ADVERTISEMENT

‘ವರ್ಚುಯಲ್ ಸ್ಪೇಸ್’ ಇದ್ದರೆ ಅಂತರ್ಜಾಲವೇ ಬೇಕಿಲ್ಲ!

ನೇಸರ ಕಾಡನಕುಪ್ಪೆ
Published 4 ಅಕ್ಟೋಬರ್ 2023, 0:30 IST
Last Updated 4 ಅಕ್ಟೋಬರ್ 2023, 0:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಿಮ್ಮಲ್ಲಿ ಕೆಲವರು ಜನಪ್ರಿಯ ‘ಸ್ಟಾರ್ ಟ್ರೆಕ್’ ಧಾರಾವಾಹಿಗಳನ್ನು ನೋಡಿರಬಹುದು. ಇಂಗ್ಲಿಷ್ ಟೆಲಿವಿಷನ್ ಕ್ಷೇತ್ರದಲ್ಲಿ ಇಂದಿಗೂ ಅತಿ ಹೆಚ್ಚು ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಅತಿ ಹಳೆಯ ಧಾರಾವಾಹಿಗಳಿವು. ಈ ಧಾರಾವಾಹಿಗಳ ಉಲ್ಲೇಖ ಇಲ್ಲೇಕೆ‌ ಆಗುತ್ತಿದೆ ಎಂಬುದಕ್ಕೆ ಒಂದು ಪ್ರಮುಖ ಕಾರಣವಿದೆ.

ನಾವೀಗ ಹೇಳಲೊರಟಿರುವುದು ‘ವರ್ಚುಯಲ್ ಸ್ಪೇಸ್’ ಅಥವಾ ‘ಕೃತಕ ಭೌತಿಕ ಸ್ಥಳ’ಗಳ ಬಗ್ಗೆ. ಮಾರ್ಕ್ ಜೂಕರ್ ಬರ್ಗ್ ‘ಮೆಟಾ ವರ್ಸ್’ ಬಗ್ಗೆ ಎರಡು ವರ್ಷಗಳ ಹಿಂದೆ ಪ್ರಸ್ತಾಪಿಸಿದಾಗ ಅನೇಕರು ಹುಬ್ಬೇರಿಸಿದ್ದರು. ಆದರೆ, ಅದೇನು ಹೊಸ ಪರಿಕಲ್ಪನೆಯಲ್ಲ. ಸುಮಾರು 30 ವರ್ಷಗಳ ಹಿಂದೆಯೇ ಮೇಲೆ ಉಲ್ಲೇಖಿಸಿದ ‘ಸ್ಟಾರ್ ಟ್ರೆಕ್’ ಧಾರಾವಾಹಿ–ಸರಣಿಗಳಲ್ಲಿ ‘ಹಾಲೋಡೆಕ್’ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಲಾಗಿತ್ತು. ಆ ಪರಿಕಲ್ಪನೆ ಈಗ ಸಿನಿಮಾ ಅಥವಾ ಧಾರಾವಾಹಿ ಹಂತವನ್ನು ದಾಟಿ ನಿಜ ಜೀವನದಲ್ಲೇ ಕಾಲಿಡಲು ಹೊರಟಿದೆ.

