ADVERTISEMENT

ವಿಕ್ರಂ-ಎಸ್ ಭಾರತೀಯ ಅಂತರಿಕ್ಷ ಕ್ಷೇತ್ರದಲ್ಲಿ ನೂತನ ಯುಗ

ಬಿ.ಆರ್‌.ಗುರುಪ್ರಸಾದ್‌
Published 22 ನವೆಂಬರ್ 2022, 19:30 IST
Last Updated 22 ನವೆಂಬರ್ 2022, 19:30 IST
ಉಡಾವಣಾ ವೇದಿಕೆಯ ಮೇಲೆ ನಿಂತ ವಿಕ್ರಂ-ಎಸ್ಚಿತ್ರಕೃಪೆ ‘ಸ್ಕೈರೂಟ್ ಏರೋಸ್ಪೇಸ್’
ಉಡಾವಣಾ ವೇದಿಕೆಯ ಮೇಲೆ ನಿಂತ ವಿಕ್ರಂ-ಎಸ್ಚಿತ್ರಕೃಪೆ ‘ಸ್ಕೈರೂಟ್ ಏರೋಸ್ಪೇಸ್’   

ಶ್ರೀಹರಿಕೋಟಾ. ಭಾರತದ ಆಗ್ನೇಯ ಕರಾವಳಿಯಲ್ಲಿರುವ ಈ ದ್ವೀಪದಿಂದ ನೂರಾರು ಉಪಗ್ರಹಗಳು ಹಾಗೂ ಚಂದ್ರ ಮತ್ತು ಮಂಗಳಗ್ರಹವನ್ನು ಗುರಿಯಾಗಿಟ್ಟುಕೊಂಡ ರೋಬಾಟ್ ನೌಕೆಗಳು ಭಾರತದ ದೈತ್ಯ ರಾಕೆಟ್ ವಾಹನಗಳಲ್ಲಿ ಈ ಮೊದಲು ಅಂತರಿಕ್ಷಕ್ಕೆ ತೆರಳಿವೆ.

ಆದರೆ ಈ ನವೆಂಬರ್ 18ರಂದು ಈ ದ್ವೀಪದಲ್ಲಿನ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಜರುಗಲಿದ್ದ ‘ವಿಕ್ರಂ-ಎಸ್’ ಎಂಬ ಒಂದು ಪುಟ್ಟ ರಾಕೆಟ್‌ನ ಉಡಾವಣೆ ದೇಶದ ಹಾಗೂ ವಿದೇಶಿ ಮಾಧ್ಯಮಗಳ ಗಮನವನ್ನು ಸೆಳೆದಿತ್ತು. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೊ’ ನಿರ್ಮಿಸಿದ ‘ಪಿ. ಎಸ್. ಎಲ್. ವಿ.’ ಹಾಗೂ ‘ಜಿ. ಎಸ್. ಎಲ್. ವಿ.’ ರಾಕೆಟ್ಟುಗಳಂತೆ ಈ ಪುಟ್ಟ ರಾಕೆಟ್ ಹದಿನೈದು ಇಲ್ಲವೇ ಹದಿನೇಳು ಮಹಡಿಗಳಷ್ಟು ಎತ್ತರವಾಗಿರಲಿಲ್ಲ. 545 ಕಿಲೋಗ್ರಾಂ ತೂಕದ ವಿಕ್ರಂ-ಎಸ್ ರಾಕೆಟ್ ಸುಮಾರು ಇಪ್ಪತ್ತು ಅಡಿಗಳಷ್ಟು ಎತ್ತರವಿತ್ತಷ್ಟೆ.

ಅಷ್ಟೇ ಸಾಲದೆಂಬಂತೆ ಇಸ್ರೊದ ಪಿ. ಎಸ್. ಎಲ್. ವಿ., ಜಿ. ಎಸ್. ಎಲ್. ವಿ.ಗಳಂತೆ ಅದು ಉಪಗ್ರಹಗಳನ್ನು ನೂರಾರು ಕಿಲೋಮೀಟರ್ ಎತ್ತರದ ಕಕ್ಷೆಗೆ ಹಾರಿಬಿಡುವ ಸಾಮರ್ಥ್ಯವನ್ನೂ ಹೊಂದಿರಲಿಲ್ಲ. ಬದಲಾಗಿ ತಾನು ಹೊತ್ತ 83 ಕಿಲೋಗ್ರಾಂ ತೂಕದ ಸಾಧನಗಳನ್ನು ಕೇವಲ 100 ಕಿಲೋಮೀಟರ್ ಎತ್ತರಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿತ್ತಷ್ಟೆ. ಹಾಗಿದ್ದಲ್ಲಿ ಈ ಪುಟ್ಟ ರಾಕೆಟ್‌ನ ಉಡಾವಣೆಗೇಕೆ ಇಷ್ಟು ಪ್ರಾಮುಖ್ಯ?

