ADVERTISEMENT

ಆಧಾರ್ ಬಗ್ಗೆ ವದಂತಿ ಹರಡಬೇಡಿ: ಯುಐಡಿಎಐ 

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 16:42 IST
Last Updated 5 ಆಗಸ್ಟ್ 2018, 16:42 IST
   

ನವದೆಹಲಿ: ಆಧಾರ್ ಬಗ್ಗೆ ಸುಳ್ಳು ಸುದ್ದಿ, ವದಂತಿಗಳನ್ನು ಹರಡಬೇಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಜನರಲ್ಲಿ ವಿನಂತಿಸಿದೆ.ಎರಡು ದಿನಗಳ ಹಿಂದೆ ಗ್ರಾಹಕರ ಗಮನಕ್ಕೆ ಬಾರದೆ ಯುಐಡಿಎಐ ಸಹಾಯವಾಣಿ ಸಂಖ್ಯೆ 1800–300–1947 ಆಂಡ್ರಾಯ್ಡ್‌ ಫೋನ್‌ ಕಾಂಟ್ಯಾಕ್ಟ್‌ ಲಿಸ್ಟ್ ನಲ್ಲಿ ಸೇರಿಕೊಂಡಿದ್ದು, ತಮ್ಮ ಮೊಬೈಲ್ ಫೋನ್‍ನಲ್ಲಿ ಈ ಸಂಖ್ಯೆ ಸೇರಿಕೊಂಡಿದ್ದು ಹೇಗೆ ಎಂದು ಗ್ರಾಹಕರು ಆತಂಕಗೊಂಡಿದ್ದರು.ಈ ಹೊತ್ತಿನಲ್ಲೇ ಆಧಾರ್ ಚಾಲೆಂಜ್ ನಿಂದಾಗಿ ಈ ಸಮಸ್ಯೆ ತಲೆದೋರಿದೆ. ಆಧಾರ್ ಸಂಖ್ಯೆ ಸುರಕ್ಷಿತವಲ್ಲ ಎಂಬಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.

ಹೀಗಿರುವಾಗ ಕಾಂಟ್ಯಾಕ್ಟ್‌ ಲಿಸ್ಟ್ ನಲ್ಲಿ ಆಧಾರ್ ಸಹಾಯವಾಣಿ ಸಂಖ್ಯೆ ಸೇರಿಕೊಂಡಿದ್ದುನಮ್ಮಿಂದಾದ ಪ್ರಮಾದ ಎಂದು ಗೂಗಲ್ ಸಂಸ್ಥೆ ಹೇಳಿತ್ತು.

ಗೂಗಲ್ ಹೇಳಿದ್ದೇನು?
ಆಂತರಿಕ ಪರಿಶೀಲನೆಯಲ್ಲಿ ತಿಳಿದು ಬಂದ ವಿಷಯ ಏನೆಂದರೆ, 2014ರಲ್ಲಿ ಚಾಲ್ತಿಯಲ್ಲಿದ್ದ ಯುಐಡಿಎಐ ಸಹಾಯವಾಣಿ ಸಂಖ್ಯೆ ಮತ್ತು ಅಪಾಯದ ವೇಳೆ ಸಹಾಯಕ್ಕೆ ಬರುವ 112 ಸಹಾಯವಾಣಿ ಸಂಖ್ಯೆಗಳನ್ನು ಆಂಡ್ರಾಯ್ಡ್ ನ ಸೆಟಪ್ ವಿಜಾರ್ಡ್ ನಲ್ಲಿ ಕೋಡ್ ಮಾಡಿ ಭಾರತದಲ್ಲಿ ಆಂಡ್ರಾಯ್ಡ್‌ ಬಿಡುಗಡೆ ಮಾಡುವ ಹೊತ್ತಿಗೆ ಒರಿಜಿನಲ್ ಇಕ್ವಿಪ್‌ಮೆಂಟ್ಸ್ ಮ್ಯಾನುಫಾಕ್ಚರರ್ಸ್ (OEM)ಗೆ ನೀಡಲಾಗಿತ್ತು. ಅದು ಅಲ್ಲಿಯೇ ಉಳಿದುಕೊಂಡಿದೆ. ಈ ಸಂಖ್ಯೆಗಳು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿರುವುದರಿಂದ, ಗ್ರಾಹಕರು ಯಾವುದೇ ಸಾಧನ ಬಳಸಿದರೂ ಅದು ಅಲ್ಲಿ ಅಪ್‍ಡೇಟ್ ಆಗುತ್ತದೆ.

