ADVERTISEMENT

ಬೇಕಾದಾಗ ಬೆವರಿಸುವ ಬಟ್ಟೆ!

ಕೊಳ್ಳೇಗಾಲ ಶರ್ಮ
Published 18 ಜುಲೈ 2023, 22:46 IST
Last Updated 18 ಜುಲೈ 2023, 22:46 IST
 ಬೇಕಾದಾಗ ಬೆವರಿಸುವ ಬಟ್ಟೆ!
ಬೇಕಾದಾಗ ಬೆವರಿಸುವ ಬಟ್ಟೆ!   

‘ಚೆನ್ನಾಗಿ ಗಾಳಿ ಆಡುವ ಬಟ್ಟೆ ಹಾಕಿಕೋ’ ಎಂದು ಆಟಕ್ಕೆ ಹೋಗುವಾಗ ಅಮ್ಮ ಹೇಳುತ್ತಿದ್ದುದುಂಟು. ಇಲ್ಲದಿದ್ದರೆ ಮೈಯೆಲ್ಲ ಬೆವೆತು ವಾಸನೆ ಬರುತ್ತದೆ. ಸಂಕಟವೂ ಹೆಚ್ಚು ಎನ್ನುವುದು ಅವಳ ಆತಂಕ. ಬಟ್ಟೆ ಕೇವಲ ಅಲಂಕಾರದ ಆಭರಣವಲ್ಲ; ಅದು ನಮ್ಮ ದೇಹದ ಉಷ್ಣತೆಯನ್ನು ನಿಗದಿತ ಮಿತಿಯಲ್ಲಿಯೇ ಉಳೀಸುವ ಒಂದು ರಕ್ಷಣಾ ಕವಚ ಎನ್ನುವುದು ವಿಜ್ಞಾನಿಗಳ ಅಂಬೋಣ. ಏಕೆಂದರೆ ಮನುಷ್ಯನೆಂಬ ಕೂದಲು ಇಲ್ಲದ ನಗ್ನಪ್ರಾಣಿಗೆ, ಪರಿಸರದ ತಾಪ-ಕೋಪಗಳಿಂದ ಈ ಬಟ್ಟೆಯೇ ರಕ್ಷಣೆ ಒದಗಿಸುತ್ತದೆ. ಆದರೆ ಹಾಗೆ ಮಾಡಬೇಕಾದರೆ ಬಟ್ಟೆ ಉಸಿರಾಡಬೇಕು. ಅರ್ಥಾತ್‌, ಮೈ ಬಿಸಿಯಾದಾಗ ದೇಹದ ಉಷ್ಣ ಹೊರ ಹೋಗುವಂತೆ ಇರಬೇಕು. ಹಾಗೆಯೇ ಮೈ ತಣ್ಣಗಾದಾಗ ಆ ಬಿಸಿ ಹೊರ ಹೋಗದಂತೆ ತಡೆಯಬೇಕು. ಇವೆರಡನ್ನೂ ಮಾಡುವ ಬಟ್ಟೆ ಇಲ್ಲದಿರುವುದರಿಂದಲೇ, ಬೇಸಗೆಯಲ್ಲಿ ಹತ್ತಿಯ ತೆಳು ಬಟ್ಟೆ, ಚಳಿಗಾಲದಲ್ಲಿ ದಪ್ಪನೆಯ ಉಣ್ಣೆಯ ದಿರಿಸು ಅವಶ್ಯಕವೆನ್ನಿಸಿವೆ. ಆದರೆ ಇದೀಗ ಹೀಗೆ ಬೇಕೆಂದಾಗ ಹತ್ತಿಯ ಬಟ್ಟೆಯಂತೆ ಉಸಿರಾಡುತ್ತಲೂ, ಬೇಡ ಎಂದಾಗ ಪಾಲಿಮರು ಬಟ್ಟೆಯಂತೆ ದೇಹದ ಶಾಖ ಹೊರಹೋಗದಂತೆ ಕಾಯುತ್ತಲೂ ಇರುವ ಒಂದೇ ಬಟ್ಟೆ ಸಿದ್ಧವಂತೆ. ಪಾಲಿಮರ್‌ ವಿಜ್ಞಾನ, ಜಪಾನೀಯರ ‘ಕಿರಿಗಾಮಿ ಕಲೆ’ ಹಾಗೂ ಇಲೆಕ್ಟ್ರಾನಿಕ್‌ ಸಂವೇದಕಗಳ ಸಂಯೋಜನೆಯಿಂದ ಹೀಗೊಂದು ಬಟ್ಟೆಯನ್ನು ಅಮೆರಿಕೆಯ ಇಲಿನಾಯ್‌ ವಿಶ್ವವಿದ್ಯಾನಿಲಯದ ಟಿಂಗ್‌ ಸುಆನ್‌ ಶೆನ್‌ ಮತ್ತು ಸಂಗಡಿಗರು ರೂಪಿಸಿದ್ದಾರೆ.

