ಈಗ್ಗೆ ಸುಮಾರು ನೂರು ವರ್ಷಗಳ ಹಿಂದೆ ಆಲೂರು ವೆಂಕಟರಾಯರು ‘ಜಯ ಕರ್ನಾಟಕ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದರ ಪಾತ್ರ ಬಹು ದೊಡ್ಡದು. ಅದೃಷ್ಟವಶಾತ್ ಅದರ ಕೆಲವು ಸಂಪುಟಗಳು ಈಗಲೂ ನೋಡಲು ಲಭ್ಯವಿವೆ. ಹಾಗೊಂದು ಸಂಚಿಕೆಯಲ್ಲಿ ‘ಅಧಿಕಮಾಸವೂ 33 ಬಾಗಿಣಗಳೂ’ ಎಂಬುದೊಂದು ಲೇಖನವೂ ಕಣ್ಣಿಗೆ ಬಿದ್ದಿತು. ಇದು ವಾಸ್ತವದಲ್ಲಿ ಒಂದು ಸಂಭಾಷಣಾ ಪ್ರಧಾನವಾದ ಬರಹ; ನಾಟಕ ಎನ್ನಬಹುದು. ಅಧಿಕಮಾಸದಲ್ಲಿ ಬಾಗಿನ ಕೊಡುವುದೇತಕ್ಕೆ ಎಂಬುದನ್ನು ವಿವರಿಸಲು ಹೊರಟು ಅಧಿಕ ಮಾಸಗಳ ಖಗೋಳ ಕಲ್ಪನೆಯನ್ನೇ ವಿವರಿಸಿರುವ ಅತ್ಯುತ್ತಮ ಬರಹ. ಒಂದು ಚಿತ್ರವನ್ನೂ ರಚಿಸಿ ಬಹಳ ಅಚ್ಚುಕಟ್ಟಾಗಿ ವಿವರಿಸಲಾಗಿದೆ.
‘ಜಯಕರ್ನಾಟಕ’ ಪತ್ರಿಕೆಯ 1923ರ ಜೂನ್ 28ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ಟಿಳಕ ಸುರಪುರ, ರಿತ್ತಿ ಎಂಬ ಹೆಸರುಗಳ ಜೊತೆಗೆ ಕೇತಕೀ ಪಂಚಾಂಗ ಎಂಬ ಹೆಸರನ್ನು ಓದಿದ ನನಗೆ ಇದರ ಮೂಲ ಹುಡುಕುವ ಪ್ರಶ್ನೆ ಎದುರಾಯಿತು. ಆಗ ಕೇತ್ಕರ್ ಎಂಬ ಉತ್ತರ ಸಿಕ್ಕಿತು. ಖಭೌತ ವಿಜ್ಞಾನಿ ಜಯಂತ್ ನಾರ್ಳೀಕರ್ ಅವರು ತಮ್ಮ ಒಂದು ಉಪನ್ಯಾಸದಲ್ಲಿ ‘ಪ್ಲೂಟೊ ಗ್ರಹದ ಸ್ಥಾನವನ್ನು ಬಹಳ ನಿಖರವಾಗಿ ಲೆಕ್ಕ ಹಾಕಿ ಹೇಳಿದ್ದವರು ವೆಂಕಟೇಶ ಬಾಪೂಜಿ ಕೇತ್ಕರ್’ ಎಂದು ಹೇಳಿದ್ದರು. ಆಗ ಇವರ ಬಗ್ಗೆ ಆಸಕ್ತಿ ಮೂಡಿತು.
ಕೇತ್ಕರ್ ಅವರು ಗಣಿತ ಮತ್ತು ಖಗೋಳ ಶಾಸ್ತ್ರದಲ್ಲಿ ಪರಿಣತಿ ಪಡೆದಿದ್ದವರು. ಸಂಸ್ಕೃತ ಮಾತ್ರವಲ್ಲದೆ ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದ್ದರು. ಯೂರೋಪಿಯನ್ ಪದ್ಧತಿಯನ್ನೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಭಾರತೀಯ ಪಂಚಾಂಗಕ್ಕೂ ಅದಕ್ಕೂ ಹೊಂದಿಕೆಯಾಗುವಂತೆ ಅದರ ಪರಿಷ್ಕರಣೆ ಮಾಡಿದ್ದರು; ಕೇತಕೀ ಪಂಚಾಂಗ ಎಂಬ ಹೆಸರಿನಿಂದ ಅದು ಭಾರತದಲ್ಲಿ ಪ್ರಖ್ಯಾತವಾಗಿತ್ತು. ಮೈಸೂರಿನಲ್ಲಿ 1918ರಲ್ಲಿ ಚಿಕ್ಕಣ್ಣ ಎಂಬುವರು ರಚಿಸಿ ಪ್ರಕಟಿಸಿದ ಒಂದು ಪಂಚಾಂಗ ಇವರ ವಿಧಾನವನ್ನೇ ಅನುಸರಿಸಿ ಈ ತಿದ್ದುಪಡಿಯ ಅನ್ವಯ ಲೆಕ್ಕಗಳು ನಿಖರವಾಗಿವೆ ಎಂದು ನಿರೂಪಿಸಿತ್ತು. ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲೂ ಪ್ರಚಲಿತವಾಗಿತ್ತು.
