ಭಾಗಶಃ ಶ್ರವಣದೋಷವುಳ್ಳ ಮಕ್ಕಳು ಅಥವಾ ರೋಗಿಗಳು, ಹಿಯರಿಂಗ್ ಸಾಧನಗಳನ್ನು ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಆದರೆ ಇದನ್ನು ತೋರ್ಪಡಿಸಲು ಅವರು ಇಷ್ಟಪಡುವುದಿಲ್ಲ.
ಅಂಥವರ ನೋವು ಮರೆಸುವ ಉದ್ದೇಶದಿಂದ ನಗರದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕನ್ನಡಕದಲ್ಲಿಯೇ ಶ್ರವಣದೋಷದ ಸಾಧನವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರುಕಟ್ಟೆಯಲ್ಲಿ ಸಿಗುವ ಟ್ರೆಂಡಿ ಕನ್ನಡಕಗಳನ್ನು ಧರಿಸಿದರೆ ಅವರಿಗೆ ಇರುವ ಶ್ರವಣದೋಷದ ಗುರುತು ಸಿಗುವುದಿಲ್ಲ. ಮಕ್ಕಳ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ.
ಎಂ.ವಿ.ಜೆ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ನಿಶಾಂತ್ ಶಾಸ್ತ್ರಿ ಮತ್ತು ರಕ್ಷಾಂದ ಬಿ.ರೆಡ್ಡಿ ಈ ಅಪೂರ್ವ ಸಾಧನೆ ಮಾಡಿದ್ದಾರೆ.
‘ಶ್ರವಣದೋಷವುಳ್ಳ ಮಕ್ಕಳು ಕಿವಿಗೆ ಅಳವಡಿಸಿಕೊಂಡು ಓಡಾಡುವ ಸಾಧನಗಳಿಂದಾಗಿ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದರು, ಬೇರೆಯವರ ಅಸಡ್ಡೆ ಹಾಗೂ ಅಪಮಾನಗಳಿಂದ ನೋವು ಅನುಭವಿಸುತ್ತಿದ್ದರು. ಇದೆಲ್ಲದರಿಂದ ಅವರನ್ನು ಹೊರತರುವ ಪ್ರಯತ್ನಕ್ಕೆ ನಾವು ಕೈ ಹಾಕಿದೆವು’ ಎಂದು ಅವರು ಹೇಳುತ್ತಾರೆ.
ನೋಡಲು ಫ್ಯಾಷನ್ ಆಗಿ ಕಾಣುವ ಈ ಸಾಧನಕ್ಕೆ ಅವರು ಬೋಕೊ ಎಯಿಡ್ ಎಂದು ಹೆಸರಿಟ್ಟಿದ್ದಾರೆ.
ಸಾಧನದಲ್ಲಿ ಅಳವಡಿಸಲಾದ ಮೂಳೆ ವಾಹನ (ಬೋನ್ ಕಂಡಕ್ಷನ್) ಟ್ರಾನ್ಸ್‌ಫ್ಯೂಸರ್ ಸಿಸ್ಟಮ್ ಇದರಲ್ಲಿ ಕೆಲಸ ಮಾಡುತ್ತದೆ.
ಈ ಸಾಧನದಲ್ಲಿ ಒಂದು ಸುರಳಿ (ಕಾಯಿಲ್) ಧ್ವನಿ ಸಂಗ್ರಹಿಸುತ್ತದೆ. ಅದರ ಪಕ್ಕದಲ್ಲಿ ಒಂದು ತಟ್ಟೆ ಕಂಪಿಸುತ್ತದೆ. ಅದನ್ನು ಟೆಂಪೋರಲ್ ಮೂಳೆಯ ಮೂಲಕ ಹಾದು ಹೋಗುವಂತೆ ಮಾಡುತ್ತದೆ. ಇದು ವ್ಯಕ್ತಿಗೆ ಕೇಳಲು ಅನುಕೂಲ ಮಾಡಿಕೊಡುತ್ತದೆ.
ಶ್ರವಣೇಂದ್ರಿಯ ಕಾಲುವೆ (ಆಡಿಟರಿ ಕ್ಯಾನಲ್)ನಲ್ಲಿ ಸಮಸ್ಯೆ ಹೊಂದಿರುವ ರೋಗಿಗಳು ಇದನ್ನು ಬಳಸಬಹುದು. ಇದನ್ನು ಕಿವಿಯೊಳಗೆ ಅಳವಡಿಸುವ ಅಗತ್ಯವಿಲ್ಲ. ಸೆನ್ಸೋ–ನ್ಯೂರಲ್ ಮತ್ತು ಕೊಹ್ಲಿಯಾ ಹಾನಿಗೊಳಗಾದವರು ಇದನ್ನು ಬಳಸಲು ಸಾಧ್ಯವಿಲ್ಲ ಎಂಬುದು ಇದರ ಮಿತಿಯಾಗಿದೆ.
‘ನಗರದ ಕೆಲವು ಇಎನ್‌ಟಿ ತಜ್ಞರೊಂದಿಗೆ ಈಗಾಗಲೇ ಮಾತನಾಡಿದ್ದೇವೆ. ಸದ್ಯದಲ್ಲಿಯೇ ಇದು ಉದ್ಯಮ ಕ್ಷೇತ್ರ ತಲುಪಲಿದೆ’ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಸಾಧನವನ್ನು ಹಾರ್ಡ್‌ವೇರ್‌ಗೆ ಸರಿಹೊಂದಿಸುವ ಉದ್ದೇಶದಿಂದ ಸಾಂಪ್ರದಾಯಿಕ ಕನ್ನಡಕಗಳಿಗಿಂತ ಇದು ಸ್ವಲ್ಪ ವಿಶಾಲವಾಗಿರುತ್ತದೆ. ಬ್ಯಾಟರಿ ಚಾಲಿತ ಈ ಸಾಧನವು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಕೆಲಸ ಮಾಡುತ್ತದೆ. ₹10 ಸಾವಿರಕ್ಕೆ ಲಭ್ಯವಾಗುವಂತೆ ಮಾಡುವ ಕನಸನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.