ಮನುಷ್ಯ ಸಮತಾಪ ಜೀವಿ. ಎಂದರೆ ನಮ್ಮ ದೇಹದ ಉಷ್ಣತೆ ಚಳಿಯಲ್ಲಿಯೂ ಬೇಸಗೆಯಲ್ಲಿಯೂ ಸಮಮಟ್ಟವಾಗಿರುತ್ತದೆ. ಒಂದು ವೇಳೆ ವ್ಯಾಯಾಮದಿಂದಲೋ, ಇನ್ಯಾವುದೋ ಕಾರಣದಿಂದಲೋ ದೇಹದ ಬಿಸಿ ಹೆಚ್ಚಾದರೆ, ಮೈ ಬೆವೆತು ಆ ಅಧಿಕ ಉಷ್ಣತೆಯನ್ನು ಕಳೆದುಕೊಳ್ಳುತ್ತದೆ. ಬೆತ್ತಲೆಮೈಯಲ್ಲಿ ಮನೆಯೊಳಗೇ ಇದ್ದರೂ ದೇಹ ಹುಟ್ಟಿಸುವ ಶಾಖದ ಮೂರರಲ್ಲೊಂದು ಭಾಗವನ್ನು ಸದಾ ಕಳೆದುಕೊಳ್ಳುತ್ತಿರುತ್ತೇವೆ. ಇನ್ನು ಚಳಿಗಾಲದಲ್ಲಿ ಇದು ಇನ್ನೂ ಹೆಚ್ಚು. ಹೀಗಾಗಿ ಚಳಿ ಆದಾಗ ಮೈ ನಡುಗುತ್ತಾ ಹೆಚ್ಚು ಶಾಖವನ್ನು ಹುಟ್ಟಿಸಲು ಶ್ರಮಿಸುತ್ತದೆ. ಒಟ್ಟಾರೆ ದೇಹದ ಉಷ್ಣತೆ ಸುಮಾರು 37 ಡಿಗ್ರಿ ಸೆಲ್ಸಿಯಸಿನಷ್ಟು ಇರುವಂತೆ ಕಾಯ್ದುಕೊಳ್ಳುತ್ತದೆ. ಬಟ್ಟೆಯು ದೇಹವು ಹೆಚ್ಚು ಶಾಖವನ್ನು ಕಳೆದುಕೊಳ್ಳದಂತೆ ನೆರವಾಗುತ್ತದೆ. ಆದರೆ ಇದೇ ಬಟ್ಟೆ, ಅತಿ ಶಾಖದಿಂದಾಗಿ ದೇಹ ಸುರಿಸಿದ ಬೆವರು ಬೇಗನೆ ಆವಿಯಾಗದಂತೆ ತಡೆದು ಸಂಕಟವನ್ನೂ ಉಂಟುಮಾಡಬಹುದು. ದೇಹದ ಬೆವರು ಬೇಗನೆ ಆವಿಯಾಗುವಂತೆ ಹಾಗೂ ಶಾಖ ಕಡಿಮೆಯಾಗುವಂತೆ ಗಾಳಿಯಾಡುವ ಬಟ್ಟೆಗಳು ಹಿತವೆನ್ನಿಸುತ್ತವೆ. ಕಿರಿಗಾಮಿ ತಂತ್ರವನ್ನು ಬಳಸಿ ಮಾಡಬಹುದು ಎನ್ನುವುದು ಸುಆನ್‌ ಶೆನ್‌ ತಂಡದ ಶೋಧ.

