ADVERTISEMENT

ಖನಿಜ: ಅಚ್ಚರಿಗಳ ಕಣಜ!

ಎನ್.ವಾಸುದೇವ್
Published 23 ಮಾರ್ಚ್ 2019, 20:00 IST
Last Updated 23 ಮಾರ್ಚ್ 2019, 20:00 IST
   

ಖನಿಜ ಎಂದರೇನು?

ಸರಳವಾಗಿ ನಿರೂಪಿಸಬೇಕೆಂದರೆ ಭೂ ಮೇಲ್ಮೈಯಲ್ಲಾಗಲೀ, ನೆಲದಲ್ಲಿ ಗಣಿ ತೋಡಿಯಾಗಲೀ ಪಡೆಯಬಹುದಾದ ನೈಸರ್ಗಿಕ ನಿಕ್ಷೇಪವೇ ಖನಿಜ (ಖನಿ=ಗಣಿ). ಹಾಗೆಂದರೆ, ಭೂ ನೆಲದ ಶಿಲೆಗಳು, ನೆಲದಾಳದ ಅದಿರುಗಳು, ಕಲ್ಲಿದ್ದಿಲು, ಪೆಟ್ರೋಲಿಯಂ ಇತ್ಯಾದಿ ಎಲ್ಲ ನಿಸರ್ಗ ನಿರ್ಮಿತಿಗಳೂ ಖನಿಜಗಳ ಗುಂಪಿಗೇ ಸೇರುತ್ತವೆ.

ಆದರೆ, ಈ ಸ್ಥೂಲ ನಿರೂಪಣೆಯನ್ನು ಖನಿಜ ಶಾಸ್ತ್ರಜ್ಞರು ಒಪ್ಪುವುದಿಲ್ಲ. ಶಾಸ್ತ್ರೀಯವಾದ ನಿಖರ ವೈಜ್ಞಾನಿಕ ನಿರೂಪಣೆಯ ಪ್ರಕಾರ ಭೂ ನಿಕ್ಷೇಪವೊಂದನ್ನು ಖನಿಜ ಎಂದು ನಿರ್ಧರಿಸಲು ಅದು ಇವೆಲ್ಲ ಗುಣ-ಲಕ್ಷಣಗಳನ್ನೂ ಪಡೆದಿರಲೇಬೇಕು: ‘ಅದು ನೈಸರ್ಗಿಕ ಸೃಷ್ಟಿಯಾಗಿರಬೇಕು; ಘನರೂಪದಲ್ಲೇ ಇರಬೇಕು; ಸಾವಯವ ದ್ರವ್ಯಗಳಿಂದ (ಅಂದರೆ ಜೀವಾವಶೇಷಗಳಿಂದ) ಮುಕ್ತವಾಗಿರಬೇಕು; ನಿರ್ದಿಷ್ಟ ರಾಸಾಯನಿಕ ಸಂಯೋಜನೆಯನ್ನು ಪಡೆದಿರಬೇಕು ಮತ್ತು ವ್ಯವಸ್ಥಿತ ಪರಮಾಣು ಸಂರಚನೆ ಹೊಂದಿರಬೇಕು’! ಆದ್ದರಿಂದ, ಸ್ಪಷ್ಟವಾಗಿಯೇ ಬಹು ಖನಿಜ ಸಂಯೋಜಿತವಾದ ಶಿಲೆಗಳು, ಸಸ್ಯಾವಶೇಷವಾದ ಕಲ್ಲಿದ್ದಿಲು ಮತ್ತು ದ್ರವ ರೂಪದ ನಿಕ್ಷೇಪವಾದ ಪೆಟ್ರೋಲಿಯಂ - ಇಂಥ ಯಾವುವೂ ಖನಿಜಗಳಲ್ಲ.

ADVERTISEMENT

ಅದೆಲ್ಲ ಏನೇ ಇದ್ದರೂ, ಖನಿಜಗಳು ಮನುಷ್ಯರಿಗೆ ಅತ್ಯವಶ್ಯವಾಗಿರುವ, ಅತ್ಯುಪಯುಕ್ತವಾಗಿರುವ, ಅನಿವಾರ್ಯವೂ ಆಗಿರುವ, ಹಾಗಾಗಿ ಅತ್ಯಂತ ಮಹತ್ವದ ಅಮೂಲ್ಯ ಸಂಪನ್ಮೂಲಗಳಾಗಿವೆ.

ಭೂಮಿಯಲ್ಲಿ ಎಷ್ಟು ವಿಧದ ಖನಿಜಗಳಿವೆ? ನಮ್ಮ ಸೌರವ್ಯೂಹದ ಬೇರಾವ ಕಾಯದಲ್ಲೂ ಖನಿಜಗಳಿಲ್ಲವೇ?

ವಿಶ್ವಮಾನ್ಯ ‘ಅಂತರರಾಷ್ಟ್ರೀಯ ಖನಿಜಶಾಸ್ತ್ರೀಯ ಒಕ್ಕೂಟ’ ದೃಢಪಡಿಸಿರುವಂತೆ ಈವರೆಗೆ ಒಟ್ಟು 5,413 ವಿಧಗಳ ಖನಿಜಗಳನ್ನು ಗುರುತಿಸಲಾಗಿದೆ - ಹೆಸರಿಸಲಾಗಿದೆ (ಕೆಲ ಅಮೂಲ್ಯ ಖನಿಜಗಳನ್ನು ಚಿತ್ರ-1 ರಿಂದ 6ರಲ್ಲಿ ಗಮನಿಸಿ). ಇನ್ನೂ ಸಮೀಪ 100 ಖನಿಜಗಳು ನಾಮಕರಣಕ್ಕೆ - ವರ್ಗೀಕರಣಕ್ಕೆ ಕಾದು ನಿಂತಿವೆ.