ADVERTISEMENT

ಪ್ರತಿಷ್ಠಿತ ‘ನೇಚರ್ ಹ್ಯೂಮನ್ ಬಿಹೇವಿಯರ್’ ನಿಯತಕಾಲಿಕೆಯಲ್ಲಿ ಅಮೆರಿಕದ ನಾಟ್ರೆ ಡೇಮ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಿಯಾಗೋ ಗೊಮೆನ್ಸ್ ಝರಾ ಹಾಗೂ ಯೇಲ್ ವಿಶ್ವವಿದ್ಯಾನಿಲಯದ ಪೀಟರ್ ಸ್ಕೈಫರ್, ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾನಿಲಯದ ಡಾಶುನ್ ವ್ಯಾಂಗ್ ಅವರು ‘ವಿಜ್ಞಾನದಲ್ಲಿ ಮೆಟಾ ವರ್ಸ್ ಭರವಸೆ ಹಾಗೂ ಇತಿಮಿತಿಗಳು’ ಎಂಬ ವೈಜ್ಞಾನಿಕ ಪ್ರಬಂಧವನ್ನು ಮಂಡಿಸಿದ್ದಾರೆ. ಈ ಪ್ರಬಂಧವು ಕೆಲವು ಅಚ್ಚರಿಯ ವಿಚಾರಗಳನ್ನು ಪ್ರಸ್ತಾ‍ಪಿಸಿದೆ. ಇದರ ಪ್ರಕಾರ ಬಹುತೇಕ ಮುಂದಿನ ಹತ್ತು ವರ್ಷಗಳಲ್ಲಿ ‘ಮೆಟಾ ವರ್ಸ್’ ಅಥವಾ ‘ಕೃತಕ ಭೌತಿಕ ಸ್ಥಳಗಳು ನಮ್ಮೆಲ್ಲ ಭೌತಿಕ ಕಾರ್ಯಕ್ಷೇತ್ರಗಳನ್ನು ಸಂಪೂರ್ಣ ಆಕ್ರಮಿಸಿಕೊಂಡಿರುತ್ತವೆ. ಅದರಿಂದ ಇಂಟರ್‌ನೆಟ್, ವಿದ್ಯುತ್ ಇತ್ಯಾದಿ ಶಕ್ತಿಮೂಲಗಳ ಅಗತ್ಯವೇ ಇರುವುದಿಲ್ಲ’ ಎಂದಿದ್ದಾರೆ.

ಇಂದು ನಮ್ಮೆಲ್ಲ ವೃತ್ತಿಸಂಬಂಧಿತ ಕೆಲಸಗಳಿಗೆ ಕಚೇರಿಯ ಅಗತ್ಯವಿದೆ. ಅದು ಕಚೇರಿಯಾಗಿರಬಹುದು, ಶಾಲಾ, ಕಾಲೇಜು ಆಗಿರಬಹುದು. ಜನರು ಒಮ್ಮೆಗೆ ಒಂದು ಕಡೆ ಸೇರಿ ಬೌದ್ಧಿಕ ಚರ್ಚೆಯ ಮೂಲಕ ಗುರಿಯೊಂದನ್ನು ಮುಟ್ಟಲು ಅಥವಾ ಸಾಧಿಸಲು ಪ್ರಯತ್ನ ಪಡುತ್ತಿರುತ್ತಾರೆ. ಆದರೆ ‘ಮೆಟಾ ವರ್ಸ್’ ಅಥವಾ ‘ಕೃತಕ ಭೌತಿಕ ಸ್ಥಳಗಳ ಪ್ರಕಾರ ಈ ಬೌದ್ಧಿಕ ಮಂಥನಕ್ಕೆ ಈಗಿನಂತೆ ಭೌತಿಕವಾದ ಜಾಗದ ಅಗತ್ಯವಿಲ್ಲ. ಎಲ್ಲವೂ ಕೃತಕ ಭೌತಿಕ ಸ್ಥಳದಲ್ಲೇ ಆಗಬಲ್ಲದು. ಆದರೆ, ಇದು ‘ವರ್ಕ್‌ ಫ್ರಂ ಹೋಂ’ ರೀತಿಯ ಪರಿಕಲ್ಪನೆಯಲ್ಲ.