‘ಕಿರಿಗಾಮಿ’ ಎನ್ನುವುದು ಜಪಾನೀ ಕಲೆ. ಕಾಗದವನ್ನು ಕತ್ತರಿಸಿ, ಮಡಿಚಿ, ಹಾಳೆಯನ್ನು ಮೂರು ಆಯಾಮದ ಗೋಪುರವಾಗಿಯೋ, ಚಿತ್ರ ವಿಚಿತ್ರವಾದ ಆಕಾರವನ್ನಾಗಿಯೋ ಮಾಡುವ ಕಲೆ. ಹುಟ್ಟುಹಬ್ಬದ ಗ್ರೀಟಿಂಗಿನೊಳಗೆ ಇರುವ, ಗ್ರೀಟಿಂಗನ್ನು ತೆರೆದ ಕೂಡಲೇ ಧುತ್ತನೆ ಎದ್ದು ನಿಲ್ಲುವ ಹೃದಯದ ಆಕಾರವನ್ನು ಕಂಡಿರಬೇಕಲ್ಲ. ಅಂತಹ ಕಲೆ. ಈ ರೀತಿಯ ತಂತ್ರವನ್ನು ಬಳಸಿ, ಬೇಕೆಂದಾಗ ಹಾಳೆಯಂತೆಯೂ, ಬೇಡವೆಂದಾಗ ಮೂರು ಆಯಾಮದ ಆಕಾರವಾಗಿಯೂ ಬಟ್ಟೆಯನ್ನು ಹೆಣೆದರೆ ಹೇಗೆ? ಆಗ ಹಾಳೆ ಗಾಳಿಯಾಡದಂತೆ ಶಾಖವನ್ನು ಹಿಡಿದು ಇಡುತ್ತದೆ. ಅದೇ ಆಕಾರ ಬದಲಾದಾಗ, ರಂಧ್ರಗಳು ತೆರೆದು ಗಾಳಿಯನ್ನು ಸರಾಗವಾಗಿ ಹೊರಹೋಗುವಂತೆ ಮಾಡಬಹುದಲ್ಲ? ಇದು ಸುಆನ್‌ ಶೆನ್‌ ಅವರ ಉಪಾಯ.

ADVERTISEMENT

ಬಟ್ಟೆಯ ಶಾಖವಹನ ಸಾಮರ್ಥ್ಯ ಬದಲಾಗುವಂತೆ ಇರಬೇಕು. ‘ಶಾಖವಹನ ಸಾಮರ್ಥ್ಯ’ ಎಂದರೆ ಇನ್ನೇನಲ್ಲ. ನಿರ್ದಿಷ್ಟ ದಪ್ಪದ ಬಟ್ಟೆಯ ಎರಡೂ ಬದಿಯಲ್ಲಿ ಇರುವ ಉಷ್ಣತೆಯ ವ್ಯತ್ಯಾಸ ಇದಕ್ಕೆ ಸೂಚಿ. ಇದು ಹೆಚ್ಚಿದ್ದಷ್ಟೂ ಬಟ್ಟೆ ಗಾಳಿಯಾಡುವುದು ಹೆಚ್ಚು; ಕಡಿಮೆ ಇದ್ದಷ್ಟೂ ಬಟ್ಟೆ ಬೆಚ್ಚಗೆ ಇಡುತ್ತದೆ ಎನ್ನಬಹುದು. ಬಟ್ಟೆಯು ಶಾಖವನ್ನು ಹೀರಿಕೊಳ್ಳುವುದಕ್ಕಿಂತ ಹೆಚ್ಚು ಹರಿಯಲು ಬಿಟ್ಟರೆ ತಣ್ಣಗೆನಿಸುತ್ತದೆ. ಇದಕ್ಕಾಗಿ ಬೇರೆ, ಬೇರೆ ನಾರುಗಳನ್ನು ಬೆರೆಸಿ, ಒಳಭಾಗದಲ್ಲಿ ಶಾಖವನ್ನು ಹಿಡಿದಿಡುವಂತೆಯೂ, ಹೊರಭಾಗದಲ್ಲಿ ಶಾಖವನ್ನು ಹೊರಗೆಡವುವಂತಹ ಬಟ್ಟೆಯನ್ನು ತಯಾರಿಸಲು ಪ್ರಯತ್ನಗಳು ನಡೆದಿದ್ದುವು. ಇದ್ಯಾವುದೂ ಬೇಡ. ಕೇವಲ ಕಿರಿಗಾಮಿ ತಂತ್ರದಿಂದ ಬಟ್ಟೆಯ ಶಾಖವಹನ ಸೂಚಿ ವ್ಯತ್ಯಾಸವಾಗುವಂತೆ ಮಾಡಿದ್ದೇವೆಂದು ಸುಆನ್‌ ಶೆನ್‌ ತಂಡ ‘ಪಿಎನ್‌ಎಎಸ್‌ ನೆಕ್ಸಸ್‌’ ಪತ್ರಿಕೆಯಲ್ಲಿ ವರದಿ ಮಾಡಿದೆ.