ಯೂರೋಪಿಯನ್ ಖಗೋಳ ವಿಜ್ಞಾನವನ್ನೂ ತಿಳಿದಿದ್ದ ಅವರು ಅನೇಕ ಕ್ಲಿಷ್ಟ ಸಮಸ್ಯೆಗಳ ಕುರಿತು ಸರ್ ಸೈಮನ್ ನ್ಯೂಕೂಂಬ್ ಮೊದಲಾದ ವಿಖ್ಯಾತ ಗಣಿತಜ್ಞರೊಡನೆ ಪತ್ರವ್ಯವಹಾರ ನಡೆಸುತ್ತಿದ್ದರು. ಕೇತ್ಕರ್ ಅವರು ಕರ್ನಾಟಕದ ನರಗುಂದದಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು 3 ರೂಪಾಯಿ ವಿದ್ಯಾರ್ಥಿ ವೇತನದಿಂದ ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಶಿಕ್ಷಣ ಪಡೆದರು. ಬಾಂಬೆ ಸರ್ಕಾರಕ್ಕೆ ಸೇರಿದ್ದ ಕರ್ನಾಟಕದ ಈ ಭಾಗದ ಬೇರೆ ಬೇರೆ ಊರುಗಳಲ್ಲಿ ಶಾಲಾ ಶಿಕ್ಷಕರಾದರು. ಜೊತೆಯಲ್ಲಿಯೇ ಖಗೋಳ ಮತ್ತು ಗಣಿತದ ಅಧ್ಯಯನವನ್ನೂ ಮುಂದುವರಿಸಿದರು. ಸೈದ್ಧಾಂತಿಕ ಮಾಹಿತಿ ಅವರಲ್ಲಿತ್ತು. ವೀಕ್ಷಣೆಗಳ ಕುರಿತು ಅಂದಿನ ದಿನಗಳ ಆಗು ಹೋಗುಗಳನ್ನೂ ತಿಳಿದುಕೊಂಡಿದ್ದರು.
ಕೇತ್ಕರ್ ಅವರು ಒಂಬತ್ತನೆಯ ಗ್ರಹದ ಬಗ್ಗೆ 100 ವರ್ಷಗಳ ಹಿಂದೆಯೇ ಮುನ್ಸೂಚನೆ ನೀಡಲು ಬಳಸಿದ್ದ ತರ್ಕ ಬಹಳ ಸ್ವಾರಸ್ಯಕರವಾಗಿದೆ. ಆಗ ಯುರೇನಸ್ ಮತ್ತು ನೆಪ್ಚ್ಯೂನ್ ಎರಡರ ಸ್ಥಾನಗಳಲ್ಲಿ ಸಣ್ಣ ಪಲ್ಲಟಗಳನ್ನು ಗಮನಿಸಿ ಅದನ್ನು ವಿವರಿಸಲು ಹೊಸ ಗ್ರಹವೊಂದರ ಹುಡುಕಾಟ ನಡೆಯುತ್ತಿತ್ತು. ಇದರ ಹಿನ್ನೆಲೆಯಲ್ಲಿ ಅಡಗಿದ್ದ ತರ್ಕ ಹೀಗಿದೆ. ವಿಲಿಯಂ ಹರ್ಷೆಲ್, ಯುರೇನಸ್ ಗ್ರಹವನ್ನು ಕಂಡುಹಿಡಿದ ಮೇಲೆ ಅದರ ಸ್ಥಾನ ವಿವರಗಳನ್ನು ದೂರದರ್ಶಕದ ಸಹಾಯದಿಂದ ದಾಖಲಿಸುತ್ತಾ ಬಂದ ವೀಕ್ಷಕರಿಗೆ ಅದು ಲೆಕ್ಕ ಸೂಚಿಸಿದ ಸ್ಥಳದಿಂದ ಸ್ವಲ್ಪ ಮುಂದೆಯೇ ಇರುತ್ತಿದ್ದುದು ಒಂದು ತಲೆನೋವಾಗಿತ್ತು. ಕೆಲವು ವರ್ಷಗಳ ನಂತರ ಲೆಕ್ಕ ಹಾಕಿದ ಸ್ಥಳದಿಂದ ಅದು ಹಿಂದೆ ಬೀಳತೊಡಗಿತು. ಈ ಪಲ್ಲಟದಿಂದ ನೆಪ್ಚ್ಯೂನ್ ಗ್ರಹದ ಅಸ್ತಿತ್ವವನ್ನು ಊಹಿಸಿ ಅದನ್ನು ಕಂಡುಹಿಡಿದದ್ದು ಇತಿಹಾಸ.