ಇದನ್ನೇ ‘ಸ್ಟಾರ್ ಟ್ರೆಕ್ನ’ ‘ಹಾಲೋಡೆಕ್‌’ನಲ್ಲಿ ತೋರಿಸಲಾಗಿತ್ತು. ಅಂತರಿಕ್ಷ ವಾಹನದ ಖಾಲಿ ಕೊಠಡಿಯೊಂದರಲ್ಲಿ ಕಂಪ್ಯೂಟರ್ ನಿಯಂತ್ರಿತ ಸಾಧನಗಳನ್ನು ಅಳವಡಿಸಿರಲಾಗುತ್ತದೆ. ವ್ಯಕ್ತಿಗಳು ಈ ಕೊಠಡಿಯನ್ನು ಪ್ರವೇಶಿಸಿ ತಮ್ಮಿಷ್ಟದ ಜಾಗದ ಹೆಸರನ್ನು ಹೇಳಿದರೆ ಸಾಕು. ಆ ಜಾಗ ಅಲ್ಲಿ ಸೃಷ್ಟಿಯಾಗುತ್ತದೆ. ಆ ಜಾಗದಲ್ಲಿ ನೀವು ಎಲ್ಲಿ ಬೇಕಾದರೂ ಓಡಾಡಬಹುದು. ಅಲ್ಲಿರುವ ಕೃತಕ ಜನರ‌ ಜೊತೆಗೆ ಸಂವಾದಿಸಬಹುದು. ಹಸ್ತಲಾಘವ ಮಾಡಬಹುದು. ನೆನಪಿರಲಿ ಅವೆಲ್ಲವೂ ಕೃತಕ. ಆದರೆ ನಿಮ್ಮ ಮಿದುಳು ಅವನ್ನು ಸತ್ಯ ಎನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನ ನಕಲನ್ನು ಸೃಷ್ಟಿ ಮಾಡಿರುತ್ತದೆ!

ಡಿಯಾಗೋ ಗೊಮೆಸ್‌ ಅವರ ಪ್ರಕಾರ, ‘ಬೆಳಕು ಹಾಗೂ ಶಕ್ತಿಯನ್ನು ಬಳಸಿಕೊಂಡು ಯಾವುದೇ ವಸ್ತುವನ್ನು ಕೃತಕವಾಗಿ ಸೃಷ್ಟಿಸಬಹುದು. ಅದು ಮಾತನಾಡಬಲ್ಲದು, ಉಸಿರಾಡಬಲ್ಲದು. ಇದು ಸಾಪೇಕ್ಷತಾ ಸಿದ್ಧಾಂತವನ್ನು ಆಧರಿಸಿರುವಂಥದ್ದು. ಈ ಅನ್ವೇಷಣೆ ಈಗ‌ ಬಹುತೇಕ ಪೂರ್ಣಗೊಂಡಿದ್ದು ಮಾರುಕಟ್ಟೆಗೆ‌ ಹಲವು ಹೆಸರುಗಳಲ್ಲಿ ಲಗ್ಗೆ ಇಡಲಿದೆ. ಇದು ಮಾರ್ಕ್ ಜೂಕರ್‌ ಬರ್ಗ್ ಅವರ ಆಸ್ತಿಯೂ ಆಗಿರುವುದಿಲ್ಲ. ಏಕೆಂದರೆ, ತಾತ್ವಿಕವಾಗಿ ಸಂಶೋಧನೆಯು ಒಟ್ಟು ಪ್ರಪಂಚದ ಆಸ್ತಿ. ಮೊದಲ ಕೆಲವು ವರ್ಷಗಳು ಮಾತ್ರ ಸಂಶೋಧನೆಯ ಮೇಲೆ ಹಕ್ಕು ಇರುತ್ತದೆ.

ಇಂಟರ್ನೆಟ್‌ ಕಾಲ ಅಂತ್ಯ

‘ಮೆಟಾ ವರ್ಸ್’ ಅಥವಾ ಆ ಮಾದರಿಯ ಇತರೇ ‘ವರ್ಚುಯಲ್ ಸ್ಪೇಸ್’ ವೇದಿಕೆಗಳು ಆರಂಭದಲ್ಲಿ ನಿರ್ದಿಷ್ಟ ಕಾರ್ಯಾಧಾರಿತ ದ್ವೀಪಗಳಂತೆ ಸೃಷ್ಟಿಯಾಗಿ, ಬಳಿಕ ಅವುಗಳ ಸಂಖ್ಯೆ ಹೆಚ್ಚಾಗಿ ಅವು ಒಂದನ್ನೊಂದು ಸಂಧಿಸುತ್ತವೆ. ಉದಾಹರಣೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಾಮಾಜಿಕ ಜಾಲತಾಣದಲ್ಲಿನ ಚಟುವಟಿಕೆಗಳು ಮತ್ತೊಂದು ಸಾಮಾಜಿಕ ಜಾಲತಾಣದಲ್ಲೂ ಕಾಣುವಂತಾಗಿರುವುದು. ಈ ರೀತಿ ‘ವರ್ಚಯುಲ್ ಸ್ಪೇಸ್’ಗಳು ಸಂಧಿಸಿದಾಗ ವಿಚಾರ ಹಾಗೂ ಶಕ್ತಿಗಳ ವಿನಿಮಯವಾಗುತ್ತದೆ. ಮುಂದೊಂದು ದಿನ ಈಗ‌ ಚಾಲ್ತಿಯಲ್ಲಿರುವ ಲೋಕಲ್ ಏರಿಯಾ ನೆಟ್‌ವರ್ಕ್‌(ಲ್ಯಾನ್)ನಂತೆ ಇಂಟರ್‌ನೆಟ್‌ ಸಂಪರ್ಕವೇ ಇಲ್ಲದೇ‌ ದತ್ತಾಂಶ ರವಾನೆ ಸಾಧ್ಯವಾಗಬಲ್ಲದು ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಇದರಿಂದ ಉಳಿಯುವ ಹಣವೂ ಅಪಾರ ಎಂದಿದ್ದಾರೆ.

