೊರಬರುವ ಆವಿಯನ್ನು, ಶಾಖವನ್ನು ಶಕ್ತಿಯಾಗಿ ವಿದ್ಯುತ್ ತಯಾರಿಸಲು, ಮನೆಗಳಿಗೆ, ಕಚೇರಿಗಳಿಗೆ ಕೇಂದ್ರೀಕೃತ ಶಾಖವ್ಯವಸ್ಥೆಯನ್ನು ತಯಾರಿಸಲು ಬಳಸಬಹುದು ಎಂದು ಸಾಬೀತು ಮಾಡಿತೋರಿಸಿದ್ದಾರೆ, ಈ ತಂತ್ರಜ್ಞಾನಿಗಳು.
ಆದರೆ, ಇಲ್ಲಿ ಬಿಸಿ ಮಾಡಲಾದ ಗಾಳಿಯನ್ನೇ ಶಾಖ ಉತ್ಪಾದನೆಗೆ, ವಿದ್ಯುತ್ ತಯಾರಿಗೆ ಬಳಸಲಾಗದೇ? ಅಥವಾ ಆ ಬಿಸಿಗಾಳಿಯನ್ನೇ ಬಳಸಿ ನೀರನ್ನು ಕುದಿಸಿ, ಅದನ್ನೇ ಶಕ್ತಿಮೂಲವಾಗಿ ಬಳಸಬಾರದೇ? ನಡುವೆ, ಮರಳಿನ ಬ್ಯಾಟರಿ ಅದೇಕೆ? ಇಂಥ ಪ್ರಶ್ನೆಗಳು ಮೂಡಿದ್ದರೆ, ಅದಕ್ಕೆ ಉತ್ತರವೇನು ಗೊತ್ತೇ? ಈ ಹಿಂದೆ ಚರ್ಚಿಸಲಾದ ಮರಳಿನ ‘ಸೂಪರ್‌ವಾಹಕ’ವಲ್ಲದ ಗುಣವೇ. ನೀರು ಮತ್ತು ಗಾಳಿ ಸುಲಭವಾಗಿ ಶಾಖವನ್ನು ಒಳಗೆ ಎಳೆದುಕೊಳ್ಳುತ್ತವೆ; ಹಾಗೇ ಅಷ್ಟೇ ಸುಲಭವಾಗಿ ಹೊರಹಾಕುತ್ತವೆ ಕೂಡ. ಮರಳು ಹಾಗಲ್ಲವಲ್ಲ, ಅದಕ್ಕೇ ಮರಳೇ ಈ ಬ್ಯಾಟರಿಯ ನಿರ್ಮಾಣಕ್ಕೆ ಸೂಕ್ತ ವಸ್ತು; ನೀರಾದರೆ, 100 ಡಿಗ್ರಿ ಸೆಲ್ಸಿಯಸ್‌ನಷ್ಟು ಕಾದ ತಕ್ಷಣವೇ ಕುದಿಯಲು, ಆವಿಯಾಗಲು ಪ್ರಾರಂಭಿಸುತ್ತದೆ. ಮರಳು 600 ಡಿಗ್ರಿ ಸೆಲ್ಸಿಯಸ್‌ನಷ್ಟು ಕಾಯಿಸಿದರೂ ಮರಳಾಗೇ ಉಳಿದು, ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಷ್ಟೇ ಅಲ್ಲದೇ, ವಿದ್ಯುತ್ ವಾಹನಗಳಲ್ಲಿ, ಮೊಬೈಲ್‌ನಂತಹ ವಿದ್ಯುನ್ಮಾನ ಸಾಧನಗಳಲ್ಲಿ ಬಳಸುವಂತಹ ಸೋಡಿಯಂ, ಲಿಥಿಯಂನ ಬ್ಯಾಟರಿಗಳನ್ನು ತಯಾರಿಸುವಲ್ಲಿ, ಕಚ್ಚಾವಸ್ತುವಿಗಾಗಿ ಅದೆಷ್ಟು ಗಣಿಗಾರಿಕೆಯನ್ನು ಮಾಡಬೇಕು ಗೊತ್ತೇ? ಆ ಗಣಿಗಾರಿಕೆಯಿಂದ ಕಾಡುಗಳ ನಾಶ, ಭೂಸವಕಳಿ, ಅದರಿಂದ ಅತಿವೃಷ್ಟಿ, ಭೂಕುಸಿತ – ಇವೆಲ್ಲ ನಮ್ಮ ಕಣ್ಣಮುಂದೆಯೇ ನಡೆಯುತ್ತಿದೆ. ಇಂತಹ ಯಾವುದೇ ನಿಸರ್ಗವಿರೋಧಿ ತಂತ್ರಜ್ಞಾನವೂ ‘ಮರಳು ಬ್ಯಾಟರಿ’ಯಲ್ಲಿ ಅಡಗಿಲ್ಲ.