ಇದಕ್ಕಾಗಿ ಅವರು ತೆಳುವಾದ ನೈಲಾನ್‌ ಬಟ್ಟೆಯ ಮೇಲೆ ಹದವಾಗಿ ಅತಿ ಸೂಕ್ಷ್ಮವಾದ ಚಿನ್ನದ ಪುಡಿಯನ್ನು ಅಂಟಿಸಿದ್ದಾರೆ. ಚಿನ್ನ ಇಲೆಕ್ಟ್ರಾನಿಕ್‌ ಸರ್ಕೀಟುಗಳಿಗೆ ಅಗತ್ಯವಾದದ್ದು. ತದನಂತರ ಬಟ್ಟೆಯನ್ನು ಲೇಸರ್‌ ಬಳಸಿ ಉದ್ದುದ್ದದ, ಸಮಾಂತರ ಅಥವಾ ತ್ರಿಕೋನಾಕಾರದ ಸೀಳುಗಳು ಇರುವಂತೆ ಕತ್ತರಿಸಿದ್ದಾರೆ. ಹೀಗೆ ಕತ್ತರಿಸಿದ ಹಾಳೆಯನ್ನು ಸುಲಭವಾಗಿ ಬಾಗಿಸಬಹುದು. ಅದನ್ನು ಬಾಗಿಸುವುದಕ್ಕೆ ಬ್ಯಾಟರಿಯಿಂದ ವಿದ್ಯುತ್‌ ಹರಿಸಿದರೆ ಸಾಕು. ಚಿನ್ನ ಹುದುಗಿಸಿದ ನೈಲಾನ್‌ ಬಟ್ಟೆ ಬಾಗುತ್ತದೆ. ಸುಆನ್‌ ಶೆನ್‌ ತಂಡ ಈ ಬಟ್ಟೆ ದೇಹದ ಯಾವ ಮೂಲೆಯಲ್ಲಿಯೂ ಆಯಾ ಆಕಾರವನ್ನು ತಾಳಬಲ್ಲುದು ಎಂದು ನಿರೂಪಿಸಿದ್ದಾರೆ. ಅಂದರೆ ಭುಜದ ಮೇಲಿರುವ ಬಟ್ಟೆ ಸ್ವಿಚ್‌ ಒತ್ತಿದೊಡನೆ ಅದೇ ಆಕಾರದಲ್ಲಿ ಉಬ್ಬಿಕೊಳ್ಳುತ್ತದೆ. ಹೆಚ್ಚು ಗಾಳಿಯಾಡುತ್ತದೆ.

