ADVERTISEMENT

ಪುಸ್ತಕ ಪ್ರಿಯರ ಫೇಸ್‌ಬುಕ್‌ ಪುಟ

ಪೀರ್‌ ಪಾಶ, ಬೆಂಗಳೂರು
Published 18 ಜೂನ್ 2018, 14:33 IST
Last Updated 18 ಜೂನ್ 2018, 14:33 IST
‘ನಾನೊಬ್ಬ ಪುಸ್ತಕ ಪ್ರೇಮಿ’ ಫೇಸ್‌ಬುಕ್‌ ಪುಟದ ಕವರ್‌ಫೋಟೊ
‘ನಾನೊಬ್ಬ ಪುಸ್ತಕ ಪ್ರೇಮಿ’ ಫೇಸ್‌ಬುಕ್‌ ಪುಟದ ಕವರ್‌ಫೋಟೊ   

‘ಪುಸ್ತಕ ಓದುವುದು ಕೇವಲ ಹವ್ಯಾಸವಷ್ಟೇ ಅಲ್ಲ, ಕೆಲವರಿಗೆ ಚಟ. ಆದರೆ ಈ ಚಟ ಬೆಳೆದವರನ್ನು ಸಮಾಜ ಚಟಗಾರ ಎಂಬ ಹೀನ ದೃಷ್ಟಿಯಿಂದ ನೋಡದೆ, ವಿಶೇಷ ಗೌರವದಿಂದ ಕಾಣುತ್ತದೆಂಬುದು ಸತ್ಯ. ಪುಸ್ತಕ ಓದುವುದು ನಿಮಗೆ ಹವ್ಯಾಸವಾಗಿರಲಿ ಅಥವಾ ಚಟವೇ ಆಗಿರಲಿ, ನೀವು ನಮ್ಮೊಂದಿಗಿರಿ ವಿಚಾರ ವಿನಿಮಯ, ವಿಮರ್ಶೆಗಾಗಿ’– ‘ನಾನೊಬ್ಬ ಪುಸ್ತಕ ಪ್ರೇಮಿ’ ಫೇಸ್‌ಬುಕ್‌ ಪುಟದ ಆಹ್ವಾನದ ಸಾಲುಗಳಿವು.

ಸಮಾನ ಮನಸ್ಕರಿಂದ ರೂಪಿತವಾದ ಈ ಪುಟ ಇಂದು ಸಾವಿರಾರು ಪುಸ್ತಕ ಪ್ರಿಯರಿಗೆ ನೂರಾರು ಪುಸ್ತಕಗಳ ಮಾಹಿತಿ ಹಂಚುತ್ತಿದೆ. ಪುಸ್ತಕಗಳ ಪರಿಚಯ, ಓದಿನ ಅನಿಸಿಕೆಗಳು, ಅನುಭವಗಳು ಇಲ್ಲಿವೆ. ಚರ್ಚೆಗೂ ಇಲ್ಲಿ ಅವಕಾಶವಿದೆ. ಸಾಹಿತ್ಯದ ಕುರಿತ ಅಗತ್ಯ ಸುದ್ದಿಗಳನ್ನೂ ಸದಸ್ಯರು ಇಲ್ಲಿ ಹಂಚಿಕೊಳ್ಳುತ್ತಾರೆ.

ಇಂತಿಂಥ ವಿಷಯದ ಮೇಲೆ ಯಾರು ಪುಸ್ತಕ ಬರೆದಿದ್ದಾರೆ. ಅಂತ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂಬ ಪ್ರಶ್ನೆಗಳನ್ನು ಈ ಪುಟದಲ್ಲಿ ಬರೆಯಬಹುದು. ಸದಸ್ಯರು ಕಮೆಂಟ್‌ನಲ್ಲಿ ಉತ್ತರಿಸಿ ನಿಮಗಿಷ್ಟದ, ಅಗತ್ಯವಿರುವ ಪುಸ್ತಕದ ಮಾಹಿತಿ ನೀಡುತ್ತಾರೆ. ಇನ್ನು ಕೆಲವರು ಪುಸ್ತಕಗಳ ಆನ್‌ಲೈನ್‌ ಖರೀದಿಯ ಲಿಂಕ್‌ಗಳನ್ನು ಹಾಕುತ್ತಾರೆ.