ADVERTISEMENT

ಅದಕ್ಕೆ ಬಲವಾದ ಕಾರಣವಿದೆ. ವಿಕ್ರಂ-ಎಸ್ ಭಾರತದ ಖಾಸಗಿ ವಲಯದಲ್ಲಿ ನಿರ್ಮಿಸಲ್ಪಟ್ಟು, ‘ಇಸ್ರೊ’ದ ನೆಲೆಯಿಂದ ಉಡಾವಣೆಯಾಗಲಿದ್ದ ಮೊದಲ ರಾಕೆಟ್ಟು. ಇದನ್ನು ನಿರ್ಮಿಸಿದ ಖಾಸಗಿ ಸಂಸ್ಥೆ ಹೈದರಾಬಾದಿನ ‘ಸ್ಕೈರೂಟ್ ಏರೋಸ್ಪೇಸ್’. ಇದು ಒಂದು ‘ಸ್ಟಾರ್ಟ್ ಅಪ್’ ಸಂಸ್ಥೆ, ಅಂದರೆ ತನ್ನ ಕಾರ್ಯನಿರ್ವಹಣೆಯ ಮೊದಲ ಹಂತದಲ್ಲಿರುವ ಒಂದು ಪುಟ್ಟ ಖಾಸಗಿ ಸಂಸ್ಥೆ.
ಇಂತಹ ಸಂಸ್ಥೆಗಳನ್ನು ಒಬ್ಬರೋ, ಇಬ್ಬರೋ ಇಲ್ಲವೇ ಬೆರಳೆಣಿಕೆಯಷ್ಟು ಸಂಖ್ಯೆಯ ಉತ್ಸಾಹಿ ಉದ್ಯಮಿಗಳೋ ಸ್ಥಾಪಿಸುತ್ತಾರೆ. ಯಾವುದೋ ಒಂದು ಹೊಸ ಸಾಧನವನ್ನು ನಿರ್ಮಿಸುವುದನ್ನು ಅಥವಾ ಹೊಸ ಸೇವೆಯನ್ನು ಒದಗಿಸುವುದನ್ನು ಉದ್ದೇಶವಾಗಿಟ್ಟುಕೊಂಡು ಇಂತಹ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ. ಅಂತಹ ಸಾಧನ ಹಾಗೂ ಸೇವೆಗೆ ಭವಿಷ್ಯದಲ್ಲಿ ಸಾಕಷ್ಟು ಬೇಡಿಕೆಯಿರುತ್ತದೆ ಎಂಬ ನಂಬಿಕೆಯ ತಳಹದಿಯ ಮೇಲೆ ಆ ಸಂಸ್ಥೆಯನ್ನು ಸಾಮಾನ್ಯವಾಗಿ ಯುವ ಸಾಹಸಿ ವಾಣಿಜ್ಯೋದ್ಯಮಿಗಳು ಸ್ಥಾಪಿಸುತ್ತಾರೆ.

‘ಸ್ಕೈರೂಟ್’ ಸಂಸ್ಥೆಯನ್ನು ಪವನ್ ಚಂದನಾ ಹಾಗೂ ಭರತ್ ಡಾಕಾ ಎಂಬ ಇಬ್ಬರು ಉತ್ಸಾಹಿ ತರುಣರು 2018ರಲ್ಲಿ ಸ್ಥಾಪಿಸಿದರು. ಮೊದಲಿಗೆ ಪುಟ್ಟ ಸಾಧನಗಳನ್ನು ಭೂವಾತಾವರಣದಾಚೆ ಇರುವ ಅನನ್ಯವಾದ ಅಂತರಿಕ್ಷ ಪರಿಸರಕ್ಕೆ ಕೊಂಡೊಯ್ಯುವುದು, ಆ ಬಳಿಕ ಪುಟ್ಟ ಉಪಗ್ರಹಗಳನ್ನು ಭೂಕಕ್ಷೆಗೆ ಉಡಾಯಿಸುವ ಸೇವಾ ಸಾಮರ್ಥ್ಯವನ್ನು ಗಳಿಸುವುದು ‘ಸ್ಕೈರೂಟ್’ನ ಉದ್ದೇಶವಾಗಿದೆ.

