ADVERTISEMENT

ಪಿಂಕ್‌ ವಾಟ್ಸ್‌ಆ್ಯಪ್ ಬಳಕೆ ಸೈಬರ್‌ ಅಪರಾಧಗಳಿಗೆ ಆಹ್ವಾನ: ಮುಂಬೈ ಪೊಲೀಸರ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2023, 8:56 IST
Last Updated 28 ಜೂನ್ 2023, 8:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಿಂಕ್‌ ಬಣ್ಣದಲ್ಲಿ ಕಾಣುವ ವಾಟ್ಸ್‌ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿದ ಆಂಡ್ರಾಯ್ಡ್ ಬಳಕೆದಾರರಿಗೆ ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಮುಂಬೈ ಪೊಲೀಸರು ಪಿಂಕ್‌ ವಾಟ್ಸ್‌ಆ್ಯಪ್‌ನಿಂದ ಆಗುವ ಪರಿಣಾಮ ಹಾಗೂ ಹಗರಣಗಳಿಂದ ರಕ್ಷಿಸಿಕೊಳ್ಳುವ ಕ್ರಮಗಳ ಕುರಿತು ವಿವರಿಸಿದ್ದಾರೆ.

ಪಿಂಕ್ ವಾಟ್ಸ್‌ಆ್ಯಪ್‌ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದು ದುರುದ್ದೇಶಪೂರಿತ ಸಾಫ್ಟ್‌ವೇರ್‌ ಹೊಂದಿದ್ದು, ಇದರ ಮೂಲಕ ಬಳಕೆದಾರರ ಮೊಬೈಲ್ ಅನ್ನು ಹ್ಯಾಕ್‌ ಮಾಡಬಹುದು ಎಂದು ಪೊಲೀಸರು ಮಾಹಿತಿ ಹಂಚಿಕೊಂದ್ದಾರೆ.

ADVERTISEMENT

ಇಂದಿನ ಡಿಜಿಟಲ್‌ ಜಗತ್ತಿನಲ್ಲಿ ವಿವಿಧ ರೀತಿಯ ಹೊಸ ತಂತ್ರಗಳ ಮೂಲಕ ಬಳಕೆದಾರರಿಗೆ ಆಮಿಷ ತೋರಿಸಿ ಬಲೆಗೆ ಬೀಳಿಸಿಕೊಳ್ಳುವಲ್ಲಿ ಸೈಬರ್‌ ವಂಚಕರು ಯಶಸ್ವಿಯಾಗುತ್ತಾರೆ. ಈ ಬಗ್ಗೆ ಎಚ್ಚರವಹಿಸುವುದು ಅಗತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಿಂಕ್‌ ವಾಟ್ಸ್‌ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಮೊಬೈಲ್ ಫೋನ್‌ಗಳಲ್ಲಿರುವ ದೂರವಾಣಿ ಸಂಖ್ಯೆಗಳು, ಫೋಟೊಗಳು, ಸಹಿ, ಸ್ಕ್ಯಾಮ್ ಸಂದೇಶಗಳು ಒಳಗೊಂಡತೆ ವಿವಿಧ ಮಾಹಿತಿಗಳನ್ನು ಕದ್ದು ಸೈಬರ್ ವಂಚನೆದಾರರು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಿಚಿತ ಮೂಲಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಬದಲಾಗಿ ಗೂಗಲ್‌ ಅಥವಾ ಐಒಎಸ್‌ನ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ ಮತ್ತು ಸರ್ಕಾರ ಅಂಗೀಕರಿಸಿದ ವೆಬ್‌ಸೈಟ್ ಮೂಲಕ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

ವೈಯಕ್ತಿಕ ವಿವರಗಳು, ಲಾಗಿನ್ ಪಾಸ್‌ವರ್ಡ್‌ಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇವುಗಳು ಸೈಬರ್‌ ಅಪರಾಧಗಳಿಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.