ಬೆಂಗಳೂರು: ಜಗತ್ತಿನಾದ್ಯಂತ ಸ್ನ್ಯಾಪ್‌ಚಾಟ್ ಆ್ಯಪ್‌ನ ಬಳಕೆದಾರರ ಸಂಖ್ಯೆ ಮಾಸಿಕ 80 ಕೋಟಿ ಇದೆ. ಈ ಪೈಕಿ ಭಾರತದಲ್ಲಿ 20 ಕೋಟಿ ಬಳಕೆದಾರರು ಇದ್ದಾರೆ. ಪ್ರತಿದಿನ ಬೆಂಗಳೂರಿನಲ್ಲಿ ಶೇ 85ರಷ್ಟು ಸ್ನ್ಯಾಪ್‌ಚಾಟರ್‌ಗಳು ಈ ಅಪ್ಲಿಕೇಷನ್ ಅನ್ನು ಬಳಸುತ್ತಿದ್ದಾರೆ ಎಂದು ಸ್ನ್ಯಾಪ್ ಇಂಕ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಪುಲ್ಕಿತ್ ತ್ರಿವೇದಿ ಹೇಳಿದ್ದಾರೆ.
ಸ್ಮ್ಯಾಪ್ ಇಂಕ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಸ್ನ್ಯಾಪ್‌ಚಾಟ್‌ನ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದರು.
ಬಳಕೆದಾರರ ಸುರಕ್ಷತೆ ಮತ್ತು ಅವರ ಗೌಪ್ಯತೆ ನಮಗೆ ಮುಖ್ಯ. ಅದಕ್ಕಾಗಿ ಹಲವಾರು ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಸ್ನ್ಯಾಪ್‌ಚಾಟ್ ಅನ್ನು ಸಾಮಾಜಿಕ ಮಾಧ್ಯಮಕ್ಕೆ ಪರ್ಯಾಯವಾಗಿ ರೂಪಿಸಲಾಗಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮವಾಗಿ ಸಂವಹನ ನಡೆಸಲು ಸಾಧ್ಯವಾಗಿದೆ. ಅದರಿಂದಾಗಿಯೇ ಈ ವೇದಿಕೆ ಜನಪ್ರಿಯವಾಗಿದೆ ಎಂದು ಹೇಳಿದರು.
ಅಮೆರಿಕ ಮೂಲದ ಕಂಪನಿಯಾದ ಸ್ನ್ಯಾಪ್‌ಚಾಟ್, ಮುಂಬೈನಲ್ಲಿ 2019ರಲ್ಲಿ ಕೇಂದ್ರ ಕಚೇರಿ ಆರಂಭಿಸಿತು. ಯುವಪೀಳಿಗೆಯು ತಮ್ಮ ಸುಖ–ದುಃಖ, ಸಂತೋಷ, ಹಬ್ಬ, ಧಾರ್ಮಿಕ ಕಾರ್ಯಕ್ರಮಗಳು, ಶುಭಾಷಯ, ನೈಜ ಘಟನೆ ಸೇರಿದಂತೆ ವಿವಿಧ ವಿಷಯಗಳನ್ನು ಫೋಟೊ, ವಿಡಿಯೊ, ಸಂದೇಶದ ರೂಪದಲ್ಲಿ ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಆ್ಯಪ್ ಮೂಲಕ ಹಂಚಿಕೊಳ್ಳುತ್ತಾರೆ ಎಂದು ಹೇಳಿದರು.
ಸ್ನ್ಯಾಪ್‌ಚಾಟ್‌ನಲ್ಲಿ 24 ಗಂಟೆ ನಂತರ ಸಂದೇಶ ಹಾಗೂ ಫೋಟೊಗಳು ತಾನಾಗೇ ಅಳಿಸಿ ಹೋಗಲಿವೆ. ಯಾವುದೇ ರೀತಿಯ ಕಮೆಂಟ್‌ಗಳು ಇರುವುದಿಲ್ಲ. ವಿಶಿಷ್ಟ ವೈಶಿಷ್ಟ್ಯಗಳು, ಆಗ್ಮೆಂಟೆಡ್ ರಿಯಾಲಿಟಿ (ಎ.ಆರ್), ಸ್ಮ್ಯಾಪ್‌ಚಾಟ್ ಕ್ಯಾಮೆರಾ, ಅತ್ಯುತ್ತಮ ಲೆನ್ಸ್‌ಗಳಿಂದಾಗಿ ಸ್ನ್ಯಾಪ್‌ಚಾಟ್ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಆ್ಯಪ್ ಯುವಜನರಲ್ಲಿ ಸೃಜನಾತ್ಮಕ ರೀತಿಯಲ್ಲಿ ತೊಡಗಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂಪನಿಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.