‘ಸೂಪರ್ ಮೂನ್’ (ಬೃಹತ್ ಚಂದ್ರ) ಮತ್ತು ಪೂರ್ಣ ಚಂದ್ರಗ್ರಹಣಗಳು ಒಟ್ಟಾಗಿ ಕಾಣಿಸಿಕೊಳ್ಳುವ ವಿರಳ ಖಗೋಳ ವಿದ್ಯಮಾನಕ್ಕೆ ಖಗೋಲಾಸಕ್ತರು ಬುಧವಾರ ಸಾಕ್ಷಿಯಾದರು. ಈ ವರ್ಷದ ಏಕೈಕ ಮತ್ತು 2019ರ ಜನವರಿ ನಂತರದ ಮೊದಲ ಪೂರ್ಣ ಚಂದ್ರಗ್ರಹಣವು ಬುಧವಾರ ಉಂಟಾಯಿತು.
ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿ ಇರುವ ಕಾರಣ ಭೂಮಿಯಿಂದ ನೋಡುವವರಿಗೆ ಚಂದ್ರನು ಬೃಹತ್ ಗಾತ್ರದಲ್ಲಿ ಕಾಣಿಸಿದ್ದಾನೆ. ಭೂಮಿಗೆ ಚಂದ್ರನು ಅತ್ಯಂತ ಹತ್ತಿರ ಬಂದಾಗ ಅಂತರವು 3,60,000 ಕಿ.ಮೀ. ಇರುತ್ತದೆ. ಅತ್ಯಂತ ದೂರದಲ್ಲಿರುವಾಗ ಈ ಅಂತರವು 4,05,000 ಕಿ.ಮೀ. ಆಗಿರುತ್ತದೆ.
ಪೂರ್ಣ ಚಂದ್ರಗ್ರಹಣ ಆಗುವುದರಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ನೇರವಾಗಿ ಬೀಳುವುದಿಲ್ಲ. ಭೂಮಿಯ ವಾತಾವರಣವನ್ನು ದಾಟಿಕೊಂಡು ಸ್ವಲ್ಪ ಬೆಳಕು ಮಾತ್ರ ಚಂದ್ರನ ಮೇಲೆ ಬೀಳುತ್ತದೆ. ಹಾಗಾಗಿ, ಚಂದ್ರ ಕೆಂಪಾಗಿ ಕಾಣಿಸುತ್ತಾನೆ. ಪೆಸಿಫಿಕ್ ಪ್ರದೇಶದ ಹಲವು ದೇಶಗಳಲ್ಲಿ ಇದು ಕಾಣಿಸಿಕೊಂಡಿದೆ. 2033ಕ್ಕೆ ಮುಂದಿನ ‘ಸೂಪರ್ ರಕ್ತ ಚಂದಿರ’ ಕಾಣಿಸಿಕೊಳ್ಳಲಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.