ADVERTISEMENT

ಮುದುಡುವ ಮಿದುಳು! ವಿಚಿತ್ರವಾದರೂ ಇದು ಸತ್ಯ.

ಕೊಳ್ಳೇಗಾಲ ಶರ್ಮ
Published 26 ಏಪ್ರಿಲ್ 2022, 19:30 IST
Last Updated 26 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಓಹೋ. ನಿಮ್ಮದು ದಪ್ಪತಲೆ. ಬಹಳ ಬುದ್ಧಿವಂತರಪ್ಪ’ – ಎನ್ನುವ ಮಾತು ಕೇಳಿ ಖುಷಿ ಪಟ್ಟಿರಬಹುದಲ್ಲವೇ?

ನಿಜ. ತಲೆಯ ಗಾತ್ರ ಹಾಗೂ ಬುದ್ಧಿವಂತಿಕೆಯ ಬಗ್ಗೆ ಹೀಗೊಂದು ಮಿಥ್ಯೆ ಇದೆ. ಇದು ಸ್ವಲ್ಪ ಮಟ್ಟಿಗೆ ಸುಳ್ಳೇನಲ್ಲ ಬಿಡಿ. ಮಾನವನ ವಿಕಾಸದ ಹಾದಿಯಲ್ಲಿ ಅಂಗಗಳಲ್ಲಿ ಕಾಣುವ ಪ್ರಮುಖ ಬದಲಾವಣೆ ಎಂದರೆ ಹೆಚ್ಚಿದ ಮಿದುಳಿನ ಅರ್ಥಾತ್‌ ತಲೆಬುರುಡೆಯ ಗಾತ್ರ. ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಇಂದು ನಾವು ಮನುಷ್ಯ ಎನ್ನುವ ಪ್ರಾಣಿ ಮೊಟ್ಟಮೊದಲಿಗೆ ಭೂಮಿಯ ಮೇಲೆ ಕಾಣಿಸಿತು. ಅದಕ್ಕೂ ಮೊದಲು ಇದೇ ರೀತಿಯಲ್ಲಿ ಎರಡು ಕಾಲಿನ ಮೇಲೆ ನಡೆಯುವ ಜೀವಿಗಳಿದ್ದರೂ, ಅವುಗಳು ಮನುಷ್ಯರಿಗಿಂತಲೂ ವಾನರರಿಗೆ ಹತ್ತಿರವಾದಂತಿದ್ದುವು. ಈ ಕಾರಣದಿಂದಾಗಿ ಮನುಷ್ಯನೆಂಬ ನಾಗರಿಕ, ಮಾತನಾಡುವ, ಬುದ್ಧಿವಂತ ಪ್ರಾಣಿ ವಿಕಾಸವಾಗಿದ್ದೇ ಈ ಮಿದುಳಿನಿಂದ ಎನ್ನುವುದುಂಟು. ಹೀಗಾಗಿ ತಲೆಯ ಗಾತ್ರಕ್ಕೂ ಬುದ್ಧಿವಂತಿಕೆಗೂ ನೇರ ತಳುಕು ಹಾಕುವವರಿದ್ದಾರೆ. ಆದರೆ ಇದೇ ಮಿದುಳು ವಯಸ್ಸಾಗುತ್ತಿದ್ದಂತೆ ಪುಟ್ಟದಾಗುತ್ತದೆ ಎಂದರೆ ನಂಬುವಿರಾ? ವಿಚಿತ್ರವಾದರೂ ಇದು ಸತ್ಯ. ಇತ್ತೀಚೆಗೆ ‘ನೇಚರ್‌’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯೊಂದರ ಪ್ರಕಾರ ಮನುಷ್ಯರು ಮಗುವಿನ ಹಂತದಿಂದ ಬೆಳೆಯುತ್ತಿದ್ದಂತೆ ಸ್ವಲ್ಪ ಕಾಲ ಮಿದುಳಿನ ಗಾತ್ರವೂ ಹೆಚ್ಚಾಗುತ್ತದೆ. ಆದರೆ ಅನಂತರ ವಯಸ್ಸಾಗುತ್ತಿದ್ದ ಹಾಗೆ ಅದು ಕುಗ್ಗಲಾರಂಭಿಸುತ್ತದೆಯಂತೆ. ಅಮೆರಿಕೆಯ ಫಿಲಡೆಲ್ಫಿಯ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಜಾಕೋಬ್‌ ಸೈಡ್ಲೀಸ್‌ ಮತ್ತು ಸಂಗಡಿಗರ ಸಾಧನೆ ಇದು.

