ಭರೂಚ್ (ಗುಜರಾತ್): ‘ಚಂದ್ರನ ರಾತ್ರಿಯ ಸಂದರ್ಭದಲ್ಲಿ ದೀರ್ಘಕಾಲದ ನಿದ್ರೆಗೆ ಕಳುಹಿಸಲಾಗಿದ್ದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್, ಚಂದ್ರನ ಹಗಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸುವ ಪ್ರಕ್ರಿಯೆ ಸ್ವಯಂ ಚಾಲಿತ. ಇದನ್ನು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ ಮಾಡಲಾಗದು’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಸ್ಪೇಸ್ ಅಪ್ಲಿಕೇಷನ್ ಸೆಂಟರ್‌ನ ನಿರ್ದೇಶಕ ನೀಲೇಶ್ ಎಂ. ದೇಸಾಯಿ ಹೇಳಿದ್ದಾರೆ.
ಸೆ. 22ರಂದು ಚಂದ್ರನಲ್ಲಿ ಹಗಲು ಆರಂಭವಾಗಿದೆ. ಇದರಿಂದಾಗಿ ಲ್ಯಾಂಡರ್ ಹಾಗೂ ರೋವರ್‌ಗೆ ಅಳವಡಿಸಿರುವ ಸೌರ ಫಲಕದಿಂದ ಅವುಗಳು ಪೂರ್ಣ ಚಾರ್ಜ್ ಆಗಿವೆ. ಆದರೆ ಅಲ್ಲಿಂದ ಯಾವುದೇ ಸಂದೇಶ ಬಂದಿಲ್ಲ. ವಿಕ್ರಮ್ ಮತ್ತು ಪ್ರಜ್ಞಾನ್ ಜತೆ ಸಂಪರ್ಕ ಬೆಳೆಸುವ ಪ್ರಯತ್ನ ಮುಂದುವರಿದಿದೆ ಎಂದು ಇಸ್ರೊ ತನ್ನ ‘ಎಕ್ಸ್’ನಲ್ಲಿ ಹೇಳಿದೆ.
‘ತೀವ್ರ ಚಳಿಯನ್ನು ಎದುರಿಸಿರುವ ಸಾಧನದಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಸುಸ್ಥಿಗೆ ಮರಳುವ ಸಾಧ್ಯತೆ ಶೇ 50ರಷ್ಟು ಮಾತ್ರ. ಆದರೆ ಈಗಾಗಲೇ ಈ ಸಾಧನಗಳು ಅವುಗಳಿಗೆ ನೀಡಲಾದ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿವೆ. ಒಂದೊಮ್ಮೆ ಲ್ಯಾಂಡರ್ ಮತ್ತು ರೋವರ್ ತಮ್ಮ ಕಾರ್ಯಗಳನ್ನು ಮರಳಿ ಆರಂಭಿಸಿದರೆ, ಈಹಿಂದೆ ನಡೆಸಿದ ಕಾರ್ಯಗಳನ್ನೇ ಮತ್ತೊಮ್ಮೆ ನಡೆಸಲಾಗುವುದು’ ಎಂದು ದೇಸಾಯಿ ಹೇಳಿದ್ದಾರೆ.
‘ಪ್ರಜ್ಞಾನ್ ಎಲ್ಲಾ ಹಂತಗಳಲ್ಲೂ ಪರೀಕ್ಷಿಸಿ ಮತ್ತು ಪರಿಶೀಲಿಸಿದ ನಂತರವೇ ಚಂದ್ರನಲ್ಲಿಗೆ ಕಳುಹಿಸಲಾಗಿದೆ. ಹೀಗಾಗಿ ಅದು ತನ್ನ ಕಾರ್ಯವನ್ನು ಆರಂಭಿಸಲಿದೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ನಾವು ಕಾಯಬೇಕಷ್ಟೇ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 23ರಂದು ಉಡ್ಡಯನಗೊಂಡ ಮಾರ್ಕ್ 3 ರಾಕೆಟ್ ಮೂಲಕ ಬಾಹ್ಯಾಕಾಶ ಸೇರಿದ ಚಂದ್ರಯಾನ–3ರ ನೌಕೆ 40 ದಿನಗಳ ನಂತರ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿತ್ತು. ಶಿವಶಕ್ತಿ ಪಾಯಿಂಟ್ ಎಂದು ಕರೆಯಲಾದ ಈ ಸ್ಥಳದಿಂದ 100 ಮೀಟರ್‌ವರೆಗೆ ರೋವರ್ ಸಂಚರಿಸಿ ಮಾಹಿತಿ ಕಲೆಹಾಕಿ ಅದನ್ನು ಭೂಮಿಯಲ್ಲಿರುವ ಕೇಂದ್ರಕ್ಕೆ ರವಾನಿಸಿತ್ತು. ಆದರೆ ಸೆ. 4ರಂದು ಚಂದ್ರನದಲ್ಲಿ ಆರಂಭವಾದ ರಾತ್ರಿಯಿಂದಾಗಿ ಲ್ಯಾಂಡರ್ ಮತ್ತು ರೋವರ್ ಅನ್ನು ವಿಜ್ಞಾನಿಗಳು ನಿದ್ರಾವಸ್ಥೆಗೆ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.