ಹೀಗೆ ಭಾರತಾದ್ಯಂತ ಕುತೂಹಲವನ್ನು ಕೆರಳಿಸಿದ್ದ ವಿಕ್ರಂ-ಎಸ್ ಅನ್ನು ‘ಮಿಷನ್ ಪ್ರಾರಂಭ್’ (ಪ್ರಾರಂಭ ಅಭಿಯಾನ) ಅಂಗವಾಗಿ ಈ ನವೆಂಬರ್ 18ರ ಬೆಳಗ್ಗೆ 11.30ಕ್ಕೆ ಉಡಾಯಿಸಲಾಯಿತು. ಅಂತರಿಕ್ಷಕ್ಕೆ ತೆರಳಬೇಕಿದ್ದ ಮೂರು ಸಾಧನಗಳನ್ನು ಹೊತ್ತು ಆಗಸಕ್ಕೇರಿದ ನಂತರ 89 ಕಿಲೋಮೀಟರ್ ಎತ್ತರವನ್ನು ಕೇವಲ ಎರಡೂವರೆ ನಿಮಿಷಗಳಲ್ಲಿ ನಿರಾಯಾಸವಾಗಿ ತಲುಪಿದ ವಿಕ್ರಂ, ನಂತರ ಆ ಮೊದಲು ಉದ್ದೇಶಿಸಿದಂತೇ ಬಂಗಾಳ ಕೊಲ್ಲಿಗೆ ಬಂದು ಬಿದ್ದಿತು. ಅಲ್ಲಿಗೆ ಭಾರತದ ಮೊದಲ ಖಾಸಗಿ ರಾಕೆಟ್‌ನ ಪರೀಕ್ಷಾ ಉಡಾವಣೆ ಸಂಪೂರ್ಣವಾಗಿ ಯಶಸ್ವಿಯಾಯಿತು.

ಇದು ಒಂದು ಸಣ್ಣ ಹೆಜ್ಜೆಯಾಗಿದ್ದರೂ ಅಂತರಿಕ್ಷಯಾನಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಇರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಈ ಯಶಸ್ವಿ ಉಡಾವಣೆ ಮುನ್ನುಡಿ ಬರೆದಿದೆ ಎಂದು ವಿಶ್ಲೇಷಕರು ಅರ್ಥೈಸಿದ್ದಾರೆ.

ಇಂದು ಉಪಗ್ರಹಗಳನ್ನು ನಿರ್ಮಿಸಿ ಉಡಾಯಿಸುವ, ನಿಯಂತ್ರಿಸುವ ಹಾಗೂ ಆ ಸಾಧನಗಳನ್ನು ಜೀವನದ ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದ ಜಾಗತಿಕ ಅಂತರಿಕ್ಷ ಉದ್ಯಮ ಸುಮಾರು 33 ಸಾವಿರ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆದರೆ ಅಂತರಿಕ್ಷದಲ್ಲಿನ ಕೆಲವೇ ಶಕ್ತ ರಾಷ್ಟ್ರಗಳ ಪೈಕಿ ಒಂದಾಗಿರುವ ಭಾರತದ ಪಾಲು ಇದರಲ್ಲಿ ಕೇವಲ ಶೇಕಡಾ ಎರಡರಷ್ಟಿದೆ, ಅಷ್ಟೆ. ಹೀಗಾಗಿ ಅಂತರಿಕ್ಷ ಉದ್ಯಮಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಭಾರತ ಗಳಿಸಬೇಕಾದಲ್ಲಿ ವಿವಿಧ ಅಂತರಿಕ್ಷ ಸೇವೆಗಳನ್ನು ನೀಡುವ ಸಂಬಂಧದಲ್ಲಿ ಅದರ ಅರ್ಹತೆಯೂ ಹೆಚ್ಚಬೇಕು. ಅಂದರೆ ರಾಕೆಟ್ಟುಗಳನ್ನು ಹಾಗೂ ಉಪಗ್ರಹಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸುವುದು, ಉಡಾಯಿಸುವುದು ಹಾಗೂ ಸೇವೆಗೆ ಅಣಿಮಾಡುವುದು ಅದಕ್ಕೆ ಸಾಧ್ಯವಾಗಬೇಕು.