ಮರಳು ನಮಗೆ ಪ್ರಕೃತಿಯಲ್ಲಿ ಯಥೇಚ್ಛವಾಗಿ ಲಭ್ಯವಿದೆ. ಮರಳು ಗಣಿಗಾರಿಕೆಯ ಕರಾಳಮುಖ ಪರಿಚಯವಿದೆಯಾದರೂ, ಕಟ್ಟಡ ನಿರ್ಮಾಣಕ್ಕೆ ಅವ್ಯಾಹತವಾಗಿ ಮರಳು ಬೇಕಾದ ಹಾಗಲ್ಲ ಇಲ್ಲಿ. ಒಮ್ಮೆ ತಂದ ಮರಳನ್ನು ಸದಾಕಾಲ ಬಳಸಬಹುದಾಗಿದೆ. ಯೂರೋಪ್, ಅಮೆರಿಕಾ ಖಂಡಗಳಷ್ಟೇ ಏಕೆ, ನಮ್ಮ ಭಾರತದ ಚಳಿಯೂರುಗಳಿಗೆ ಇದೊಂದು ವರದಾನ. ಮನೆಯಲ್ಲಿ ವಿದ್ಯುತ್ತಿನ, ಕಟ್ಟಿಗೆಯ ‘ಹೀಟರ್’ಗಳನ್ನು ಬಳಸದೇ, ಕೇಂದ್ರೀಕೃತ ಉಷ್ಣ ಉತ್ಪಾದಕ ಘಟಕಗಳಿಂದ ಎಲ್ಲ ಮನೆಗಳೂ ಕಚೇರಿಗಳೂ ಬೆಚ್ಚಗಿರಬಹುದಾಗಿದೆ. ಕುಡಿಯುವ ನೀರನ್ನು ಬಿಸಿಯಾಗಿರಿಸಬಹುದಾಗಿದೆ. ಇದನ್ನು ಸಂಪೂರ್ಣವಾಗಿ ನವೀಕರಿಸಬಹುದಾದ ಶಕ್ತಿಯನ್ನು ಬಳಸಿ ಸಾಧ್ಯವಾಗಿಸಬಹುದಾಗಿದೆ ಎಂದು ಮರಳಿನ ಬ್ಯಾಟರಿಯ ತಯಾರಕರು ಈಗಾಗಲೇ ಫಿನ್‌ಲ್ಯಾಂಡ್‌ನ ಕಂಕಾನ್ಪಾ ಎಂಬ ಪಟ್ಟಣದಲ್ಲಿ ಸಾಬೀತು ಪಡಿಸಿದ್ದಾರೆ. ಇದರಿಂದ ಹೊರಬರುವ ಶಾಖವನ್ನು ದೊಡ್ಡ ಕಾರ್ಖಾನೆಗಳಲ್ಲೂ ಉದ್ದಿಮೆಗಳಲ್ಲೂ ಬಳಸಬಹುದು ಕೂಡ. ಅದಕ್ಕೆ ದೊಡ್ಡ ವಿಸ್ತೀರ್ಣದ ಪಾತ್ರೆ, ಹೆಚ್ಚು ಮರಳು ಇದ್ದರೆ ಸಾಕು ಎನ್ನುತ್ತಾರೆ, ಈ ಸಂಶೋಧಕರು; ಇವರು ಮಾಲಿನ್ಯ, ಸಂಪನ್ಮೂಲಗಳ ಕೊರತೆ, ಹವಾಮಾನ ವೈಪರೀತ್ಯದಿಂದ ಬಳಲುತ್ತಿರುವ ಜಗತ್ತಿನಲ್ಲಿ ಭರವಸೆಯ ಹೊಸ ಆಶಾಕಿರಣವನ್ನು ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.