ಈಗ ಯುರೇನಸ್ ಮತ್ತು ನೆಪ್ಚ್ಯೂನ್‌ಗಳೆರಡೂ ಪಲ್ಲಟವನ್ನು ತೋರಿಸತೊಡಗಿದ್ದರಿಂದ ಇನ್ನೂ ಒಂದು ಗ್ರಹ ಇರಬಹುದು ಎಂದು ಅದೇ ವಿಧಾನವನ್ನು ಅನುಸರಿಸಿ ಲೆಕ್ಕ ಮಾಡಲಾಗುತ್ತಿತ್ತು. ಅಮೆರಿಕದ ಎಡ್ವರ್ಡ್ ಪಿಕರಿಂಗ್ ಮತ್ತು ಪರ್ಸಿವೆಲ್ ಲೊವೆಲ್ ಇವರು ಈ ಲೆಕ್ಕಗಳನ್ನು ಮಾಡಿ ಒಂಬತ್ತನೆಯ ಗ್ರಹದ ಮುನ್ಸೂಚನೆ ನೀಡಿದ್ದರು. ಅದರ ಅನುಸಾರ ದೊಡ್ಡ ದೂರದರ್ಶಕಗಳಿಂದ ಹುಡುಕಾಟ ನಡೆಯುತ್ತಿತ್ತು. ಕೇತ್ಕರ್ ಅವರು ಹೊಸದೊಂದು ವಿಧಾನವನ್ನು ಬಳಸಿದರು.
ಗುರುಗ್ರಹದ ನಾಲ್ಕು ಉಪಗ್ರಹಗಳ ಅನುರಣನೆಯ ತತ್ವವನ್ನು ಆಧರಿಸಿ ಖ್ಯಾತ ಗಣಿತಜ್ಞ ಲೆಪ್ಲಾಸ್ ಅವರು ಅವುಗಳ ಪರಿಭ್ರಮಣಾವಧಿಯಲ್ಲಿ ಒಂದು ನಿರ್ದಿಷ್ಟ ಅನುಪಾತ ಇರುವುದನ್ನು ತೋರಿಸಿಕೊಟ್ಟಿದ್ದರು. ಕೇತ್ಕರ್ ಇದೇ ತತ್ವವನ್ನು ಬಳಸಿದರು.
ಲೆಪ್ಲಾಸ್ ಅವರು ಮೂರು ಕಾಯಗಳ ಗುರುತ್ವಬಲದ ಅಂತರಕ್ರಿಯೆಗಳ ಒಂದು ವಿಶೇಷ ಸವಾಲಿನ ವಿವರಣೆಗೆ ಇಯೋ, ಯುರೋಪಾ, ಗೆನಿಮೀಡ್ ಇವುಗಳನ್ನು ಬಳಸಿದ್ದರು. ಪರಿಭ್ರಮಣಾವಧಿಗಳು 1, 2, 4 ಈ ಅನುಪಾತದಲ್ಲಿರುವುದನ್ನು ಲೆಕ್ಕಾಚಾರಗಳಿಗೆ ಬಳಸಿದ್ದರು. ಎರಡರ ಯುತಿ (ಅಂದರೆ ಗುರುಗ್ರಹದ ನೇರಕ್ಕೆ ಬರುವುದು) ಮೂರನೆಯದರ ಸ್ಥಾನವನ್ನು ನಿರ್ಧರಿಸುತ್ತದೆ ಎಂಬುದೇ ಇದರ ಗುಟ್ಟು. ಕೇತ್ಕರ್ ಅವರು ಇದೇ ತತ್ವದಿಂದ ಮಾಡಿದ ಕೈಬರಹದ ಲೆಕ್ಕಗಳನ್ನು ಅವರ ವಂಶಜರು ಕಾಪಾಡಿಕೊಂಡಿದ್ದಾರೆ.