ನಮ್ಮ ಸೌರವ್ಯೂಹದಲ್ಲಿ ಘನ ತನುವಿನ ಹಲವಾರು ಗ್ರಹಗಳು, ಉಪಗ್ರಹಗಳು ಮತ್ತು ಕ್ಷುದ್ರಗ್ರಹಗಳು ಕೂಡ ಖನಿಜ ನಿಕ್ಷೇಪಗಳನ್ನು ಹೊಂದಿವೆ. ಉದಾಹರಣೆಗೆ ಬುಧಗ್ರಹದಲ್ಲಿ 250 ವಿಧದ ಖನಿಜಗಳಿವೆ; ಶುಕ್ರ ಗ್ರಹದಲ್ಲಿ 350 ಮತ್ತು ಮಂಗಳ ಗ್ರಹದಲ್ಲಿ 500 ಬಗೆಗಳ ಖನಿಜಗಳಿವೆ! ಭೂಮಿಯಲ್ಲಿರುವ ಖನಿಜ ಸಂಖ್ಯೆಗೆ ಹೋಲಿಸಿದರೆ ಇವೆಲ್ಲ ಅಲ್ಪ ಸಂಖ್ಯೆಗಳಷ್ಟೇ ಅಲ್ಲವೇ?

‘ಖನಿಜ ಮತ್ತು ಶಿಲೆ, ಖನಿಜ ಮತ್ತು ಅದಿರು, ಖನಿಜ ಮತ್ತು ರತ್ನ’ - ಇವುಗಳಿಗಿರುವ ಪ್ರಮುಖ ವ್ಯತ್ಯಾಸಗಳು ಏನೇನು?

ಒಂದೇ ಖನಿಜದಿಂದ ಮೈದಳೆವ ಕೆಲವೇ ಶಿಲಾ ವಿಧಗಳನ್ನು ಬಿಟ್ಟರೆ (ಉದಾಹರಣೆಗೆ, ಕ್ಯಾಲ್ಸೈಟ್ ಖನಿಜವೊಂದರಿಂದಲೇ ರೂಪುಗೊಳ್ಳುವ ಸುಣ್ಣ ಶಿಲೆ) ಉಳಿದ ಸುಮಾರು 160 ಬಗೆಗಳ ಶಿಲೆಗಳೂ ಹಲವಾರು ಖನಿಜಗಳ ಸಂಯುಕ್ತಗಳಾಗಿವೆ (ಉದಾಹರಣೆಗೆ ಗ್ರಾನೈಟ್‌ನಲ್ಲಿ ಬೇರೆ ಬೇರೆ ಖನಿಜಗಳಾದ ಕ್ವಾರ್ಟ್ಜ್, ಫೆಲ್ಡ್ ಸ್ಪಾರ್ ಮತ್ತು ಅಭ್ರಕ ಸಂಯುಕ್ತಗೊಂಡಿವೆ).

ಅದಿರುಗಳು ನಿರ್ದಿಷ್ಟ ಲೋಹ ಮತ್ತು ಅಲೋಹ ಖನಿಜಗಳು ಬೆರೆತ ನಿರ್ಮಿತಿಗಳಾಗಿದ್ದು ಅವುಗಳಲ್ಲಿನ ಕೆಲ ಖನಿಜಗಳು ಲಾಭದಾಯಕವಾಗಿ ಬೇರ್ಪಡಿಸಬಹುದಾದ ಪ್ರಮಾಣಗಳಲ್ಲಿರುತ್ತವೆ. ಹಾಗೆಂದರೆ, ಎಲ್ಲ ಅದಿರುಗಳೂ ಖನಿಜಗಳೇ ಹೌದಾದರೂ ಎಲ್ಲ ಖನಿಜಗಳೂ ಅದಿರುಗಳಲ್ಲ ಎಂಬುದು ಸ್ಪಷ್ಟವಾಯಿತು ತಾನೇ? ಧರೆಯಲ್ಲಿರುವ ಅದಿರುಗಳ ಸಂಖ್ಯೆ 2000 ಮೀರಿಲ್ಲ.

ತುಂಬ ದೃಢವಾದ, ಸುಂದರ ರೂಪದ, ದೀರ್ಘ ಬಾಳಿಕೆಯ, ಆಭರಣ ಯೋಗ್ಯ, ಅಪರೂಪದ ಖನಿಜಗಳೇ ರತ್ನಗಳು. ಇಡೀ ಖನಿಜಗಳ ಪಟ್ಟಿಯಲ್ಲಿ ವಜ್ರ, ಕೆಂಪು, ಪಚ್ಚೆ ಇತ್ಯಾದಿ ಒಟ್ಟು ಕೇವಲ ಇಪ್ಪತ್ತು ಖನಿಜಗಳು ಮಾತ್ರ ರತ್ನ ಸ್ಥಾನ ಗಳಿಸಿವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.