ADVERTISEMENT

ನೀರವ್ ಮೋದಿ, ಲಲಿತ್ ಮೋದಿ ಕಳ್ಳರಲ್ಲವೇ?: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 19:20 IST
Last Updated 24 ಮಾರ್ಚ್ 2023, 19:20 IST
   

ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷಗಳ ನಾಯಕರು ಕೇಳುತ್ತಿರುವ ಪ್ರಶ್ನೆ ಇದು.

ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅವರನ್ನು ಅಮಾನತು ಮಾಡಿದ ಆದೇಶ ಹೊರಬಿದ್ದ ಕೂಡಲೇ, ವಿವಿಧ ವಿರೋಧ ಪಕ್ಷಗಳ ನಾಯಕರು ಈ ಕ್ರಮವನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ. ಜತೆಗೆ, ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ "ललित मोदी" (ಲಲಿತ್ ಮೋದಿ) ಮತ್ತು "नीरव मोदी" (ನೀರವ್ ಮೋದಿ) ಹೆಸರನ್ನು ಬಳಸಿ ಟ್ವೀಟ್‌ ಮತ್ತು ಪೋಸ್ಟ್‌ ಮಾಡುತ್ತಿದ್ದಾರೆ. ಎರಡೂ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ನಲ್ಲಿವೆ.

‘ನೀರವ್ ಮೋದಿ ಕಳ್ಳನಲ್ಲವೇ? ಲಲಿತ್ ಮೋದಿ ಕಳ್ಳನಲ್ಲವೇ? ಇವರನ್ನು ರಕ್ಷಿಸಲು ಬಿಜೆಪಿ ಮುಂದಾಗುತ್ತಿರುವುದೇಕೆ? ಕಳ್ಳರನ್ನು ಕಳ್ಳರು ಎಂದು ಕರೆಯಲು ಇವರ ಆಕ್ಷೇಪವೇಕೆ? ಅದಾನಿ ವಿಚಾರದಿಂದ ಗಮನ ಬೇರೆಡೆಗೆ ಸೆಳೆಯಲೆಂದೇ ಇದನ್ನೆಲ್ಲಾ ಮಾಡಲಾಗುತ್ತಿದೆ. ಆದರೆ ಅದು ಸಾಧ್ಯವಾಗುವುದಿಲ್ಲ’ ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

ರಾಹುಲ್‌ ಎಲ್ಲ ಮೋದಿಗಳೂ ಕಳ್ಳರು ಎಂದಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಟ್ವೀಟ್‌ ಮಾಡಿದ್ದಾರೆ. ‘ರಾಹುಲ್ ಗಾಂಧಿ ಅವರು ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿಯನ್ನು ಕಳ್ಳರು ಎಂದಿದ್ದರು. ರಾಹುಲ್‌, ‘ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕೆ ಇದೆ’ ಎಂದು ಕೇಳಿದ್ದರು. ‘ಎಲ್ಲಾ ಮೋದಿಗಳೂ ಕಳ್ಳರು’ ಎಂದಿರಲಿಲ್ಲ. ಆದರೂ ಯಾವುದೋ ಮೋದಿಯ ಮಾನಕ್ಕೆ ಹಾನಿಯಾಗಿದೆ ಎಂದು ರಾಹುಲ್ ವಿರುದ್ಧ ದೂರು ನೀಡಲಾಗಿದೆ ಮತ್ತು ಎರಡು ವರ್ಷ ಜೈಲುಶಿಕ್ಷೆ ನೀಡಲಾಗಿದೆ. ಅವರ ಸಂಸದನ ಸ್ಥಾನವನ್ನೂ ತೆರವು ಮಾಡಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ಇಂದಿನ ಸ್ಥಿತಿ’ ಎಂದು ಅವರು ಟ್ವೀಟ್‌
ಮಾಡಿದ್ದಾರೆ.

‘ಮೋದಿ ಸರ್ಕಾರದ ಆತ್ಮೀಯ ಮೋದಿ ಸೋದರರಾದ ನೀರವ್ ಮೋದಿ–ಲಲಿತ್ ಮೋದಿ, ವಿಜಯ್‌ ಮಲ್ಯ, ಮೆಹುಲ್ ಚೋಕ್ಸಿ ದೇಶದ ಬಡಜನರ ಹಣ ದೋಚಿ ವಿದೇಶಕ್ಕೆ ಓಡಿಹೋಗಿದ್ದಾರೆ. ತನಿಖಾ ಸಂಸ್ಥೆಗಳಿಗೆ ಈ ಜನರು ಕಾಣುವುದಿಲ್ಲ. ಸರ್ಕಾರವನ್ನು ಪ್ರಶ್ನಿಸುವವರಷ್ಟೇ ಈ ಸಂಸ್ಥೆಗಳಿಗೆ ಕಾಣುತ್ತಾರೆ’ ಎಂದು ಆರ್‌ಜೆಡಿ ಟ್ವೀಟ್‌ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.