ತಮ್ಮ ಲೆಕ್ಕಗಳಿಗೆ ಕೇತ್ಕರ್ ಅವರು 1911 ಇಸವಿಯನ್ನು ಆರಿಸಿಕೊಂಡರು. ಆಗ ಯುರೇನಸ್ ಮತ್ತು ನೆಪ್ಚ್ಯೂನ್‌ಗಳೆರಡೂ ಸೂರ್ಯನ ಇಕ್ಕೆಲಗಳಲ್ಲಿದ್ದವು. ಹಾಗಾಗಿ ಮೂರನೆಯದಾದ ಹೊಸ ಗ್ರಹ ಎಲ್ಲಿರಬೇಕು ಎಂಬುದನ್ನು ಲೆಕ್ಕ ಮಾಡುವುದು ಸುಲಭವಾಗುತ್ತಿತ್ತು.
ಲೆಕ್ಕದ ಪ್ರಕಾರ ಎರಡು ಗ್ರಹಗಳಿರಬಹುದಾದ ಸಾಧ್ಯತೆಯೂ ಇತ್ತು. ಈ ಎರಡು ಗ್ರಹಗಳನ್ನು ಅವರು ಬ್ರಹ್ಮ ಮತ್ತು ವಿಷ್ಣು ಎಂದು ಕರೆದರು. ಬ್ರಹ್ಮ ಎಂಬುದು ಪ್ಲೂಟೊದ ವಿವರಗಳೊಂದಿಗೆ - ಅಂದರೆ ಪರಿಭ್ರಮಣಾವಧಿ 242 ವರ್ಷಗಳು, ದೂರ 39 ಖಗೋಳ ಮಾನ (ಖಗೋಳ ಮಾನ ಎಂದರೆ ಭೂಮಿ- ಸೂರ್ಯರ ಅಂತರ 150 ಮಿಲಿಯನ್ ಕಿಲೋಮೀಟರ್) - ಈಗ ದಾಖಲಾಗಿರುವ ಸಂಖ್ಯೆಗಳೊಡನೆ (ಲೋವೆಲ್ ಮತ್ತು ಪಿಕರಿಂಗ್ ಅವರದ್ದಕ್ಕಿಂತ ಉತ್ತಮವಾಗಿ) ಕರಾರುವಾಕ್ಕಾಗಿ ಹೊಂದುತ್ತದೆ. ಹೊಸಗ್ರಹದ ಕಾರಣ ಧೂಮಕೇತುಗಳ ಕಕ್ಷೆ ಪಲ್ಲಟವಾಗುವುದನ್ನೂ ಅವರು ಗಣನೆಗೆ ತೆಗೆದುಕೊಂಡಿದ್ದರು.
ವಿಷ್ಣು ಎಂಬುದು ಇನ್ನೂ ಬಹಳ ದೂರದಲ್ಲಿ (59 ಖಗೋಳ ಮಾನ) 458 ವರ್ಷಗಳ ಅವಧಿಯಲ್ಲಿ ಸುತ್ತುತ್ತಿರಬೇಕು ಎಂಬುದೂ ಒಂದು ಸಾಧ್ಯತೆ. ಲೋವೆಲ್ ಮತ್ತು ಪಿಕರಿಂಗ್ ಅವರೂ ಕೂಡ ಒಂದಕ್ಕಿಂತ ಹೆಚ್ಚು ಗ್ರಹಗಳಿರಬಹುದೆಂದು ಲೆಕ್ಕ ಹಾಕಿದ್ದರು. ತಮ್ಮ ಫಲಿತಾಂಶಗಳನ್ನು ಕೇತ್ಕರ್ ಅವರು ಫ್ರೆಂಚ್ ಖಗೋಳ ಸಂಸ್ಥೆಗೆ ಧಾರವಾಡದಿಂದ ವರದಿ ಮಾಡಿದ್ದರು; ಅದು 1911ರ ಜೂನ್‍ನಲ್ಲಿಯೇ ಪ್ರಕಟವಾಯಿತು. ಆದರೆ ಅವರ ಫಲಿತಾಂಶಕ್ಕೆ ಮನ್ನಣೆ ದೊರೆಯಲಿಲ್ಲ.