ಸ್ವಿಚ್‌ ಒತ್ತಿದೊಡನೆ ಆಕಾರ ಬದಲಿಸುವ ಬಟ್ಟೆಯು ಶಾಖವನ್ನು ಹಿಡಿದಿಡಬಹುದೇ; ಅಥವಾ ಹೆಚ್ಚಾದ ಉಷ್ಣವನ್ನು ಹೊರ ಬಿಸಾಡುತ್ತದೆಯೇ – ಎಂದೂ ಇವರು ಪರೀಕ್ಷಿಸಿದ್ದಾರೆ. ಈ ಬಟ್ಟೆಯನ್ನು ತೊಟ್ಟವರನ್ನು ವಿವಿಧ ಉಷ್ಣತೆಯ ಪರಿಸರದಲ್ಲಿ ನಿಲ್ಲಿಸಿ, ಬಟ್ಟೆಯ ಸುತ್ತಲಿರುವ ಉಷ್ಣತೆ ಎಷ್ಟೆಂದು ‘ಐಆರ್‌’ ತಂತ್ರದಿಂದ ಪತ್ತೆ ಮಾಡಿದ್ದಾರೆ. ಇದು ಕೋವಿಡ್‌ ಸಂದರ್ಭದಲ್ಲಿ ಜ್ವರ ಬಂದಿದೆಯೇ – ಎಂದು ಪರೀಕ್ಷಿಸಲು ಹಣೆಗೆ ಗುರಿ ಇಡುತ್ತಿದ್ದಂತಹ ಸಾಧನದಂತಹ ಉಪಕರಣ. ಹೊರಗಿನ ಉಷ್ಣತೆಯಲ್ಲಿ ಆರೇಳು ಡಿಗ್ರಿ ವ್ಯತ್ಯಾಸವಾದಾಗಲೂ ದೇಹದ ಚರ್ಮದ ಉಷ್ಣತೆಯಲ್ಲಿ ಕೇವಲ ಒಂದು ಡಿಗ್ರಿಯಷ್ಟೆ ವ್ಯತ್ಯಾಸ ಆಗಿತ್ತಂತೆ. ಅಂದರೆ ಈ ಉಸಿರಾಡುವ ಕಿರಿಗಾಮಿ ಬಟ್ಟೆ ದೇಹದ ಉಷ್ಣತೆಯನ್ನು ಎಲ್ಲ ಸಂದರ್ಭದಲ್ಲಿಯೂ ಕಾಯುತ್ತದೆ ಅಂತಷ್ಟೆ.

ಚಿನ್ನದ ಈ ಬಟ್ಟೆ ನಮಗೆ ದಕ್ಕೀತೇ ಎಂದಿರಾ? ಇರಲಿ, ಇದು ನಮಗೆ ನಿಮಗೆ ಸದ್ಯಕ್ಕೆ ಕೈಗೆಟುಕದಿರಬಹುದು. ಆದರೆ ಬೆಂಕಿಯೊಡನೆ ಸರಸವಾಡುವ ಅಗ್ನಿಶಾಮಕ ಸಿಬ್ಬಂದಿಗೆ ಇಲ್ಲವೇ ಅತಿ ಶೀತಲ ವಾತಾವರಣದಲ್ಲಿ ಕೆಲಸ ಮಾಡುವ ಅಂತರಿಕ್ಷ ಯಾತ್ರಿಗಳಿಗೆ ಸರಾಗವಾದ ದಿರಿಸನ್ನು ಇದು ಒದಗಿಸಬಹುದು. ಅಥವಾ ಚಿನ್ನದ ಬದಲಿಗೆ ಇನ್ನೇನಾದರೂ ಉಪಾಯ ಸಿಕ್ಕಲ್ಲಿ, ನಮಗೂ, ನಿಮಗೂ ಇಂತಹುದೇ ಬಟ್ಟೆ ಸಿಕ್ಕರೂ ಸಿಗಬಹುದು. ಆಗ ಕಾಶ್ಮೀರಕ್ಕೆ ಹೋಗುವಾಗಲೂ ಸೂಟ್‌ ಕೇಸು ಭರ್ತಿ ಬಟ್ಟೆ ಹೊರುವುದು ತಪ್ಪೀತು. ತೆಳು ನೈಲಾನ್‌ ಬಟ್ಟೆಯೇ ನಮ್ಮ ಮೈಯನ್ನು ಅಲ್ಲಿಯೂ ಬೆಚ್ಚಗಿರಿಸಬಹುದು – ಒಂದು ಸ್ವಿಚ್‌ ಒತ್ತಿದರೆ ಸಾಕು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.