ಅಪಾಯಗಳೇನು?

ಜನರ ಸಂಪರ್ಕವೇ ಇಲ್ಲದಿರುವ ಕಾರಣ ಸಾಮಾಜಿಕ ವ್ಯವಸ್ಥೆಯ ಅರಿವೇ ಇಲ್ಲದಂತಾಗಬಹುದು. ಸುಖ-ಕಷ್ಟಗಳು ಗೊತ್ತಾಗದೆಯೇ ಇರಬಹುದು. ಜನ‌ರ‌ ಜೊತೆಗೆ ಬೆರೆಯದ ಕಾರಣ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂದಬಹುದು. ಸೃಜನಶೀಲತೆ, ಚಿಂತನಾಶಕ್ತಿ ಕಡಿಮೆಯಾಗಬಹುದು. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿ- ಶಿಕ್ಷಕ ಸಂಪರ್ಕ ಭೌತಿಕವಾಗಿ ಆಗದ ಕಾರಣ ಕಲಿಕೆ ಪರಿಣಾಮಕಾರಿಯಾಗಿ ಇರದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ವಿಜ್ಞಾನಿಗಳು ಈ ಅಡ್ಡಪರಿಣಾಮಗಳಲ್ಲಿ ಕೆಲವನ್ನು ಅಲ್ಲಗಳೆಯುತ್ತಾರೆ. ಇವೆಲ್ಲ ಈಗಿನ ನಮ್ಮ ಪರಿಮಿತಜ್ಞಾನದ ವ್ಯಾಖ್ಯಾನ ಎನ್ನುತ್ತಾರೆ. ನಾವು ಅನುಭವಿಸುವ ಪ್ರತಿಯೊಂದು ವಿಚಾರವೂ ವಿಜ್ಞಾನಿಗಳ ಪ್ರಕಾರ ಅಂಕಿಗಳಷ್ಟೇ. ಮಿದುಳು ಈ ಅಂಕಿಗಳನ್ನು ಗ್ರಹಿಸಿ, ಬದಲಿಸಿಕೊಂಡು ಅರ್ಥ ಮಾಡಿಕೊಳ್ಳುತ್ತದೆ. ಉದಾಹರಣೆಗೆ, ಕಣ್ಣಿನ ಮೂಲಕ ಬೆಳಕು ಮಿದುಳಿಗೆ ತಲುಪುವುದು. ಚರ್ಮ ಸ್ಪರ್ಶಿಸುವುದು. ಬಳಿಕ ಮಿದುಳು ಅದನ್ನು ಅರ್ಥೈಸುವುದು. ಹಾಗಾಗಿ, ವ್ಯಕ್ತಿಯ ದೇಹದ ಸುತ್ತಲೂ ಸೃಷ್ಟಿಯಾಗುವ ಅಂಕಿ–ಸಂಖ್ಯೆಗಳು ಭೌತಿಕವಾಗಿದ್ದರೂ ಒಂದೇ ಕೃತಕವಾಗಿದ್ದರೂ ಒಂದೇ ಎಂದು ವಿಜ್ಞಾನಿಗಳು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.