ಎರಡು ದಶಕಗಳ ಹುಡುಕಾಟದ ನಂತರ ಕ್ಲೈಡ್ ಟಾಂಬೊ ಅದನ್ನು ಕಂಡು ಹಿಡಿದರು. ಅದೇ ಪ್ಲೂಟೊ. ದೂರದರ್ಶಕದಿಂದ ತೆಗೆದ ಚಿತ್ರಗಳಲ್ಲಿ ಸ್ಥಾನ ಬದಲಿಸುವ ಸಣ್ಣ ಚುಕ್ಕೆಯೊಂದನ್ನು ಹುಡುಕಿದರು. ಇದಕ್ಕೆ ಬ್ಲಿಂಕ್ ಕಂಪರೇಟರ್ ಎಂಬ ವಿಶೇಷ ಉಪಕರಣವನ್ನು ಬಳಸಿದರು. (ಈಗ ಈ ತತ್ವದ ಡಿಜಿಟಲ್ ಆವೃತ್ತಿ ಎಲ್ಲರಿಗೂ ಲಭ್ಯವಿದ್ದು ಶಾಲಾ ಮಕ್ಕಳೂ ಹೊಸ ಕಾಯಗಳನ್ನು ಕಂಡು ಹಿಡಿಯುತ್ತಿದ್ದಾರೆ). 1930ರಲ್ಲಿ ಟಾಂಬೊ ಒಂಬತ್ತನೆಯ ಗ್ರಹದ ಆವಿಷ್ಕಾರವನ್ನು ಪ್ರಕಟಿಸಿದಾಗ ಕೇತ್ಕರ್ ಅಸ್ವಸ್ಥರಾಗಿದ್ದರು. ಕೆಲವೇ ತಿಂಗಳುಗಳಲ್ಲಿ ತೀರಿಕೊಂಡರು. ಅವರ ಮುನ್ಸೂಚನೆಯ ವಿವರಗಳು ಬೆಳಕಿಗೆ ಬರಲೇ ಇಲ್ಲ.
ಕೇತ್ಕರ್ ಅವರ ಈ ಆವಿಷ್ಕಾರವನ್ನು ಪಿ. ಹರಿಹರಭಟ್ ಅವರು 1953ರಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದರು. ಅದಾದ ನಂತರ ಪ್ರೊಫೆಸರ್ ಶಕ್ತಿಧರ್ ಶರ್ಮ ಅವರು ವಿಶೇಷ ಆಸಕ್ತಿ ವಹಿಸಿ 80 ರ ದಶಕದಲ್ಲಿ ಎರಡು ಪ್ರಬಂಧಗಳಲ್ಲಿ ಕೇತ್ಕರ್ ಅವರ ಫಲಿತಾಂಶಗಳನ್ನು ಪ್ರಕಟಿಸಿದರು.
ಇವರ ಜೀವನದ ವಿವರಗಳನ್ನು ವಿಜ್ಞಾನ ಪ್ರಸಾರ್ ಸಂಸ್ಥೆ ಕನ್ನಡದಲ್ಲಿಯೂ ಪ್ರಕಟಿಸಿದೆ. ಇವರು ತಮ್ಮ ಜೀವನದ ಕೊನೆಯ ದಿನಗಳನ್ನು ವಿಜಯಪುರದಲ್ಲಿ ಕಳೆದರು. ಕನ್ನಡದಲ್ಲಿಯೂ ಗ್ರಂಥ ರಚನೆ ಮಾಡಿರಬಹುದು. ಅವು ಅವರ ಬಂಧು ಮಿತ್ರರೊಡನೆ ಇದ್ದರೂ ಇರಬಹುದು. ಏಕೆಂದರೆ ಸಂತ ಜ್ಞಾನೇಶ್ವರರ ರಚನೆಗಳಲ್ಲಿ ಕನ್ನಡ ಶಬ್ದಗಳನ್ನು ಹುಡುಕಿ (ಮರಾಠಿಯಲ್ಲಿ) ಲೇಖನ ಬರೆದಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಅವರು ಶಿಕ್ಷಕರಾಗಿದ್ದರಿಂದ ಅಲ್ಲಿ ಅವರ ಇತರ ರಚನೆಗಳೂ ಇರಬಹುದು. ಅವನ್ನು ಈಗಲಾದರೂ ಬೆಳಕಿಗೆ ತರುವುದು ಸಾಧ್ಯವಾಗಲಿ ಎಂಬುದೇ ಈ ಲೇಖನದ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.