ADVERTISEMENT

ನಿಮಗೆ ತೊಂದರೆಯುಂಟಾಗಿದ್ದಕ್ಕೆ ನಾವು ಕ್ಷಮೆ ಕೇಳುತ್ತೇವೆ. ಅದೇ ವೇಳೆ ನಿಮ್ಮ ಆಂಡ್ರಾಯ್ಡ್‌ ಫೋನ್ ನಿಂದ ಅನಧಿಕೃತವಾಗಿ ಯಾವುದೇ ಡೇಟಾ ಪಡೆಯುವ ಕಾರ್ಯ ಇಲ್ಲಿ ನಡೆದಿಲ್ಲ. ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಿಂದ ಆ ಸಂಖ್ಯೆಯನ್ನು ಡಿಲೀಟ್ ಮಾಡಬಹುದು. ಮುಂಬರುವ ಸೆಟಪ್ ವಿಜಾರ್ಡ್ ನಲ್ಲಿ ಈ ರೀತಿಯ ಲೋಪ ಇಲ್ಲದಂತೆ ನಾವು ಜಾಗ್ರತೆ ವಹಿಸುತ್ತೇವೆ. ಅಪ್‍ಡೇಟ್ ಆಗಿರುವ ಸೆಟಪ್ ವಿಜಾರ್ಡ್ ಮುಂದಿನ ವಾರಗಳಲ್ಲಿ OEMಗಳಿಗೆ ಲಭ್ಯವಾಗಲಿದೆ.

ವದಂತಿಗಳಿಗೆ ಕಿವಿಗೊಡಬೇಡಿ
ಗೂಗಲ್‍ನಿಂದಾದ ಪ್ರಮಾದವನ್ನು ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ. ಆಧಾರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿವೆ. ಅನುಮಾನಸ್ಪದ ಸಂಖ್ಯೆಯೊಂದು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿಕೊಂಡಿದೆ.ಇದು ನಿಮ್ಮ ಮೊಬೈಲ್ ಫೋನ್‍ಗೆ ಹಾನಿಯನ್ನುಂಟು ಮಾಡುತ್ತದೆ.ಆಧಾರ್ ಮಾಹಿತಿ ಸೋರಿಕೆಯಾಗಿದೆ. ಆ ಸಹಾಯವಾಣಿ ಸಂಖ್ಯೆಯನ್ನು ತಕ್ಷಣವೇ ಡಿಲೀಟ್ ಮಾಡಿ ಎಂಬ ಸಂದೇಶ ವಾಟ್ಸ್ ಆ್ಯಪ್‍ನಲ್ಲಿ ಹರಿದಾಡುತ್ತಿದೆ.ಇದು ಸಂಪೂರ್ಣ ಸುಳ್ಳು.ಈ ರೀತಿಯ ಸುಳ್ಳು ಸುದ್ದಿ ಹರಡಿ ಜನರನ್ನು ಹೆದರಿಸಲಾಗುತ್ತಿದೆ.

ಮೊಬೈಲ್‍ನಲ್ಲಿ ಒಂದು ಸಹಾಯವಾಣಿ ಸಂಖ್ಯೆ ಸೇವ್ ಆದ ಕೂಡಲೇ ಮೊಬೈಲ್‍ನಲ್ಲಿರುವ ಮಾಹಿತಿ ಕದಿಯಲಾಗುವುದಿಲ್ಲ.ಹಾಗಾಗಿ ಜನರು ಹೆದರುವ ಅಗತ್ಯವಿಲ್ಲ.ಆ ಸಂಖ್ಯೆಯನ್ನು ಡಿಲೀಟ್ ಮಾಡಿ, ಇಲ್ಲವಾದರೆ ಯುಐಎಡಿಐನ ಹೊಸ ಸಹಾಯವಾಣಿ ಸಂಖ್ಯೆ 1947 ಅಪ್‌ಡೇಟ್ ಮಾಡಿಕೊಳ್ಳಿ ಎಂದು ಯುಐಡಿಎಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.