ಬೆಂಗಳೂರು:‘ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಶಿವದಾಸನ್ ಎಂಬುವವರನ್ನು ಹತ್ಯೆ ಮಾಡಿದ್ದಕ್ಕೆ ಬಿಜೆಪಿಯು ಕೇರಳ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ನವೆಂಬರ್ 2ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ.’ ಹೀಗೊಂದು ಸಂದೇಶ ಬಿಜೆಪಿಯ ಕೇರಳ ಘಟಕದ ಫೇಸ್‌ಬುಕ್ ಪುಟದಲ್ಲಿ ಕಾಣಿಸಿಕೊಂಡಿತ್ತು.
ಮತ್ತೊಂದು ಪೋಸ್ಟ್‌ನಲ್ಲಿ ‘ಅಯ್ಯಪ್ಪ ಭಕ್ತರ ಕೊಲೆ, ನಾಳೆ ಪತ್ತನಂತಿಟ್ಟದಲ್ಲಿ ಹರತಾಳ (ಮುಷ್ಕರ). ಅವರು ಪೊಲೀಸ್ ಹಿಂಸೆಯಲ್ಲಿ ಮೃತಪಟ್ಟಿದ್ದಾರೆ’ ಎಂಬ ಸಂದೇಶ ಪ್ರಕಟವಾಗಿತ್ತು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಸಹ ಇಂತಹದ್ದೇ ಸಂದೇಶ ಪ್ರಕಟಿಸಿದ್ದಾರೆ.
ಬಿಜೆಪಿಯ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಸಹ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪ್ರಕಟಿಸಿ, ‘ಪಿಣರಾಯಿ ವಿಜಯನ್ (ಮುಖ್ಯಮಂತ್ರಿ) ಅವರೇ ಈ ಕೊಲೆಗೆ ಹೊಣೆ. ಅಯ್ಯಪ್ಪನ ರಕ್ಷಣಾ ಕಾರ್ಯದಲ್ಲಿ ಶಿವದಾಸ್ ಹುತಾತ್ಮರಾದರು. ನಿಮ್ಮ ತ್ಯಾಗವನ್ನು ಅಯ್ಯಪ್ಪನ ಧರ್ಮ ಅಸ್ತಿತ್ವದಲ್ಲಿರುವವರೆಗೂ ಜನ ಸ್ಮರಿಸಲಿದ್ದಾರೆ. ಹೆಚ್ಚು ಭಕ್ತರನ್ನು ಕೊಲ್ಲಲು ಪಿಣರಾಯಿ ಸಂಚು ಹೂಡುತ್ತಿದ್ದಾರೆ. ನವೆಂಬರ್ 5ಕ್ಕೆ ಶಬರಿಮಲೆ ದೇಗುಲದ ಬಾಗಿಲು ತೆರೆಯಲಿದ್ದು, ಶಿವದಾಸನ್ ಅವರಂತೆಯೇ ಹೆಚ್ಚಿನ ಭಕ್ತರನ್ನು ಪೊಲೀಸರು ಕೊಲ್ಲುವುದರಲ್ಲಿ ಅನುಮಾವಿಲ್ಲ. ಸಾವಿರಾರು ಭಕ್ತರನ್ನು ಕೊಂದರೂ ನಿಮ್ಮ ಯೋಜನೆ ಫಲಿಸದು’ ಎಂದು ಬರೆದಿದ್ದಾರೆ.
ಶಿವದಾಸನ್ ಅವರು ಪೊಲೀಸರ ಹಲ್ಲೆಯಿಂದಲೇ ಮೃತಪಟ್ಟಿದ್ದಾರೆ ಎಂದು ಆರ್‌ಎಸ್‌ಎಸ್ ಮುಖಂಡ ಜೆ. ನಂದಕುಮಾರ್ ಟ್ವೀಟ್ ಮಾಡಿದ್ದು, ಎನ್‌ಡಿಎ ಕೇರಳ ಸಹ ಟ್ವೀಟ್ ಮಾಡಿದೆ. ಕೃತ್ಯದಲ್ಲಿ ಭಾಗಿಯಾದ ಪೊಲೀಸರಿಗೆ ಶಿಕ್ಷೆ ವಿಧಿಸಬೇಕು ಎಂದೂ ಟ್ವೀಟ್‌ನಲ್ಲಿ ಆಗ್ರಹಿಸಲಾಗಿದೆ.