ಭಾರತದ ಅಂತರಿಕ್ಷ ಕಾರ್ಯಕ್ರಮ ಆದಿಯಿಂದಲೂ ಸರ್ಕಾರಿ ಸ್ವಾಮ್ಯದಲ್ಲಿದೆ. ಭಾರತ ಸರ್ಕಾರದ ಸಂಸ್ಥೆಯಾದ ‘ಇಸ್ರೊ’ ಭಾರತೀಯ ಅಂತರಿಕ್ಷ ಕಾರ್ಯಕ್ರಮವನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತು ತನ್ನ ಸಾಧನೆಗಳಿಂದಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದೆ. ವಾಣಿಜ್ಯಾತ್ಮಕವಾಗಿ ಇತರ ದೇಶಗಳ ಉಪಗ್ರಹಗಳನ್ನು ಕೆಲವು ಬಾರಿ ನಿರ್ಮಿಸಿದೆ; ಹಲವು ಬಾರಿ ಯಶಸ್ವಿಯಾಗಿ ಉಡಾಯಿಸಿದೆ. ಇತ್ತೀಚೆಗೆ ಲಂಡನ್ನಿನ ‘ಒನ್ ವೆಬ್’ ಸಂಸ್ಥೆಯ 34 ಉಪಗ್ರಹಗಳನ್ನು ಇಸ್ರೊದ ‘ಎಲ್. ವಿ. ಎಮ್-3’ ರಾಕೆಟ್ ನ ಒಂದೇ ಯಾನದಲ್ಲಿ ಯಶಸ್ವಿಯಾಗಿ ಉಡಾಯಿಸಿದ ವಿಷಯ ಇದಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿದೆ.
ಆದರೆ ಸರ್ಕಾರಿ ಸ್ವಾಮ್ಯದ ಇಸ್ರೊ ಕೇವಲ ದೇಶದ ಸಮಗ್ರ ಅಭಿವೃದ್ಧಿಗೆ, ಮುನ್ನಡೆಗೆ ಹಾಗೂ ರಕ್ಷಣೆಗೆ ಅಗತ್ಯವಾದ ಉಪಗ್ರಹಗಳನ್ನು ನಿರ್ಮಿಸಿ ಉಡಾಯಿಸುವ ಹಾಗೂ ಕೆಲವು ಬಾರಿ ವಿದೇಶಿ ಗ್ರಾಹಕರಿಗಾಗಿ ಉಪಗ್ರಹಗಳನ್ನು ನಿರ್ಮಿಸುವ/ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಹೊರತಾಗಿ ಇಂದು ದೊಡ್ಡ ಮಟ್ಟದಲ್ಲಿ ವಿವಿಧ ಅಂತರಿಕ್ಷ ಸೇವೆಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಒದಗಿಸುವ ಸ್ಥಿತಿಯಲ್ಲಿಲ್ಲ. ಈ ನಿಟ್ಟಿನಲ್ಲಿ ಒಂದೇ ಬಗೆಯ ಮಾಮೂಲಿ ರಾಕೆಟ್‌ಗಳನ್ನು ನಿರ್ಮಿಸುವ ಕಾರ್ಯದಿಂದ ಇಸ್ರೊವನ್ನು ಕ್ರಮೇಣ ಮುಕ್ತಗೊಳಿಸುವ ಆ ಕೆಲಸವನ್ನು ಖಾಸಗಿ ಉದ್ದಿಮೆಗಳಿಗೆ ವರ್ಗಾಯಿಸುವ ಉದ್ದೇಶದಿಂದ 2019ರಲ್ಲಿ ‘ಎನ್. ಎಸ್. ಐ. ಎಲ್.’ ಎಂಬ ವಾಣಿಜ್ಯಾತ್ಮಕ ಸಂಸ್ಥೆಯನ್ನು ಭಾರತ ಸರ್ಕಾರ ಸ್ಥಾಪಿಸಿತು. ಜಾಗತಿಕ ಮಟ್ಟದಲ್ಲಿ ಅಂತರಿಕ್ಷ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಖಾಸಗೀಕರಣವನ್ನು ಎಚ್ಚರಿಕೆಯಿಂದ ಗಮನಿಸಿದ ಸರ್ಕಾರ ಭಾರತದ ಸುಪ್ತವಾದ ಸಾಮರ್ಥ್ಯವನ್ನು ಹೆಚ್ಚಿಸಿ ಜಾಗತಿಕ ಅಂತರಿಕ್ಷ ಆರ್ಥಿಕ ಕ್ಷೇತ್ರದಲ್ಲಿ ಭಾರತದ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿ ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡುವ ದೃಷ್ಟಿಯಿಂದ ನಮ್ಮ ಅಂತರಿಕ್ಷ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ತೆರೆಯಿತು. ಇದರಿಂದಾಗಿ ಮುಂಬರುವ ಖಾಸಗಿ ಉದ್ದಿಮೆಗಳೊಂದಿಗೆ ಕೈಜೋಡಿಸಲು, ಅವುಗಳಿಗೆ ಸಮನಾದ ಅವಕಾಶ ದೊರಕಿಸಲು ಹಾಗೂ ಅವುಗಳ ಚಟುವಟಿಕೆಗಳನ್ನು ನಿಯಂತ್ರಿಸಲು ‘ಇನ್ ಸ್ಪೇಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ಇಸ್ರೊದ ಉಡಾವಣಾ ನೆಲೆಗಳನ್ನು, ದುಬಾರಿ ಭೂಸೌಲಭ್ಯಗಳನ್ನು ಖಾಸಗಿಯವರ ಬಳಕೆಗೆ ತೆರಪು ಮಾಡಿತು.