ADVERTISEMENT

ಕನ್ನಡದ ಹೊತ್ತಿಗೆಗಳು ಸೇರಿದಂತೆ ಹೆಸರಾಂತ ಮಹಾಕಾವ್ಯ, ಇಂಗ್ಲಿಷ್‌ ಕಾದಂಬರಿಗಳ ಪರಿಚಯದ ಬರಹಗಳು ಈ ಪುಟದಲ್ಲಿವೆ. ಕೆಲವು ಸದಸ್ಯರು ಪತ್ರಿಕೆ, ನಿಯತಕಾಲಿಕೆಗಳು ಕಾಲಕಾಲಕ್ಕೆ ಹೊರತರುವ ವಿಶೇಷಾಂಕಗಳ ವೈಶಿಷ್ಟ್ಯಗಳನ್ನು ಇಲ್ಲಿ ತಿಳಿಸುತ್ತಾರೆ. ಯುವ ಬರಹಗಾರರು ತಮ್ಮ ಕವನ ಸಂಕಲನ, ಕಥಾಸಂಗ್ರಹದ ಕುರಿತು ಸಂಕ್ಷಿಪ್ತ ಸಾರಾಂಶ ಪ್ರಕಟಿಸಿ, ಓದುಗರನ್ನು ತಲುಪುವ ಯತ್ನ ಮಾಡುತ್ತಾರೆ.

ಇದೊಂದು ಕ್ಲೋಸ್ಡ್‌ ಗ್ರೂಪ್‌. ಆದ್ದರಿಂದ ಸದಸ್ಯರಾಗಲು ಕೆಲವು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹರಟೆಗೆ ಇಲ್ಲಿ ಅವಕಾಶವಿಲ್ಲ. ಓದಿದ ಕೆಲವಾದರೂ ಪುಸ್ತಕಗಳ ಹೆಸರನ್ನು ನಮೂದಿಸಿದವರಿಗೆ ಮಾತ್ರ ಇಲ್ಲಿ ಸದಸ್ಯತ್ವ ಸಿಗುತ್ತದೆ. ಓದಿದ ಪುಸ್ತಕಗಳಿಗೆ 10ಕ್ಕೆ ಇಂತಿಷ್ಟು ಅಂಕ(ರೇಟಿಂಗ್‌) ಸಹ ನೀಡಬಹುದು. ಯಾವುದೇ ಭಾಷೆಯ ಪುಸ್ತಕದ ಕುರಿತು ಬರೆಯಬಹುದು. ಆದರೆ, ಆ ಬರಹ ಹಾಗೂ ಕಮೆಂಟ್‌ಗಳು ಕನ್ನಡ ಲಿಪಿಯಲ್ಲಿ ಇರಬೇಕು ಎಂಬ ನಿಯಮವಿದೆ. ಈ ಮೂಲಕ ಭಾಷೆ ಬೆಳೆಯಲು ಸಹಕರಿಸಿ ಎಂಬುದು ಪುಟ ರಚನಾಕಾರರ ಆಶಯವಾಗಿದೆ.

ಹೊಸನಗರದ ಶಿಕ್ಷಕ ಗಿರೀಶ್‌ ಕಾನಲೆ ಅವರಿಗೆ ಆರು ವರ್ಷದ ಹಿಂದೆ ಈ ಪುಟ ರೂಪಿಸುವ ಯೋಚನೆ ಹೊಳೆಯಿತು. ಸಮಾನ ಮನಸ್ಕರೊಂದಿಗೆ ಯೋಚನೆ ಹಂಚಿಕೊಂಡು ಪುಟ ರೂಪಿಸಿ, ನಿರ್ವಹಿಸುತ್ತ ಬರುತ್ತಿದ್ದಾರೆ. ಇದಕ್ಕೆ ಗುರುಪ್ರಸಾದ್‌ ಕಾನಲೆ, ಸಿ.ಎಸ್‌.ನಾಗೇಶ್‌ಕುಮಾರ್‌, ಡಿ.ಎನ್‌.ಮೋಹನ್‌ಕುಮಾರ್‌, ಪ್ರಶಾಂತ್‌ ಭಟ್‌, ವಿನಯ್‌ ಹೆಗ್ಡೆ ಸಹ ಕೈ ಜೋಡಿಸಿದ್ದಾರೆ. 2012ರಲ್ಲಿ ರಚಿಸಲಾದ ಈ ಪುಟಕ್ಕೆ ಈಗ 14 ಸಾವಿರದಷ್ಟು ಆಸಕ್ತರು ಸದಸ್ಯರಾಗಿದ್ದಾರೆ.