ನವೆಂಬರ್ 1ರಂದು ಎಎಪಿ ಶಾಸಕ ಕಪಿಲ್ ಮಿಶ್ರಾ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಲಾಠಿಚಾರ್ಜ್‌ನಿಂದ ತಪ್ಪಿಸಿಕೊಳ್ಳಲು ಓಡುತ್ತಿರುವಾಗ ವ್ಯಕ್ತಿಯೊಬ್ಬ ಕಮರಿಗೆ ಬೀಳುವ ದೃಶ್ಯ ಅದರಲ್ಲಿದೆ. ‘ಪೊಲೀಸರ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಈ ವ್ಯಕ್ತಿ ಅಯ್ಯಪ್ಪ ಭಕ್ತ ಶಿವದಾಸ್’ ಎಂದು ಮಿಶ್ರಾ ಟ್ವೀಟ್‌ನಲ್ಲಿ ಬರೆದಿದ್ದಾರೆ. ಇದನ್ನು 7,700ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದು 9,000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಫಾಲೋ ಮಾಡುತ್ತಿರುವ ಟ್ವಿಟರ್ ಬಳಕೆದಾರರಾದ ಗೀತಾ ಎಸ್. ಕಪೂರ್ ಎಂಬುವವರೂ ಶಿವದಾಸನ್ ಫೋಟೊ ಶೇರ್ ಮಾಡಿ ಅಯ್ಯಪ್ಪ ಭಕ್ತನ ಕೊಲೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಸತ್ಯವೇನು?
ಪೊಲೀಸರಿಂದ ಶಿವದಾಸನ್ ಕೊಲೆಯಾಗಿದೆ ಎಂಬ ಆರೋಪಗಳನ್ನು ಪತ್ತನಂತಿಟ್ಟ ಎಸ್‌ಪಿ ಟಿ.ನಾರಾಯಣನ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಅಕ್ಟೋಬರ್ 17ರಂದು ಲಾಠಿಚಾರ್ಜ್ ನಡೆದಿತ್ತು. ಆದರೆಶಿವದಾಸನ್ ಶಬರಿಮಲೆಗೆ ತೆರಳಿದ್ದು ಅಕ್ಟೋಬರ್ 18ರಂದು. 19ರಂದು ಬೆಳಿಗ್ಗೆ ಸಹ ಅವರು ಕುಟುಂಬದವರ ಜತೆ ಮಾತನಾಡಿದ್ದರು’ ಎಂದು ತಿಳಿಸಿದ್ದನ್ನು ಆಲ್ಟ್‌ನ್ಯೂಸ್ ಸುದ್ದಿತಾಣ ವರದಿ ಮಾಡಿದೆ.
‘ಶಬರಿಮಲೆ ಯಾತ್ರೆ ವೇಳೆ ನಾಪತ್ತೆಯಾಗಿದ್ದ ಶಿವದಾಸನ್ ಮೃತದೇಹ ಲಾಹ ಬಳಿ ಪತ್ತೆಯಾಗಿತ್ತು. ಅಕ್ಟೋಬರ್ 17ರಂದು ನಿಲಕ್ಕಲ್‌ನಲ್ಲಿ ನಡೆದ ಲಾಠಿಚಾರ್ಜ್ ವೇಳೆ ಇವರು ಮೃತಪಟ್ಟಿದ್ದಾರೆ ಎಂಬ ಸುಳ್ಳುಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಶಿವದಾಸನ್ ಅವರು ಶಬರಿಮಲೆಗೆ ತೆರಳಿದ್ದೇಅಕ್ಟೋಬರ್ 18ರಂದು. ಅಯ್ಯಪ್ಪ ಭಕ್ತ ತಮಿಳರೊಬ್ಬರ ಮೊಬೈಲ್‌ನಿಂದ ಅಕ್ಟೋಬರ್ 19ರಂದು ಬೆಳಿಗ್ಗೆ ತಮ್ಮ ಪತ್ನಿಗೆ ಕರೆ ಮಾಡಿದ್ದ ಶಿವದಾಸನ್ ಅವರು, ಅಯ್ಯಪ್ಪನ ದರ್ಶನ ಪಡೆದದ್ದಾಗಿಯೂ ವಾಪಸಾಗಲು ಸಿದ್ಧತೆ ನಡೆಸುತ್ತಿರುವುದಾಗಿಯೂ ತಿಳಿಸಿದ್ದರು. ಆದರೆ, ಅವರು ಮನೆಗೆ ತಲುಪಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದ ಕುಟುಂಬದವರು ಅಕ್ಟೋಬರ್ 25ರಂದು ಪಂದಳಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿದ ಪೊಲೀಸರು ಶೋಧ ಕಾರ್ಯ ಕೈಗೊಂಡರು. ಇದು ವಾಸ್ತವ. ಈ ಬಗ್ಗೆ ಸುಳ್ಳು ಸುದ್ದಿ ಹರಡುವ ಮಾಧ್ಯಮಗಳ ವಿರುದ್ಧ ಹಾಗೂ ಯಾವನೇ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಪಿ ಟಿ.ನಾರಾಯಣನ್ ಹೇಳಿದ್ದಾರೆ.