ಈ ರೀತಿ ಅಂತರಿಕ್ಷ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾದ ಪರಿಸರಕ್ಕೆ ಎಡೆಮಾಡಿಕೊಡುವ ಮೂಲಕ ಹೊಸ ತಂತ್ರಜ್ಞಾನಗಳನ್ನು, ವಿಧಾನಗಳನ್ನು ತ್ವರಿತವಾಗಿ ಹಾಗೂ ಆರ್ಥಿಕ ದೃಷ್ಟಿಯಿಂದ ದಕ್ಷವಾಗಿ ಅಭಿವೃದ್ಧಿಪಡಿಸುವುದಕ್ಕೆ ಅನುವಾಗುವ ಭಾರತ ಸರ್ಕಾರದ ನಿರ್ಧಾರವನ್ನು ಭಾರತೀಯ ಖಾಸಗಿ ಉದ್ದಿಮೆಗಳು ಸ್ವಾಗತಿಸಿದವು. ತಮ್ಮ ಕ್ರಾಂತಿಕಾರಕ ಸೇವೆಗಳಿಂದಾಗಿ ಅಂತರಿಕ್ಷ ಕ್ಷೇತ್ರದ ಸ್ವರೂಪವನ್ನೇ ಜಾಗತಿಕ ಮಟ್ಟದಲ್ಲಿ ಬದಲಿಸಿ ಖ್ಯಾತಿಯನ್ನು ಗಳಿಸಿರುವ ‘ಸ್ಪೇಸ್ ಎಕ್ಸ್’ ಸಂಸ್ಥೆಯ ಇಲಾನ್ ಮಸ್ಕ್, ‘ಬ್ಲೂ ಆರಿಜಿನ್’ ಸಂಸ್ಥೆಯ (ಅಮೇಜಾನ್ ಖ್ಯಾತಿಯ) ಜೆಫ್‌ ಬೇಜೋಸ್ ಹಾಗೂ ‘ವರ್ಜಿನ್ ಗ್ಯಾಲಕ್ಟಿಕ್’ ಸಂಸ್ಥೆಯ ರಿಚರ್ಡ್ ಬ್ರಾನ್ಸನ್, ಭಾರತದ ಅನೇಕ ಉತ್ಸಾಹಿ ಯುವ ವಾಣಿಜ್ಯೋದ್ಯಮಿಗಳಿಗೆ ಸ್ಫೂರ್ತಿಯಾದರು. ಅಂತಹ ಇಬ್ಬರು ತರುಣರು ಸ್ಥಾಪಿಸಿದ ಹೊಸ ಸಂಸ್ಥೆಯೇ ತಮ್ಮ ‘ವಿಕ್ರಂ-ಎಸ್’ ರಾಕೆಟ್ಟನ್ನು ‘ಇಸ್ರೊ’ದ ನೆರವಿನಿಂದ ಇತ್ತೀಚೆಗೆ ಯಶಸ್ವಿಯಾಗಿ ಉಡಾಯಿಸಿದ ‘ಸ್ಕೈರೂಟ್’ ಸಂಸ್ಥೆಯಾಗಿದೆ. ಆ ರಾಕೆಟ್‌ನ ನಿರ್ಮಾಣದಲ್ಲಿ ಅದು ಮಿಶ್ರಲೋಹಗಳಿಗೆ ಬದಲಾಗಿ ವಿಶೇಷ ಪ್ಲಾಸ್ಟಿಕ್ ನಂತಹ ‘ಕಂಪಾಸಿಟ್ಸ್’ಗಳನ್ನು ಹಾಗೂ ‘ತ್ರೀ–ಡಿ ಪ್ರಿಂಟಿಂಗ್’ನಂತಹ ಕ್ರಾಂತಿಕಾರಕ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.