ಮಿದುಳಿಗೆ ಪ್ರಾಣಿಗಳ ಬದುಕಿನಲ್ಲಿ ಬಲು ಪ್ರಮುಖ ಅಂಗ. ಇದನ್ನು ದೇಹದ ನಿಯಂತ್ರಕ ಎಂದೂ ಕರೆಯುತ್ತಾರೆ. ದೇಹದಲ್ಲಿರುವ ಪ್ರತಿಯೊಂದು ಅಂಗದ ಚಟುವಟಿಕೆಯನ್ನೂ ಇದು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ. ಹೊರಗಿನ ಪ್ರಪಂಚದಲ್ಲಿನ ಆಗುಹೋಗುಗಳನ್ನು ಅರ್ಥೈಸುವ ಅಂಗವೂ ಇದೇ. ಪಂಚೇಂದ್ರಿಯಗಳು ಗ್ರಹಿಸಿ ಕಳಿಸುವ ಸಂದೇಶಗಳನ್ನು ಒಟ್ಟಾಗಿಸಿ, ಏನಾಗುತ್ತಿದೆ ಎಂದು ನಮಗೆ ಅರಿವಾಗುವಂತೆ ಮಾಡುವುದೂ ಇದೇ ಮಿದುಳು. ಮನುಷ್ಯನಲ್ಲಿಯಂತೂ ಇದಕ್ಕೆ ಇನ್ನೂ ಹೆಚ್ಚಿನ ಪ್ರಾಮುಖ್ಯ. ತಲೆಯ ಗಾತ್ರಕ್ಕೆ ಹೋಲಿಸಿದರೆ ಬೇರಾವ ಪ್ರಾಣಿಯಲ್ಲೂ ಇಲ್ಲದಷ್ಟು ದೊಡ್ಡ ಮಿದುಳು ಮಾನವನಲ್ಲಿದೆ. ಅದರಲ್ಲಿಯೂ ಮುಂಮಿದುಳು ಎನ್ನುವ ಭಾಗ ಉಳಿದೆಲ್ಲವುಗಳಿಗಿಂತಲೂ ದೊಡ್ಡದು. ಇದುವೇ ಮಾತು, ಭಾಷೆ ಹಾಗೂ ಬುದ್ಧಿವಂತಿಕೆಯ ಕೇಂದ್ರ ಎನ್ನುವುದು ನರವಿಜ್ಞಾನಿಗಳ ಅಂಬೋಣ. ಅಂತಹ ಮಿದುಳು ವಯಸ್ಸಾಗುತ್ತಿದ್ದಂತೆ ಕುಗ್ಗುತ್ತದೆಯೇ?

ADVERTISEMENT

ಹೌದಂತೆ. ಸೈಡ್ಲೀಸ್‌ ಮತ್ತು ಸಂಗಡಿಗರು ಇದಕ್ಕಾಗಿ ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರ ಮಿದುಳುಗಳ ಚಿತ್ರಗಳನ್ನು ಪರಿಶೀಲಿಸಿದ್ದಾರೆ. ಹಾಗಂತ ಇವರೇನೂ ಅಷ್ಟೊಂದು ಜನರನ್ನು ಒಟ್ಟು ಮಾಡಿ ಅವರ ಮಿದುಳನ್ನು ಬೆದಕಲಿಲ್ಲ. ಬದಲಿಗೆ ಪ್ರಪಂಚದಾದ್ಯಂತ ವಿವಿಧ ಕಡೆಗಳಲ್ಲಿ ವೈದ್ಯರುಗಳು ತೆಗೆದಿದ್ದ ಮಿದುಳಿನ ಸ್ಕ್ಯಾನ್‌ಗಳನ್ನು ಹೆಕ್ಕಿ ನೋಡಿದ್ದಾರೆ. ವಿವಿಧ ವಯಸ್ಸಿನ, ವಿವಿಧ ಪ್ರದೇಶದ ಜನರ ಮಿದುಳುಗಳ ಗಾತ್ರಗಳನ್ನು ಈ ಚಿತ್ರಗಳ ಮೂಲಕ ಲೆಕ್ಕ ಹಾಕಿದ್ದಾರೆ. ಜೊತೆಗೆ ಮಿದುಳಿನಲ್ಲಿರುವ ಹೊರಭಾಗ, ಮುಂಮಿದುಳು, ಬುಡ ಮೊದಲಾದವುಗಳ ಗಾತ್ರದಲ್ಲಿ ಏನಾದರೂ ವ್ಯತ್ಯಾಸ ಆಗುತ್ತದೆಯೋ ಎಂದು ಗಮನಿಸಿದ್ದಾರೆ. ಇವೆಲ್ಲದರ ಫಲವಾಗಿ ಭ್ರೂಣಾವಸ್ಥೆಯಿಂದ ವೃದ್ಧಾವಸ್ಥೆಯವರೆಗೆ ವಿವಿಧ ವಯಸ್ಸಿನಲ್ಲಿ ಮಿದುಳಿನ ಗಾತ್ರ ಎಷ್ಟಿರುತ್ತದೆ ಎಂದು ಲೆಕ್ಕ ಪಟ್ಟಿ ಮಾಡುವುದು ಸಾಧ್ಯವಾಯಿತು. ಮಿದುಳಿನ ಬೆಳೆವಣಿಗೆಯ ಗತಿ ಹೇಗಿರುತ್ತದೆ ಎನ್ನುವುದು ತಿಳಿಯಿತು.

