ವಾಷಿಂಗ್ಟನ್:ಅಮೆರಿಕದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ (ನ್ಯಾಷನಲ್ ಸೈನ್ಸ್ ಫೌಂಡೇಷನ್– ಎನ್‌ಎಸ್‌ಎಫ್) ಮುನ್ನಡೆಸಲು ಭಾರತೀಯ–ಅಮೆರಿಕನ್ ಕಂಪ್ಯೂಟರ್ ವಿಜ್ಞಾನಿ ಸೇತುರಾಮನ್ ಪಂಚನಾಥನ್ (58) ಅವರನ್ನು ಆಯ್ಕೆ ಮಾಡಲಾಗಿದೆ.
ವಿಜ್ಞಾನ ಮತ್ತು ಎಂಜಿನಿಯರಿಂಗ್ ವಲಯದಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಹಕಾರ ನೀಡುವ ಸರ್ಕಾರದ ವಿಜ್ಞಾನ ಸಂಸ್ಥೆ ಎನ್‌ಎಸ್‌ಎಫ್ ನಿರ್ದೇಶಕರಾಗಿ ಸೇತುರಾಮನ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.
ಪ್ರಸ್ತುತ ಎನ್‌ಎಸ್‌ಎಫ್ ನಿರ್ದೇಶಕಿಯಾಗಿರುವ ಫ್ರಾನ್ಸ್ ಕೊರ್ಡೊವಾ ಅವರ ಆರು ವರ್ಷಗಳ ಸೇವಾವಧಿ 2020ರಲ್ಲಿ ಮುಕ್ತಾಯವಾಗಲಿದೆ. ಡಾ.ಸೇತುರಾಮನ್ ಪಂಚನಾಥನ್ ಅವರು ಸದ್ಯ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಮುಖ್ಯ ಸಂಶೋಧನಾ ಮತ್ತು ಆವಿಷ್ಕಾರ ಅಧಿಕಾರಿ, ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ.
2014ರಲ್ಲಿ ಸೇತುರಾಮನ್ ಅವರನ್ನು ರಾಷ್ಟ್ರೀಯ ವಿಜ್ಞಾನ ಮಂಡಳಿ ಸದಸ್ಯರಾಗಿ ನೇಮಕಗೊಂಡಿದ್ದರು. ಅವರು ಕ್ರಿಯಾಶೀಲತೆ ಮತ್ತು ಆಳ ಒಳನೋಟದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
2018ರಲ್ಲಿ ಅರಿಜೋನಾದ ಗವರ್ನರ್ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹಿರಿಯ ಸಲಹೆಗಾರರಾಗಿ ಸೇತುರಾಮನ್ ಅವರನ್ನುನೇಮಕ ಮಾಡಿದ್ದರು.
ಐಐಎಸ್‌ಸಿಯಲ್ಲಿ ಎಂಜಿನಿಯರಿಂಗ್ ಪದವಿ
ಸೇತುರಾಮನ್ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ 1981ರಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದು, 1984ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಪೂರೈಸಿದರು.
1986ರಲ್ಲಿ ಮದ್ರಾಸ್ ಐಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದರು. 1989ರಲ್ಲಿ ಕೆನಡಾ ಮೂಲದ ಒಟಾವಾ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದರು.
ಚೆನ್ನೈನ ಇಂಟರ್‌ನ್ಯಾಷನಲ್ ಸಾಫ್ಟ್ವೇರ್ ಇಂಡಿಯಾ ಲಿಮಿಟೆಡ್ನಲ್ಲಿ ದತ್ತಾಂಶ ಸಂವಹನ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ ಸೇತುರಾಮನ್, 1998ರ ನಂತರ ಅಮೆರಿಕದ ಅರಿಜೊನಾ ಸ್ಟೇಟ್ ಯೂನಿವರ್ಸಿಟಿಯ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. 485ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಅವರು 150ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.