‘ಸದಸ್ಯರು ಹಾಕುವ ಪೋಸ್ಟ್‌ಗಳನ್ನು ಪೇಜ್‌ನ ಅಡ್ಮಿನ್‌, ಮಾಡರೇಟರ್‌ಗಳು ತಪ್ಪದೇ ಗಮನಿಸುತ್ತಾರೆ. ಉತ್ತಮ ಬರಹಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಪುಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಈ ಪುಟದ ನಿರ್ವಾಹಕರಲ್ಲಿ ಒಬ್ಬರಾದ ವಿಕಾಸ್‌ ಹೆಗ್ಡೆ.

‘ಪುಸ್ತಕದ ಪಿಡಿಎಫ್‌, ಸ್ಕ್ಯಾನ್‌ ಮಾಡಿದ ಪುಟಗಳನ್ನು ಇಲ್ಲಿ ಹಂಚಿಕೊಳ್ಳುವಂತಿಲ್ಲ. ಪುಸ್ತಕಗಳ ಮೂಲ ಲೇಖಕರ, ಪ್ರಕಾಶಕರ ಹಕ್ಕುಸ್ವಾಮ್ಯಕ್ಕೆ ಧಕ್ಕೆಯಾಗುವ ಯಾವುದೇ ಪೋಸ್ಟ್‌ಗಳನ್ನು ಇಲ್ಲಿ ಪ್ರಕಟಿಸಲ್ಲ. ಈ ಗ್ರೂಪ್‌ನಲ್ಲಿ ಹಿರಿಯ ಲೇಖಕರು ಮತ್ತು ಯುವ ಬರಹಗಾರರು ಇದ್ದಾರೆ. ಪುಟ ನಿರ್ವಹಣೆಯ ಕುರಿತು ಹಿರಿಯರು ಆಗಾಗ ಮಾರ್ಗದರ್ಶನ ಮಾಡುತ್ತಾರೆ’ ಎಂದು ವಿಕಾಸ್‌ ತಿಳಿಸಿದರು.

ಪುಸ್ತಕ ಪ್ರೇಮಿ ಬ್ಲಾಗ್‌: ಪುಸ್ತಕ ಪರಿಚಯ ಮತ್ತು ಓದಿನ ಅನಿಸಿಕೆಗಳಿಗೆ ವೇದಿಕೆಯಾದ ‘ನಾನೊಬ್ಬ ಪುಸ್ತಕ ಪ್ರೇಮಿ’ ಪುಟದಲ್ಲಿ ಈವರೆಗೂ ಸಾವಿರಾರು ಸಾಲುಗಳ ಉಪಯುಕ್ತ ಮಾಹಿತಿ ಪ್ರಕಟವಾಗಿದೆ. ಆ ಮಾಹಿತಿ ಫೇಸ್‌ಬುಕ್‌ನ ನೂರಾರು ಫೋಸ್ಟ್‌ಗಳಲ್ಲಿ ಕಳೆದುಹೋಗಬಾರದು ಎಂದು ಅದನ್ನು ಸಂಗ್ರಹಿಸುವ ಪ್ರಯತ್ನವು ನಡೆದಿದೆ. ಅದಕ್ಕಾಗಿ ‘ಪುಸ್ತಕ ಪ್ರೇಮಿ ಬ್ಲಾಗ್‌’ ರಚನೆಯಾಗಿದೆ. ಸಾಹಿತ್ಯದ ನಿರ್ದಿಷ್ಟ ಪ್ರಾಕಾರಗಳು ಹಾಗೂ ಲೇಖಕ–ಲೇಖಕಿಯರ ಹೆಸರಲ್ಲಿ ವಿಭಾಗಗಳನ್ನು ಇಲ್ಲಿ ರಚಿಸಲಾಗಿದೆ. ಆ ಮೂಲಕ ನಿಮಗೆ ಆಸಕ್ತಿಯಿರುವ ವಿಭಾಗದಿಂದ ಪುಸ್ತಕಗಳ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಬಿಡುವಿದ್ದಾಗ ಈ ಎಫ್‌ಬಿ ಪುಟ ಹಾಗೂ ಬ್ಲಾಗ್‌ ಹೊಕ್ಕು ನೋಡಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.