ಮನುಷ್ಯರಂತೆಯೇ ಮನುಷ್ಯರ ಮಿದುಳಿನದ್ದೂ ಆರಂಭ ಶೂರತ್ವ. ಆರಂಭದಲ್ಲಿ ಅಂದರೆ ಭ್ರೂಣಾವಸ್ಥೆಯಲ್ಲಿ, ಮಿದುಳಿನ ಎಲ್ಲ ಭಾಗಗಳೂ ತ್ವರಿತಗತಿಯಿಂದ ರೂಪುಗೊಳ್ಳುತ್ತವೆ. ಗಾತ್ರದಲ್ಲಿ ಬೆಳೆಯುತ್ತವೆ. ಹೀಗೆ ಬೆಳೆಯುವ ಭಾಗಗಳಲ್ಲಿ ಗ್ರೇ ಅಥವಾ ಬೂದುಬಣ್ಣದ ನರಭಾಗಗಳು ತುಸು ಮುಂದು. ಗ್ರೇ ಮ್ಯಾಟರ್‌ ಎನ್ನುವ ಈ ಅಂಶ ನಮ್ಮ ಬುದ್ಧಿವಂತಿಕೆಯ ಸಂಕೇತ ಎನ್ನಲಾಗುತ್ತದೆ. ಮಗು ಹುಟ್ಟುವ ಹೊತ್ತಿಗೆಲ್ಲ ಈ ಭಾಗ ಗರಿಷ್ಠ ಗಾತ್ರವನ್ನು ತಲುಪಿಯಾಗಿರುತ್ತದೆ. ತದನಂತರ ಒಳಭಾಗದಲ್ಲಿ ವೈಟ್‌ ಮ್ಯಾಟರ್‌ ಅಥವಾ ಬಿಳಿಮಿದುಳು ಬೆಳೆಯುತ್ತದೆ. ವಾಸ್ತವವಾಗಿ ಬಿಳಿಮಿದುಳು ನರಕೋಶಗಳ ಉದ್ದನೆಯ ಬಾಲದಂತಹ ತಂತುಗಳಿರುವ ಭಾಗ. ವ್ಯಕ್ತಿ ಮಧ್ಯವಯಸ್ಕನಾಗುವ ವೇಳೆಗೆ, ಅಂದರೆ ಸುಮಾರು ಮೂವತ್ತು ವರ್ಷ ವಯಸ್ಸಿನ ಹೊತ್ತಿಗೆ, ಇದು ಅತಿ ದೊಡ್ಡದಾಗುತ್ತದೆ. ಇವೆರಡನ್ನೂ ಆವರಿಸಿಕೊಂಡು ಇರುವ ಖಾಲಿಜಾಗೆಯ ಗಾತ್ರ ಆರಂಭದಲ್ಲಿ ಬಹಳ ಕಡಿಮೆ. ಇದು ನಿಧಾನವಾಗಿ ಹೆಚ್ಚಾಗುತ್ತದೆ. ವೃದ್ಧಾಪ್ಯದಲ್ಲಿ ಉಳಿದ ಭಾಗಗಳ ಗಾತ್ರ ಕಡಿಮೆಯಾಗಿ, ಈ ಭಾಗದ ಗಾತ್ರ ಹೆಚ್ಚಾಗುತ್ತದೆ ಎಂದು ಇವರ ಪಟ್ಟಿ ಸೂಚಿಸುತ್ತದೆ.