ಶಿವದಾಸನ್ ಅವರು ಅಕ್ಟೋಬರ್ 18ಕ್ಕೆ ಶಬರಿಮಲೆಗೆ ತೆರಳಿದ್ದು, ಯಾತ್ರೆ ಕೈಗೊಳ್ಳುವಾಗ ಮೊಬೈಲ್‌ಫೋನ್ ಕೊಂಡೊಯ್ಯದೆ ಇದ್ದುದು, ಅವರ ಪುತ್ರ ನಾಪತ್ತೆ ಪ್ರಕರಣ ದಾಖಲಿಸಿದ್ದುಮತ್ತು ಮರಣೋತ್ತರ ಪರೀಕ್ಷೆ ವರದಿಬಗ್ಗೆ ದಿ ನ್ಯೂಸ್ ಮಿನಿಟ್ ನವೆಂಬರ್ 2ರಂದು ವರದಿ ಮಾಡಿದೆ.
ಕಪಿಲ್ ಮಿಶ್ರಾ ಶೇರ್ ಮಾಡಿರುವ ವಿಡಿಯೊ ಹಲವು ಆ್ಯಂಗಲ್‌ಗಳಲ್ಲಿ ಅಂತರ್ಜಾಲದಲ್ಲಿ ಲಭ್ಯವಿದೆ. ಎಲ್ಲ ವಿಡಿಯೊಗಳೂ ಅಕ್ಟೋಬರ್ 17ರಂದೇ ಚಿತ್ರೀಕೃತವಾಗಿವೆ. ಇವು ಪಂಪಾದಲ್ಲಿ ನಡೆದ ಲಾಠಿಚಾರ್ಜ್‌ಗೆ ಸಂಬಂಧಿಸಿದ ವಿಡಿಯೊಗಳಾಗಿವೆ. ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಕಮರಿಗೆ ಹಾರಿದ ದೃಶ್ಯವನ್ನೇ ಶಿವದಾಸನ್ ಎಂದು ಬಿಂಬಿಸಲಾಗಿದೆ. ಆದರೆ, ಶಿವದಾಸನ್ ಅಕ್ಟೋಬರ್ 19ರ ವರೆಗೂ ಜೀವಂತವಿದ್ದುದು ಪುರಾವೆ ಸಮೇತ ಬಯಲಾಗಿದೆ. ಲಾಠಿಚಾರ್ಜ್ ವೇಳೆ ಮಹಿಳೆಯೊಬ್ಬರು ಪೊಲೀಸರಿಂದ ಹಲ್ಲೆಗೊಳಗಾಗಿದ್ದಾರೆ ಎಂದೂ ವದಂತಿ ಹಬ್ಬಿಸಲಾಗಿತ್ತು. ಆದರೆ, ಮಹಿಳೆ ಗಾಯಗೊಂಡಿದ್ದು ಪ್ರತಿಭಟನಾನಿರತರ ಕಲ್ಲುತೂರಾಟದಿಂದ ಎಂಬುದು ನಂತರ ಬೆಳಕಿಗೆ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.