ಆನ್‌ಲೈನ್ ಆವಿಷ್ಕಾರಗಳ ಕಾಲದಲ್ಲಿ ಅಪ್‌ಡೇಟ್ ಆಗದಿರುವ ತಂತ್ರಜ್ಞಾನವೇ ಇಲ್ಲ ಎನ್ನಬಹುದು. ತಂತ್ರಜ್ಞಾನ ಮುಂದುವರಿದಂತೆ ಅದನ್ನು ದುರ್ಬಳಕೆ ಮಾಡಿಕೊಳ್ಳುವವರೂ ಇದ್ದೇ ಇರುತ್ತಾರೆ ಎಂಬ ಎಚ್ಚರವೂ ಇರಬೇಕು. ವಾಟ್ಸ್‌ಆ್ಯಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ‘ಬಣ್ಣದ’ ಜಾಲಕ್ಕೆ ಬೀಳಿಸುವ ಪ್ರಯತ್ನಗಳು ಈಗ ನಡೆಯುತ್ತಿವೆ.
ವಾಟ್ಸ್‌ಆ್ಯಪ್‌ನ ವೆಬ್ ವರ್ಷನ್‌ನಲ್ಲಿ ಬಣ್ಣದ ಆಯ್ಕೆ ಎಂದು ಹೇಳುವ ಬ್ರೌಸರ್ ಎಕ್ಸ್‌ಟೆನ್ಷನ್ ಅನ್ನು ನೀವು ಕ್ಲಿಕ್ ಮಾಡಿದರೆ ಅದು ಮತ್ತೊಂದು ಆ್ಯಡ್‌ವೇರ್ ಲಿಂಕ್‌ಗೆ ಕನೆಕ್ಟ್ ಆಗುತ್ತದೆ. ಹೀಗಾಗಿ ವಾಟ್ಸ್‌ಆ್ಯಪ್‌ನಲ್ಲಿ ಹೊಸ ಬಣ್ಣಗಳನ್ನು ಟ್ರೈ ಮಾಡಿ ಎಂಬ ಲಿಂಕ್‌ಗಳ ಬಗ್ಗೆ ಎಚ್ಚರದಿಂದಿರಿ.
‘ವಾಟ್ಸ್‌ಆ್ಯಪ್‌ನ ಹೊಸ ಬಣ್ಣಗಳನ್ನು ನಾನು ಮೆಚ್ಚಿಕೊಂಡಿದ್ದೇನೆ. ನೀವೂ ಪ್ರಯತ್ನಿಸಿ’ (I love the new colours for whatsapp) ಎಂಬ ಸಂದೇಶಗಳು ನಿಮ್ಮ ಸ್ನೇಹಿತರಿಂದ ನಿಮಗೂ ಬರಬಹುದು. ಇಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಈ ಲಿಂಕ್‌ಗಳು ಆ್ಯಡ್‌ವೇರ್ ಸೈಟ್‌ಗೆ ಕನೆಕ್ಟ್ ಆಗುತ್ತವೆ.
ವಾಟ್ಸ್‌ಆ್ಯಪ್‌ನ ವೆಬ್ ವರ್ಷನ್‌ನ ಅಧಿಕೃತ ಲಿಂಕ್ ಇದು: web.whatsapp.com
ವೆಬ್ ಡಾಟ್ ಇಲ್ಲದ ಕೇವಲ ವಾಟ್ಸ್‌ಆ್ಯಪ್ ಡಾಟ್ ಕಾಮ್ ಎಂಬ ಲಿಂಕ್ ಅನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಬ್ರೌಸರ್ ಅಡ್ರೆಸ್ ಬಾರ್‌ನಲ್ಲಿ ಸಿರಿಲಿಕ್ ಅಕ್ಷರಗಳಲ್ಲಿ (Cyrillic alphabet) ಕಾಣಿಸಿಕೊಳ್ಳುವ ವಾಟ್ಸ್‌ಆ್ಯಪ್ ಡಾಟ್ ಕಾಮ್ ಎಂಬ ಯುಆರ್‌ಎಲ್ ಲಿಂಕ್ ಆ್ಯಡ್‌ವೇರ್‌ಗೆ ಕನೆಕ್ಸ್ ಮಾಡುತ್ತದೆ.
ಅಡ್ರೆಸ್ ಬಾರ್‌ನಲ್ಲಿ ವಾಟ್ಸ್‌ಆ್ಯಪ್ ಡಾಟ್ ಕಾಮ್ ಎಂದು ಕಾಣುವ ಈ ಯುಆರ್‌ಎಲ್ ಲಿಂಕ್ ವಾಸ್ತವವಾಗಿ ಬ್ಲಾಕ್ ವಾಟ್ಸ್ ಡಾಟ್ ಕಾಮ್ ಎಂಬ ಆ್ಯಡ್‌ವೇರ್ ಸೈಟ್‌ಗೆ ಕನೆಕ್ಟ್ ಆಗುತ್ತದೆ. ಈ ಸೈಟ್‌ಗೆ ಕನೆಕ್ಟ್ ಆದರೆ ಆ್ಯಡ್‌ವೇರ್ ಆ್ಯಪ್‌ಗಳು ನಿಮ್ಮ ಡಿವೈಸ್‌ಗೆ ಇನ್ಸ್ಟಾಲ್ ಆಗುತ್ತವೆ.
ಅಸುರಕ್ಷಿತ ಲಿಂಕ್‌ಗಳನ್ನು ಕ್ಲಿಕ್ಕಿಸಿದರೆ ಈ ಹಳ್ಳಕ್ಕೆ ನೀವು ಮಾತ್ರ ಬೀಳುವುದಿಲ್ಲ. ನಿಮ್ಮ ಸ್ನೇಹಿತರಿಗೂ ಈ ಲಿಂಕ್‌ಗಳು ಆಟೊ ಸೆಂಡ್ ಆಗುತ್ತವೆ. ಆ ಲಿಂಕ್ ಅನ್ನು ಅವರು ಕ್ಲಿಕ್ ಮಾಡಿದಾಗ ಅದು ಮತ್ತಷ್ಟು ಜನರಿಗೆ ಹರಡುತ್ತದೆ. ಹೀಗೆ ಆ್ಯಡ್‌ವೇರ್ ಎಲ್ಲ ಕಡೆಯೂ ಹಬ್ಬುತ್ತಾ ಹೋಗುತ್ತದೆ.
ನಿಮಗೆ ಯಾವುದೇ ಲಿಂಕ್‌ಗಳು ಬಂದರೂ ಸರಿಯಾಗಿ ಪರಿಶೀಲಿಸದೆ ಅವನ್ನು ಕ್ಲಿಕ್ ಮಾಡಲು ಹೋಗಬೇಡಿ. ನಕಲಿ ವೆಬ್‌ಸೈಟ್‌ಗಳ ಕಾಲದಲ್ಲಿ ಮಾಲ್‌ವೇರ್– ಆಡ್‌ವೇರ್‌ಗಳ ಬಗ್ಗೆ ಎಷ್ಟು ಎಚ್ಚರದಿಂದಿದ್ದರೂ ಅದು ಕಡಿಮೆಯೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.