ಇದುವರೆಗೂ ಮಿದುಳು ಒಮ್ಮೆ ಬೆಳೆದ ನಂತರ ಗಾತ್ರ ಬದಲಾಗುವುದಿಲ್ಲ ಎನ್ನುವ ನಂಬಿಕೆ ಇತ್ತು. ಆದರೆ ಸೈಡ್ಲೀಸ್‌ ತಂಡದ ಸಂಶೋಧನೆ ಈ ನಂಬಿಕೆ ಸರಿಯಲ್ಲ ಎನ್ನುತ್ತಿದೆ. ಜೊತೆಗೆ ಮಿದುಳಿನ ಚಿತ್ರಗಳನ್ನು ತೆಗೆದು, ಅದರಲ್ಲಿರುವ ವಿವಿಧ ಭಾಗಗಳ ಗಾತ್ರಗಳ ಆಧಾರದ ಮೇಲೆ ಮಿದುಳಿನ ಆರೋಗ್ಯವನ್ನು ಇಲ್ಲವೆ ಚಟುವಟಿಕೆಯನ್ನು ಗುರುತಿಸುವುದುಂಟು. ಅಂತಹ ಅಧ್ಯಯನಗಳು ಮಿದುಳಿನಲ್ಲಿಯೂ ಬದಲಾವಣೆಗಳು ಅಗುತ್ತಿರಬಹುದು ಎನ್ನುವುದನ್ನು ಗಮನದಲ್ಲಿಡಬೇಕು ಎನ್ನುತ್ತಾರೆ ಸೈಡ್ಲೀಸ್.‌ ಈ ಅಧ್ಯಯನಕ್ಕಾಗಿ ಒಟ್ಟು 1,01,457 ಮಂದಿಯ ಮಿದುಳಿನ ಗಾತ್ರಗಳನ್ನು ಲೆಕ್ಕ ಹಾಕಲಾಯಿತು. ಇದಕ್ಕಾಗಿ ಸುಮಾರು 1,23,894 ಚಿತ್ರಗಳನ್ನು ಸಂಗ್ರಹಿಸಲಾಯಿತು.

ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ವಿಶ್ಲೇಷಿಸುವುದರಿಂದ ಎಷ್ಟೋ ಹೊಸ ಸಂಗತಿಗಳು ಅರಿವಾಗುತ್ತವೆ ಎನ್ನುವುದಕ್ಕೆ ಸೈಡ್ಲೀಸ್‌ ಅವರ ಈ ಸಂಶೋಧನೆ ಪುರಾವೆಯಾಗಿದೆ. ಇದಕ್ಕಾಗಿ ಇವರು ಸ್ವತಃ ಯಾರ ಮಿದುಳನ್ನೂ ಚಿತ್ರಿಸಲಾಗಲಿ, ರೋಗಿಯನ್ನು ಪರೀಕ್ಷಿಸುವುದಕ್ಕಾಗಲಿ ಹೋಗಲಿಲ್ಲ. ಬದಲಿಗೆ ಪ್ರಪಂಚದ ವಿವಿಧೆಡೆಗಳಲ್ಲಿ ಇದ್ದ ನರವೈದ್ಯರನ್ನು ಸಂಪರ್ಕಿಸಿ ಅವರ ಬಳಿ ಇದ್ದ ಚಿತ್ರಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಸಂಶೋಧನೆಯ ಶ್ರೇಯಸ್ಸು ಯಾರಿಗೆ ದಕ್ಕಬೇಕು – ಎನ್ನುವ ಪ್ರಶ್ನೆಯನ್ನೂ ಇವರ ಸಂಶೋಧನೆ ಮುಂದಿಟ್ಟಿದೆ. ಇದನ್ನು ಕಲ್ಪಿಸಿದ ಸೈಗ್ಲೀಸರಿಗೆ ಸೇರಬೇಕೋ ಅಥವಾ ಈ ಚಿತ್ರಗಳನ್ನು ಒದಗಿಸಿದ ವೈದ್ಯರಿಗೂ ಸಲ್ಲಬೇಕೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.